ಮಾರುಕಟ್ಟೆ, ರಸ್ತೆ, ನೀರು ಸಮರ್ಪಕವಾಗಿದ್ದರೆ ಕೃಷಿಯಲ್ಲಿ ಹೆಚ್ಚು ಲಾಭ: ಕೆ.ಜಯಪ್ರಕಾಶ್ ಹೆಗ್ಡೆ

Update: 2022-03-06 13:28 GMT

ಉಡುಪಿ, ಮಾ.6: ಮಾರುಕಟ್ಟೆ, ರಸ್ತೆ ಹಾಗೂ ನೀರು ರೈತರಿಗೆ ಅತೀ ಅವಶ್ಯಕ. ಇವು ಮೂರು ಸಮರ್ಪಕವಾಗಿದ್ದರೆ, ಕೃಷಿಯಲ್ಲಿ ಹೆಚ್ಚು ಲಾಭಗಳಿಸಬಹುದು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.

ಉಡುಪಿ ಜಿಲ್ಲಾ ಕೃಷಿಕ ಸಂಘದ ಆಶ್ರಯದಲ್ಲಿ ಉಡುಪಿ ಕುಂಜಿಬೆಟ್ಟು ಶಾರದಾ ಮಂಟಪದಲ್ಲಿ ಆಯೋಜಿಸಲಾದ ಜಿಲ್ಲಾ ರೈತ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.ಬೆಳೆಗಳ ಇಳಿಯುವರಿ ಬರುವ ಹೊತ್ತಿನಲ್ಲಿ ಸರಕಾರ ಬೆಂಬಲ ಬೆಲೆ ಘೋಷಣೆ ಮಾಡಬೇಕು. ಇದರಿಂದ ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ರೈತರು ಕೃಷಿಯ ಮೇಲೆಯೇ ಹೆಚ್ಚು ಅವಲಂಬಿತರಾಗಿರುವುದರಿಂದ ಅವರೇ ನಿಜವಾದ ಹಿಂದುಳಿದ ವರ್ಗದವರು. ರೈತರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸರಕಾರ ಗಮನಹರಿಸಬೇಕು. ರೈತರ ಸಮಸ್ಯೆಗಳನ್ನು ಪರಿಹರಿಸಲು ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುವಂತೆ ಸರಕಾರದ ಮೇಲೆ ಒತ್ತಡ ತರುವ ಕೆಲಸ ಆಗಬೇಕಾಗಿದೆ ಎಂದರು.

ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಕುಮ್ಕಿ ಜಾಗ ರೈತರ ಹಕ್ಕು. ಅದನ್ನು ಯಾವುದೇ ಸರಕಾರ ಅಧಿಕಾರಕ್ಕೆ ಬಂದರೂ ರೈತರಿಂದ ಕುಮ್ಕಿ ಜಾಗವನ್ನು ಕಿತ್ತುಕೊಳ್ಳಲು ಆಗಲ್ಲ. ಕುಮ್ಕಿ ಹಕ್ಕು ರೈತರಿಗೆ ಸಿಕ್ಕಿದರೆ ಇನ್ನಷ್ಟು ಕೃಷಿ ಚಟುವಟಿಕೆ ಮಾಡಲು ಪ್ರೋತ್ಸಾಹ ನೀಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಕರ್ನಾಟಕ ಬ್ಯಾಂಕ್ ಪ್ರಾದೇಶಿಕ ಕಛೇರಿಯ ಅಸಿಸ್ಟೆಂಟ್ ಮ್ಯಾನೇಜರ್ ರಾಜ ಗೋಪಾಲ ಎಸ್., ರೋಟರಿ ಮಾಜಿ ಸಹಾಯಕ ಗವರ್ನರ್ ಮಂಜುನಾಥ ಉಪಾಧ್ಯ ಮುಖ್ಯ ಅತಿಥಿಗಳಾಗಿದ್ದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ವಹಿಸಿದ್ದರು.

ಸಂಘದ ಉಪಾಧ್ಯಕ್ಷ ದಿನೇಶ್ ಶೆಟ್ಟಿ ಹೆರ್ಗ, ಕೋಶಾಧಿಕಾರಿ ಪಾಂಡುರಂಗ ನಾಯಕ್ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ 25 ಮಂದಿ ಸಾಧಕ ಕೃಷಿಕರನ್ನು ಸನ್ಮಾನಿಸಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಶ್ರೀನಿವಾಸ ಬಲ್ಲಾಳ್ ಸ್ವಾಗತಿಸಿದರು. ಕಾರ್ಯ ದರ್ಶಿ ರವೀಂದ್ರ ಪೂಜಾರಿ ಗುಜ್ಜರಬೆಟ್ಟು ಕಾರ್ಯಕ್ರಮ ನಿರೂಪಿಸಿದರು. ಬಳಿಕ ಕೃಷಿ ವಿಚಾರ ಗೋಷ್ಠಿಗಳು ನಡೆದವು.

ಸಮಾವೇಶದಲ್ಲಿ ಕೃಷಿ ಸಂಬಂಧಿತ ವಸ್ತು, ಯಂತ್ರೋಪಕರಣಗಳು, ಪತ್ರಿಕೆಗಳ ಪ್ರದರ್ಶನ ಮತ್ತು ಮಾರಾಟಗಳಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News