ಕೋವಿಡ್-19 ಮುಂಜಾಗ್ರತಾ ಕ್ರಮ ವಾಪಾಸು ಪಡೆದ ಸೌದಿ ಅರೇಬಿಯಾ

Update: 2022-03-06 04:34 GMT
Photo: Twitter/@SPAregions

ರಿಯಾದ್: ಕೊರೋನ ವೈರಸ್ ಸಾಂಕ್ರಾಮಿಕದ ವಿರುದ್ಧದ ಹೋರಾಟಕ್ಕೆ ಸಂಬಂಧಿಸಿದಂತೆ ಹೇರಿದ್ದ ಮುಂಜಾಗ್ರತಾ ಮತ್ತು ತಡೆಯಾತ್ಮಕ ಕ್ರಮಗಳನ್ನು ಸೌದಿ ಅರೇಬಿಯಾ ಶನಿವಾರ ವಾಪಾಸು ಪಡೆದಿದೆ ಎಂದು arabnews.com ವರದಿ ಮಾಡಿದೆ.

ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು, ಹೊರಾಂಗಣದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯದಂಥ ಕ್ರಮಗಳು ಸೌದಿ ಅರೇಬಿಯಾದಲ್ಲಿ ಇನ್ನು ಕಡ್ಡಾಯವಲ್ಲ ಎಂದು ಒಳನಾಡು ಸಚಿವಾಲಯದ ಅಧಿಕೃತ ಮೂಲಗಳು ದೃಢಪಡಿಸಿವೆ.

ಈ ಸಂಬಂಧ ಸಚಿವಾಲಯದ ಹೇಳಿಕೆಯನ್ನು ಉಲ್ಲೇಖಿಸಿ 'ಸೌದಿ ಪ್ರೆಸ್ ಏಜೆನ್ಸಿ' ವರದಿ ಮಾಡಿದ್ದು, ಎರಡು ಪವಿತ್ರ ಮಸೀದಿಗಳಲ್ಲಿ ಮತ್ತು ಇತರ ಮಸೀದಿಗಳಲ್ಲಿ ಸುರಕ್ಷಿತ ಅಂತರ ಕಾಯ್ದುಕೊಳ್ಳುವ ರೂಢಿ ಕೊನೆಗೊಳ್ಳಲಿದೆ. ಆದರೆ ಯಾತ್ರಾರ್ಥಿಗಳು ಮಾಸ್ಕ್ ಧರಿಸಬೇಕು ಎಂದು ಸ್ಪಷ್ಟಪಡಿಸಿದೆ.

ಸೌದಿ ಅರೇಬಿಯಾಗೆ ಪ್ರಯಾಣಿಸುವವರು ಕೋವಿಡ್-19 ಕ್ವಾರೆಂಟೈನ್ ಗೆ ಒಳಪಡುವ ಅಗತ್ಯ ಇರುವುದಿಲ್ಲ. ಜತೆಗೆ ಪಿಸಿಆರ್ ಪರೀಕ್ಷಾ ವರದಿಯನ್ನೂ ನೀಡುವ ಅಗತ್ಯ ಇಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ ಎಂದು arabnews.com ವರದಿ ಮಾಡಿದೆ.

ಆದರೆ ಸೌದಿ ಅರೇಬಿಯಾಗೆ ಆಗಮಿಸುವ ಎಲ್ಲ ಪ್ರವಾಸಿ ವೀಸಾ ಹೊಂದಿದ ವ್ಯಕ್ತಿಗಳು ಕೊರೋನವೈರಸ್ ಸೋಂಕಿನಿಂದ ಉಂಟಾಗುವ ಯಾವುದೇ ಬಗೆಯ ಅಸ್ವಸ್ಥತೆಯ ಚಿಕಿತ್ಸೆಗೆ ವಿಮಾ ಸುರಕ್ಷೆ ಪಡೆದಿರಬೇಕಾಗುತ್ತದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News