ಹಿಜಾಬ್: ನಾಲ್ವರು ವಿದ್ಯಾರ್ಥಿನಿಯರ ಪರ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ

Update: 2022-03-15 15:37 GMT
ಫೈಲ್‌ ಫೋಟೊ 

ಉಡುಪಿ : ಹಿಜಾಬ್ ಸಂಬಂಧ ಹೈಕೋರ್ಟ್ ತೀರ್ಪಿನ ಬಳಿಕ ಉಡುಪಿ ಹಾಗೂ ಕುಂದಾಪುರದ ತಲಾ ಇಬ್ಬರು ಸೇರಿದಂತೆ ಒಟ್ಟು ನಾಲ್ವರು ವಿದ್ಯಾರ್ಥಿನಿಯರು ಸುಪ್ರೀಂ ಕೋರ್ಟಿನಲ್ಲಿ ಸ್ಪೆಷಲ್ ಲೀವ್ ಫಿಟೀಶನ್ ಸಲ್ಲಿಸಿದ್ದಾರೆ ಎಂದು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಕಾನೂನು ಸಲಹೆಗಾರ ಹುಸೇನ್ ಕೋಡಿಬೆಂಗ್ರೆ ತಿಳಿಸಿದ್ದಾರೆ.

ಹೈಕೋರ್ಟ್ ತೀರ್ಪನ್ನು ನಾವು ಗೌರವಿಸುತ್ತೇವೆ. ಸಂವಿಧಾನದ ಮೇಲೆ ಇರುವ ನಂಬಿಕೆ ಮೇರೆಗೆ ಸುಪ್ರೀಂಕೋರ್ಟಿಗೆ ಹೋಗುತ್ತಿದ್ದೇವೆ. ವಿದ್ಯಾರ್ಥಿನಿಯರ ಈ ಕಾನೂನು ಹೋರಾಟಕ್ಕೆ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಸಹಕಾರ ನೀಡಲಿದೆ.  ಪ್ರಸಿದ್ಧ ವಕೀಲರ ಮೂಲಕ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗುತ್ತಿದೆ ಎಂದರು.

ಈ ಪಿಟಿಶನ್‌ಗೆ ಬೇಕಾದ ಎಲ್ಲ ತಯಾರಿಗಳು ಆಗಿವೆ. ನಾಳೆ ಅಥವಾ ನಾಡಿದ್ದು ಅರ್ಜಿ ಸಲ್ಲಿಕೆಯಾಗಲಿದೆ.  ಶಿರವಸ್ತ್ರ ಅಥವಾ ವೇಲ್  ಧರಿಸಿ ತರಗತಿ ಮತ್ತು ಪರೀಕ್ಷೆ ಬರೆಯಲು ಅವಕಾಶ ಕೊಡಬೇಕು. ಈ ಕಳಕಳಿಯ ಜೊತೆ ಸರ್ವೋಚ್ಚ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಲಾಗುವುದು.  ಉಡುಪಿಯಿಂದ ಇಬ್ಬರು ವಿದ್ಯಾರ್ಥಿನಿಯರ ಪರವಾಗಿ ನ್ಯಾಯವಾದಿ ಸಂಜಯ್ ಹೆಗ್ಡೆ ಹಾಗೂ ಕುಂದಾಪುರದ ಇಬ್ಬರು ವಿದ್ಯಾರ್ಥಿನಿಯರ ಪರವಾಗಿ ನ್ಯಾಯವಾದಿ ದೇವದತ್ ಕಾಮತ್ ಪ್ರತಿನಿಧಿಸಲಿದ್ದಾರೆ ಎಂದು ಅವರು ಹೇಳಿದರು.

ನಮ್ಮ ವಿದ್ಯಾರ್ಥಿಗಳ ಹಕ್ಕು ರಕ್ಷಣೆ ಆಗಿಲ್ಲ. ಸಂವಿಧಾನಾತ್ಮಕವಾಗಿ ಸುಪ್ರೀಂ ಕೋರ್ಟ್ ಹೋಗುತ್ತಿದ್ದೇವೆ. ಖಂಡಿತವಾಗಿಯೂ ಅಲ್ಲಿ ನ್ಯಾಯ ಸಿಗುತ್ತೆ ನಂಬಿಕೆ ಇದೆ. ಮುಸ್ಲಿಮ್ ಒಕ್ಕೂಟ ಸೌಹಾರ್ದ ರೀತಿಯಲ್ಲಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇವೆ ಎಂದು ಹುಸೇನ್ ಕೋಡಿಬೆಂಗ್ರೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News