ಹಿಂದುತ್ವದ ಹಾದಿ ಸುಗಮಗೊಳಿಸುವವರು

Update: 2022-03-11 18:36 GMT

ಬಿಜೆಪಿಯ ಮಟ್ಟಿಗೆ ಹೇಳುವುದಾದರೆ, ಗಾಂಧಿ ಕುಟುಂಬಿಕರು ಅದಕ್ಕೆ ಉಡುಗೊರೆ ಇದ್ದಂತೆ. ಈ ಉಡುಗೊರೆಯನ್ನು ಅದು ನಿರಂತರವಾಗಿ ಪಡೆಯುತ್ತಾ ಸಾಗುತ್ತದೆ. ಒಂದು ಕಡೆಯಲ್ಲಿ ಅವರು ಬಿಜೆಪಿಗೆ ಪರಿಣಾಮಕಾರಿ ಚುನಾವಣಾ ಸ್ಪರ್ಧೆಯನ್ನು ನೀಡುವ ಸನಿಹಕ್ಕೂ ಬರುವುದಿಲ್ಲ; ಇನ್ನೊಂದು ಕಡೆ, ಬಿಜೆಪಿಯು ಅವರ ಸುತ್ತಲೇ ರಾಷ್ಟ್ರೀಯ ರಾಜಕೀಯ ಚರ್ಚೆ ನಡೆಯುವಂತೆ ವಿಷಯಗಳನ್ನು ಸಿದ್ಧಪಡಿಸುತ್ತದೆ. ಅಂದರೆ, ಚರ್ಚೆಗೆ ಬಿಜೆಪಿ ಒದಗಿಸುವ ವಿಷಯಗಳು ಗತಕಾಲಕ್ಕೆ ಸಂಬಂಧಿಸಿರುತ್ತದೆಯೇ ಹೊರತು, ವರ್ತಮಾನ ಕಾಲಕ್ಕೆ ಸಂಬಂಧಿಸಿರುವುದಿಲ್ಲ. ಅದರಲ್ಲಿಯೂ ಬಿಜೆಪಿ ಯಶಸ್ಸು ಪಡೆಯುತ್ತದೆ.



ಪ್ರತಿ ಚುನಾವಣಾ ಸ್ಪರ್ಧೆಯು ಗೆದ್ದವರ ಮತ್ತು ಸೋತವರ ಕತೆಯಾಗಿರುತ್ತದೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಗಳ ಫಲಿತಾಂಶದ ಕುರಿತ ಹೆಚ್ಚಿನ ವಿಶ್ಲೇಷಣೆಗಳು ಸಹಜವಾಗಿ ಗೆದ್ದ ಪ್ರಮುಖರನ್ನೇ ಎತ್ತಿ ತೋರಿಸುತ್ತವೆ. ಆದರೆ, ಈ ಅಂಕಣದಲ್ಲಿ ನಾನು ಸೋತ ಪ್ರಮುಖರ ಮೇಲೆ ಗಮನ ಕೇಂದ್ರೀಕರಿಸುತ್ತೇನೆ. ಉತ್ತರಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ)ದ ಆದಿತ್ಯನಾಥ್ ಸುಲಭವಾಗಿ ಮರುಆಯ್ಕೆಯಾಗಿದ್ದಾರೆ ಹಾಗೂ ಪಂಜಾಬ್‌ನಲ್ಲಿ ಆಮ್ ಆದ್ಮಿ ಪಾರ್ಟಿ (ಆಪ್) ಅಮೋಘ ವಿಜಯವೊಂದನ್ನು ದಾಖಲಿಸಿದೆ. ಜೊತೆಗೆ, ಕಾಂಗ್ರೆಸ್ ಪಕ್ಷವು ನಿರಂತರವಾಗಿ ಹಾಗೂ ಬಹುಷಃ ಹಿಂದಕ್ಕೆ ಪಡೆಯಲಾಗದಂತೆ ನಶಿಸುತ್ತಿರುವುದನ್ನು ಇತ್ತೀಚಿನ ಸುತ್ತಿನ ವಿಧಾನಸಭಾ ಚುನಾವಣೆಗಳು ಸಾಬೀತುಪಡಿಸಿವೆ.

ಮೊದಲಿಗೆ, ಭಾರತದ ಅತಿ ದೊಡ್ಡ ರಾಜ್ಯ, ಲೋಕಸಭೆಗೆ 80 ಸಂಸದರನ್ನು ಕಳುಹಿಸುವ ಉತ್ತರಪ್ರದೇಶವನ್ನು ಪರಿಗಣಿಸೋಣ. ಬ್ರಿಟಿಷ್ ವಸಾಹತು ಕಾಲದಲ್ಲಿ ಈ ರಾಜ್ಯವು ಕಾಂಗ್ರೆಸ್ ನೇತೃತ್ವದ ಸ್ವಾತಂತ್ರ ಚಳವಳಿಯ ಕೇಂದ್ರ ಬಿಂದುವಾಗಿತ್ತು. ಸ್ವಾತಂತ್ರದ ಬಳಿಕ, ಅದು ಭಾರತದ ಮೊದಲ ಮೂರು ಪ್ರಧಾನಿಗಳನ್ನು ನೀಡಿತು. ಆದರೆ, 1960ರ ದಶಕದ ಕೊನೆಯಲ್ಲಿ ಉತ್ತರಪ್ರದೇಶದ ರಾಜಕೀಯದ ಮೇಲೆ ಕಾಂಗ್ರೆಸ್ ಪಕ್ಷದ ಹಿಡಿತವು ದುರ್ಬಲವಾಗಲು ಆರಂಭಿಸಿತು ಹಾಗೂ 1980ರ ದಶಕದಿಂದ ಅದು ರಾಜ್ಯದಲ್ಲಿ ಲೆಕ್ಕಕ್ಕಿಲ್ಲದ ಭಾಗೀದಾರನಂತಾಯಿತು.

ಈ ಬಾರಿ, ನೆಹರೂ-ಗಾಂಧಿ ಕುಟುಂಬದಿಂದ ಹೊಸದಾಗಿ ರಾಜಕೀಯಕ್ಕೆ ಪ್ರವೇಶಿಸಿದ ಪ್ರಿಯಾಂಕಾ ಗಾಂಧಿ ಉತ್ತರಪ್ರದೇಶದಲ್ಲಿ ಪಕ್ಷಕ್ಕೆ ಮರುಜನ್ಮ ನೀಡುವ ಹೊಣೆಯನ್ನು ತನ್ನ ಮೇಲೆ ಹೊತ್ತುಕೊಂಡರು. ತನ್ನ ನಿವಾಸವನ್ನು ದಿಲ್ಲಿಯಿಂದ ಲಕ್ನೊಗೆ ಬದಲಾಯಿಸದಿದ್ದರೂ, ವಿಧಾನಸಭಾ ಚುನಾವಣೆಯಲ್ಲಿ ಸ್ವತಃ ಸ್ಪರ್ಧಿಸಲು ನಿರಾಕರಿಸಿದರೂ, ಪ್ರಿಯಾಂಕಾ ರಾಜ್ಯಕ್ಕೆ ನಿಯಮಿತವಾಗಿ ಭೇಟಿ ನೀಡಿದರು. ನೆಹರೂ-ಗಾಂಧಿ ಕುಟುಂಬವನ್ನು 'ಹೌಸ್ ಆಫ್ ವಿಂಡ್ಸರ್' ನ ಭಾರತೀಯ ಮಾದರಿ ಎಂಬುದಾಗಿ ಈಗಲೂ ಭಾವಿಸಿರುವ ಮಾಧ್ಯಮಗಳ (ಮತ್ತು ಸಾಮಾಜಿಕ ಮಾಧ್ಯಮಗಳ) ಒಂದು ವರ್ಗವು ಇದರಿಂದ ರೋಮಾಂಚನಗೊಂಡಿತು. ಅವರ ಪ್ರತಿಯೊಂದು ಭೇಟಿ, ಪ್ರತಿಯೊಂದು ಪತ್ರಿಕಾಗೋಷ್ಠಿ ಮತ್ತು ಪ್ರತಿಯೊಂದು ಘೋಷಣೆಯನ್ನು ಈ ವಂಶಾಡಳಿತದ ಆರಾಧಕರು, ಉತ್ತರಪ್ರದೇಶದಲ್ಲಿ ಪಕ್ಷದ ಚುನಾವಣಾ ಮರುಜನ್ಮವೆಂಬಂತೆ ಬಿಂಬಿಸಿ ವರದಿ ಮಾಡತೊಡಗಿದರು. ಈ ಚುನಾವಣೆಯಲ್ಲಿ ಒಟ್ಟಾರೆಯಾಗಿ ಪ್ರಿಯಾಂಕಾ ಗಾಂಧಿ ನೇತೃತ್ವದ ಕಾಂಗ್ರೆಸ್‌ಗೆ ಕೇವಲ 2 ಶೇಕಡಕ್ಕಿಂತ ಸ್ವಲ್ಪ ಹೆಚ್ಚು ಮತಗಳನ್ನು ಗಳಿಸಲು ಸಾಧ್ಯವಾಯಿತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ಸ್ಥಾನಗಳಿಗಿಂತಲೂ ಕಡಿಮೆ ಸ್ಥಾನವನ್ನು ಅದು ಗೆದ್ದಿತು.

ಉತ್ತರಪ್ರದೇಶದಲ್ಲಿನ ತನ್ನ ಶ್ರಮಕ್ಕಾಗಿ ಪ್ರಿಯಾಂಕಾ ಗಾಂಧಿಗೆ ಕೆಲವಾದರೂ ಅಂಕಗಳು ಸಿಕ್ಕಿವೆ. ಆದರೆ, ಪರಿಣಾಮ ಬೀರಲು ಆ ಅಂಕಗಳು ಸಾಕಾಗದು ಎನ್ನುವುದು ಬೇರೆ ವಿಷಯ. ಆದರೆ ಪಂಜಾಬ್‌ನಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಅಲ್ಲಿ ಅವರ ಸಹೋದರ ರಾಹುಲ್ ಗಾಂಧಿ ಚುನಾವಣೆಗೆ ಒಂದು ವರ್ಷಕ್ಕೂ ಕಡಿಮೆ ಸಮಯವಿದ್ದಾಗ, ಹಾಲಿ ಮುಖ್ಯಮಂತ್ರಿಯನ್ನು ಬದಲಾವಣೆ ಮಾಡಿದರು. ಆ ಮೂಲಕ ಮರಳಿ ಅಧಿಕಾರಕ್ಕೆ ಬರುವ ಪಕ್ಷದ ಅವಕಾಶವನ್ನು ಕಿತ್ತೊಗೆದರು. ಶಾಸಕರ ಒಂದು ವರ್ಗ ಅಮರಿಂದರ್ ಸಿಂಗ್‌ರನ್ನು ಇಷ್ಟಪಡದಿದ್ದರೂ, ಅವರಿಗೆ ರಾಜಕೀಯದಲ್ಲಿ ಅಗಾಧ ಅನುಭವವಿತ್ತು. ಎಲ್ಲಕ್ಕಿಂತಲೂ ಮುಖ್ಯವಾಗಿ ಅವರು ರೈತರ ಚಳವಳಿಯ ಪರವಾಗಿ ಪ್ರಬಲ ನಿಲುವೊಂದನ್ನು ತೆಗೆದುಕೊಂಡಿದ್ದರು. ಒಂದು ವರ್ಷದ ಹಿಂದೆ, ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಾರ್ಟಿ (ಆಪ್)- ಎರಡೂ ಪಕ್ಷಗಳಿಗೆ ಪಂಜಾಬ್ ಗೆಲ್ಲುವ ಸಮಾನ ಅವಕಾಶಗಳಿದ್ದವು. ಆದರೆ, ಬಳಿಕ ಅಮರಿಂದರ್ ಸಿಂಗ್ ಸ್ಥಾನಕ್ಕೆ ಹೆಚ್ಚು ಪರಿಚಿತವಲ್ಲದ ಚರಣ್‌ಜಿತ್ ಸಿಂಗ್ ಚನ್ನಿಯನ್ನು ತರಲಾಯಿತು. ಬಳಿಕ, ರಾಹುಲ್ ಗಾಂಧಿ ವಿನಾಶಕಾರಿ ನವಜೋತ್ ಸಿಂಗ್ ಸಿಧುರನ್ನು ಮುದ್ದು ಮಾಡಲು ಹೋಗಿ ಚನ್ನಿಯನ್ನು ಕಡೆಗಣಿಸಿದರು. ಆ ಮೂಲಕ ಪಕ್ಷದ ಇಡೀ ರಾಜ್ಯ ಘಟಕವನ್ನು ಅವ್ಯವಸ್ಥೆಯ ಕೂಪವನ್ನಾಗಿಸಿದರು. ಇದರ ಪ್ರಯೋಜನವನ್ನು ಸಂಪೂರ್ಣವಾಗಿ ಪಡೆದುಕೊಂಡ ಆಮ್ ಆದ್ಮಿ ಪಾರ್ಟಿ ಕಾಂಗ್ರೆಸನ್ನು ಸಮಗ್ರವಾಗಿ ಸೋಲಿಸಿತು.

ಈಗ ಗೋವಾ ಮತ್ತು ಉತ್ತರಾಖಂಡಕ್ಕೆ ಬರೋಣ. ಎರಡೂ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಆದರೆ ಅದರ ಸರಕಾರಗಳು ಜನಪ್ರಿಯವಾಗಿರಲಿಲ್ಲ. ಈ ಸರಕಾರಗಳನ್ನು ಭಾವನಾರಹಿತ ಮತ್ತು ಭ್ರಷ್ಟ ಎಂಬುದಾಗಿ ಜನರು ಭಾವಿಸಿದ್ದರು. ಉತ್ತರಾಖಂಡದಲ್ಲಿ, ಜನರ ಅತೃಪ್ತಿಯನ್ನು ಹೋಗಲಾಡಿಸುವುದಕ್ಕಾಗಿ ಬಿಜೆಪಿಯು ಎರಡು ಮುಖ್ಯಮಂತ್ರಿಗಳನ್ನು ಬದಲಾಯಿಸಿತು. ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್ ಪ್ರಧಾನ ಪ್ರತಿಪಕ್ಷವಾಗಿತ್ತು. ಆದರೂ, ಎರಡೂ ರಾಜ್ಯಗಳಲ್ಲಿ ಅಧಿಕಾರವನ್ನು ಮರಳಿ ಪಡೆಯುವುದಕ್ಕಾಗಿ ಸಾಕಷ್ಟು ಪ್ರಬಲ ಸವಾಲನ್ನು ಒಡ್ಡಲು ಅದಕ್ಕೆ ಸಾಧ್ಯವಾಗಲಿಲ್ಲ. ಅಂತಿಮವಾಗಿ, ಮಣಿಪುರದಲ್ಲಾದರೂ ಫಲಿತಾಂಶದ ಮೇಲೆ ಗಣನೀಯ ಪರಿಣಾಮವನ್ನು ಬೀರುವ ಅವಕಾಶ ಕಾಂಗ್ರೆಸ್‌ಗಿತ್ತು. ಒಂದು ಕಾಲದಲ್ಲಿ ಮಣಿಪುರದಲ್ಲಿ ಕಾಂಗ್ರೆಸ್ ನಿಯಮಿತವಾಗಿ ಸರಕಾರ ರಚಿಸುವ ಪಕ್ಷವಾಗಿತ್ತು. ಆದರೆ, ಈ ಬಾರಿ ಅಲ್ಲಿ ಕಾಂಗ್ರೆಸ್ ಕಳೆದ ಬಾರಿಗಿಂತ 23 ಸ್ಥಾನಗಳನ್ನು ಕಳೆದುಕೊಂಡಿದೆ.

ಪ್ರಸಕ್ತ ನಾಯಕತ್ವದಡಿ ರಾಷ್ಟ್ರೀಯ ರಾಜಕೀಯದಲ್ಲಿ ಇನ್ನೊಮ್ಮೆ ಪ್ರಮುಖ ಭಾಗೀದಾರನಾಗುವ ಸಾಮರ್ಥ್ಯ ಕಾಂಗ್ರೆಸ್‌ಗೆ ಇಲ್ಲ ಎನ್ನುವುದನ್ನು ಇತ್ತೀಚಿನ ಸುತ್ತಿನ ಚುನಾವಣೆಗಳು ಮತ್ತೊಮ್ಮೆ ಖಚಿತಪಡಿಸಿವೆ. ಇದು ನಮ್ಮಲ್ಲಿ ಕೆಲವರಿಗೆ ತುಂಬಾ ಹಿಂದೆಯೇ ಗೊತ್ತಿತ್ತು. 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅನುಭವಿಸಿದ ಹೀನಾಯ ಸೋಲಿನ ಬಳಿಕ, ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸಿದ್ದ ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬಳಿಕ, ಅವರ ತಾಯಿ ಸೋನಿಯಾ ಗಾಂಧಿ ಪಕ್ಷದ 'ಉಸ್ತುವಾರಿ' ಅಧ್ಯಕ್ಷರಾದರು. ಅದಾಗಿ ಎರಡೂವರೆ ವರ್ಷವಾಗುತ್ತಾ ಬಂದರೂ, ಪೂರ್ಣ ಪ್ರಮಾಣದ ಅಧ್ಯಕ್ಷರನ್ನು ಆರಿಸಲು ಪಕ್ಷವು ಇನ್ನೂ ಕ್ರಮಗಳನ್ನು ತೆಗೆದುಕೊಂಡಿಲ್ಲ. ಪಕ್ಷವು ಕುಟುಂಬದ ವಾಸ್ತವಿಕ ನಿಯಂತ್ರಣದಲ್ಲೇ ಇದೆ. ಅದರ ಫಲಿತಾಂಶವನ್ನು ನಾವಿಂದು ನೋಡುತ್ತಿದ್ದೇವೆ.

2019ರಲ್ಲಿ, ಪಕ್ಷಕ್ಕೆ ಪುನಶ್ಚೇತನ ನೀಡುವ ಅವಕಾಶವೊಂದು ಕಾಂಗ್ರೆಸ್‌ಗೆ ಇತ್ತು. ಆದರೆ ಆ ಅವಕಾಶವನ್ನು ಅದು ಗಾಳಿಗೆ ತೂರಿತು. ಈಗ ಅದು ಏನು ಮಾಡಬಹುದು? ನನ್ನ ಪ್ರಕಾರ, ಪಕ್ಷದ ಒಳಿತಿಗಾಗಿ ಹಾಗೂ ಭಾರತೀಯ ಪ್ರಜಾಪ್ರಭುತ್ವದ ಒಳಿತಿಗಾಗಿ ಗಾಂಧಿ ಕುಟುಂಬದವರು ಪಕ್ಷದ ನಾಯಕತ್ವವನ್ನು ತೊರೆಯುವುದು ಮಾತ್ರವಲ್ಲ, ರಾಜಕೀಯದಿಂದಲೇ ನಿವೃತ್ತಿಗೊಳ್ಳಬೇಕು. ರಾಜ್ಯ ಮತ್ತು ರಾಷ್ಟ್ರೀಯ ಚುನಾವಣೆಗಳಲ್ಲಿ ಪಕ್ಷವನ್ನು ಪ್ರಬಲ ಶಕ್ತಿಯನ್ನಾಗಿ ಮಾಡಲು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅಸಮರ್ಥರಾಗಿದ್ದಾರೆ ಎನ್ನುವ ಕಾರಣಕ್ಕಾಗಿ ಮಾತ್ರವಲ್ಲ; ಕಾಂಗ್ರೆಸ್‌ನಲ್ಲಿನ ಅವರ ಬರೀ ಉಪಸ್ಥಿತಿಯನ್ನೂ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರು ವ್ಯವಸ್ಥಿತವಾಗಿ ಬಳಸಿಕೊಳ್ಳುತ್ತಾರೆ ಎನ್ನುವ ಕಾರಣಕ್ಕಾಗಿ. ಗತಕಾಲದ ಬಗ್ಗೆ ಚರ್ಚೆ ಮಾಡುವ ಮೂಲಕ ಪ್ರಸಕ್ತ ಕಾಲದ ಸರಕಾರದ ವೈಫಲ್ಯಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಮೋದಿಗೆ ಸುಲಭವಾಗುತ್ತದೆ.

ಇದನ್ನು ಗಮನಿಸಿ. ರಕ್ಷಣಾ ವ್ಯವಹಾರದಲ್ಲಿನ ಭ್ರಷ್ಟಾಚಾರ ಆರೋಪಗಳಿಗೆ ರಾಜೀವ್ ಗಾಂಧಿ ಮತ್ತು ಬೊಫೋರ್ಸ್‌ಅನ್ನು ಉಲ್ಲೇಖಿಸುವ ಮೂಲಕ ಸರಕಾರ ಉತ್ತರ ನೀಡಿತು; ಮಾಧ್ಯಮವನ್ನು ಹತ್ತಿಕ್ಕುವುದು ಮತ್ತು ಸಾಮಾಜಿಕ ಹೋರಾಟಗಾರರನ್ನು ಜೈಲಿಗೆ ಹಾಕುವುದಕ್ಕೆ ಸಂಬಂಧಿಸಿದ ಆರೋಪಗಳಿಗೆ ಇಂದಿರಾ ಗಾಂಧಿ ಮತ್ತು ತುರ್ತುಪರಿಸ್ಥಿತಿಯನ್ನು ನೆನಪಿಸಲಾಯಿತು; ಚೀನಾ ಸೇನೆಗೆ ಭಾರತೀಯ ಭೂಭಾಗವನ್ನು ಬಿಟ್ಟುಕೊಟ್ಟಿರುವ ಹಾಗೂ ಚೀನಾ ಸೇನೆಯು ಭಾರತೀಯ ಸೈನಿಕರನ್ನು ಹತ್ಯೆಗೈದಿರುವ ವಿಷಯ ಬಂದಾಗ ಜವಾಹರಲಾಲ್ ನೆಹರೂ ಮತ್ತು 1962ರ ಯುದ್ಧವನ್ನು ಉಲ್ಲೇಖಿಸಿ ಬಾಯಿ ಮುಚ್ಚಿಸಲಾಯಿತು. ಇಂಥ ಹಲವು ಉದಾಹರಣೆಗಳಿವೆ.

ಎಂಟು ವರ್ಷಗಳ ಅಧಿಕಾರಾವಧಿಯಲ್ಲಿ, ಹಲವು ಸಾಧನೆಗಳನ್ನು ಮಾಡಿರುವುದಾಗಿ ಮೋದಿ ಸರಕಾರವು ಹೇಳಿಕೊಂಡಿದೆ ಹಾಗೂ ಹಲವಾರು ಭರವಸೆಗಳನ್ನು ನೀಡಿದೆ. ಆದರೆ, ಅದರ ಸಾಧನೆಯನ್ನು ವಸ್ತುನಿಷ್ಠ ಮಾನದಂಡಗಳ ಮೂಲಕ ವಿಶ್ಲೇಷಿಸಿದಾಗ, ತನ್ನ ಅಧಿಕಾರಾವಧಿಯಲ್ಲಿ ಅದು ಮಾಡಿದ ಸಾಧನೆ ನಗಣ್ಯವಾಗಿದೆ. ಅದರ ಅಧಿಕಾರಾವಧಿಯಲ್ಲಿ ಬೆಳವಣಿಗೆ ದರ ಕ್ಷೀಣಿಸಿದೆ (ಕೊರೋನ ವೈರಸ್ ಸಾಂಕ್ರಾಮಿಕದ ದಾಳಿಗೂ ಮೊದಲು ಬೆಳವಣಿಗೆ ಕುಸಿತವು ಗಮನಕ್ಕೆ ಬಂದಿತ್ತು) ಹಾಗೂ ನಿರುದ್ಯೋಗ ದರದಲ್ಲಿ ಏರಿಕೆಯಾಗಿದೆ. ಅದು ಬರ್ಬರವಾಗಿ ಹಿಂದೂಗಳನ್ನು ಮುಸ್ಲಿಮರ ವಿರುದ್ಧ ಛೂ ಬಿಟ್ಟಿದೆ. ನಮ್ಮ ನೆರೆಹೊರೆಯ ದೇಶಗಳು ಮತ್ತು ಜಗತ್ತಿನಲ್ಲಿ ನಮ್ಮ ಸ್ಥಾನಮಾನ ಕುಸಿಯುವಂತೆ ಮಾಡಿದೆ. ಅದು ನಮ್ಮ ಅತ್ಯಂತ ಮಹತ್ವದ ಪ್ರಜಾಸತ್ತಾತ್ಮಕ ಸ್ವಾಯತ್ತ ಸಂಸ್ಥೆಗಳ ಘನತೆಯನ್ನು ಕುಗ್ಗಿಸಿದೆ ಹಾಗೂ ಅವುಗಳನ್ನು ಭ್ರಷ್ಟಗೊಳಿಸಿದೆ. ಅದು ಸಹಜ ಪರಿಸರವನ್ನು ಹಾಳುಗೆಡವಿದೆ. ಒಟ್ಟಾರೆಯಾಗಿ ಹೇಳುವುದಾದರೆ, ಮೋದಿ ಸರಕಾರದ ಕೃತ್ಯಗಳು ಭಾರತಕ್ಕೆ ಆರ್ಥಿಕವಾಗಿ, ಸಾಮಾಜಿಕವಾಗಿ, ಸಾಂಸ್ಥಿಕವಾಗಿ, ಅಂತರ್‌ರಾಷ್ಟ್ರೀಯವಾಗಿ, ಪಾರಿಸಾರಿಕವಾಗಿ ಮತ್ತು ನೈತಿಕವಾಗಿ ಹಾನಿ ಮಾಡಿವೆ.

ಇಷ್ಟೆಲ್ಲ ವೈಫಲ್ಯಗಳ ನಡುವೆಯೂ, 2024ರ ಚುನಾವಣೆಯನ್ನು ಜಯಿಸುವ ಪ್ರಧಾನ ಭಾಗೀದಾರರಾಗಿ ನರೇಂದ್ರ ಮೋದಿ ಮತ್ತು ಬಿಜೆಪಿ ದಾಪುಗಾಲಿಡುತ್ತಾರೆಂದರೆ, ಅದಕ್ಕೆ ಒಂದು ಪ್ರಮುಖ ಕಾರಣ, ಅವರ ಪ್ರಧಾನ 'ರಾಷ್ಟ್ರೀಯ' ಪ್ರತಿಪಕ್ಷ ಸ್ಥಾನದಲ್ಲಿ ಈಗಲೂ ನೆಹರೂ-ಗಾಂಧಿ ಕುಟುಂಬಿಕರ ನಾಯಕತ್ವದ ಕಾಂಗ್ರೆಸ್ ಇರುವುದು. ಟಿಎಮ್‌ಸಿ, ಬಿಜೆಡಿ, ವೈಎಸ್‌ಆರ್‌ಸಿ, ಟಿಆರ್‌ಎಸ್, ಡಿಎಮ್‌ಕೆ, ಸಿಪಿಐ(ಎಮ್) ಮತ್ತು ಆಪ್ ಮುಂತಾದ ಪಕ್ಷಗಳು ಬಿಜೆಪಿಗೆ ಪ್ರಮುಖ ಪ್ರತಿಪಕ್ಷವಾಗಿರುವ ಪ್ರದೇಶಗಳಲ್ಲಿ ಪರಿಣಾಮಕಾರಿ ಚುನಾವಣಾ ಸವಾಲನ್ನು ಒಡ್ಡಬಲ್ಲವು. ಇದನ್ನು ಕಾಂಗ್ರೆಸ್‌ಗೆ ಮಾಡಲು ಸಾಧ್ಯವಿಲ್ಲ ಎನ್ನುವುದನ್ನು ಗೋವಾ, ಮಣಿಪುರ ಮತ್ತು ಉತ್ತರಾಖಂಡದ ಫಲಿತಾಂಶಗಳು ಮತ್ತೊಮ್ಮೆ ಸಾಬೀತುಪಡಿಸಿವೆ. ನೆಹರೂ-ಗಾಂಧಿಗಳ ನೇತೃತ್ವದ ಕಾಂಗ್ರೆಸ್‌ನ ದೌರ್ಬಲ್ಯಗಳು ಮುಖ್ಯವಾಗಿ ಲೋಕಸಭಾ ಚುನಾವಣೆಗಳ ಸಂದರ್ಭದಲ್ಲಿ ಗೋಚರಿಸುತ್ತವೆ. ಉದಾಹರಣೆಗೆ; 2019ರ ಚುನಾವಣೆಯಲ್ಲಿ 191 ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ಗಳ ನಡುವೆ ನೇರ ಹಣಾಹಣಿಯಿತ್ತು. ಆದರೆ, ಕೇವಲ 16 ಸ್ಥಾನಗಳನ್ನು ಗೆಲ್ಲುವಲ್ಲಿ ಕಾಂಗ್ರೆಸ್ ಯಶಸ್ವಿಯಾಯಿತು. ಪ್ರಧಾನಿ ನರೇಂದ್ರ ಮೋದಿಗೆ ಪರ್ಯಾಯವಾಗಿ ರಾಹುಲ್ ಗಾಂಧಿಯನ್ನು ಬಿಂಬಿಸಲಾಯಿತು. ಆದರೆ, ಇದರಲ್ಲಿ ಅವರು ಪಡೆದ ಯಶಸ್ಸಿನ ದರ 8 ಶೇಕಡ ಮಾತ್ರ.

ಬಿಜೆಪಿಯ ಮಟ್ಟಿಗೆ ಹೇಳುವುದಾದರೆ, ಗಾಂಧಿ ಕುಟುಂಬಿಕರು ಅದಕ್ಕೆ ಉಡುಗೊರೆ ಇದ್ದಂತೆ. ಈ ಉಡುಗೊರೆಯನ್ನು ಅದು ನಿರಂತರವಾಗಿ ಪಡೆಯುತ್ತಾ ಸಾಗುತ್ತದೆ. ಒಂದು ಕಡೆಯಲ್ಲಿ ಅವರು ಬಿಜೆಪಿಗೆ ಪರಿಣಾಮಕಾರಿ ಚುನಾವಣಾ ಸ್ಪರ್ಧೆಯನ್ನು ನೀಡುವ ಸನಿಹಕ್ಕೂ ಬರುವುದಿಲ್ಲ; ಇನ್ನೊಂದು ಕಡೆ, ಬಿಜೆಪಿಯು ಅವರ ಸುತ್ತಲೇ ರಾಷ್ಟ್ರೀಯ ರಾಜಕೀಯ ಚರ್ಚೆ ನಡೆಯುವಂತೆ ವಿಷಯಗಳನ್ನು ಸಿದ್ಧಪಡಿಸುತ್ತದೆ. ಅಂದರೆ, ಚರ್ಚೆಗೆ ಬಿಜೆಪಿ ಒದಗಿಸುವ ವಿಷಯಗಳು ಗತಕಾಲಕ್ಕೆ ಸಂಬಂಧಿಸಿರುತ್ತದೆಯೇ ಹೊರತು, ವರ್ತಮಾನ ಕಾಲಕ್ಕೆ ಸಂಬಂಧಿಸಿರುವುದಿಲ್ಲ. ಅದರಲ್ಲಿಯೂ ಬಿಜೆಪಿ ಯಶಸ್ಸು ಪಡೆಯುತ್ತದೆ.

ಭಾರತದಲ್ಲಿ ಊಳಿಗಮಾನ್ಯ ವ್ಯವಸ್ಥೆಯ ಪ್ರಭಾವವು ದಿನೇ ದಿನೇ ಕಡಿಮೆಯಾಗುತ್ತಿರುವಾಗ, ಹಲವು ಐತಿಹ್ಯಗಳು ಮತ್ತು ದಂತಕತೆಗಳನ್ನು ಹೊಂದಿರುವ ಪಕ್ಷದ ಮುಖ್ಯಸ್ಥರಾಗಿ ಐದನೇ ತಲೆಮಾರಿನ ಕುಟುಂಬ ಸದಸ್ಯರನ್ನು ಹೊಂದುವುದು ಆಭಾಸವಾಗುತ್ತದೆ. ಕುಟುಂಬದ ಹೆಸರಿನಲ್ಲಿ ಹೀಗೆ ಅಧಿಕಾರದ ಸ್ಥಾನ ಪಡೆದವರಲ್ಲಿ ರಾಜಕೀಯ ಚತುರತೆಯ ಕೊರತೆಯಿದ್ದರೆ ಈಗಾಗಲೇ ಇರುವ ಸಮಸ್ಯೆಯು ಮತ್ತಷ್ಟು ಬಿಗಡಾಯಿಸುತ್ತದೆ.

ತಮ್ಮದೇ ಭಟ್ಟಂಗಿಗಳ ಸೀಮಿತ ವಲಯದಲ್ಲಿ ಬದುಕುತ್ತಿರುವ ಗಾಂಧಿಗಳಿಗೆ, ಭಾರತೀಯರು 21ನೇ ಶತಮಾನದಲ್ಲಿ ಹೇಗೆ ಯೋಚಿಸುತ್ತಿದ್ದಾರೆ ಎನ್ನುವ ಕನಿಷ್ಠ ಕಲ್ಪನೆಯೂ ಇಲ್ಲ. ''ಕಲಿಸಲಾಗದಷ್ಟು ದಡ್ಡತನವನ್ನು ರಾಹುಲ್ ಗಾಂಧಿ ಹೊಂದಿದ್ದಾರೆ. ಪ್ರಸಕ್ತ ರಾಜಕೀಯಕ್ಕೆ ಅವರು ಹೊಂದುವುದಿಲ್ಲ. ಅವರು ಪದೇ ಪದೇ ನೀಡುತ್ತಿರುವ ತನ್ನ ತಂದೆ, ಅಜ್ಜಿ ಮತ್ತು ಮುತ್ತಾತನ ಉದಾಹರಣೆಗಳು ಇದನ್ನು ಸಾಬೀತುಪಡಿಸುತ್ತವೆ'' ಎಂಬುದಾಗಿ ಭಾರತ ಮೂಲದ ಬ್ರಿಟಿಷ್ ಲೇಖಕ ಆತಿಶ್ ತಸೀರ್ ಹೇಳುತ್ತಾರೆ. ಇದು ಕಠೋರ ಎಂದು ಒಂದು ಕ್ಷಣಕ್ಕೆ ಅನಿಸಬಹುದಾದರೂ, ಅತ್ಯಂತ ನಿಖರವಾಗಿದೆ.

ಗಾಂಧಿ ಕುಟುಂಬಕ್ಕೆ ಗೊತ್ತಿದೆಯೋ ಇಲ್ಲವೋ, ಅವರ ಅರಿವಿಗೆ ಬಂದಿದೆಯೋ ಇಲ್ಲವೋ ಗಾಂಧಿ ಕುಟುಂಬವು ಹಿಂದುತ್ವದ ಹೆಸರಿನಲ್ಲಿ ನಡೆಯುತ್ತಿರುವ ಸರ್ವಾಧಿಕಾರಕ್ಕೆ ಹಾದಿ ಸುಗಮಗೊಳಿಸುತ್ತಿದೆ. ಅವರು ನಿರ್ಗಮಿಸಿದರೆ ಅಥವಾ ಕಾಂಗ್ರೆಸ್ ನಿರ್ನಾಮಗೊಂಡರೂ ಹೆಚ್ಚಿನ ರಾಜಕೀಯ ವಿಶ್ವಾಸಾರ್ಹತೆಯಿರುವ ಯಾರಾದರೊಬ್ಬರು ಅವರ ಸ್ಥಾನಕ್ಕೆ ಬರುತ್ತಾರೆ. ಆಗ ನಮ್ಮ ಪೈಕಿ ಹಿಂದುತ್ವವನ್ನು ವಿರೋಧಿಸುವವರು, ಭಾರತದ ಭವಿಷ್ಯದ ಬಗ್ಗೆ ಚಿಂತಿಸುವ ಮತ್ತು ಅದಕ್ಕಾಗಿ ಹೋರಾಡುವ ನಿಟ್ಟಿನಲ್ಲಿ ಈಗಿನ ದಯನೀಯ ಸ್ಥಿತಿಗಿಂತ ಉತ್ತಮ ಸ್ಥಿತಿಯಲ್ಲಿರುತ್ತಾರೆ.

Writer - ರಾಮಚಂದ್ರ ಗುಹಾ

contributor

Editor - ರಾಮಚಂದ್ರ ಗುಹಾ

contributor

Similar News

ಸಂವಿಧಾನ -75