ಕಾಂಗ್ರೆಸ್ ನಾಯಕತ್ವ ಬದಲಾವಣೆಯ ಚರ್ಚೆ ಒಂದು ವಿಶ್ಲೇಷಣೆ
ಭಾರತದ ಇತಿಹಾಸದಲ್ಲಿ ಸಾಮಾಜಿಕ ನ್ಯಾಯವನ್ನು ವಿಸ್ತಾರವಾದ ಮಟ್ಟದಲ್ಲಿ ಸಾಧಿಸಲು ಕಾರಣವೇ ಕಾಂಗ್ರೆಸ್ ಪಕ್ಷ ಎಂಬ ಕಾರಣಕ್ಕೆ ನಮ್ಮೆಳಗೆ ಫ್ಯೂಡಲ್ ಮತ್ತು ಜಾತಿ ಶ್ರೇಷ್ಠವಾದಿ ಹೀನ ಮನಸ್ಸುಗಳು ಕಾಂಗ್ರೆಸ್ ಪಕ್ಷವನ್ನು ಕುಗ್ಗಿಸುವುದಕ್ಕೆ ಹಗಲಿರುಳೂ ಶ್ರಮಿಸುತ್ತಿದೆ ಎಂಬ ಸಂಗತಿಯು ಕಾಂಗ್ರೆಸ್ ನಾಯಕತ್ವವನ್ನು ಟೀಕಿಸುತ್ತಿರುವ ಎಲ್ಲರೂ ಗಂಭೀರವಾಗಿ ಅರಿಯಬೇಕು.
ಪಂಚರಾಜ್ಯಗಳ ಚುನಾವಣೆಯ ನಂತರದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿಯ ಹಿರಿಯ ಸದಸ್ಯರು ಕಾಂಗ್ರೆಸ್ ನಾಯಕತ್ವವು ಬದಲಾಗಬೇಕೆಂಬ ಕೂಗನ್ನು ಮುನ್ನೆಲೆಗೆ ತಂದಿರುವುದು ಹಾಸ್ಯಾಸ್ಪದವಾದ ಮತ್ತು ಬೇಸರದ ಸಂಗತಿಯಾಗಿದೆ. ಈ ನಡವಳಿಕೆಗಳು ಚುನಾವಣೆಗಳಿಗೂ ಮುನ್ನ ನಾವು ತೋರಬೇಕಾದ ಜವಾಬ್ದಾರಿಯನ್ನು ಮರೆತು ಚುನಾವಣೆಯ ನಂತರ ತೋರುವ ಬೇಜವಾಬ್ದಾರಿತನದ ಸಂಕೇತವಾಗಿದೆ.
ಸಂಕಷ್ಟದ ಸಂದರ್ಭದಲ್ಲಿ ಧೃತಿಗೆಡದೆ ಹೋರಾಟ ಮಾಡುವುದು ಕಾಂಗ್ರೆಸ್ ಪಕ್ಷದ ಹುಟ್ಟು ಗುಣ. ಬ್ರಿಟಿಷರ ಸ್ವಾತಂತ್ರ್ಯ ಹೋರಾಟದ ಸಂದರ್ಭದಿಂದ ಹಿಡಿದು ದೇಶದ ಹಿತಕ್ಕೆ ಸಂಬಂಧಿಸಿದ ಬಹಳಷ್ಟು ಸಂದರ್ಭಗಳಲ್ಲಿ ಈ ಸಂಗತಿಯು ಸಾಬೀತಾಗಿದೆ. ಸಂವಿಧಾನ ರಚನಾ ಸಭೆಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಪಾತ್ರ ದೊಡ್ಡದು ಎಂಬ ಸಂಗತಿ ಇತಿಹಾಸವನ್ನು ಅಧ್ಯಯನ ಮಾಡಿದ ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ.
ಭಾರತದ ಇತಿಹಾಸದಲ್ಲಿ ಸಾಮಾಜಿಕ ನ್ಯಾಯವನ್ನು ವಿಸ್ತಾರವಾದ ಮಟ್ಟದಲ್ಲಿ ಸಾಧಿಸಲು ಕಾರಣವೇ ಕಾಂಗ್ರೆಸ್ ಪಕ್ಷ ಎಂಬ ಕಾರಣಕ್ಕೇ ನಮ್ಮೆಳಗೆ ಫ್ಯೂಡಲ್ ಮತ್ತು ಜಾತಿ ಶ್ರೇಷ್ಠವಾದಿ ಹೀನ ಮನಸ್ಸುಗಳು ಕಾಂಗ್ರೆಸ್ ಪಕ್ಷವನ್ನು ಕುಗ್ಗಿಸುವುದಕ್ಕೆ ಹಗಲಿರುಳೂ ಶ್ರಮಿಸುತ್ತಿದೆ ಎಂಬ ಸಂಗತಿಯು ಕಾಂಗ್ರೆಸ್ ನಾಯಕತ್ವವನ್ನು ಟೀಕಿಸುತ್ತಿರುವ ಎಲ್ಲರೂ ಗಂಭೀರವಾಗಿ ಅರಿಯಬೇಕು.
ಎಲ್ಲದಕ್ಕಿಂತ ಮುಖ್ಯವಾಗಿ ತನ್ನದಲ್ಲದ ದೇಶದ ಪ್ರಜೆಯನ್ನು ಮದುವೆಯಾಗಿ ಇಲ್ಲಿಗೆ ಬಂದ ನಂತರ ತನ್ನ ಕುಟುಂಬದ ಸದಸ್ಯರ ಅದರಲ್ಲೂ ತನ್ನ ಪತಿಯ ಹತ್ಯೆಯನ್ನು ಕಂಡ ಮೇಲೂ ಈ ದೇಶದ ಬಗ್ಗೆ ಕಿಂಚಿತ್ ಅಸಹ್ಯಪಟ್ಟುಕೊಳ್ಳದೆ ಭಾರತದ ಜನರ ಬದುಕಿಗಾಗಿ ಯೋಜನೆಗಳನ್ನು ರೂಪಿಸಲು ಇಂದಿಗೂ ಯೋಚಿಸುವಂತಹ ಸೋನಿಯಾ ಗಾಂಧಿಯವರು ಭಾರತದ ಗೌರವಯುತ ಪ್ರಜೆ ಎಂದು ಯಾವುದೇ ಅನುಮಾನವಿಲ್ಲದೇ ಹೇಳಬಹುದು.
ಅಷ್ಟಕ್ಕೂ ರಾಜೀವ್ ಗಾಂಧಿಯವರ ಮರಣಾನಂತರ ಸಂಕಟದಲ್ಲಿದ್ದ ಸೋನಿಯಾ ಗಾಂಧಿಯವರ ಬಳಿ ತೆರಳಿದ ಕಾಂಗ್ರೆಸ್ ಪಕ್ಷದ ನಾಯಕರು ಪಕ್ಷದ ನಾಯಕತ್ವವನ್ನು ವಹಿಸಿಕೊಳ್ಳುವಂತೆ ಮನವೊಲಿಸುವಲ್ಲಿ ಯಶಸ್ವಿಯಾದರು. ಪಕ್ಷದ ನಾಯಕತ್ವವನ್ನು ವಹಿಸಿಕೊಂಡ ಸೋನಿಯಾ ಗಾಂಧಿ ಸತತವಾಗಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಏರುವಂತಹ ಪ್ರಾಮಾಣಿಕ ಪ್ರಯತ್ನ ಮಾಡಿದರು. ಈ ಹಂತದಲ್ಲಿ ತನಗೇ ಪ್ರಧಾನಿಯಾಗುವ ನಿರಾಯಾಸ ಅವಕಾಶ ದೊರೆತಾಗಲೂ ಕೂಡಾ ಅಧಿಕಾರದ ಗದ್ದುಗೆಗೆ ಆಸೆ ಪಡದೆ ಜಗತ್ತಿಗೇ ಅರ್ಥಶಾಸ್ತ್ರದ ಪಾಠಗಳನ್ನು ಹೇಳಿಕೊಡಬಲ್ಲ ಮಹಾನ್ ಅರ್ಥಶಾಸ್ತ್ರಜ್ಞ ಡಾ.ಮನಮೋಹನ್ ಸಿಂಗ್ ಅವರನ್ನೇ ಪ್ರಧಾನಿಯನ್ನಾಗಿಸಿ ದೇಶವು ಆರ್ಥಿಕತೆಯಲ್ಲಿ ಉತ್ತುಂಗ ಸ್ಥಾನಕ್ಕೆ ಏರಲು ಪರೋಕ್ಷ ಕಾರಣಕರ್ತರು ಶ್ರೀಮತಿ ಸೋನಿಯಾ ಗಾಂಧಿಯವರು. ಇಂತಹ ವ್ಯಕ್ತಿಯ ದೇಶ ಕಟ್ಟುವ ಸಾಮರ್ಥ್ಯವನ್ನು ಪರಿಗಣಿಸದೆ ನಾಯಕತ್ವದ ಬದಲಾವಣೆಯ ಮಾತಿಗೆ ಇಳಿದಿರುವುದು ಅರ್ಥವಿಲ್ಲದ ಸಂಗತಿಗಳಲ್ಲಿ ಒಂದು.
ಇನ್ನು ದೇಶದ ಜನರು ಬಿಜೆಪಿಯ ಕೇಂದ್ರ ಮತ್ತು ರಾಜ್ಯ ಸರಕಾರಗಳ ದುರಾಡಳಿತದಿಂದ ಬೇಸತ್ತಿರುವ ಸಂದರ್ಭದಲ್ಲಿ ಆಂತರಿಕ ಭಿನ್ನಮತವನ್ನು ದೇಶದ ಮಟ್ಟದಲ್ಲಿ ತಿಳಿಯುವಂತೆ ವರ್ತಿಸುವುದು ತಪ್ಪು. ದೇಶದ ಜನರಿಗೆ ಸಹಾಯ ಮಾಡಬೇಕಿದ್ದ ಬಿಜೆಪಿಗರು ಪ್ರಚಾರ ಮತ್ತು ಅಪಪ್ರಚಾರದಲ್ಲಿಯೇ ತಮ್ಮ ಜೀವನವನ್ನು ಕಳೆಯುತ್ತಿದ್ದಾರೆ.
ನಾನು ನೇರವಾಗಿ ಕಂಡು ಕೇಳಿದಂತಹ ಓರ್ವ ಪ್ರಾಮಾಣಿಕ ಜನಪರ ದನಿಯಾದ ರಾಹುಲ್ ಗಾಂಧಿಯವರ ಘನತೆ ಮತ್ತು ಅವರ ಜ್ಞಾನದ ಮಟ್ಟವನ್ನು ಮರೆ ಮಾಚಲು ಬಿಜೆಪಿಗರು ನಿತ್ಯವೂ ಖರ್ಚು ಮಾಡುವ ಹಣ ಅದೆಷ್ಟೋ ಕೋಟಿಗಳನ್ನೇ ದಾಟಿದೆ. ಬಹುಶಃ ವ್ಯಕ್ತಿಯ ಚಾರಿತ್ರ್ಯ ಹರಣ ಮಾಡಲು ರಾಜಕೀಯ ಪಕ್ಷವೊಂದು ಮೂರೂ ಬಿಟ್ಟು ನಿಂತಿದ್ದು ಇದೇ ಮೊದಲು ಎನಿಸುತ್ತದೆ.
‘‘ಸೈದ್ದಾಂತಿಕವಾಗಿ ರಾಜಿ ಮಾಡಿಕೊಂಡು ಸಾರ್ವಜನಿಕ ಜೀವನದಲ್ಲಿ ಇರುವುದು ಸರಿಯಲ್ಲ, ಹಾಗಿರುವುದಕ್ಕಿಂತ ಯಾರಿಗೂ ತೊಂದರೆ ಕೊಡದೆ ಸುಮ್ಮನಿರುವುದೇ ಮೇಲು’’ ಎಂಬ ರಾಹುಲ್ ಗಾಂಧಿಯವರ ಗಟ್ಟಿಯಾದ ನಿಲುವೇ ನಮಗೆ ಇಲ್ಲವಾದರೆ ಅಲ್ಲಿ ನಾಯಕತ್ವ ಬದಲಾವಣೆ ಆದರೇನು, ಏನಾದರೇನು? ಅದರ ಫಲಿತಾಂಶ ಮಾತ್ರ ಒಂದೇ ಆಗಿರುತ್ತದೆ.
ಇನ್ನು ಕಳೆದೆರಡು ವರ್ಷಗಳ ಹಿಂದೆ ಗುಜರಾತ್, ಮಧ್ಯ ಪ್ರದೇಶ, ರಾಜಸ್ಥಾನ, ಛತ್ತೀಸ್‌ಗಡ ಮತ್ತು ಜಾರ್ಖಂಡ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಅಭೂತಪೂರ್ವವಾದ ಜನ ಮನ್ನಣೆಯನ್ನು ಪಡೆದಿತ್ತು. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ ಗಡದಲ್ಲಿ ಬಹುಮತದ ಸರಕಾರ ರಚಿಸಿದರೆ, ಗುಜರಾತ್‌ನಲ್ಲಿ ಬಹುತೇಕ ಬಹುಮತಕ್ಕೆ ಸಮೀಪ ಬಂದು ನಿಂತಿತ್ತು. ಇನ್ನು ಜಾರ್ಖಂಡ್‌ನಲ್ಲಿ ಹೇಮಂತ್ ಸೊರೈನ್ ಅವರೊಂದಿಗೆ ಸಮ್ಮಿಶ್ರ ಸರಕಾರ ನಡೆಸುತ್ತಿರುವ ಕಾಂಗ್ರೆಸ್ ಮಹಾರಾಷ್ಟ್ರದಲ್ಲೂ ಸಮ್ಮಿಶ್ರ ಸರಕಾರದ ಭಾಗವಾಗಿದೆ. ಈ ಸಂದರ್ಭದಲ್ಲಿ ರಾಹುಲ್ ಗಾಂಧಿಯವರೇ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದರು. ಇನ್ನು ಕುದುರೆ ವ್ಯಾಪಾರ ಮತ್ತು ಪ್ರಜಾಪ್ರಭುತ್ವ ವಿರೋಧಿ ನೀತಿಗಳಿಂದಾಗಿ ಮಧ್ಯ ಪ್ರದೇಶದ ಸರಕಾರವನ್ನು ಕೆಡವಿದ ಬಿಜೆಪಿಗರು, ರಾಜಸ್ಥಾನದಲ್ಲೂ ತಮ್ಮ ಈ ಕೆಟ್ಟ ಪ್ರಯತ್ನವನ್ನು ಮುಂದುವರಿಸಿದ್ದರು. ಬಹುಶಃ ನಮ್ಮ ಆಕ್ರೋಶ ಮತ್ತು ಹೋರಾಟವು ಇಂತಹ ಸಂವಿಧಾನ ವಿರೋಧಿ ನಡವಳಿಕೆಗಳ ವಿರುದ್ಧ ನಿರಂತರವಾಗಿ ಇರಬೇಕೇ ವಿನಃ ತಾತ್ಕಾಲಿಕ ಸೋಲು ಮತ್ತು ಹಿನ್ನಡೆಗಳಿಗೆ ನಮ್ಮನ್ನೇ ನಾವು ಅಣಕಿಸಿಕೊಳ್ಳುವಂತೆ ಇರಬಾರದು ಎಂಬ ಸಂಗತಿಯನ್ನು ಇದೀಗ ನಾಯಕತ್ವ ಬದಲಾವಣೆಯ ವಿಷಯವನ್ನು ಮುಂದಿಡುತ್ತಿರುವ ಮಹನೀಯರು ಮರೆಯಬಾರದು ಎಂದು ವಿನಂತಿಸಿಕೊಳ್ಳುತ್ತೇನೆ. ಪಂಚರಾಜ್ಯಗಳಲ್ಲಿ ಹಿನ್ನಡೆಯಾದಾಕ್ಷಣ ಸೋನಿಯಾ ಗಾಂಧಿಯವರ ಕಡೆಗೆ ಬೊಟ್ಟು ಮಾಡುವ ವೇಳೆ ಪಕ್ಷವನ್ನು ಸಂಘಟನಾತ್ಮಕವಾಗಿ, ಸೈದ್ಧಾಂತಿಕವಾಗಿ ದೃಢಗೊಳಿಸದೆ ಪಕ್ಷದ ವೈಫಲ್ಯಕ್ಕೆ ಕಾರಣವಾದ ನಮ್ಮೆಡೆಗೂ ಕೂಡಾ ಉಳಿದ ನಾಲ್ಕು ಬೆರಳುಗಳು ಇರುತ್ತವೆ ಎಂಬ ಸಂಗತಿಯೂ ಹಿರಿಯ ನಾಯಕರ ಗಮನದಲ್ಲಿರಲಿ.
ಇನ್ನು ಈ ದಿನ ಜನರ ಬದುಕಿಗಾಗಿ ಆಡಳಿತ ಮಾಡಬೇಕಾದ ಬಿಜೆಪಿ ಪಕ್ಷದ ಕೇಂದ್ರ, ರಾಜ್ಯ ಮತ್ತು ಯಾವುದೇ ಹಂತದ ಸರಕಾರಗಳು ಆಡಳಿತವನ್ನೇ ಮಾಡುತ್ತಿಲ್ಲ. ಈ ಕೂಟವು ಕೇವಲ ಈ ದೇಶದ ಕಾರ್ಪೊರೇಟ್ ವಲಯದ ಮತ್ತು ಆರೆಸ್ಸೆಸ್‌ನಂತಹ ಸಮಾಜ ದ್ರೋಹಿ ಸಂಘಟನೆಗಳ ತೊಗಲುಗೊಂಬೆಗಳಾಗಿ ಕಾರ್ಯ ನಿರ್ವಹಿಸುತ್ತಿದ್ದು ತಮ್ಮ ಜವಾಬ್ದಾರಿ ಚುನಾವಣೆಯನ್ನು ನಡೆಸುವುದು ಮಾತ್ರವೇ ಎಂಬಂತೆ ಸರ್ವಾಧಿಕಾರದಿಂದ ವರ್ತಿಸುತ್ತಿದೆ. ಚುನಾವಣೆಯಲ್ಲಿ ಗೆಲ್ಲುವುದಕ್ಕೆ ನೇರವಾಗಿ ಐಟಿ ಮತ್ತು ಇಡಿ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಇವರು, ಮಾಧ್ಯಮಗಳನ್ನೇ ಬಹುತೇಕ ತಮ್ಮ ತೆಕ್ಕೆಗೆ ತೆಗೆದುಕೊಂಡು ಜನರ ಮುಂದೆ ದಿನವೂ ಸುಳ್ಳುಗಳು ಮತ್ತು ಅಪಪ್ರಚಾರವನ್ನು ನಡೆಸುತ್ತಿದ್ದಾರೆ. ಸಾಲದು ಎಂಬಂತೆ ಸಾಮಾಜಿಕ ಜಾಲತಾಣಗಳ ಮೇಲೆಯೂ ತಮ್ಮ ನಿಯಂತ್ರಣವನ್ನು ಸಾಧಿಸುತ್ತಿರುವ ಇವರು, ಸಾರ್ವಜನಿಕ ವ್ಯವಸ್ಥೆಯನ್ನು, ಚುನಾವಣಾ ಆಯೋಗ ಮತ್ತು ನ್ಯಾಯಾಂಗವನ್ನು ಇನ್ನಿಲ್ಲದಂತೆ ದುರುಪಯೋಗಪಡಿಸಿಕೊಂಡು ತಮಗೆ ಇಲ್ಲದ ಜನಾಭಿಪ್ರಾಯವನ್ನು ತಾತ್ಕಾಲಿಕವಾಗಿ ಸೃಷ್ಟಿಸಲು ಎಲ್ಲಾ ರೀತಿಯ ಕೀಳು ಮಟ್ಟಕ್ಕೆ ಇಳಿದಿದ್ದಾರೆ. ಇನ್ನು ವಿಶ್ವ ವಿದ್ಯಾನಿಲಯಗಳಲ್ಲಿ ಶಿಕ್ಷಣ ಪಡೆಯಬೇಕಾದ ಯುವಕರನ್ನು ಸುಳ್ಳು, ದ್ವೇಷ ಹರಡಲು ಮತ್ತು ಸಮಾಜದ ಸಾಮರಸ್ಯವನ್ನು ಹಾಳು ಮಾಡುವಂತಹ ವಾಟ್ಸ್‌ಆ್ಯಪ್ ವಿಶ್ವವಿದ್ಯಾನಿಲಯಗಳಲ್ಲಿ ಮುಳುಗಿಸಿರುವ ಇವರು ಮಕ್ಕಳ ಭವಿಷ್ಯದೊಡನೆ ದೇಶದ ಭವಿಷ್ಯವನ್ನೂ ನಾಶ ಮಾಡುವ ನಿಟ್ಟಿನಲ್ಲಿ ಎಡೆ ಬಿಡದೆ ಕೆಲಸ ಮಾಡುತ್ತಿದ್ದಾರೆ.
ಹೀಗಿರುವಾಗ ನಮ್ಮ ಸಿಟ್ಟು ಮತ್ತು ಅಸಮಾಧಾನಗಳು ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರ ಮೇಲಿರುತ್ತದೆ ಎಂದರೆ ಅದು ಪ್ರಬುದ್ಧತೆ ಎನಿಸಿಕೊಳ್ಳುತ್ತದೆಯೇ? ಒಂದು ವೇಳೆ ಈ ದೇಶದಲ್ಲಿ ಸುದೀರ್ಘ ಅವಧಿಯವರೆಗೆ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷವೇನಾದರೂ ಬಿಜೆಪಿಗರಂತೆ ಸಾರ್ವಜನಿಕ ವ್ಯವಸ್ಥೆಯನ್ನು, ತನಿಖಾ ಸಂಸ್ಥೆಗಳನ್ನು, ಮಾಧ್ಯಮಗಳನ್ನು, ಚುನಾವಣಾ ಸಂಸ್ಥೆ ಮತ್ತು ನ್ಯಾಯಾಂಗವನ್ನೂ ಈ ಮಟ್ಟಕ್ಕೆ ದುರುಪಯೋಗ ಪಡಿಸಿಕೊಂಡಿದ್ದರೆ, ಇನ್ನೂ ಶತಮಾನಗಳ ಕಾಲ ಬಿಜೆಪಿಯನ್ನು ಭಾರತದ ಭೂಪಟದಲ್ಲಿ ಎಲ್ಲಿದೆ ಎಂದು ಹುಡುಕಬೇಕಿತ್ತು.
ಪರಿಸ್ಥಿತಿ ಇಷ್ಟೊಂದು ಅಪಾಯಕಾರಿ ಆಗಿರುವಾಗ ಈ ದೇಶದ ಹಿತಕ್ಕೆ ಮತ್ತು ಸಂವಿಧಾನಕ್ಕೆ ವಿರುದ್ಧವಾಗಿರುವ ಕೋಮು ಶಕ್ತಿಗಳ ವಿರುದ್ಧ ಐಕ್ಯತೆಯಿಂದ ಕೆಲಸ ಮಾಡಬೇಕಾದ ಕಡೆ, ಹೊಣೆಗಾರಿಕೆಯನ್ನು ನುಣುಚಿಕೊಂಡು ಮಾತನಾಡಿದರೆ ಅದು ನಾಯಕತ್ವವನ್ನು ಪ್ರಶ್ನೆ ಮಾಡುತ್ತಿರುವ ಜನರು ತಮ್ಮ ದೇಶ ಕಟ್ಟುವ ಸಾಮರ್ಥ್ಯವನ್ನು ತಾವೇ ಅನುಮಾನಿಸಿಕೊಂಡಂತೆ ಎಂದು ನನಗೆ ಅನಿಸುತ್ತದೆ. ಈ ನಿಟ್ಟಿನಲ್ಲಿ ಕೊನೆಯದಾಗಿ ಹೇಳುವುದಾದರೆ ಜನರ ಸಂಘಟನೆ ಮಾಡದೆ, ಅವರ ಪ್ರಾಮಾಣಿಕ ದನಿಯಾಗದೆ ಅವರೊಂದಿಗೆ ಒಡನಾಡದೆ ಇರುವ ಯಾರಿಗೂ ಸಾರ್ವಜನಿಕ ಜೀವನದಲ್ಲಿ ಭವಿಷ್ಯ ಇರುವುದಿಲ್ಲ. ಅದನ್ನು ಕಾಂಗ್ರೆಸ್ ಪಕ್ಷದ ನಾಯಕತ್ವವನ್ನು ಪ್ರಶ್ನಿಸುವವರು ಮತ್ತು ಈ ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನದಲ್ಲಿ ನಂಬಿಕೆಯಿಟ್ಟಿರುವ ಎಲ್ಲಾ ಮನಸ್ಸುಗಳೂ ಕೂಡಾ ಜವಾಬ್ದಾರಿಯಿಂದ ಅರ್ಥ ಮಾಡಿಕೊಳ್ಳಬೇಕು.
ಚುನಾವಣಾ ಸೋಲು ಗೆಲುವು ತಾತ್ಕಾಲಿಕ ಜನರ ಬದುಕಿನ ಹಿತ ಮತ್ತು ಸಾಮಾಜಿಕ ನ್ಯಾಯದ ಬದ್ಧತೆಯೇ ಅಂತಿಮ.