ಟೀಶರ್ಟ್ ಮಾರಿ ಬದುಕೋಣ ಅಂದ್ಕೊಂಡಿದ್ದೀನಿ!

Update: 2022-02-27 05:38 GMT

ಚೌಕೀದಾರರು ರಶ್ಯಕ್ಕೆ ಫೋನ್ ಮಾಡಿ ಯುದ್ಧ ನಿಲ್ಲಿಸಿಯೇ ನಿಲ್ಲಿಸುತ್ತಾರೆ ಎಂದು ಭಕ್ತ ಬಸ್ಯ ಹೇಳಿರುವುದನ್ನು ಬಲವಾಗಿ ನಂಬಿಕೊಂಡು ಆತಂಕ ಮುಕ್ತನಾಗಿ ಪತ್ರಕರ್ತ ಎಂಜಲು ಕಾಸಿ ಬೀದಿಬದಿಯ ಗೂಡಂಗಡಿಯಲ್ಲಿ ಟೀ ಕುಡಿಯುತ್ತಿರುವಾಗ ಯಾರೋ ‘‘ಟೀ ಶರ್ಟ್....ಟೀ ಶರ್ಟ್’’ ಎಂದು ಕೂಗುತ್ತಿರುವುದು ಕೇಳಿಸಿತು. ಧ್ವನಿ ಎಲ್ಲೋ ಕೇಳಿದಂತಿದೆ. ತಿರುಗಿ ನೋಡಿದರೆ ‘ಹೆಂಗ್ ಪುಂಗ್ ಲೀ’ ಯಾನೆ ಕಕಿಬಕ ಅವರು ತಲೆ ಮೇಲೆ ಟೀ ಶರ್ಟ್ ಕಟ್ಟು ಹೊತ್ತು ತಿರುಗಾಡುತ್ತಿದ್ದಾರೆ.
‘‘ಸಾರ್...ನೀವು ಹೆಂಗ್ ಪುಂಗ್ ಲೀ ಅಲ್ಲವೆ? ಇದೇನು ಸಾರ್ ಈ ಸ್ಥಿತಿ?’’ ಕಾಸಿ ಆತಂಕದಿಂದ ಕೇಳಿದ.
‘‘2020ರಲ್ಲಿ ದೇಶ ವಿಶ್ವಗುರು ಆಗುತ್ತೆ ಎಂದು ನಿರೀಕ್ಷಿಸಿದ್ದೆ. ಈಗ ಕವಡೆ ಹಾಕಿ ನೋಡಿದರೆ ಅಚ್ಛೇದಿನ್ ಬದಲು ಅಮೃತ ಕಾಲ ಬರುತ್ತದೆ. ಆದರೆ 50 ವರ್ಷ ಬೇಕಾಗುತ್ತೆ. ಅಲ್ಲಿಯವರೆಗೆ ಟೀಶರ್ಟ್ ಮಾರಿ ಬದುಕೋಣ ಅಂದ್ಕೊಂಡಿದ್ದೀನಿ’’ ಕಕಿಬಕ ಬೆಪ್ಪು ಮೋರೆ ಹಾಕಿ ಹೇಳಿದರು.
‘‘ಸಾರ್, ನಿಮ್ಮ ಹೆಂಗ್‌ಪುಂಗ್ಲಿ ಯುನಿವರ್ಸಿಟಿಯಲ್ಲಿ ಓದಿದ ಡ್ರೋನ್ ಪ್ರತಾಪ ಏನು ಮಾಡುತ್ತಿದ್ದಾನೆ ಸಾರ್....’’ ಕಾಸಿ ಆಸಕ್ತಿಯಿಂದ ಕೇಳಿದ.

‘‘ಅವನೀಗ ಉಕ್ರೇನ್‌ಗೆ ಕಳುಹಿಸುವುದಕ್ಕಾಗಿ ಡ್ರೋನ್‌ಗಳನ್ನು ತಯಾರಿಸುತ್ತಿದ್ದಾನೆ. ಚೌಕೀದಾರರ ಆತ್ಮನಿರ್ಭರ್ ಅಡಿಯಲ್ಲಿ ಈ ಡ್ರೋನ್‌ಗಳನ್ನು ಉಕ್ರೇನ್‌ಗಳಿಗೆ ನೀಡಲಾಗುತ್ತದೆ’’ ಆದರೆ ಕಕಿಬಕ ಮುಖದಲ್ಲಿ ಉತ್ಸಾಹ ಇರಲಿಲ್ಲ. ‘‘ಸಾರ್...ಉಕ್ರೇನ್ ಈಗಾಗಲೇ ರಶ್ಯದ ಕೈಯಲ್ಲಿ ನಾಶವಾಗುತ್ತಿದೆ. ನಿಮ್ಮ ಶಿಷ್ಯನ ಡ್ರೋನ್ ಯಾವಾಗ ಸಿದ್ಧವಾಗಬಹುದು?’’ ಕಾಸಿ ಕೇಳಿದ.
‘‘ಏನಿದ್ದರೂ ನನ್ನ ಶಿಷ್ಯನ ಡ್ರೋನ್ ತಯಾರಾಗುವುದಕ್ಕೆ ಅಮೃತ ಕಾಲದವರೆಗೆ ಕಾಯಬೇಕು. ಅಲ್ಲಿಯವರೆಗೆ ಉಕ್ರೇನ್ ಸಹಿಸಿಕೊಂಡರೆ ಮುಂದೆ ಭಾರತದ ಡ್ರೋನ್ ಸಹಾಯದಿಂದ ರಶ್ಯವನ್ನು ಸೋಲಿಸುವ ಎಲ್ಲ ಸಾಧ್ಯತೆಗಳಿವೆ.’’ ಕಕಿಬಕ ನುಡಿದರು.
‘‘ಅಂದರೆ ಉಕ್ರೇನ್ ಇನ್ನೂ 50 ವರ್ಷ ಕಾಯಬೇಕೆ?’’ ಕಾಸಿ ಆತಂಕದಿಂದ ಕೇಳಿದ.
‘‘70 ವರ್ಷ ಕಾಂಗ್ರೆಸ್‌ಗೆ ಕೊಟ್ಟಿರುವಾಗ ಅಮೃತಕಾಲಕ್ಕಾಗಿ ಚೌಕೀದಾರರಿಗೆ ಯಾಕೆ ಇನ್ನೂ 50 ವರ್ಷ ನೀಡಬಾರದು?’’ ಕಕಿಬಕರು ಸಿಟ್ಟಿನಿಂದ ಕೇಳಿದರು.
‘‘ಆದರೆ ಅಲ್ಲಿಯವರೆಗೆ ರಶ್ಯ ಎಲ್ಲ ಮಾಡಿ ಮುಗಿಸಿರುವುದಿಲ್ಲವೆ?’’ ಕಾಸಿ ಪ್ರಶ್ನಿಸಿದ.
‘‘ನಿಧಾನಕ್ಕೆ ಯುದ್ಧ ಮಾಡಿ. ಎಲ್ಲ ಒಮ್ಮೆಲೆ ಮುಗಿಸಬೇಡಿ ಎಂದು ರಶ್ಯದ ಜೊತೆಗೆ ಚೌಕೀದಾರರು ಈಗಾಗಲೇ ಮಾತನಾಡಿದ್ದಾರೆ. ರಶ್ಯ ವಿಶ್ವಗುರುವಿನ ಮಾತಿಗೆ ತಲೆ ಬಾಗಿದೆ’’

‘‘ಅದಿರ್ಲಿ ಸಾರ್...ಇದೇನು ಕೈಯಲ್ಲಿ ಟೀ ಶರ್ಟ್ ಕಟ್ಟು...’’ ‘‘ಇದು ಮೋದಿಯವರ ಆತ್ಮನಿರ್ಭರ ಯೋಜನೆಯ ಪರವಾಗಿ ಟೀಶರ್ಟ್ ತಯಾರಿಸಿ ಮಾರುತ್ತಿದ್ದೇವೆ. ಅಪ್ಪಟ ಸ್ವದೇಶಿ ರಕ್ತದಿಂದ ಈ ಶರ್ಟ್‌ನ್ನು ತಯಾರಿಸಲಾಗಿದೆ...ಎಲ್ಲ ದೇಶ ಪ್ರೇಮಿಗಳು ಇದನ್ನು ಧರಿಸಬೇಕು...’’
‘‘ಟೀ ಶರ್ಟ್‌ನ್ನು ನೂಲಿನಿಂದ ತಯಾರಿಸುವುದಲ್ಲವೆ ಸಾರ್? ಇದೆಂತ ರಕ್ತದಿಂದ ಟೀ ಶರ್ಟ್...ಟೀ ಪುಡಿಯಿಂದ ಟೀ ಮಾಡುವುದನ್ನು ಕೇಳಿದ್ದೇನೆ...’’
‘‘ದೇಶಕ್ಕಾಗಿ ಹುತಾತ್ಮರಾದವರ ರಕ್ತದಿಂದ ಬಣ್ಣ ಬಳಿಯಲಾಗಿದೆ...’’
‘‘ಓಹ್...ಮೊನ್ನೆ ಗಡಿಯಲ್ಲಿ ಹುತಾತ್ಮರಾಗಿರುವ ಕೊಡಗಿನ ಯೋಧನ ರಕ್ತದಿಂದಲೇ ಸಾರ್...?’’ ಕಾಸಿ ಅಚ್ಚರಿಯಿಂದ ಕೇಳಿದ.
‘‘ಛೆ ಛೆ ಅವರಲ್ಲ....’’
‘‘ಜಲಿಯನ್ ವಾಲಾಬಾಗ್‌ನಲ್ಲಿ ಸ್ವಾತಂತ್ರಕ್ಕೆ ಹೋರಾಡಿದರಲ್ಲ ಅವರ ರಕ್ತದಿಂದ....’’
‘‘ಛೇ ಅದೆಲ್ಲ ಹಳೆಯದು...’’
‘‘ಪುಲ್ವಾಮದಲ್ಲಿ ಹುತಾತ್ಮರಾದರಲ್ಲ ಸಾರ್, 50 ಸೈನಿಕರು. ಅವರ ರಕ್ತದಿಂದಲೇ ಸಾರ್?’’
‘‘ಅಲ್ಲವೇ ಅಲ್ಲ....’’
‘‘ಇದು ಮೊನ್ನೆ ಮೊನ್ನೆ ಆ ಸಮುದಾಯದ ಐವರು ಕೊಂದರಲ್ಲ.....ಅವನ ರಕ್ತದಿಂದ....’’
‘‘ಅವನು ದೇಶಕ್ಕಾಗಿ ಏನು ಮಾಡಿದ್ದ ಸಾರ್?’’
‘‘ಅವನು ಆ ಸಮುದಾಯದವರ ಕೈಯಿಂದಲೇ ಸಾಯುವ ಮೂಲಕ ಪಕ್ಷಕ್ಕೆ ಸಹಾಯ ಮಾಡಿದ್ದಾನೆ. ಪಕ್ಷಕ್ಕೆ ಸಹಾಯ ಮಾಡಿದರೆ ದೇಶಕ್ಕೆ ಸಹಾಯ ಮಾಡಿದ ಹಾಗೆ. ಆದುದರಿಂದ ಆತ ದೇಶ ಭಕ್ತನೇ ಸರಿ. ಆದುದರಿಂದ ಅವನ ರಕ್ತದಿಂದ ಈ ಟೀಶರ್ಟ್ ತಯಾರಿಸಿ ಮಾರುತ್ತಿದ್ದೇವೆ....’’
‘‘ಸಾರ್...ಬೆಳ್ತಂಗಡಿಯಲ್ಲಿ ಒಂದು ಹೆಣ ಬಿದ್ದಿದೆ ಸಾರ್....ನಿಮ್ಮ ಟೀಶರ್ಟ್ ವ್ಯಾಪಾರ ಭರ್ಜರಿ ಮಾಡಬಹುದು....’’
‘‘ಹೌದೇ....ಸತ್ತವನು ಹಿಂದುವೆ?’’ ಜೊಲ್ಲು ಸುರಿಸುತ್ತಾ ಕಕಿಬಕ ಕೇಳಿದರು.

‘‘ಹೌದು ಸಾರ್.’’ ‘‘ಹಾಗಾದರೆ ಈಗಲೇ ಅಲ್ಲಿಗೆ ಹೋಗಬೇಕಾಗಿದೆ....’’ ಎಂದದ್ದೇ ತಕ್ಷಣ ಟೀ ಶರ್ಟ್ ಅಂಗಡಿಗೆ ಫೋನ್ ಮಾಡಿ ಇನ್ನಷ್ಟು ಆರ್ಡರ್ ಮಾಡಿದರು. ‘‘ಕೊಂದಿರುವುದು ಭಯೋತ್ಪಾದಕನೇ....’’ ಕಕಿಬಕ ಕೇಳಿದರು.
‘‘ಹೌದು ಸಾರ್....ಬಜರಂಗದಳ ಮುಖಂಡನಂತೆ...’’

ಬೆಚ್ಚಿ ಬಿದ್ದು ಕಾಸಿಯ ಮುಖವನ್ನೇ ನೋಡಿದ ಕಕಿಬಕ ತಕ್ಷಣ ಟೀ ಶರ್ಟ್ ಅಂಗಡಿಗೆ ಫೋನ್ ಮಾಡಿ ‘‘ಸತ್ತವನು ದೇಶಭಕ್ತನಲ್ಲ. ಆದುದರಿಂದ ಟೀಶರ್ಟ್ ಆರ್ಡರ್ ಕ್ಯಾನ್ಸಲ್ ಮಾಡಿ’’ ಎಂದು ಅಲ್ಲಿಂದ ದಢ ದಢನೇ ಹೊರಟರು.

chelayya@gmail.com

Writer - *ಚೇಳಯ್ಯ

contributor

Editor - *ಚೇಳಯ್ಯ

contributor

Similar News