ಉಡುಪಿ: ಕೊರಗರ ಉತ್ಪನ್ನಗಳಿಗೆ ‘ಬ್ರಾಂಡ್ ನೇಮ್’ ನೀಡಲು ಪ್ರಯತ್ನ; ಸಿಇಓ

Update: 2022-02-26 16:11 GMT

ಉಡುಪಿ, ಫೆ.26: ರಾಜ್ಯದ ಎರಡು ಅತ್ಯಂತ ಹಿಂದುಳಿದ ಬುಡಕಟ್ಟು ಜನಾಂಗದಲ್ಲಿ ಒಂದಾದ ಕೊರಗ ಸಮುದಾಯವನ್ನು ಸರ್ವತೋಮುಖವಾಗಿ ಅಭಿವೃದ್ಧಿ ಪಡಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದರಲ್ಲಿ ಕೊರಗರ ಉತ್ಪನ್ನಗಳಾದ ಬುಟ್ಟಿ, ಹೆಡಿಗೆ ಮುಂತಾದವುಗಳಿಗೆ ಬ್ರಾಂಡ್ ನೇಮ್ ನೀಡಲು ಪ್ರಯತ್ನಿಸಲಾಗುವುದು ಎಂದು ಉಡುಪಿ ಜಿಪಂನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ವೈ ಹೇಳಿದ್ದಾರೆ.

ಉಡುಪಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಉಡುಪಿ ಜಿಲ್ಲಾ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಉಡುಪಿ ಜಿಲ್ಲಾ ಕೊರಗ ಸಂಘಟನೆಗಳು, ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆ ಉಡುಪಿ ಜಿಲ್ಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿರುವ ಕೊರಗರ ಕ್ರೀಡೋತ್ಸವ ಹಾಗೂ ಸಾಂಸ್ಕೃತಿಕ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಈ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರಲು ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಹಾಗೂ ಅವರ ಪ್ರತಿಭೆಗಳನ್ನು ಪ್ರದರ್ಶಿಸಲು ವೇದಿಕೆಯನ್ನು ನೀಡುವುದಕ್ಕಾಗಿ ಎರಡು ದಿನಗಳ ಈ ಕ್ರೀಡೋತ್ಸವ ಹಾಗೂ ಸಾಂಸ್ಕೃತಿಕ ಉತ್ಸವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಇತ್ತೀಚೆಗೆ ಕೊರಗ ಸಮುದಾಯದ ಯುವಕರೊಬ್ಬರನ್ನು ಗ್ರಾಮ ಪಂಚಾಯತ್ ಕಾರ್ಯದರ್ಶಿ ಹುದ್ದೆಗೆ ನೇರ ನೇಮಕಾತಿ ಮಾಡಲಾಗಿದೆ. ಇದೇ ರೀತಿ ಇನ್ನಷ್ಟು ವಿದ್ಯಾವಂತ ಯುವಕರು ವಿವಿಧ ಹುದ್ದೆಗಳಿಗೆ ಆಯ್ಕೆಯಾಗಲು ಪ್ರಯತ್ನಿಸಬೇಕು ಎಂದು ಸಿಇಓ ನುಡಿದರು.

ಕೊರಗರಲ್ಲಿರುವ ಸಾಂಪ್ರದಾಯಿಕವಾಗಿರುವ ಬುಟ್ಟಿ,ಹೆಡಿಗೆ, ಗೆರಸಿ, ಶಿಬ್ಲು ಹೆಣೆಯುವ ಅವರ ಪ್ರತಿಭೆಯನ್ನು ಗುರುತಿಸಿ, ಅವರ ಉತ್ಪನ್ನಗಳಿಗೆ ಬ್ರಾಂಡಿಂಗ್ ಮಾಡಿ ಜನಪ್ರಿಯಗೊಳಿಸಲು ಯೋಜನೆ ರೂಪಿಸಲಾಗುವುದು. ಇದಕ್ಕಾಗಿ ರೂಪಿಸಿರುವ ಕೊರಗರ ಉತ್ಪನ್ನಗಳಿಗೆ ಕ್ಯೂಆರ್ ಕೋಡ್‌ನ್ನು ಡಾ.ಭಟ್ ಬಿಡುಗಡೆಗೊಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಮಾತನಾಡಿ, ಈಗಲೂ ತೀರಾ ಹಿಂದುಳಿದಿರುವ ಕೊರಗ ಸಮುದಾಯ ತಮ್ಮ ಹಿಂಜರಿಕೆ ಸ್ವಭಾವವನ್ನು ತೊರೆದು ಮುಖ್ಯವಾಹಿನಿ ಬರಲು ಪ್ರಯತ್ನಿಸಬೇಕು. ಇದಕ್ಕೆ ವಿದ್ಯಾಭ್ಯಾಸವೊಂದು ಸಾಧನ. ಹೀಗಾಗಿ ವೃತ್ತಿಪರ ಶಿಕ್ಷಣ, ಉನ್ನತ ವಿದ್ಯಾಭ್ಯಾಸ ಪಡೆಯುವತ್ತ ಯುವ ಸಮುದಾಯ ಹಾಗೂ ಅವರ ಹೆತ್ತವರು ಮುಂದಾಗಬೇಕು ಎಂದರು.

ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ಯೋಜನಾ ಸಮನ್ವಯಾಧಿಕಾರಿ ದೂದ್‌ಪೀರ್, ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್‌ಕುಮಾರ್ ಶೆಟ್ಟಿ ಹಾಗೂ ಇತರ ಅಧಿಕಾರಿಗಳು, ಕೊರಗ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News