ಉಡುಪಿ ನ್ಯಾಯಾಲಯದೊಳಗೆ ಹಲ್ಲೆ: ದೂರು ಪ್ರತಿದೂರು ದಾಖಲು

Update: 2022-03-05 15:24 GMT

ಉಡುಪಿ, ಮಾ.5: ಅಪಘಾತ ಪ್ರಕರಣದ ಸಾಕ್ಷಿಯೊಬ್ಬ ಮಾ.5ರಂದು ಸಂಜೆ ನ್ಯಾಯಾಲಯದೊಳಗೆ ವಕೀಲನಿಗೆ ಹಲ್ಲೆ ನಡೆಸಿರುವುದಾಗಿ ಆರೋಪಿಸಿದ್ದು, ಇದಕ್ಕೆ ಪ್ರತಿಯಾಗಿ ವಕೀಲರ ಗುಂಪು ಆತನಿಗೆ ಪ್ರತಿ ಹಲ್ಲೆ ನಡೆಸಿರುವುದಾಗಿ ದೂರಲಾಗಿದೆ. ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದೆ.

ಹಲ್ಲೆಗೆ ಒಳಗಾಗಿರುವ ವಕೀಲ ಕಟಪಾಡಿ ಮಟ್ಟುವಿನ ಗುರುರಾಜ್ ಹಾಗೂ ಸಾಕ್ಷಿದಾರ ಕೊರಂಗ್ರಪಾಡಿಯ ಶಾಹಿದ್ ಎಂಬವರು ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಸಾಕ್ಷಿ ನುಡಿಯಲು ಶಾಹಿದ್ ಇಂದು ಬೆಳಗ್ಗೆ ನ್ಯಾಯಾಲಯಕ್ಕೆ ಬಂದಿದ್ದರು. ಸಂಜೆವರೆಗೆ ಶಾಹಿದ್‌ನ ಹೇಳಿಕೆ ಪಡೆಯದೆ ನ್ಯಾಯಾಧೀಶರು ಪ್ರಕರಣವನ್ನು ಮುಂದೂಡಿದರು. ಈ ಸಂಬಂಧ ಪ್ರಕರಣದ ವಕೀಲ ಗುರುರಾಜ್ ಹಾಗೂ ಶಾಹಿದ್ ಮಧ್ಯೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. ಬಳಿಕ ಗುರುರಾಜ್‌ಗೆ ಶಾಹಿದ್ ಕೋರ್ಟ್ ಒಳಗೆಯೇ ಹಲ್ಲೆ ನಡೆಸಿರುವುದಾಗಿ ದೂರಲಾಗಿದೆ.

ಇದಕ್ಕೆ ಪ್ರತಿಯಾಗಿ ಕೋರ್ಟ್‌ನಲ್ಲಿದ್ದ ಇತರ ವಕೀಲರು ಶಾಹಿದ್‌ಗೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ. ಇದರಿಂದ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಕೋರ್ಟ್ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದ್ದು, ಒಂದು ಕೆಎಸ್‌ಆರ್‌ಪಿ ತುಕಡಿಯನ್ನು ನಿಯೋಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News