ಉಡುಪಿ ಬಾಲಕಿಯರ ಕಾಲೇಜಿನ ಹಿಜಾಬ್ ಧಾರಿ ವಿದ್ಯಾರ್ಥಿನಿಯರಿಗೆ ಪ್ರಾಕ್ಟಿಕಲ್ ಪರೀಕ್ಷೆಗೆ ಅವಕಾಶ ನಿರಾಕರಣೆ
ಉಡುಪಿ, ಫೆ.28: ಹಿಜಾಬ್ ಸಂಬಂಧ ಹೈಕೋರ್ಟ್ ಮೆಟ್ಟಿಲೇರಿರುವ ಉಡುಪಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರ ಪೈಕಿ ದ್ವಿತೀಯ ಪಿಯು ವಿಜ್ಞಾನ ವಿಭಾಗದ ಮೂವರು ವಿದ್ಯಾರ್ಥಿನಿಯರಿಗೆ ಇಂದಿನ ಪ್ರಾಕ್ಟಿಕಲ್ ಪರೀಕ್ಷೆಗೆ ಹಾಜರಾಗಲು ಅವಕಾಶ ನಿರಾಕರಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ವಿದ್ಯಾರ್ಥಿನಿ ಅಲ್ಮಾಸ್ ಎ.ಎಚ್., ನಮ್ಮ ಪೈಕಿ ನಾನು ಸೇರಿದಂತೆ ಮೂವರು ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರಿಗೆ ಇಂದಿನ ಪ್ರಾಕ್ಟಿಕಲ್ ಪರೀಕ್ಷೆಗೆ ಹಾಜರಾಗಲು ಪ್ರಾಂಶುಪಾಲರು ಅವಕಾಶ ನೀಡಿಲ್ಲ ಹಾಗೂ ಪೊಲೀಸ್ ದೂರು ನೀಡುವುದಾಗಿ ಬೆದರಿಕೆ ಹಾಕಿ ಕಳುಹಿಸಿರುವುದಾಗಿ ಆರೋಪಿಸಿದ್ದಾರೆ.
"ನಾವು ರೆಕಾರ್ಡ್ಸ್ ಪುಸ್ತಕಗಳನ್ನು ಪೂರ್ಣಗೊಳಿಸಿದ್ದೇವೆ ಮತ್ತು ಪ್ರಾಕ್ಟಿಕಲ್ ಪರೀಕ್ಷೆಗೆ ಹಾಜರಾಗಲು ಬಹಳ ಉತ್ಸುಕರಾಗಿ ಹೋಗಿದ್ದೆವು. ಆದರೆ ಕಾಲೇಜು ತಲುಪಿದಾಗ ನಮ್ಮ ಪ್ರಾಂಶುಪಾಲರು "ನೀವು ಇಲ್ಲಿಂದ ಐದು ನಿಮಿಷದಲ್ಲಿ ಹೊರಡಬೇಕು. ಇಲ್ಲವಾದಲ್ಲಿ ನಾನು ಪೊಲೀಸ್ ಕಂಪ್ಲೇಂಟ್ ಕೊಡುತ್ತೇನೆ" ಎಂದು ನಮಗೆ ಬೆದರಿಕೆ ಹಾಕಿದಾಗ ತುಂಬಾ ಬೇಸರವಾಯಿತು" ಎಂದು ಅಲ್ಮಾಸ್ ಹೇಳಿದ್ದಾರೆ.
ಹಿಜಾಬ್ ವಿರುದ್ಧ ಬಿತ್ತಿದ ದ್ವೇಷದಿಂದಾಗಿ ಕಾಲೇಜಿನಿಂದ ನಾನು ಹೊಂದಿದ್ದ ಭರವಸೆಗಳು ಮತ್ತು ನನ್ನ ಕನಸುಗಳು ಛಿದ್ರವಾಗುತ್ತಿವೆ ಎಂದು ಅಲ್ಮಾಸ್ ಟ್ವೀಟ್ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ.
ಹಿಜಾಬ್ ಹಾಕಿಕೊಂಡು ತರಗತಿಗೆ ಹಾಜರಾಗಲು ಅವಕಾಶ ನೀಡಬೇಕೇಂದು ಕೋರಿ ಹೈಕೊರ್ಟ್ ಗೆ ಅರ್ಜಿ ಸಲ್ಲಿಸಿದವರ ಪೈಕಿ ಉಡುಪಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಅಲ್ಮಾಝ್, ಹಝ್ರ ಶಿಫಾ ಹಾಗೂ ಬೀಬಿ ಆಯಿಶ ಅವರು ದ್ವಿತೀಯ ಪಿಯು ವಿದ್ಯಾರ್ಥಿನಿಯರಾಗಿದ್ದಾರೆ.
Today was our final practical exam!
— Almas (@Ah_Almas12) February 28, 2022
We had completed our record books and went in great hopes to attend the practical exam.
It was so disheartening when our principal threatened us saying, "You have 5 mins to leave, if you don't leave, I'll file a police complaint"