ಇಪಿಎಫ್‍ನಲ್ಲಿ ವಾರ್ಷಿಕ ರೂ. 2.5 ಲಕ್ಷಕ್ಕಿಂತ ಹೆಚ್ಚಿನ ಮೊತ್ತ ಹೂಡಿಕೆ ಮೇಲೆ ತೆರಿಗೆ ವಿಧಿಸಲಿರುವ ಸರಕಾರ

Update: 2022-03-17 11:50 GMT

ಹೊಸದಿಲ್ಲಿ: ವಾರ್ಷಿಕ ರೂ 2.50 ಲಕ್ಷಕ್ಕಿಂತ ಹೆಚ್ಚು ಹಣವನ್ನು ಉದ್ಯೋಗಿಗಳ ಭವಿಷ್ಯ ನಿಧಿ - ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ (ಇಪಿಎಫ್)ನಲ್ಲಿ  ಠೇವಣಿಯಿರಿಸುವವರಿಗೆ ತೆರಿಗೆ ವಿಧಿಸಲು ಕೇಂದ್ರ ಮುಂದಡಿಯಿಟ್ಟಿದೆ. ಆದರೆ ಸರಕಾರಿ ಉದ್ಯೋಗಿಗಳಿಗೆ ಈ ಮಿತಿಯನ್ನು ರೂ 5 ಲಕ್ಷಕ್ಕೆ ಏರಿಸಲಾಗಿದೆ. ಹೊಸ ಐಟಿ ನಿಯಮಗಳ ಪ್ರಕಾರ ಈಗಿನ ಪಿಎಫ್ ಖಾತೆಗಳನ್ನು ಎಪ್ರಿಲ್ 1, 2022ರ ನಂತರ ತೆರಿಗೆ ವಿಧಿಸುವ ಹಾಗೂ ತೆರಿಗೆ ವಿಧಿಸಲಾಗದ ಠೇವಣಿ ಮೊತ್ತ ಎಂದು ಬೇರ್ಪಡಿಸಲಾಗುವುದು.

ಈ ಹೊಸ ನಿಯಮದ ಪ್ರಕಾರ ಸರಕಾರಿ ಉದ್ಯೋಗಿಗಳಲ್ಲದವರು ರೂ 5 ಲಕ್ಷವನ್ನು ತಮ್ಮ ಪಿಎಫ್ ಖಾತೆಯಲ್ಲಿ ಜಮೆ ಮಾಡಿದರೆ ರೂ 2.50 ಲಕ್ಷದ ಮೇಲೆ ತೆರಿಗೆ ವಿಧಿಸಲಾಗುವುದು ಹಾಗೂ ಸರಕಾರಿ ಉದ್ಯೋಗಿಯೊಬ್ಬರು ರೂ 6 ಲಕ್ಷ ಜಮೆ ಮಾಡಿದರೆ ಅದರಲ್ಲಿ ರೂ 1 ಲಕ್ಷದ ಮೇಲೆ ಮಾತ್ರ ತೆರಿಗೆ ವಿಧಿಸಲಾಗುವುದು.

ಈ ಕ್ರಮದ ಮೂಲಕ ಹೆಚ್ಚು ಆದಾಯ ಗಳಿಸುವವರು ಸರಕಾರದ ಯೋಜನೆಗಳಿಂದ ಹೆಚ್ಚು ಲಾಭ ಪಡೆಯದಂತೆ ನೋಡುವ ಉದ್ದೇಶ ಸರಕಾರಕ್ಕಿದೆ.

ಈ ಹೊಸ ನಿಯಮಕ್ಕಾಗಿ ಐಟಿ ನಿಯಮಗಳು, 1962ರಲ್ಲಿ ಒಂದು ಹೊಸ ಸೆಕ್ಷನ್ 9ಡಿ  ಸೇರಿಸಲಾಗಿದೆ ಎಂದು ಕೇಂದ್ರ ನೇರ ತೆರಿಗೆಗಳ ಮಂಡಳಿ ಹೊರಡಿಸಿದ ಅಧಿಸೂಚನೆ ತಿಳಿಸುತ್ತದೆ.

ಆದರೆ ಮಾರ್ಚ್ 31, 2021ರ ತನಕ ಇಪಿಎಫ್‍ನಲ್ಲಿ ಹೂಡಲಾದ ಮೊತ್ತಗಳನ್ನು ತೆರಿಗೆ ವಿಧಿಸಲಾಗದ ಮೊತ್ತಗಳೆಂದು ಪರಿಗಣಿಸಲಾಗುವುದು ಎಂದು ಮಂಡಳಿ ಹೇಳಿದೆ. ಈಗಿನ ವಿತ್ತ ವರ್ಷ ಎಪ್ರಿಲ್ 1, 2021ರಿಂದ ಮಾರ್ಚ್ 31, 2022ರ ಅವಧಿಯಲ್ಲಿ ಹೂಡಲಾದ ರೂ 2.5 ಲಕ್ಷ ಮೇಲಿನ ಮೊತ್ತದ ಮೇಲೆ ತೆರಿಗೆ ಬೀಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News