ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಪದಗ್ರಹಣ
ಉಡುಪಿ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಪದಗ್ರಹಣ ಹಾಗೂ ಉದ್ಘಾಟನಾ ಸಮಾರಂಭ ಉಡುಪಿಯ ಗುಂಡಿಬೈಲ್ ನಲ್ಲಿರುವ ಬ್ರಾಹ್ಮಿ ಸಭಾಭವನದಲ್ಲಿ ಇಂದು ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಮನೋವೈದ್ಯ ಡಾ.ಪಿ.ವಿ.ಭಂಡಾರಿ ಮಾತ ನಾಡಿ, ಕನ್ನಡ ವಿವಿಧತೆಯ ಭಾಷೆಯಾಗಿದೆ. ಪುಸ್ತಕ ಪ್ರೀತಿ ನಾವೆಲ್ಲರೂ ಬೆಳೆಸ ಬೇಕಾಗಿದೆ. ನಮ್ಮ ಶ್ರೇಷ್ಠ ಕವಿಗಳು ನಮ್ಮ ನಾಡು ನುಡಿಗೆ ಬಹಳಷ್ಟು ಕೆಲಸ ಮಾಡಿದ್ದಾರೆ. ಅವರ ಕೃತಿಗಳನ್ನು ಓದಿ ಅದರ ಸಾರವನ್ನು ನಾವು ಹಂಚಬೇಕು ಎಂದು ತಿಳಿಸಿದರು.
ಮಣಿಪಾಲ್ ಯುನಿವರ್ಸಲ್ ಪ್ರೆಸ್‌ನ ಪ್ರಧಾನ ಸಂಪಾದಕ ಪ್ರೊ.ನೀತ ಇನಮ್ದಾರ್ ಮಾತನಾಡಿ, ಕನ್ನಡ ಕೃತಿಗಳನ್ನು ಓದುವ ಹವ್ಯಾಸ ಬೆಳೆಸಿದರೆ ಮಾತ್ರ ಕನ್ನಡ ಮತ್ತಷ್ಟು ಬೆಳೆಯಲು ಸಾಧ್ಯ. ಮಕ್ಕಳಿಗೆ ಪುಸ್ತಕ ಓದುವ ಹವ್ಯಾಸ ಬೆಳೆಸುವಲ್ಲಿ ನಾವು ಕೈ ಜೋಡಿಸಬೇಕು ಎಂದರು.
ಕನ್ನಡದ ಬಾವುಟವನ್ನು ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಎಚ್.ಪಿ. ಅವರಿಗೆ ಹಸ್ತಾಂತರಿಸಿದರು. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಸುಬ್ರಹ್ಮಣ್ಯ ಶೆಟ್ಟಿ, ನರೇಂದ್ರ ಕುಮಾರ್ ಕೋಟ, ತಾಲೂಕು ಸಮಿತಿಯ ಗೌರವ ಕಾರ್ಯ ದರ್ಶಿ ರಂಜಿನಿ ವಸಂತ್, ಗೌರವ ಕೋಶಾಧ್ಯಕ್ಷ ರಾಜೇಶ್ ಭಟ್ ಪಣಿಯಾಡಿ ಉಪಸ್ಥಿತರಿದ್ದರು.
ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು ಪ್ರಾಸ್ತಾವಿಕವಾಗಿ ಮಾತನಾಡಿದರು. ಗೌರವ ಕಾರ್ಯದರ್ಶಿ ಜನಾರ್ದನ್ ಕೊಡವೂರು ಸ್ವಾಗತಿಸಿ ದರು. ರಾಜೇಶ್ ಭಟ್ ಪಣಿಯಾಡಿ ವಂದಿಸಿದರು. ಜಿಲ್ಲಾ ಸಮಿತಿಯ ಸದಸ್ಯ ಪೂರ್ಣಿಮ ಜನಾರ್ದನ್ ಕಾರ್ಯಕ್ರಮ ನಿರೂಪಿಸಿದರು. ಪ್ರಾರಂಭದಲ್ಲಿ ಕನ್ನಡದ ಗೀತ ಗಾಯನ ಹಾಗೂ ನೃತ್ಯ ಕಾರ್ಯಕ್ರಮ ಜರಗಿತು.