ಹಂಗೇರಿ ಗಡಿಯತ್ತ ಗ್ಲೆನ್‌ವಿಲ್; ಬುಡಾಪೆಸ್ಟ್‌ನಲ್ಲಿ ಅನಿಫ್ರೆಡ್

Update: 2022-03-05 16:23 GMT

ಉಡುಪಿ: ಯುದ್ಧಪೀಡಿತ ಉಕ್ರೇನಿನಲ್ಲಿ ಸಿಕ್ಕಿಹಾಕಿಕೊಂಡಿರುವ ಬಗ್ಗೆ ಉಡುಪಿ ಜಿಲ್ಲಾಡಳಿತಕ್ಕೆ ಅಧಿಕೃತ ಮಾಹಿತಿ ದೊರೆತ ಒಟ್ಟು ಏಳು ಮಂದಿ ವೈದ್ಯಕೀಯ ವಿದ್ಯಾರ್ಥಿಗಳ ಪೈಕಿ ಐವರು ಈಗಾಗಲೇ ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಿ ಕುಟುಂಬವನ್ನು ಸೇರಿಕೊಂಡಿದ್ದರೆ, ಕಲ್ಯಾಣಪುರದ ಅನಿಫ್ರೆಡ್ ರಿಡ್ಲೆ ಡಿಸೋಜ ಹಂಗೇರಿಯ ರಾಜಧಾನಿ ಬುಡಾಪೆಸ್ಟ್ ವಿಮಾನ ನಿಲ್ದಾಣದಲ್ಲಿ ಭಾರತಕ್ಕೆ ಕರೆತರುವ ವಿಮಾನಕ್ಕೆ ಕಾಯುತಿದ್ದರೆ, ಕೆಮ್ಮಣ್ಣಿನ ಗ್ಲೆನ್‌ವಿಲ್ ಫೆರ್ನಾಂಡೀಸ್ ಇದೀಗ ಬಸ್‌ನಲ್ಲಿ ಹಂಗೇರಿ ಗಡಿಯತ್ತ ಪ್ರಯಾಣಿಸುತ್ತಿದ್ದಾರೆಂದು ಜಿಲ್ಲಾಡಳಿತಕ್ಕೆ ಮಾಹಿತಿ ಬಂದಿದೆ.

ಖಾರ್ಕೀವ್‌ನಿಂದ ರೈಲಿನಲ್ಲಿ ಪ್ರಯಾಣಿಸಿ ಗಡಿಭಾಗವಾದ ಲೈವ್‌ಗೆ ನಿನ್ನೆ ಬಂದಿದ್ದ ಕಲ್ಯಾಣಪುರದ ಅನಿಫ್ರೆಡ್ ರಿಡ್ಲೆ ಡಿಸೋಜ, ಇದೀಗ ಹಂಗೇರಿಯ ಬುಡಾಪೆಸ್ಟ್ ತಲುಪಿಸಿದ್ದಾರೆ. ಅವರೀಗ ಅಲ್ಲಿನ ವಿಮಾನ ನಿಲ್ದಾಣದಲ್ಲಿದ್ದು, ಭಾರತ ಸರಕಾರ ವ್ಯವಸ್ಥೆಗೊಳಿಸುವ ವಿಮಾನದ ಸೀಟು ಸಿಗುವುದನ್ನು ಎದುರು ನೋಡುತಿದ್ದಾರೆ.

ಕೆಮ್ಮಣ್ಣುವಿನ ಗ್ಲೆನ್‌ವಿಲ್ ಫೆರ್ನಾಂಡೀಸ್ ಭಾರತೀಯ ಧೂತಾವಾಸದ ನಿರ್ದೇಶನದಂತೆ ಖಾರ್ಕೀವ್ ನಗರ ಸಮೀಪದ ಪೆಸೊಚಿನ್ ಪಟ್ಟಣದಲ್ಲಿದ್ದವರು ಇದೀಗ ಬಸ್‌ನಲ್ಲಿ ಹಂಗೇರಿ ಗಡಿಯತ್ತ ಹೊರಟಿದ್ದಾರೆ. ನಾಳೆ ಅವರು ಉಕ್ರೇನ್ ಗಡಿ ದಾಟುವ ನಿರೀಕ್ಷೆ ಇದೆ.

ಮನೆಗೆ ಬಂದ ರೋಹನ್: ಒಂದು ವಾರಕಾಲ ಆತಂಕಭರಿತ ಕ್ಷಣಗಳನ್ನು ಕಳೆದ ಬ್ರಹ್ಮಾವರದ ರೋಹನ್ ಧನಂಜಯ ಕೊನೆಗೂ ಇಂದು ಬೆಳಗ್ಗೆ 10:30ರ ಸುಮಾರಿಗೆ ಮನೆಗೆ ಆಗಮಿಸಿದ್ದು, ತಂದೆ-ತಾಯಿ, ಸಹೋದರನೊಂದಿಗೆ ಕೂಡಿಕೊಂಡರು.

ಪೊಲ್ಯಾಂಡ್‌ನಿಂದ ಕರ್ನಾಟಕದ 20 ಮಂದಿ ವಿದ್ಯಾರ್ಥಿಗಳೊಂದಿಗೆ ಶುಕ್ರವಾರ ಅಪರಾಹ್ನ ಹೊಸದಿಲ್ಲಿಗೆ ಬಂದಿಳಿದ ರೋಹನ್, ರಾಜ್ಯ ಸರಕಾರ ಒದಗಿಸಿದ ವಿಮಾನದಲ್ಲಿ ರಾತ್ರಿ 8:30ಕ್ಕೆ ಬೆಂಗಳೂರಿಗೆ ಪ್ರಯಾಣಿಸಿ 11:00ರ ಸುಮಾರಿಗೆ ರಾಜಧಾನಿಯನ್ನು ತಲುಪಿದರು. ಬಳಿಕ ಮಧ್ಯರಾತ್ರಿ ಬ್ರಹ್ಮಾವರಕ್ಕೆ ಬಸ್‌ನಲ್ಲಿ ಹೊರಟ ಅವರು ಬೆಳಗ್ಗೆ 10:30ಕ್ಕೆ ಮನೆ ತಲುಪಿದರು ಎಂದು ತಂದೆ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಬಿ.ಧನಂಜಯ ತಿಳಿಸಿದರು.

ಈ ಮೂಲಕ ಉಕ್ರೇನ್‌ನಲ್ಲಿದ್ದ ಉಡುಪಿ ಜಿಲ್ಲೆಯ ಏಳು ಮಂದಿ ವೈದ್ಯಕೀಯ ಕಲಿಯುತಿದ್ದ ವಿದ್ಯಾರ್ಥಿಗಳ ಪೈಕಿ ಐವರು ಮನೆಗಳಿಗೆ ಸುರಕ್ಷಿತವಾಗಿ ಮರಳಿ ಬಂದಂತಾಗಿದೆ. ಉದ್ಯಾವರ ಸಾಲ್ಮರದ ಮೃಣಾಲ್ ಫೆ.28ರಂದು ಮನೆಗೆ ಮರಳಿದ್ದರೆ, ಉಡುಪಿಯ ನಂದಿನಿ ಅರುಣ್ ಮಾ.1ರಂದು ತಂದೆ ಇದ್ದ ಮಸ್ಕತ್ ತಲುಪಿದ್ದರು. ಪರ್ಕಳ ಮೂಲದ ನಿಯಮ್ ರಾಘವೇಂದ್ರ ಹಾಗೂ ಬೈಂದೂರು ತಾಲೂಕು ನಾವುಂದದ ಅಂಕಿತಾ ಜಗದೀಶ್ ಪೂಜಾರಿ ಸಹ ಗುರುವಾರ ಹೊಸದಿಲ್ಲಿಗೆ ಬಂದಿದ್ದರು.

ನಿಯಮ್ ಅವರ ತಂದೆ ಬಿ.ವಿ.ರಾಘವೇಂದ್ರ ಹೊಸದಿಲ್ಲಿಯ ಕರ್ನಾಟಕ ಭವನದ ವ್ಯವಸ್ಥಾಪಕರಾಗಿರುವುದರಿಂದ ಅಲ್ಲಿಯೇ ಉಳಿದುಕೊಂಡಿದ್ದಾರೆ. ಅಂಕಿತಾ ಮುಂಬಯಿಗೆ ಬಂದಿದ್ದು, ಅಲ್ಲಿ ತಮ್ಮ ಸಂಬಂಧಿಕರ ಮನೆಯಲ್ಲಿ ಕೆಲವು ದಿನ ಇರಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News