ಪೊಲೆಂಡ್ ತಲುಪಿದ ಉಡುಪಿ ಜಿಲ್ಲೆಯ ರೋಹನ್, ಬುಕಾರೆಸ್ಟ್‌ನಲ್ಲಿ ನಿಯಮ್

Update: 2022-03-02 16:20 GMT
ಫೈಲ್ ಫೋಟೊ

ಉಡುಪಿ, ಮಾ.2: ಸದ್ಯ ಯುದ್ಧ ಬಾಧಿತ ಉಕ್ರೇನ್‌ನಲ್ಲಿದ್ದ ಉಡುಪಿ ಜಿಲ್ಲೆಯ ಕೆಮ್ಮಣ್ಣುವಿನ ಗ್ಲೆನ್‌ವಿಲ್ ಫೆರ್ನಾಂಡೀಸ್ ಹಾಗೂ ಕಲ್ಯಾಣಪುರದ ಅನಿಫ್ರೆಡ್ ರಿಡ್ಲೆ ಡಿಸೋಜ ಅವರು ತಾವಿರುವ ಹಾಸ್ಟೆಲ್‌ನ ಬಂಕರ್‌ಗಳಿಂದ ಹೊರಬಂದು ಖಾರ್ಕೀವ್ ನಗರದ ರೈಲ್ವೆ ನಿಲ್ದಾಣ ತಲುಪಿದ್ದು, ಅಲ್ಲಿಂದ ಪೊಲೆಂಡ್ ಗಡಿಯಲ್ಲಿರುವ ಲೈವ್ ನಗರಕ್ಕೆ ರಾತ್ರಿ ತೆರಳಲಿದ್ದಾರೆ ಎಂದು ಉಡುಪಿ ಜಿಲ್ಲಾಡಳಿತಕ್ಕೆ ಮಾಹಿತಿ ಬಂದಿದೆ.

ಉಕ್ರೇನಿನಲ್ಲಿದ್ದ ಏಳು ಮಂದಿ ಉಡುಪಿ ಜಿಲ್ಲೆಯ ವೈದ್ಯಕೀಯ ವಿದ್ಯಾರ್ಥಿಗಳ ಪೈಕಿ ಇವರಿಬ್ಬರು ಮಾತ್ರ ದೇಶದೊಳಗಿದ್ದು, ಇದೀಗ ಗಡಿಭಾಗಕ್ಕೆ ಕಂಡೊಯ್ಯುವ ರೈಲಿನಲ್ಲಿ ರಾತ್ರಿ 9:30ಕ್ಕೆ ಪ್ರಯಾಣ ಪ್ರಾರಂಭಿಸಿದ್ದಾರೆ. ಉಳಿದ ಐದು ಮಂದಿಯಲ್ಲಿ ಇಬ್ಬರು ಈಗಾಗಲೇ ಮನೆಯನ್ನು ಸೇರಿಕೊಂಡಿದ್ದರೆ ಉಳಿದ ಮೂವರು ಪೊಲೆಂಡ್ ಮತ್ತು ಹಂಗೇರಿಗಳಲ್ಲಿ ಸ್ವದೇಶಕ್ಕೆ ಕರೆದೊಯ್ಯುವ ವಿಮಾನದ ನಿರೀಕ್ಷೆಯಲ್ಲಿದ್ದಾರೆ.

ರೋಹನ್ ಪೊಲೆಂಡ್‌ನಲ್ಲಿ: ಖಾರ್ಕೀವ್‌ನ ನೇಶನಲ್ ಮೆಡಿಕಲ್ ಯುನಿವರ್ಸಿಟಿಯ ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಬಿ.ಧನಂಜಯ ಅವರು ಪುತ್ರ ರೋಹನ್ ಬಗ್ಲಿ (24) ಖಾರ್ಕೀವ್‌ನಿಂದ ಲೈವ್‌ಗೆ ಬಂದು ಅಲ್ಲಿನ ಪೊಲೆಂಡ್ ಗಡಿಭಾಗದ ಇಮಿಗ್ರೇಷನ್ ಸೆಂಟರ್‌ನಲ್ಲಿ ದಾಖಲೆಗಳ ಪರಿಶೀಲನೆ ಮುಗಿಸಿ ಇದೀಗ ಪೊಲೆಂಡ್ ವಿಮಾನ ನಿಲ್ದಾಣ ತಲುಪಿರುವುದಾಗಿ ಮಾಹಿತಿ ಬಂದಿದೆ.

ಪೊಲೆಂಡ್‌ನ ಭಾರತೀಯ ರಾಯಭಾರ ಕಚೇರಿ ಅವರನ್ನು ಚೆನ್ನಾಗಿ ನೋಡಿ ಕೊಂಡಿದೆ. ಕಳೆದ ನಾಲ್ಕು ದಿನಗಳಿಂದ ಊಟ-ತಿಂಡಿಗಳಿಲ್ಲದೇ ಬಳಲಿದ್ದ ಮಗನಿಗೆ ಊಟ-ತಿಂಡಿ ವ್ಯವಸ್ಥೆ ಮಾಡಿ ವಿಮಾನ ನಿಲ್ದಾಣಕ್ಕೆ ಕರೆದೊಯ್ದು, ದಾಖಲೆಗಳ ಪರಿಶೀಲನೆ ಮುಗಿಸಿ ಚೆಕ್‌ಇನ್ ಮಾಡಿಸಿದ್ದು, ಇದೀಗ ಅಲ್ಲೇ ಪಕ್ಕದ ಫ್ಲ್ಯಾಟ್‌ನಲ್ಲಿರಿಸಿ ಭಾರತಕ್ಕೆ ಬರುವ ಮುಂದಿನ ವಿಮಾನದಲ್ಲಿ ಕಳುಹಿಸಿ ಕೊಡುವ ವ್ಯವಸ್ಥೆ ಮಾಡಿದೆ ಎಂದು ರೋಹನ್ ತಂದೆ, ಡಾ.ಧನಂಜಯ ‘ವಾರ್ತಾಭಾರತಿ’ಗೆ ಖುಷಿಯಿಂದ ತಿಳಿಸಿದರು. ಇನ್ನು ಎರಡು ದಿನದೊಳಗೆ ರೋಹನ್ ಮನೆಗೆ ಮರಳುವ ನಿರೀಕ್ಷೆ ತಮಗಿದೆ ಎಂದವರು ಹೇಳಿದರು.

ರೋಹನ್ ಹಂಗೇರಿ ಮೂಲಕ ಭಾರತಕ್ಕೆ ಬರುವ ಯೋಜನೆ ಇತ್ತಾದರೂ, ಪೊಲೆಂಡ್ ತುಂಬಾ ಸಮೀಪದಲ್ಲಿರು ವುದರಿಂದ ಅಲ್ಲಿಂದಲೇ ಭಾರತಕ್ಕೆ ಬರಲು ನಿರ್ಧರಿಸಿದ್ದು, ಇದೀಗ ಹೊಸದಿಲ್ಲಿಗೆ ಕರೆದುಕೊಂಡು ಬರುವ ವಿಮಾನದ ನಿರೀಕ್ಷೆಯಲ್ಲಿದ್ದಾರೆ.

ಉಳಿದಂತೆ ಪರ್ಕಳ ಮೂಲದ ನಿಯಮ್ ರಾಘವೇಂದ್ರ (20) ಉಕ್ರೇನ್ ಗಡಿ ದಾಟಿ ರೊಮೇನಿಯಾದ ಬುಕಾರೆಸ್ಟ್‌ನಲ್ಲಿದ್ದಾರೆ. ಅಲ್ಲಿಂದ ಹೊಸದಿಲ್ಲಿಗೆ ಕರೆದೊಯ್ಯುವ ವಿಮಾನದ ನಿರೀಕ್ಷೆಯಲ್ಲಿದ್ದಾರೆ. ನಿಯಮ್ ತಂದೆ ಬಿ.ವಿ. ರಾಘವೇಂದ್ರ ಹೊಸದಿಲ್ಲಿಯ ಕರ್ನಾಟಕ ಭವನದ ಮ್ಯಾನೇಜರ್ ಆಗಿದ್ದಾರೆ.

ಖಾರ್ಕೀವ್‌ನಲ್ಲಿ ಕಲಿಯುತ್ತಿರುವ ತ್ರಾಸಿಯ ಅಂಕಿತ ಜಗದೀಶ್ ಪೂಜಾರಿ (22) ಅವರು ಲೈವ್‌ಗೆ ಬಂದಿದ್ದು, ಅಲ್ಲಿಂದ ಪೊಲಂಡ್‌ಗೆ ತೆರಳುತಿದ್ದಾರೆ ಎಂದು ಜಿಲ್ಲಾಡಳಿತಕ್ಕೆ ಬಂದ ಮಾಹಿತಿ ತಿಳಿಸಿದೆ.

ಜಿಲ್ಲೆಯ ಏಳು ಮಂದಿಯ ಪೈಕಿ ಉದ್ಯಾವರ ಸ್ಮಾಲರದ ರಾಜೀವ್‌ರ ಮಗ ಮೃಣಾಲ್ (19), ಸೋಮವಾರ ರಾತ್ರಿಯೇ ಮನೆಗೆ ಆಗಮಿಸಿ ಹೆತ್ತವರು ಹಾಗೂ ಅಜ್ಜಿ ಜೊತೆ ಸೇರಿಕೊಂಡರೆ, ಒಡೆಸ್ಸಾ ನೇಶನಲ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ನಾಲ್ಕನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ ಉಡುಪಿಯ ನಂದಿನಿ ಅರುಣ್(21) ರೊಮೇನಿಯಾದ ರಾಜಧಾನಿ ಬುಕಾರೆಸ್ಟ್ ವಿಮಾನ ನಿಲ್ದಾಣದಿಂದ ಖಾಸಗಿ ಏರ್ ಎಮಿರೇಟ್ಸ್ ವಿಮಾನದಲ್ಲಿ ಮಸ್ಕತ್‌ಗೆ ಪ್ರಯಾಣಿಸಿ ಅಲ್ಲಿ ಉದ್ಯೋಗಿಯಾಗಿರುವ ತಂದೆಯ ಮನೆ ತಲುಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News