ಸೌದಿ ಅರೇಬಿಯಾ: ತೈಲ ಸಂಸ್ಕರಣಾಗಾರದ ಮೇಲೆ ಡ್ರೋನ್ ದಾಳಿ
ರಿಯಾದ್, ಮಾ.11: ಸೌದಿಯ ರಾಜಧಾನಿ ರಿಯಾದ್ನಲ್ಲಿನ ತೈಲ ಸಂಸ್ಕರಣಾಗಾರದ ಮೇಲೆ ಶುಕ್ರವಾರ ನಡೆದ ಡ್ರೋನ್ ದಾಳಿಯನ್ನು ಸೌದಿಯ ಇಂಧನ ಸಚಿವಾಲಯ ಖಂಡಿಸಿದೆ.
ಇದೊಂದು ಭಯೋತ್ಪಾದಕ ಕೃತ್ಯವಾಗಿದ್ದು ರಾಜಧಾನಿಯನ್ನು ಗುರಿಯಾಗಿಸಿ ಮಾತ್ರವಲ್ಲ, ವಿಶ್ವದ ಇಂಧನ ಪೂರೈಕೆ ವ್ಯವಸ್ಥೆಯ ಭದ್ರತೆ ಮತ್ತು ಸ್ಥಿರತೆಗೆ ಧಕ್ಕೆ ತರುವ ಉದ್ದೇಶದಿಂದ ನಡೆಸಿದ ದಾಳಿ ಇದಾಗಿದೆ. ಡ್ರೋನ್ ದಾಳಿಯಿಂದ ಸಂಸ್ಕರಣಾಗಾರದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಅದನ್ನು ನಿಯಂತ್ರಿಸಲಾಗಿದೆ. ಯಾವುದೇ ಪ್ರಾಣಹಾನಿ, ಗಾಯ ಅಥವಾ ನಷ್ಟ ಸಂಭವಿಸಿಲ್ಲ ಎಂದು ಇಂಧನ ಸಚಿವಾಲಯ ಹೇಳಿದೆ.
ಪೆಟ್ರೋಲಿಯಂ ಮತ್ತು ಅದರ ಉತ್ಪನ್ನಗಳ ಪೂರೈಕೆ ವ್ಯವಸ್ಥೆಯ ಮೇಲೆ ಯಾವುದೇ ಪರಿಣಾಮ ಉಂಟಾಗಿಲ್ಲ . ಇಂತಹ ವಿಧ್ವಂಸಕ ಮತ್ತು ಭಯೋತ್ಪಾದಕ ದಾಳಿಯ ವಿರುದ್ಧ ಒಗ್ಗೂಡುವಂತೆ ಹಾಗೂ ಈ ಕೃತ್ಯ ನಡೆಸುವ ಮತ್ತು ಅದನ್ನು ಬೆಂಬಲಿಸುವ ಎಲ್ಲಾ ಸಂಘಟನೆಗಳನ್ನು ವಿರೋಧಿಸುವಂತೆ ಜಾಗತಿಕ ಸಮುದಾಯವನ್ನು ಒತ್ತಾಯಿಸುವ ನಿಲುವಿನಿಂದ ಸೌದಿ ಅರೆಬಿಯಾ ಹಿಂದೆ ಸರಿಯುವುದಿಲ್ಲ ಎಂದು ಸಚಿವಾಲಯ ಹೇಳಿದೆ.