ಭಾರತೀಯ ನ್ಯಾಯ ವ್ಯವಸ್ಥೆ ನಿಷ್ಪಕ್ಷಪಾತವೇ?
ಅಹ್ಮದಾಬಾದ್ ಸ್ಫೋಟ ಪ್ರಕರಣದ 38 ಆರೋಪಿಗಳಿಗೆ ಮರಣ ದಂಡನೆ ಶಿಕ್ಷೆಯನ್ನು ನ್ಯಾಯಾಲಯ ಘೋಷಿಸಿದ ಬಳಿಕ, ಅದಕ್ಕೆ ಗುಜರಾತ್ ಬಿಜೆಪಿ ಪ್ರತಿಕ್ರಿಯಿಸಿದ ರೀತಿಯನ್ನು ಗಮನಿಸಬೇಕಾಗಿದೆ. ಹಲವು ಟೋಪಿಧಾರಿ ಹಾಗೂ ಗಡ್ಡಧಾರಿ ಮುಸ್ಲಿಮರನ್ನು ಗಲ್ಲಿಗೇರಿಸುವ ಚಿತ್ರವೊಂದನ್ನು ಅದು ಟ್ವೀಟ್ ಮಾಡಿತು. ಬಳಿಕ, ಈ ಟ್ವೀಟನ್ನು ಟ್ವಿಟರ್ ತೆಗೆದುಹಾಕಿತು. ಇಂಥ ಕೃತ್ಯಗಳು ಈಗಾಗಲೇ ವ್ಯಾಪಿಸಿರುವ ದ್ವೇಷವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಧರ್ಮವನ್ನು ಪರಿಗಣನೆಗೆ ತೆಗೆದುಕೊಳ್ಳದ, ಎಲ್ಲರಿಗೂ ಸಮಾನ ನ್ಯಾಯ ವ್ಯವಸ್ಥೆ ಇರುವ ನ್ಯಾಯ ಪರ ಸಮಾಜವೊಂದನ್ನು ನಾವು ನಿರೀಕ್ಷಿಸೋಣವೇ?
ಭಾರತೀಯ ಸಮಾಜವು ಹಲವು ವಿಧಗಳ ಹಿಂಸಾಚಾರದಿಂದ ಬಳಲುತ್ತಿದೆ. ಇವುಗಳ ಪೈಕಿ ಕೋಮು ಹಿಂಸಾಚಾರ ಮತ್ತು ಭಯೋತ್ಪಾದನೆಯ ಕೃತ್ಯಗಳು ಕಳೆದ ಕೆಲವು ದಶಕಗಳಿಂದ ನಮ್ಮ ಸಮಾಜದ ಮಾನವೀಯ ಅಂತಃಕರಣವನ್ನೇ ನಡುಗಿಸಿವೆ. ವಸಾಹತುಶಾಹಿ ಆಳ್ವಿಕೆಯ ಕಾಲದಲ್ಲಿ ಆರಂಭವಾಗಿರುವ ಕೋಮು ಹಿಂಸಾಚಾರವು ಈಗ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಬಹುಸಂಖ್ಯಾತರು ನಡೆಸುವ ಹಿಂಸಾಚಾರದ ರೂಪವನ್ನು ಪಡೆದುಕೊಂಡಿದೆ. ವಸಾಹತುಶಾಹಿ ಆಳ್ವಿಕೆಯ ವೇಳೆ, ಈ ಮತಿಗೆಟ್ಟ ಕೃತ್ಯಗಳಿಗೆ ಎರಡೂ ಕೋಮುಗಳ ದೇಣಿಗೆಗಳಿದ್ದವು. ಸ್ವಾತಂತ್ರಾ ನಂತರ ನಿಧಾನವಾಗಿ ಬಹುಸಂಖ್ಯಾತರ ಹಿಂಸಾಚಾರವೇ ಪ್ರಧಾನವಾಯಿತು ಹಾಗೂ ಈಗ ಅದು ಧಾರ್ಮಿಕ ಅಲ್ಪಸಂಖ್ಯಾತರನ್ನು ತೀವ್ರವಾಗಿ ಹಿಂಸಿಸುತ್ತಿದೆ. ಅದಕ್ಕೆ ಪೂರಕವಾಗಿ ನಮ್ಮ ನ್ಯಾಯ ನೀಡಿಕೆ ವ್ಯವಸ್ಥೆಯೂ ಮಾರ್ಪಾಡುಗೊಳ್ಳುತ್ತಾ ಬಂದಿದೆ. ಬಹುಸಂಖ್ಯಾತ ಸಮುದಾಯಕ್ಕೆ ಸೇರಿದ ಹಿಂಸಾಚಾರದ ಆರೋಪಿಗಳು ಯಾವುದೇ ಗಂಭೀರ ಶಿಕ್ಷೆಯಿಲ್ಲದೆ ಪಾರಾಗುತ್ತಿದ್ದಾರೆ.
ನಾವು ಭಯೋತ್ಪಾದಕ ಹಿಂಸೆಯನ್ನೂ ನೋಡಿದ್ದೇವೆ. ಅದು 1993 ಮಾರ್ಚ್‌ನಲ್ಲಿ ಮುಂಬೈ ಬಾಂಬ್ ಸ್ಫೋಟಗಳೊಂದಿಗೆ ಆರಂಭಗೊಂಡಿತು. ಸ್ವಲ್ಪ ಸಮಯದ ವೌನದ ಬಳಿಕ, 2006-2008ರ ನಡುವಿನ ಅವಧಿಯಲ್ಲಿ ಅದು ಮತ್ತೆ ತಲೆಯೆತ್ತಿತು. ಸಂಕಟಮೋಚನ ಭಯೋತ್ಪಾದಕ ದಾಳಿಯ ಬಳಿಕ, ಮಾಲೆಗಾಂವ್, ಮಕ್ಕಾ ಮಸೀದಿ, ಅಜ್ಮೀರ್ ದರ್ಗಾ ಮತ್ತು ಸಂಜೋತಾ ಎಕ್ಸ್‌ಪ್ರೆಸ್‌ನಲ್ಲಿ ಸ್ಫೋಟಗಳು ನಡೆದವು. 2008ರಲ್ಲಿ ಅಹ್ಮದಾಬಾದ್‌ನಲ್ಲೂ ಸರಣಿ ಸ್ಫೋಟಗಳು ನಡೆದವು. ಕೆಲವು ಗಂಟೆಗಳ ಅವಧಿಯಲ್ಲಿ ಹಲವು ಬಾಂಬ್‌ಗಳು ಸ್ಫೋಟಗೊಂಡವು. 56 ಮಂದಿ ಪ್ರಾಣ ಕಳೆದುಕೊಂಡರು ಹಾಗೂ ಸುಮಾರು 100 ಮಂದಿ ಗಾಯಗೊಂಡರು.
ಈ ಭಯಾನಕ ಅಪರಾಧ ಕೃತ್ಯಗಳನ್ನು ನ್ಯಾಯ ವ್ಯವಸ್ಥೆಯು ಹೇಗೆ ನಿಭಾಯಿಸಿದೆ? ಅಹ್ಮದಾಬಾದ್ ಸ್ಫೋಟಗಳಿಗೆ ಸಂಬಂಧಿಸಿ, ಇತ್ತೀಚೆಗೆ, ಅಂದರೆ 2022 ಫೆಬ್ರವರಿಯಲ್ಲಿ, ವಿಶೇಷ ನ್ಯಾಯಾಲಯವೊಂದು 38 ಮುಸ್ಲಿಮರಿಗೆ ಮರಣ ದಂಡನೆ ವಿಧಿಸಿತು ಹಾಗೂ 11 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಇಲ್ಲಿ ನ್ಯಾಯವನ್ನು ಸರಿಯಾಗಿಯೇ ಎತ್ತಿ ಹಿಡಿಯಲಾಯಿತು ಹಾಗೂ ಯಾರ ವಿರುದ್ಧ ಪುರಾವೆಗಳಿದ್ದವೋ ಅವರಿಗೆಲ್ಲ ಶಿಕ್ಷೆ ನೀಡಲಾಯಿತು.
ಹಾಗಾದರೆ, ಮಾಲೆಗಾಂವ್‌ನಿಂದ ಅಜ್ಮೀರ್‌ವರೆಗೆ ನಡೆದ ಸರದಿ ಬಾಂಬ್ ಸ್ಫೋಟಗಳಲ್ಲಿ ಯಾವ ರೀತಿಯಲ್ಲಿ ನ್ಯಾಯವನ್ನು ನೀಡಲಾಯಿತು? ಈ ಪೈಕಿ ಹೆಚ್ಚಿನ ಸ್ಫೋಟಗಳು ಮುಸ್ಲಿಮ್ ಪ್ರಾರ್ಥನಾ ಸ್ಥಳಗಳಲ್ಲಿ ಹಾಗೂ ಮುಸ್ಲಿಮರು ಪ್ರಾರ್ಥನೆಗಾಗಿ ಸೇರಿದ್ದಾಗ ನಡೆದವು. ಈ ಸ್ಫೋಟಗಳಲ್ಲಿ ಮೃತಪಟ್ಟವರ ಒಟ್ಟು ಸಂಖ್ಯೆ 200ನ್ನು ದಾಟಿದೆ. ನ್ಯಾಯ ವಿತರಣಾ ವ್ಯವಸ್ಥೆಯು ಪೊಲೀಸ್ ತನಿಖೆಯೊಂದಿಗೆ ಆರಂಭಗೊಳ್ಳುತ್ತದೆ. ಆರಂಭದಲ್ಲಿ, ‘ಎಲ್ಲ ಭಯೋತ್ಪಾದಕರು ಮುಸ್ಲಿಮರು’ ಎಂಬ ತತ್ವದ ಆಧಾರದಲ್ಲಿ ಈ ಪ್ರಕರಣಗಳ ತನಿಖೆ ಆರಂಭಗೊಂಡಿತು. ಸ್ಫೋಟಗಳ ಬಲಿಪಶುಗಳು ಮುಸ್ಲಿಮರಾಗಿದ್ದರೂ, ಇನ್ನೊಂದಷ್ಟು ಮುಸ್ಲಿಮರನ್ನು ಬಂಧಿಸಲಾಯಿತು. ಅವರನ್ನು ಬಂಧಿಸಿದಾಗ ಅದು ಮುಖಪುಟಗಳ ಸುದ್ದಿಯಾಯಿತು. ಹೆಚ್ಚಿನ ಪ್ರಕರಣಗಳಲ್ಲಿ, ಬಂಧಿತ ಮುಸ್ಲಿಮ್ ಯುವಕರು ಸಾಮಾಜಿಕ ಬಹಿಷ್ಕಾರಗಳನ್ನು ಎದುರಿಸಿದರು ಹಾಗೂ ಅವರ ಜೀವನ ನಾಶವಾಯಿತು. ಸ್ವಲ್ಪ ಸಮಯದ ಬಳಿಕ, ಬಂಧಿತರ ವಿರುದ್ಧ ಯಾವುದೇ ವಿಶ್ವಾಸಾರ್ಹ ಪುರಾವೆ ಲಭಿಸದ ಕಾರಣ ಅವರ ಪೈಕಿ ಹೆಚ್ಚಿನವರನ್ನು ಬಿಡುಗಡೆಗೊಳಿಸಲೇಬೇಕಾಗಿತ್ತು. ಆದರೆ, ಈ ಸುದ್ದಿಯು ಪತ್ರಿಕೆಗಳ ಒಳಪುಟಗಳಲ್ಲಿ ಸಣ್ಣ ಸುದ್ದಿಗಳಾದವು.
ಸುಮಾರು ಇದೇ ಸಮಯದಲ್ಲಿ, ಹೇಮಂತ ಕರ್ಕರೆ ಮಹಾರಾಷ್ಟ್ರದ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್)ದ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು. ಬಾಂಬ್ ಸ್ಫೋಟಗಳಿಗೆ ಸಂಬಂಧಿಸಿದ ತನಿಖೆಯನ್ನು ಅವರು ಆಳಕ್ಕೆ ಒಯ್ದರು. ಮಾಲೆಗಾಂವ್ ಸ್ಫೋಟದಲ್ಲಿ ಬಳಸಲಾದ ಮೋಟರ್ ಸೈಕಲ್ ಎಬಿವಿಪಿಯ ಮಾಜಿ ಸದಸ್ಯೆ ಪ್ರಜ್ಞಾ ಸಿಂಗ್ ಠಾಕೂರ್‌ಗೆ ಸೇರಿದೆ ಎಂಬುದನ್ನು ಅವರು ಪತ್ತೆಹಚ್ಚಿದರು. ಈಗ ಅವರು ಭೋಪಾಲದ ಸಂಸದೆ. ಅವರು ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿಗಳ ಪೈಕಿ ಒಬ್ಬರು. ಆದರೆ, ಹೆಚ್ಚಿನ ಸಮಯ ಅವರು ವೈದ್ಯಕೀಯ ನೆಲೆಯಲ್ಲಿ ಜಾಮೀನು ಪಡೆದುಕೊಂಡು ಹೊರಗೇ ಇರುತ್ತಾರೆ. ಕುತೂಹಲದ ಸಂಗತಿಯೆಂದರೆ, ಜಾಮೀನು ಅವಧಿಯಲ್ಲಿ ಕ್ರಿಕೆಟ್ ಆಡುವ ಮತ್ತು ಬಾಸ್ಕೆಟ್‌ಬಾಲ್ ಆಡುವ ಅವರ ಚಿತ್ರಗಳು ಸಾರ್ವಜನಿಕರ ಗಮನಕ್ಕೆ ಬಂದಿವೆ.
ಕರ್ಕರೆಯ ತನಿಖೆಯು ಹಲವು ಜನರತ್ತ ಬೊಟ್ಟು ಮಾಡಿತು: ವಿಶ್ವ ಹಿಂದೂ ಪರಿಷತ್‌ನ ಸ್ವಾಮಿ ಅಸೀಮಾನಂದ್, ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಶ್ರೀಕಾಂತ್ ಪುರೋಹಿತ್, (ನಿವೃತ್ತ) ಮೇಜರ್ ಉಪಾಧ್ಯಾಯ ಹಾಗೂ ಆರೆಸ್ಸೆಸ್ ಮತ್ತು ಅದರ ಘಟಕ ಸಂಸ್ಥೆಗಳು ಹಲವಾರು ಸಕ್ರಿಯ ಅಥವಾ ಮಾಜಿ ಸದಸ್ಯರು. ಸ್ವಾಮಿ ಅಸೀಮಾನಂದ ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ನೀಡಿದ ತಪ್ಪೊಪ್ಪಿಗೆ ಹೇಳಿಕೆಯಲ್ಲಿ, ತಾನು ಮತ್ತು ಇತರ ಆರೋಪಿಗಳು ಆತ್ಮಹತ್ಯಾ ದಳಗಳನ್ನು ಹೇಗೆ ರಚಿಸಿದೆವು ಎನ್ನುವುದನ್ನು ವಿವರವಾಗಿ ತಿಳಿಸಿದ್ದಾನೆ. ಇದೇ ಅವಧಿಯಲ್ಲಿ, ನಾಂದೇಡ್‌ನಲ್ಲಿ ರಾಜ್‌ಕೊಂಡಾವರ್ ಎಂಬಾತನ ಮನೆಯಲ್ಲಿ ಸ್ಫೋಟ ಸಂಭವಿಸಿ ಬಜರಂಗ ದಳಕ್ಕೆ ಸೇರಿದ ಇಬ್ಬರು ಯುವಕರು ಪ್ರಾಣ ಕಳೆದುಕೊಂಡರು.
ಸರಿಯಾದ ಸಮಯದಲ್ಲಿ ತನಿಖೆಯು ಚುರುಕುಗೊಂಡಿತು ಹಾಗೂ ಅಸೀಮಾನಂದ ಮತ್ತು ಪ್ರಜ್ಞಾ ಠಾಕೂರ್ ಜೊತೆ ಸಂಪರ್ಕದಲ್ಲಿದ್ದ ಭಾರೀ ಸಂಖ್ಯೆಯ ಕಾರ್ಯಕರ್ತರನ್ನು ಜೈಲಿಗೆ ಕಳುಹಿಸಲಾಯಿತು. ಬಳಿಕ, ಮುಂಬೈ ಮೇಲೆ ನಡೆದ 26/11 ಭಯೋತ್ಪಾದಕ ದಾಳಿಯಲ್ಲಿ ಹೇಮಂತ್ ಕರ್ಕರೆ ಹತರಾದರು. ಈ ಪ್ರಕರಣಗಳನ್ನು ನಿಧಾನಗತಿಯಲ್ಲಿ ವಿಚಾರಣೆ ನಡೆಸುವಂತೆ ಸರಕಾರಿ ವಕೀಲೆ ರೋಹಿಣಿ ಸಾಲಿಯಾನ್‌ಗೆ ಸೂಚನೆಗಳನ್ನು ನೀಡಲಾಯಿತು. ನ್ಯಾಯಾಲಯದಲ್ಲಿ ನಾನು ಬಲವಂತದಿಂದ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದೇನೆ ಎಂಬ ಸ್ವಾಮಿ ಅಸೀಮಾನಂದರ ಹೇಳಿಕೆಯನ್ನು ನ್ಯಾಯಾಲಯವು ಸ್ವೀಕರಿಸಿತು ಹಾಗೂ ಅವರನ್ನು ಬಿಡುಗಡೆ ಮಾಡಿತು. ಹೆಚ್ಚಿನ ಆರೋಪಿಗಳಿಗೆ ಜಾಮೀನು ನೀಡಲಾಯಿತು ಹಾಗೂ ಹೆಚ್ಚಿನ ಮೊಕದ್ದಮೆಗಳನ್ನು ಮುಚ್ಚಲಾಯಿತು. ಅಜ್ಮೀರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಆರೆಸ್ಸೆಸ್ ಪ್ರಚಾರಕರೆನ್ನಲಾದ ದೇವೇಂದ್ರ ಗುಪ್ತ್ತಾ ಮತ್ತು ಭವೇಶ್ ಪಟೇಲ್ ಈಗಲೂ ಜೈಲಿನಲ್ಲಿದ್ದಾರೆ.
ಈಗ, ಹಿಂದೂ ರಾಷ್ಟ್ರೀಯವಾದಿಗಳನ್ನು ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಸಿಲುಕಿಸಲು ಯುಪಿಎ ಸರಕಾರವು ಬಯಸಿತ್ತು ಎಂಬ ವಾದವನ್ನು ಮುಂದಿಡಲಾಗುತ್ತಿದೆ. ಅಹ್ಮದಾಬಾದ್ ಸ್ಫೋಟ ಪ್ರಕರಣದ ತೀರ್ಪು ಮತ್ತು ಮಾಲೆಗಾಂವ್ ಸೇರಿದಂತೆ ಇತರ ಸ್ಫೋಟ ಪ್ರಕರಣಗಳಲ್ಲಿ ಸಂಭವಿಸುತ್ತಿರುವ ತಿರುವುಗಳು ಈಗ ಎಲ್ಲರ ಕಣ್ಣ ಮುಂದಿವೆ. ಅವುಗಳ ನಡುವಿನ ವ್ಯತ್ಯಾಸವು ಕಣ್ಣಿಗೆ ಕಟ್ಟುವಂತಿದೆ.
ಈ ಮೊಕದ್ದಮೆಗಳನ್ನು ನ್ಯಾಯಾಲಯಗಳಲ್ಲಿ ಹೇಗೆ ನಡೆಸಲಾಯಿತು ಎನ್ನುವುದು ಸ್ವಾಮಿ ಅಸೀಮಾನಂದರನ್ನು ದೋಷಮುಕ್ತಗೊಳಿಸಿ ಜಗದೀಪ್ ಸಿಂಗ್ ನೀಡಿದ ತೀರ್ಪು ಹೇಳುತ್ತದೆ. ‘‘ತೀವ್ರ ನೋವು ಮತ್ತು ದುಃಖದಿಂದ ಈ ತೀರ್ಪನ್ನು ನಾನು ನೀಡುತ್ತಿದ್ದೇನೆ. ವಿಶ್ವಾಸಾರ್ಹ ಮತ್ತು ಸ್ವೀಕಾರಾರ್ಹ ಪುರಾವೆಯ ಕೊರತೆಯಿಂದಾಗಿ ಹಿಂಸಾಚಾರದ ಹೀನ ಕೃತ್ಯವು ಶಿಕ್ಷೆಯಿಂದ ತಪ್ಪಿಸಿಕೊಂಡಿದೆ. ಪ್ರಾಸಿಕ್ಯೂಶನ್ ಪುರಾವೆಯಲ್ಲಿ ಅಗಾಧ ಲೋಪಗಳಿವೆ. ಹಾಗಾಗಿ, ಭಯೋತ್ಪಾದನೆಯ ಕೃತ್ಯವೊಂದು ತಾರ್ಕಿಕ ಕೊನೆಯನ್ನು ಕಂಡಿಲ್ಲ’’ ಎಂಬುದಾಗಿ ತೀರ್ಪು ಹೇಳಿದೆ. ಅದೂ ಅಲ್ಲದೆ, ‘‘ಎಲ್ಲ ಭಯೋತ್ಪಾದಕರು ಮುಸ್ಲಿಮರು’’ ಎಂಬ ಸಾಮಾಜಿಕ ಗ್ರಹಿಕೆ ಸೇರಿದಂತೆ ಚಾಲ್ತಿಯಲ್ಲಿರುವ ಪೂರ್ವಾಗ್ರಹಪೀಡಿತ ಕಲ್ಪನೆಗಳೂ ಇಂತಹ ಹೆಚ್ಚಿನ ಮೊಕದ್ದಮೆಗಳ ಫಲಿತಾಂಶವನ್ನು ನಿರ್ಧರಿಸುವ ಸಾಧ್ಯತೆಯೂ ಇದೆ.
ಕೋಮು ಹಿಂಸಾಚಾರ ವಿಷಯದಲ್ಲೂ ಕತೆ ಭಿನ್ನವಾಗಿಲ್ಲ. 1993ರ ಮುಂಬೈ ಕೋಮು ಗಲಭೆಗೆ ಸಂಬಂಧಿಸಿ ಶ್ರೀಕೃಷ್ಣ ಆಯೋಗವು, ಸರಕಾರದ ಹಲವು ಲೋಪದೋಷಗಳತ್ತ ಸರಿಯಾಗಿಯೇ ಬೆಟ್ಟು ಮಾಡಿತು. ಮುಂಬೈ ಗಲಭೆಯಲ್ಲಿ ಸುಮಾರು 1,000 ಜನರು ಮೃತಪಟ್ಟರು ಹಾಗೂ ಈ ಪೈಕಿ ಶೇ. 80 ಮುಸ್ಲಿಮರು. ಆಯೋಗದ ವಿವರವಾದ ತನಿಖೆಯ ಹೊರತಾಗಿಯೂ, ಯಾವುದೇ ಆರೋಪಿಗೆ ಮರಣ ದಂಡನೆ ಅಥವಾ ಗಂಭೀರ ಪರಿಣಾಮದ ಶಿಕ್ಷೆಯಾಗಿಲ್ಲ. ಆದರೆ, ಕೋಮು ಗಲಭೆಯ ಬೆನ್ನಿಗೇ ಸಂಭವಿಸಿದ ಸರಣಿ ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಇಬ್ಬರಿಗೆ ಮರಣ ದಂಡನೆ ಮತ್ತು ಇಬ್ಬರಿಗೆ ಜೀವಾವಧಿ ಜೈಲು ಶಿಕ್ಷೆ ನೀಡಲಾಗಿದೆ.
2002ರ ಗುಜರಾತ್ ಹಿಂಸಾಚಾರದಲ್ಲಿ, ಸುಮಾರು 2,000 ಜನರು ಪ್ರಾಣ ಕಳೆದುಕೊಂಡರು. ಅದೇ ಗಲಭೆಯಲ್ಲಿ ಸಂಸದ ಉಹ್ಸಾನ್ ಜಾಫ್ರಿ ಹತರಾದರು. ಅವರ ಪ್ರಕರಣವು ಈಗಲೂ ನ್ಯಾಯಾಲಯದಲ್ಲಿ ಕೊಳೆಯುತ್ತಿದೆ. ಅದೇ ಹತ್ಯಾಕಾಂಡದಲ್ಲಿ ತಾನು ವಹಿಸಿದ ಪಾತ್ರವನ್ನು ಬಾಬು ಬಜರಂಗಿಯು ‘ತೆಹೆಲ್ಕಾ’ ಪತ್ರಿಕೆಯ ಸ್ಟಿಂಗ್ ಕಾರ್ಯಾಚರಣೆಯಲ್ಲಿ ಹೀಗೆ ವಿವರಿಸಿದ್ದಾನೆ: ‘‘ಮುಸ್ಲಿಮರನ್ನು ಕೊಲ್ಲಲು ನಮಗೆ ಮೂರು ದಿನಗಳನ್ನು ನೀಡಲಾಗಿತ್ತು. ಅದು ಒಂದು ರೀತಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಮುಸ್ಲಿಮರನ್ನು ಕೊಲ್ಲುವ ಏಕದಿನ ಕ್ರಿಕೆಟ್ ಪಂದ್ಯದಂತಿತ್ತು. ಮುಸ್ಲಿಮರನ್ನು ಕೊಲ್ಲುವಾಗ ಮಹಾರಾಣಾ ಪ್ರತಾಪ ನಾನೇ ಎನ್ನುವ ಭಾವನೆ ನನ್ನಲ್ಲಿತ್ತು!’’ ಅವನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಪ್ರಕರಣದಲ್ಲಿ ಗುಜರಾತ್‌ನ ಮಾಜಿ ಸಚಿವೆ ಮಾಯಾ ಕೊಡ್ನಾನಿಗೆ ಜೀವಾವಧಿ ಶಿಕ್ಷೆಯಾಯಿತು. ಆದರೆ, ಬಳಿಕ ಅವರನ್ನು ಬಿಡುಗಡೆಗೊಳಿಸಲಾಯಿತು.
ಸದ್ಯ, ಕ್ರಿಮಿನಲ್ ನ್ಯಾಯ ವ್ಯವಸ್ಥೆಯು ತನ್ನದೇ ಆದ ತರ್ಕವೊಂದನ್ನು ಹೊಂದಿದೆ. ಆದರೆ, ಅದರಲ್ಲಿರುವ ವೈರುಧ್ಯಗಳು ನಮ್ಮ ಸಂವಿಧಾನದ ಪ್ರಜಾಸತ್ತಾತ್ಮಕ ವೌಲ್ಯಗಳಿಗೆ ಹೊಂದಿಕೆಯಾಗುವುದಿಲ್ಲ. ಹಿಂಸಾಚಾರ ಬಳಿಕದ ಪರಿಹಾರ ಮತ್ತು ಪುನರ್ವಸತಿಯದು ಇನ್ನೊಂದು ಪಕ್ಷಪಾತದ ಕತೆ. ಇದರ ಬಗ್ಗೆ ನಮ್ಮ ಸಮಾಜವು ಗಂಭೀರ ಆತ್ಮಾವಲೋಕನ ಮಾಡಿಕೊಳ್ಳುವ ಅವಶ್ಯಕತೆಯಿದೆ. ಅಲ್ಪಸಂಖ್ಯಾತರ ವಿರುದ್ಧದ ಪೂರ್ವಾಗ್ರಹಗಳು ಮತ್ತು ದ್ವೇಷ, ನ್ಯಾಯ ನೀಡಿಕೆ ವ್ಯವಸ್ಥೆಯನ್ನು ಗಂಭೀರವಾಗಿ ತಿರುಚಿದೆ.
ಅಹ್ಮದಾಬಾದ್ ಸ್ಫೋಟ ಪ್ರಕರಣದ 38 ಆರೋಪಿಗಳಿಗೆ ಮರಣ ದಂಡನೆ ಶಿಕ್ಷೆಯನ್ನು ನ್ಯಾಯಾಲಯ ಘೋಷಿಸಿದ ಬಳಿಕ, ಅದಕ್ಕೆ ಗುಜರಾತ್ ಬಿಜೆಪಿ ಪ್ರತಿಕ್ರಿಯಿಸಿದ ರೀತಿಯನ್ನು ಗಮನಿಸಬೇಕಾಗಿದೆ. ಹಲವು ಟೋಪಿಧಾರಿ ಹಾಗೂ ಗಡ್ಡಧಾರಿ ಮುಸ್ಲಿಮರನ್ನು ಗಲ್ಲಿಗೇರಿಸುವ ಚಿತ್ರವೊಂದನ್ನು ಅದು ಟ್ವೀಟ್ ಮಾಡಿತು. ಬಳಿಕ, ಈ ಟ್ವೀಟನ್ನು ಟ್ವಿಟರ್ ತೆಗೆದುಹಾಕಿತು. ಇಂಥ ಕೃತ್ಯಗಳು ಈಗಾಗಲೇ ವ್ಯಾಪಿಸಿರುವ ದ್ವೇಷವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಧರ್ಮವನ್ನು ಪರಿಗಣನೆಗೆ ತೆಗೆದುಕೊಳ್ಳದ, ಎಲ್ಲರಿಗೂ ಸಮಾನ ನ್ಯಾಯ ವ್ಯವಸ್ಥೆ ಇರುವ ನ್ಯಾಯ ಪರ ಸಮಾಜವೊಂದನ್ನು ನಾವು ನಿರೀಕ್ಷಿಸೋಣವೇ?