ಮಕ್ಕಳಿಂದ ಅವಗಣನೆ; ನ್ಯಾಯಕ್ಕಾಗಿ ಹೋರಾಡುತ್ತಿರುವ ಶ್ರೀನಿವಾಸ ತುಂಗ

Update: 2022-03-07 16:46 GMT
ಶ್ರೀನಿವಾಸ ತುಂಗ

ಉಡುಪಿ, ಮಾ.7: ಲಕ್ಷಾಂತರ ರೂ.ಗಳ ಆದಾಯವಿರುವ ಕುಟುಂಬದ ಹಿರಿಯರಾಗಿದ್ದರೂ, ದಿನದ ಒಂದು ಹೊತ್ತಿನ ಊಟಕ್ಕಾಗಿ ದೇವಸ್ಥಾನ, ಭೂತ ಕೋಲ, ರಥೋತ್ಸವ ಇತ್ಯಾದಿಗಳ ಉಚಿತ ಅನ್ನಸಂತರ್ಪಣೆಯನ್ನು ಅವಲಂಬಿ ಸಿರುವ ಜಿಲ್ಲೆಯ ಸಾಸ್ತಾನ ಮೂಲದ 72 ವರ್ಷದ ಹಿರಿಯ ನಾಗರಿಕ ಶ್ರೀನಿವಾಸ ತುಂಗರು ನ್ಯಾಯಕ್ಕಾಗಿ ಕಳೆದ 29 ತಿಂಗಳುಗಳಿಂದಲೂ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ ಹಾಗೂ ನ್ಯಾಯ ಮಂಡಳಿಗಳನ್ನು ಸುತ್ತುತ್ತಲೇ ಇದ್ದಾರೆ.

ತುಂಗರ ಹೋರಾಟಕ್ಕೆ ಆರಂಭದಿಂದಲೂ ಮಾರ್ಗದರ್ಶನ ನೀಡುತ್ತಿರುವ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಇದೀಗ ಕರ್ನಾಟಕ ಹೈಕೋರ್ಟ್‌ನಲ್ಲಿ ತುಂಗರ ಪರವಾಗಿ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಲು ನಿರ್ಧರಿಸಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ. ರವೀಂದ್ರನಾಥ್ ಶಾನ್‌ಬಾಗ್ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹೊಟೇಲ್ ಮಾಲಕ ತುಂಗ: ಶ್ರೀನಿವಾಸ ತುಂಗ ಮೂಲತ: ಉಡುಪಿ ಜಿಲೆಯ ಐರೋಡಿ ಗ್ರಾಮದವರು. ಇಲ್ಲಿ ಅವರಿಗೆ ಪಿತ್ರಾರ್ಜಿತವಾಗಿ ಬಂದ 39 ಸೆನ್ಸ್ ಗದ್ದೆ ಇದೆ. ಇವರಿಗೆ ಮೂವರು ಮಕ್ಕಳಿದ್ದಾರೆ. ಎಲ್ಲರಿಗೂ ಮದುವೆ ಯಾಗಿದೆ. ಕುಟುಂಬದ ಸದಸ್ಯರಲ್ಲಿ ಹೆಚ್ಚಿನವರು ಇಂಜಿನಿಯರ್‌ಗಳಾಗಿದ್ದು ಮಂಡ್ಯ ಮತ್ತು ಬೆಂಗಳೂರಿನಲ್ಲಿ ತಮ್ಮ ವೃತ್ತಿಗಳಲ್ಲಿ ನಿರತರಾಗಿದ್ದಾರೆ.

ಶ್ರೀನಿವಾಸ ತುಂಗ ಅವರ ತಂದೆ ಮಂಡ್ಯದಲ್ಲಿ ‘ಶ್ರೀನಿವಾಸ ಪ್ರಸನ್ನ’ ಎಂಬ ಹೊಟೇಲ್ ನಡೆಸುತಿದ್ದು, ಅವರ ನಂತರ ಅದನ್ನು ತುಂಗರೇ ನಡೆಸುತಿದ್ದರು. ಹೊಟೇಲ್ ವಿಷಯದಲ್ಲಿ 20 ವರ್ಷಗಳ ಹಿಂದೆ ಕುಟುಂಬದ ಸದಸ್ಯರ ನಡುವೆ ಭಿನ್ನಾಭಿಪ್ರಾಯವುಂಟಾಗಿತ್ತು. ಇದು ಮುಂದುವರಿದು ಕೌಟುಂಬಿಕ ಕಲಹವಾಗಿ ಮಾರ್ಪಟ್ಟು, ಮಕ್ಕಳು ಶ್ರೀನಿವಾಸರನ್ನು ಮನೆಯಿಂದ ಹೊರ ಹಾಕುವಲ್ಲಿ ಕೊನೆಗೊಂಡಿತು.

ಆ ಬಳಿಕ ಬೆಂಗಳೂರಿನ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಾ ಸ್ವಾಭಿಮಾನಿ ಜೀವನ ಸಾಗಿಸುತ್ತಿದ್ದ ಶ್ರೀನಿವಾಸರು ಇದೀಗ ವೃದ್ಧಾಪ್ಯದಿಂದ ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದು, ಕೆಲಸ ಮಾಡಲು ಅಶಕ್ತರಾಗಿದ್ದಾರೆ. 2018ರಲ್ಲಿ ತಮ್ಮ ಸ್ವಗ್ರಾಮವಾದ ಸಾಸ್ತಾನಕ್ಕೆ ಹಿಂದಿರುಗಿ ಬಂದು ಬಾಡಿಗೆ ರೂಮೊಂದರಲ್ಲಿ ನೆಲೆಸಿದರು. ಇದರ ಮಧ್ಯೆ ರಸ್ತೆ ಅಪಘಾತವೊಂದರಲ್ಲಿ ಗಾಯಗೊಂಡು ನಡೆದಾಡಲೂ ಅಸಾಧ್ಯವಾಯಿತು. ಇದೀಗ ಅವರಿಗೆ ತಾನಿರುವ ರೂಮಿನ ಬಾಡಿಗೆ ನೀಡಲೂ ಸಾಧ್ಯವಾಗುತ್ತಿಲ್ಲ.

ಮಾಸಾಶನಕ್ಕೆ ಗೋಳಾಟ: 2019ರಲ್ಲಿ ಉಡುಪಿಯ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರವನ್ನು ಸಂಪರ್ಕಿಸಿ ಹೆಂಡತಿ ಮಕ್ಕಳು ತನ್ನನ್ನು ಮನೆಗೆ ಸೇರಿಸಿಕೊಳ್ಳುವಂತೆ ಮನ ಒಲಿಸಲು ಸಹಾಯವನ್ನು ಕೋರಿದ್ದರು. ಮಕ್ಕಳು ಇದಕ್ಕೆ ಒಪ್ಪಲಿಲ್ಲವೆಂದು ಸಹಾಯವಾಣಿ ಕೇಂದ್ರ ತಿಳಿಸಿದಾಗ, ಇವರು ಮಕ್ಕಳಿಂದ ಮಾಸಾಶನವನ್ನಾದರೂ ಕೊಡಿಸಿ ಎಂದು ವಿನಂತಿಸಿದ್ದರು.

ತುಂಗರಿಗೆ ಮಾಸಾಶನ ನೀಡುವಂತೆ ಹೆಂಡತಿ ಮಕ್ಕಳ ಮನ ಒಲಿಸಲು ಸಹಾಯವಾಣಿಕೇಂದ್ರ ವಿಫಲವಾದಾಗ, 2019ರ ಸೆಪ್ಟೆಂಬರ್‌ನಲ್ಲಿ ಕುಂದಾಪುರದ ಹಿರಿಯ ನಾಗರಿಕರ ನ್ಯಾಯಮಂಡಳಿ ಅಧ್ಯಕ್ಷರಾದ ಸಹಾಯಕ ಆಯುಕ್ತರಿಗೆ ದೂರು ಅರ್ಜಿ ಸಲ್ಲಿಸಿದರು. ದೂರು ಸಲ್ಲಿಸಿ ಈಗಾಗಲೇ 29 ತಿಂಗಳು ಕಳೆದಿದ್ದರೂ ಮಂಡಳಿಯ ವಿಚಾರಣೆಯೇ ಇನ್ನೂ ಮುಗಿದಿಲ್ಲ ಎಂದು ಶ್ರೀನಿವಾಸ ತುಂಗ ದೂರಿದರು.

ಕಳೆದ 29 ತಿಂಗಳಲ್ಲಿ ನ್ಯಾಯಮಂಡಳಿ ಪ್ರಕರಣದ ವಿಚಾರಣೆ ನಡೆಸುತ್ತಲೇ ಇದೆ. ಆದರೆ ಮಕ್ಕಳು ವಿಚಾರಣೆಗೆ ಹಾಜರಾಗದೇ ತಪ್ಪಿಸಿಕೊಳ್ಳುತ್ತಲೇ ಇದ್ದಾರೆ. ಮಕ್ಕಳನ್ನು ವಿಚಾರಣೆಗೆ ಕರೆಸುವ ಬಗ್ಗೆ ನ್ಯಾಯಮಂಡಳಿ ಗಟ್ಟಿ ನಿಲುವು ತಳೆಯುತ್ತಿಲ್ಲ ಎಂದು ಡಾ.ಶಾನುಭಾಗ್ ಆರೋಪಿಸಿದರು.

2020ರ ಡಿಸೆಂಬರ್ ತಿಂಗಳಲ್ಲಿ ನ್ಯಾಯಮಂಡಳಿ, ಮಂಡ್ಯ ತಹಶೀಲ್ದಾರ್‌ಗೆ ಪತ್ರ ಕಳುಹಿಸಿ ತುಂಗ ಕುಟುಂಬ ಸದಸ್ಯರ ಆರ್ಥಿಕ ಸ್ಥಿತಿಗತಿ ಸೇರಿದಂತೆ ಸಂಪೂರ್ಣ ಮಾಹಿತಿ ನೀಡುವಂತೆ ತಿಳಿಸಿತ್ತು. ಅಲ್ಲಿಂದಲೂ ಈವರೆಗೆ ಯಾವುದೇ ವರದಿ ಬಂದಿಲ್ಲ.

ಮಕ್ಕಳಿಗೆ ಆದೇಶವನ್ನಾದರೂ ನೀಡಿ ಮಾಸಾಶನ ಕೊಡಿಸಿ ಎಂದು ಗೋಗರೆಯುವ ತುಂಗ, ನನಗೀಗ ಭಿಕ್ಷೆ ಬೇಡಬೇಕಾದ ಪರಿಸ್ಥಿತಿ ಬಂದಿದೆ ಎಂದು ಹೇಳುತ್ತಾರೆ. ಹಿರಿಯರ ಸಹಾಯವಾಣಿ ಹಾಗೂ ಕುಂದಾಪುರ ನ್ಯಾಯಮಂಡಳಿಗೆ ಪದೇ ಪದೇ ಹೋಗಿ ವಿಚಾರಿಸುತ್ತಿರುವ ಅವರಿಗೆ ನೀವೇ ಮಂಡ್ಯಕ್ಕೆ ಹೋಗಿ ವಿಚಾರಿಸಿಕೊಂಡು ಬನ್ನಿ ಎಂದು ಸಲಹೆ ನೀಡಿದರು ಎನ್ನುತ್ತಾರೆ.

ನೋಟೀಸು ನೀಡಿದ ಮೂರು ತಿಂಗಳೊಳಗಾಗಿ ಪ್ರಕರಣದ ವಿಚಾರಣೆ ನಡೆಸಿ ಆದೇಶ ನೀಡಬೇಕು ಎಂದು ಹಿರಿಯ ನಾಗರೀಕರ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 5(4)ರಲ್ಲಿ ಸ್ಪಷ್ಟವಾಗಿ ಸೂಚಿಸಲಾಗಿದೆ. ಈ ಪ್ರಕರಣದಲ್ಲಿ ಇಪ್ಪತ್ತೊಂಬತ್ತು ತಿಂಗಳು ಕಳೆದರೂ ಆದೇಶ ಬಿಡಿ, ಆಪಾದಿತರನ್ನು ನ್ಯಾಯಾಲಯಕ್ಕೆ ಕರೆತರಲೂ ನ್ಯಾಯ ಮಂಡಳಿಗೆ ಸಾಧ್ಯವಾಗಿಲ್ಲ ಎಂದು ಡಾ.ಶಾನುಭಾಗ್ ವಿಷಾದದಿಂದ ನುಡಿದರು.

11 ತಿಂಗಳ ಹಿಂದೆ ಶ್ರೀನಿವಾಸ ತುಂಗರು ಉಡುಪಿ ಜಿಲ್ಲಾಧಿಕಾರಿಗೆ ಪತ್ರ ಬರೆದು ಆಶ್ರಯಕ್ಕೆ, ಊಟಕ್ಕೆ ಹಣವಿಲ್ಲದ ಬಗ್ಗೆ ವಿವರಿಸಿದರೂ, ಅದನ್ನು ನ್ಯಾಯಮಂಡಳಿಗೆ ರವಾನಿಸಿ ’ನಿಯಮಾನುಸಾರ ಸೂಕ್ತ ಕ್ರಮ ವಹಿಸುವಂತೆ’ ಆದೇಶಿಸಿ ಕೈತೊಳೆದುಕೊಂಡರು. ಅದೇ ರೀತಿ ಡಿಸೆಂಬರ್‌ನಲ್ಲಿ ಕರ್ನಾಟಕದ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಬರೆದ ಪತ್ರಕ್ಕೂ ಯಾವ ಸ್ಪಂದನೆಯೂ ಸಿಕ್ಕಿಲ್ಲ ಎಂದು ಶಾನುಭಾಗ್ ನುಡಿದರು.

ಇದರಿಂದ ಬೇಸತ್ತು ತುಂಗರು ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಪತ್ರ ಬರೆದು ತನ್ನ ಗೋಳನ್ನು ತೋಡಿಕೊಂಡಿದ್ದಾರೆ. ಸಾಯುವ ಮೊದಲಾದರೂ ನ್ಯಾಯ ಸಿಗುವಂತಾಗಲು ತಾನೇನು ಮಾಡಬೇಕು ಎಂದು ಕೇಳಿದ್ದು, ನ್ಯಾಯ ಮೂರ್ತಿಗಳ ಮಾರ್ಗದರ್ಶನಕ್ಕೆ ಕಾಯುತ್ತಿದ್ದಾರೆ.

ಪ್ರತಿಷ್ಠಾನ ಬೆಂಬಲ: ಶ್ರೀನಿವಾಸ ತುಂಗರ ಹೋರಾಟಕ್ಕೆ ಆರಂಭದಿಂದಲೂ ಮಾರ್ಗದರ್ಶನ ನೀಡುತ್ತಿರುವ ಉಡುಪಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಕಳೆದ ಜನವರಿ 6ರಂದು ಜಿಲ್ಲಾಧಿಕಾರಿಗೆ ವಿವರವಾದ ಪತ್ರ ಬರೆದಿದ್ದರೂ ಅವರಿಂದ ಈವರೆಗೆ ಉತ್ತರ ಬಂದಿಲ್ಲ ಎಂದು ಶಾನುಭಾಗ್ ತಿಳಿಸಿದರು.

ಇದೀಗ ಪ್ರತಿಷ್ಠಾನಕ್ಕೆ ಉಳಿದಿರುವುದು ಹೈಕೋರ್ಟ್‌ನಲ್ಲಿ ಈ ಬಗ್ಗೆ ರಿಟ್ ಅರ್ಜಿ ಸಲ್ಲಿಸುವುದಾಗಿದೆ. ಸರಕಾರದಿಂದ ಯಾವುದೇ ಉತ್ತರ ಬಾರದಿದ್ದರೆ ತಾವು ತುಂಗ ಪರವಾಗಿ ನ್ಯಾಯಾಲಯದ ಮೆಟ್ಟಲೇರುತ್ತೇವೆ. ಹಿರಿಯ ನಾಗರಿಕರಿಗೆ ನ್ಯಾಯ ದೊರಕಿಸಿ ಕೊಡಲು ಪ್ರಯತ್ನಿಸುತ್ತೇವೆ ಎಂದು ಡಾ.ಶಾನುಭಾಗ್ ತಿಳಿಸಿದರು.

ಒಪ್ಪೊತ್ತಿನ ಊಟ ತಪ್ಪಿಸಿದ ಕೊರೋನ

ಮಂಡ್ಯದ ತನ್ನ ಮನೆಯಿಂದ ಮಕ್ಕಳು ಹೊರಹಾಕಿದ ಬಳಿಕ ಶ್ರೀನಿವಾಸ ತುಂಗ ಹಲವು ವರ್ಷ ಬೆಂಗಳೂರಿನ ಹೋಟೆಲೊಂದರಲ್ಲಿ ಕಾರ್ಮಿಕರಾಗಿ ದುಡಿದರು. ಕೆಲಸ ಮಾಡಲು ಅಶಕ್ತರಾದಾಗ, 2018ರಲ್ಲಿ ತನ್ನ ಸ್ವಂತ ಊರಾದ ಸಾಸ್ತಾನಕ್ಕೆ ಹಿಂದಿರುಗಿದರು. ಐರೋಡಿಯ ಮನೆಯೊಂದರ ಹೊರ ಭಾಗದಲ್ಲಿರುವ ರೂಮೊಂದನ್ನು ಬಾಡಿಗೆ ಪಡೆದರು. ಸಾಲಿಗ್ರಾಮದಲ್ಲಿರುವ ಗುರು ನರಸಿಂಹ ದೇವಸ್ಥಾನದಲ್ಲಿ ಸಿಗುವ ಮಧ್ಯಾಹ್ನದ ಒಂದೇ ಊಟದಲ್ಲಿ ಎರಡು ವರ್ಷಗಳನ್ನು ಕಳೆದರು.

2020ರ ಮಾರ್ಚ್ ತಿಂಗಳಲ್ಲಿ ಮೊದಲನೇ ಬಾರಿ ಕೊರೋನ ಕಾರಣಕ್ಕಾಗಿ ಲಾಕ್‌ಡೌನ್ ಆದಾಗ, ಎಲ್ಲಾ ದೇವಸ್ಥಾನಗಳಂತೆ ಸಾಲಿಗ್ರಾಮ ದೇವಸ್ಥಾನದಲ್ಲೂ ಅನ್ನ ಸಂತರ್ಪಣೆಯನ್ನು ಅನಿರ್ಧಿಷ್ಟ ಕಾಲ ನಿಲ್ಲಿಸಲಾಯಿತು. ಅಂದಿನಿಂದ ಶ್ರೀನಿವಾಸ ತುಂಗರು ತುತ್ತು ಅನ್ನಕ್ಕಾಗಿ ಬವಣೆ ಪಡುವಂತಾಯಿತು. ಅದು ಇನ್ನೂ ನಿಂತಿಲ್ಲ. ಸುತ್ತಮುತ್ತ ಎಲ್ಲಿಯಾದರೂ ಭೂತ ಕೋಲ, ರಥೋತ್ಸವ ನಿಮಿತ್ತ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯವ ಹೊತ್ತು ಮಾತ್ರ ಅವರಿಗೆ ಊಟಕ್ಕೆ ಕೊರತೆ ಇರುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News