ಚಿತ್ರೋತ್ಸವ ಮತ್ತು ದಿ ರೋಡ್ ಟು ಈಡನ್
ಬೆಂಗಳೂರಿನಲ್ಲಿ 13ನೇ ಅಂತರ್‌ರಾಷ್ಟ್ರೀಯ ಚಿತ್ರೋತ್ಸವ ನಡೆಯುತ್ತಿದೆ. ಮಾ.3ರಿಂದ 10ರವರೆಗೆ, 7 ದಿನಗಳ ಕಾಲ ನಡೆಯಲಿರುವ ಈ ಚಿತ್ರೋತ್ಸವದಲ್ಲಿ ದಿನಕ್ಕೆ ಸುಮಾರು 50 ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ. ಇದೇ ಮೊದಲ ಬಾರಿಗೆ ಓಟಿಟಿ ಪ್ಲಾಟ್‌ಫಾರಂ ಮೂಲಕ, ಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣುವ ಚಿತ್ರವನ್ನು ಅದೇ ಗಳಿಗೆಯಲ್ಲಿ ನೀವಿದ್ದಲ್ಲಿಯೇ ನೋಡುವಂತಹ ವ್ಯವಸ್ಥೆಯನ್ನೂ ಮಾಡಲಾಗಿದೆ. ಇದಲ್ಲದೆ ಒರಾಯನ್ ಮಾಲ್‌ನ 11 ಸ್ಕ್ರೀನ್‌ಗಳು, ಚಾಮರಾಜಪೇಟೆಯ ರಾಜ್ ಕಲಾಮಂದಿರ ಮತ್ತು ಬನಶಂಕರಿಯ ಸುಚಿತ್ರ ಫಿಲ್ಮ್ ಸೊಸೈಟಿಯಲ್ಲಿ, 55 ದೇಶಗಳ 280 ಚಿತ್ರಗಳ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ರಾಷ್ಟ್ರೀಯ, ಅಂತರ್‌ರಾಷ್ಟ್ರೀಯ ಮಟ್ಟದ; ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ ಪಾಲ್ಗೊಂಡು ಪ್ರಶಸ್ತಿ-ಪುರಸ್ಕಾರಗಳನ್ನು ಪಡೆದ; ಚಿತ್ರವಿಮರ್ಶಕರಿಂದ ಮೆಚ್ಚುಗೆ ಗಳಿಸಿದ; ಅಪರೂಪವೆನ್ನುವ ಚಿತ್ರಗಳು ಈ ಬಾರಿಯ ಚಿತ್ರೋತ್ಸವದಲ್ಲಿವೆ. ಚಿತ್ರರಂಗದವರು, ಚಿತ್ರಪ್ರೇಮಿಗಳಲ್ಲದೆ, ಹೊಸ ತಲೆಮಾರಿನ ಯುವಜನತೆ ಬಹಳ ಉತ್ಸಾಹದಿಂದಲೇ ಪಾಲ್ಗೊಂಡಿದೆ. ಈ ಚಿತ್ರಸಂತೆಗಾಗಿ ಕರ್ನಾಟಕ ಚಲನಚಿತ್ರ ಅಕಾಡಮಿ ಕೇವಲ ಮೂರು ಕೋಟಿ ಮೂವತ್ಮೂರು ಲಕ್ಷವನ್ನು ಖರ್ಚು ಮಾಡುತ್ತಿದೆ, ಇರಲಿ. ಇಂದು ಕಝಕಿಸ್ತಾನದ ‘ದಿ ರೋಡ್ ಟು ಈಡನ್’ ಚಿತ್ರವನ್ನು ನೋಡಿದಾಗ, ಈ ಕ್ಷಣಕ್ಕೆ ಅನ್ನಿಸಿದ್ದು ಇಷ್ಟು... 2020ರಲ್ಲಿ ನಿರ್ಮಾಣವಾದ ಚಿತ್ರವಾದರೂ, ಭಿನ್ನವಾಗಿ ಕಾಣಬೇಕೆಂಬ ಬಯಕೆಯಿಂದಲೋ; ಚಿತ್ರವಿಮರ್ಶಕರ, ಪ್ರೇಕ್ಷಕರ ಗಮನ ಸೆಳೆಯುವ ಸಲುವಾಗಿಯೋ ಕಪ್ಪು-ಬಿಳುಪು ಬಣ್ಣದ ಚಿತ್ರವಾಗಿದೆ. ಚಿತ್ರದ ಕೇಂದ್ರಬಿಂದು ಕುರ್ಬತ್ ಎಂಬ ಮುದುಕ. ಆತನ ಮುಸ್ಸಂಜೆಯ ಕತೆ ಹೇಳುವ ಚಿತ್ರವೆನಿಸಿದರೂ, ಮಾನವೀಯತೆ, ಆದರ್ಶ, ಹುಡುಕಾಟಗಳೆಂಬ ಒಳತೋಟಿಗಳನ್ನು ಒಳಗೊಂಡ ಚಿತ್ರ. ನಿಧಾನವಾಗಿ ಪ್ರೇಕ್ಷಕರ ಎದೆಗೆ ಇಳಿಯುವ ಚಿತ್ರ. ಜೊತೆಗೆ ಹೊಸತಲೆಮಾರಿನ ಯಾಂತ್ರೀಕೃತ ಬದುಕಿನ ನಯವಂಚಕತನಗಳನ್ನೂ ಬಿಡಿಸಿಡುವ ಚಿತ್ರ. ಕತೆಗೆ ಪೂರಕವಾಗಿ ಬಣ್ಣ ಬಳಸಿರುವುದು ಸೂಕ್ತವಾಗಿದೆ. ಚಿತ್ರದ ಫೋಟೋಗ್ರಫಿ ಮತ್ತು ಹಿನ್ನೆಲೆ ಸಂಗೀತ ಅದ್ಭುತವಾಗಿದೆ.
ಮುದುಕ ಕುರ್ಬತ್, ಪ್ರಶಸ್ತಿ ವಿಜೇತ ಲೇಖಕ. ವೃತ್ತಿಯಲ್ಲಿ ಶಾಲಾ ಉಪಾಧ್ಯಾಯ. ತನ್ನ ನಿವೃತ್ತ ಬದುಕನ್ನು ಒಂದು ಅಪಾರ್ಟ್‌ಮೆಂಟ್‌ನಲ್ಲಿ ಕಳೆಯುತ್ತ, ಮಿಕ್ಕಿರುವ ಬದುಕನ್ನು ನೆಮ್ಮದಿಯಿಂದ ಕಳೆಯಲು ಬೇಕಾದ ವ್ಯವಸ್ಥೆ ಮಾಡಿಕೊಂಡಿರುವ ಮುದುಕ. ಈತ ಮಡದಿ ಮಕ್ಕಳಿಲ್ಲದ ಒಬ್ಬಂಟಿ. ಈತನಿಗೆ ದೂರದ ಸಂಬಂಧಿ ಟಿಲೆಕ್ ಮತ್ತವನ ಸಂಸಾರ ಬಿಟ್ಟರೆ ಬೇರಾರೂ ಇಲ್ಲ. ಇಂತಹ ಮುದುಕನಿಗೆ, ತನ್ನ ಸಾಹಿತ್ಯದ ಸೊಗಸನ್ನು ಸಮರ್ಥವಾಗಿ ಮುಂದುವರೆಸುವ ತನ್ನ ಶಿಷ್ಯ ಹಾಗೂ ಭರವಸೆಯ ಲೇಖಕ ಸರಸ್‌ನನ್ನು ನೋಡಬೇಕೆಂಬ ಆಸೆಯಾಗಿ ಹುಡುಕಿಕೊಂಡು ಹೋಗುತ್ತಾನೆ. ಆದರೆ ಆತ ತೀವ್ರ ಅನಾರೋಗ್ಯಕ್ಕೀಡಾಗಿ ಹಾಸಿಗೆ ಹಿಡಿದು ಮಲಗಿರುತ್ತಾನೆ. ಆತನಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದ್ದು, 40ಸಾವಿರ ಡಾಲರ್ ಹಣ ಬೇಕಾಗಿರುತ್ತದೆ. ಆದರೆ ಕಷ್ಟದಲ್ಲಿರುವ ಸರಸ್ ಸಂಸಾರಕ್ಕೆ ಅದು ಸಾಧ್ಯವಿಲ್ಲ. ಮುದುಕ ಕುರ್ಬತ್ ತನ್ನ ಶಿಷ್ಯನ ಸ್ಥಿತಿ ಕಂಡು ಮರುಗಿ, ತನಗಾಸರೆಯಾಗಿರುವ ಮನೆ ಮಾರಿ ಆತನ ಶಸ್ತ್ರಚಿಕಿತ್ಸೆಗಾಗಿ ಹಣ ಕೊಡಲು ಮುಂದಾಗುತ್ತಾನೆ. ಕುರ್ಬತ್‌ನ ಬಗ್ಗೆ ಪ್ರೀತಿ ಇಟ್ಟುಕೊಂಡಿರುವ ಸಂಬಂಧಿ ಟಿಲೆಕ್, ತನ್ನ ತೀವ್ರ ಆರ್ಥಿಕ ದುಸ್ಥಿತಿಯ ಕಥೆ ಹೇಳಿ, ಮನೆ ಮಾರಿದ ಹಣ ಪಡೆದು ವಂಚಿಸಲು ಹವಣಿಸುತ್ತಾನೆ. ಕುರ್ಬತ್ ಒಂದಷ್ಟು ಹಣವನ್ನು ತನ್ನ ಶಿಷ್ಯನ ಶಸ್ತ್ರಚಿಕಿತ್ಸೆಗೆ ಸಹಾಯ ಮಾಡಿ, ಇನ್ನಷ್ಟನ್ನು ತಂದುಕೊಡುವುದಾಗಿ ಹೇಳಿ ವೃದ್ಧಾಶ್ರಮಕ್ಕೆ ತೆರಳುತ್ತಾನೆ. ಕಝಕಿಸ್ತಾನದ ಹೆಸರಾಂತ ಲೇಖಕ, ವೃದ್ಧಾಶ್ರಮವಾಸಿಯಾಗಿ ನಿಕೃಷ್ಟ ಬದುಕು ಸವೆಸುತ್ತಿದ್ದಾಗ, ಜನಪ್ರಿಯ ಟಿವಿಯೊಂದು ಈತನ ಕಥೆ ಬಿತ್ತರಿಸಲು ಸಂದರ್ಶನಕ್ಕಾಗಿ ಹುಡುಕಿಕೊಂಡು ಬರುತ್ತದೆ. ಆ ದಿಕ್ಕೆಟ್ಟ ಸ್ಥಿತಿಗೆ ಯಾರನ್ನೂ ದೂಷಿಸದ ಕುರ್ಬತ್, ಈ ಆಯ್ಕೆ ನನ್ನದೇ, ಸೃಜನಶೀಲ ಲೇಖಕ ದೇಶಕ್ಕೆ, ಜನರಿಗೆ ಬಹಳ ಮುಖ್ಯ, ಪುಸ್ತಕಗಳು ಮನುಷ್ಯರನ್ನಾಗಿಸಲು ಸಹಕರಿಸುತ್ತವೆ, ನನ್ನ ಸಾಹಿತ್ಯದ ಜೀವದ್ರವ್ಯ ನನ್ನ ಶಿಷ್ಯನಲ್ಲಿ ಮುಂದುವರೆಯಲಿದೆ ಎಂಬ ಆಶಾಭಾವನೆಯ ಮಾತುಗಳನ್ನು ಆಡುತ್ತಾನೆ. ದುರಂತವೆಂದರೆ, ಆ ಸಂದರ್ಶನ ಮುಗಿಸಿದ ಮೇಲೆ, ಶಿಷ್ಯ ಸರಸ್ ಸಾವನ್ನಪ್ಪಿದ ಸುದ್ದಿ ಸಿಗುತ್ತದೆ. ತನ್ನ ಮಾತು ತನ್ನನ್ನೇ ಅಣಕಿಸುವಂತಾಗಿ ಹೃದಯಾಘಾತಕ್ಕೆ ಒಳಗಾಗುತ್ತಾನೆ. ಚಿಕಿತ್ಸೆ ಪಡೆದು ಚೇತರಿಸಿಕೊಂಡು ತನ್ನ ಹುಟ್ಟೂರನ್ನು ನೋಡಬೇಕೆಂಬ ಹಂಬಲ ವ್ಯಕ್ತಪಡಿಸುತ್ತಾನೆ. ಕುರ್ಬತ್‌ನ ಆಸೆಯನ್ನು ಈಡೇರಿಸಲು ಟಿಲೆಕ್ ಆತನ ಹಳ್ಳಿಗೆ ಕರೆದುಕೊಂಡು ಹೋಗುತ್ತಾನೆ. ಆಕಾಶದೆತ್ತರಕ್ಕೆ ಚಾಚಿನಿಂತ ಬೆಟ್ಟ ಗುಡ್ಡಗಳನ್ನು ನೋಡುತ್ತಾ, ಅವುಗಳ ಬುಡದಲ್ಲಿ ಜುಳು ಜುಳು ಹರಿವ ನದಿ ನೀರು ಕುಡಿದು, ರೊಯ್ಯನೆ ಬೀಸುವ ಗಾಳಿಗೆ ಮೈಯೊಡ್ಡಿ ನಿಲ್ಲುವ ಮುದುಕ, ತನ್ನ ಬಾಲ್ಯಕ್ಕೆ ಜಾರುತ್ತಾನೆ. ತಾನು ಬೆಳೆದುಬಂದ ಬುಡಕಟ್ಟು-ಆದಿವಾಸಿ ಜನರ ಬದುಕನ್ನು ಧ್ಯಾನಿಸುತ್ತಾನೆ. ಅದೇ ಜನರ ಗುಂಪು, ಅದೇ ವೇಷಭೂಷಣಗಳಲ್ಲಿ ಕುದುರೆಗಳ ಮೇಲೇರಿ, ಕುರಿ ಮಂದೆಯನ್ನು ಮುನ್ನುಗ್ಗಿಸಿಕೊಂಡು ಹೋಗುವ ಚಿತ್ರಣ ಕಣ್ಣಮುಂದೆ ನಿಲ್ಲುತ್ತದೆ. ಹುಟ್ಟಿದ ಮನೆಯನ್ನು ಹುಡುಕಿಕೊಂಡು ಹೋಗಿ, ಯುರ್ಟ್(ವೃತ್ತಾಕಾರವಾಗಿ ನಿರ್ಮಿಸುವ ಟೆಂಟ್-ಮನೆ, ಮಂಗೋಲಿಯಾ, ಸೈಬೀರಿಯಾಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ)ಗಾಗಿ ತಡಕಾಡುತ್ತಾನೆ. ಅದು ಮುರಿದು, ಧೂಳಿಡಿದು ಮೂಲೆ ಸೇರಿರುತ್ತದೆ. ಅದನ್ನು ಮೃದುವಾಗಿ ಮುಟ್ಟಿ ಮಾತನಾಡಿಸಿ, ಮನೆಯ ಹಿಂದಣ ತೋಟದತ್ತ ಹೆಜ್ಜೆ ಹಾಕುವ ಮುದುಕ.. ಕುಸಿದು ಬಿದ್ದು ಸಾವನ್ನಪ್ಪುತ್ತಾನೆ.
ಸಾಮಾನ್ಯ ಕತೆಯಾದರೂ, ಚಿತ್ರನಿರ್ಮಾಣದಲ್ಲಿ ಅಂತಹ ವಿಶೇಷವೇನಿಲ್ಲದಿದ್ದರೂ, ಬದುಕಿನ ದ್ರವ್ಯ, ಹಂಬಲ, ಹುಡುಕಾಟಗಳ ಹೊಳಹು ಕಾಣುತ್ತದೆ. ಆ ಕಾರಣಕ್ಕಾಗಿಯಾದರೂ ಒಮ್ಮೆ ನೋಡಲು ಅಡ್ಡಿ ಇಲ್ಲ.