ಉಕ್ರೇನ್‌ನಿಂದ ಹಿಂದಿರುಗಿದ ವೈದ್ಯಕೀಯ ವಿದ್ಯಾರ್ಥಿಗಳಿಗೆ 'ಜಿಎಂಯು'ನಿಂದ ಶಿಕ್ಷಣ ಸೌಲಭ್ಯ

Update: 2022-03-08 17:30 GMT

ಅಜ್ಮಾನ್, ಮಾ.8: ಯುದ್ಧಗ್ರಸ್ತ ಉಕ್ರೇನ್ ವಿಶ್ವವಿದ್ಯಾನಿಲಯಗಳಿಂದ ಸ್ಥಳಾಂತರಗೊಂಡ ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳಿಗೆ ಮೆರಿಟ್ ಮಾನದಂಡ ಹಾಗೂ ಯುನಿವರ್ಸಿಟಿಯ ಪ್ರವೇಶಾತಿ ನೀತಿ ಆಧರಿಸಿ ಉಚಿತ ಸೀಟು ಹಾಗೂ ಸ್ಕಾಲರ್‌ಶಿಪ್ ನೀಡಲು ಗಲ್ಫ್ ಮೆಡಿಕಲ್ ಯುನಿವರ್ಸಿಟಿ (ಜಿಎಂಯು) ನಿರ್ಧರಿಸಿದೆ.

ಉಕ್ರೇನ್‌ನಿಂದ ತೆರವುಗೊಂಡಿರುವುದರಿಂದ ತೊಂದರೆಗೊಳಗಾದ ವಿದ್ಯಾರ್ಥಿಗಳಿಗೆ ಶಿಕ್ಷಣದ ಖಾತರಿ ನೀಡುವ ಉದ್ದೇಶವನ್ನು ಈ ಪ್ರಯತ್ನ ಹೊಂದಿದೆ.

ತಮ್ಮ ಬಾಕಿ ಉಳಿದ ಕೋರ್ಸ್‌ಗಳಿಗೆ ಸಂಬಂಧಿಸಿದ ಉತ್ತಮ ಅರಿವಿನ ನಿರ್ಧಾರ ಕೈಗೊಳ್ಳಲು, ಪ್ರಬಂಧ ಮಂಡನೆಗೆ ಹಾಗೂ ಸುಲಲಿತ ವರ್ಗಾವಣೆಗೆ ವಿದ್ಯಾರ್ಥಿಗಳಿಗೆ ನೆರವು ನೀಡುವ ಉದ್ದೇಶವನ್ನು ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ ಸಮರ್ಪಣಾ ಮನೋಭಾವದ ದಾಖಲಾತಿ ಸಮಾಲೋಚಕರ ತಂಡ ಹೊಂದಿದೆ ಎಂದು ಜಿಎಂಯು ಪ್ರಕಟನೆ ತಿಳಿಸಿದೆ.

''ಓರ್ವ ಭಾರತೀಯನಾಗಿ ಈ ಸಂಕಷ್ಟದ ಸಂದರ್ಭದಲ್ಲಿ ಸಹ ಭಾರತೀಯನಿಗೆ ಸಹಾಯ ಮಾಡುವುದು ನನ್ನ ಕರ್ತವ್ಯ. ಸ್ಥಳಾಂತರಗೊಂಡ ಹಲವು ವಿದ್ಯಾರ್ಥಿಗಳ ಕನಸು ಹಾಗೂ ಭವಿಷ್ಯವನ್ನು ಸುರಕ್ಷಿತವಾಗಿರಿಸಲು ನಾವು ಪ್ರಯತ್ನಿಸುತ್ತೇವೆ'' ಎಂದು ತುಂಬೆ ಸಮೂಹದ ಸ್ಥಾಪಕಾಧ್ಯಕ್ಷ ಹಾಗೂ ಯುಎಇಯ ಅಜ್ಮಾನ್‌ನ ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ ಸ್ಥಾಪಕಾಧ್ಯಕ್ಷರಾದ ಡಾ. ತುಂಬೆ ಮೊಯ್ದಿನ್ ತಿಳಿಸಿದ್ದಾರೆ.

ಭವಿಷ್ಯದ ಆರೋಗ್ಯ ಸೇವೆಗೆ ಈ ವಿದ್ಯಾರ್ಥಿಗಳು ಪ್ರಮುಖ ಕೊಡುಗೆದಾರರು ಎಂದು ಪರಿಗಣಿಸಿ ಅವರ ಶಿಕ್ಷಣದಲ್ಲಿ ಯಾವುದೇ ಅಂತರ ಉಂಟಾಗದಂತೆ ಗಮನಹರಿಸಲು ಗಲ್ಫ್ ಮೆಡಿಕಲ್ ಯೂನಿವರ್ಸಿಟಿ ಬಯಸುತ್ತದೆ. ವಿದ್ಯಾರ್ಥಿಗಳು ಪ್ರವೇಶಾತಿ ನಿರ್ದೇಶಕಿ ಶೆರ್ಲಿ ಕೋಶಿಯವರನ್ನು ನೇರವಾಗಿ ಸಂಪರ್ಕಿಸಬಹುದು ಹಾಗೂ ತಮ್ಮ ದಾಖಲೆಗಳನ್ನು helpline@gmu.ac.ae ಮೇಲ್ ಮಾಡಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News