'ಕಾಶ್ಮೀರ್ ಫೈಲ್ಸ್': ಸಂಘಿ ಅಜೆಂಡಾಗಳ ಸುಳ್ಳು ಸಿನೆಮಾ
ಭಾಗ-2
ಆ ಮಿಲಿಟೆಂಟ್ ಹೋರಾಟಕ್ಕೆ ಪ್ರಾರಂಭದಲ್ಲಿ ಪಾಕಿಸ್ತಾನದ ಬೆಂಬಲವೇನೂ ಸಿಕ್ಕಿರಲಿಲ್ಲ. ಏಕೆಂದರೆ ಆ ಕಾಲಘಟ್ಟದ ಮಿಲಿಟೆಂಟ್ ಹೋರಾಟದ ನಾಯಕತ್ವ ವಹಿಸಿದ್ದ ಜೆಕೆಎಲ್‌ಫ್‌ನ ಧ್ಯೇಯ ಪಾಕಿಸ್ತಾನ ಹಾಗೂ ಭಾರತ ಎರಡೂ ದೇಶಗಳಲ್ಲಿ ಪಾಲಾಗಿರುವ ತಮ್ಮ ಕಾಶ್ಮೀರವನ್ನು ಒಟ್ಟುಗೂಡಿಸಿ ಭಾರತ-ಪಾಕಿಸ್ತಾನ ಎರಡರ ಹಂಗೂ ಇರದ ಸ್ವತಂತ್ರ-ಪ್ರಜಾತಾಂತ್ರಿಕ ಆಝಾದ್ ಕಾಶ್ಮೀರವನ್ನು ಸ್ಥಾಪಿಸುವುದಾಗಿತ್ತು. ಅದು ಪಾಕಿಸ್ತಾನಕ್ಕೂ ಪಥ್ಯವಿರಲಿಲ್ಲ. ಅಷ್ಟು ಮಾತ್ರವಲ್ಲ. ಪ್ರಾರಂಭದ ಈ ಮಿಲಿಟೆಂಟ್ ಹೋರಾಟದಲ್ಲಿ ದೊಡ್ಡ ಮಟ್ಟದಲ್ಲಿ ಕಾಶ್ಮೀರಿ ಪಂಡಿತ ಯುವಕರು ಒಂದೋ ನೇರವಾಗಿ ಭಾಗವಹಿಸಿದ್ದರು. ಅಥವಾ ಪರೋಕ್ಷವಾಗಿ ಬೆಂಬಲಿಸಿದ್ದರು. ಧಾರ್ಮಿಕ ದಾಳಿಗಳೋ? ರಾಜಕೀಯ ದಾಳಿಗಳೋ?
ಇದು ಮಿಲಿಟೆಂಟ್‌ಗಳು ಪ್ರಾರಂಭದಲ್ಲಿ ದಾಳಿಗೆ ಗುರಿ ಮಾಡಿದವರ ಪಟ್ಟಿಯನ್ನು ನೋಡಿದರೂ ತಿಳಿದೀತು. 1989-91ರ ಅವಧಿಯಲ್ಲಿ ಮಿಲಿಟೆಂಟ್‌ಗಳು ನಡೆಸಿದ ಬಹುಪಾಲು ದಾಳಿಗಳಿಗೆ ಗುರಿಯಾದವರು ಸರಕಾರದ ಭಾಗವಾಗಿದ್ದ ಮುಸ್ಲಿಮ್ ಅಧಿಕಾರಿಗಳು ಹಾಗೂ ದಿಲ್ಲಿ ಸರಕಾರದ ಬಗ್ಗೆ ಮೃದು ಧೋರಣೆ ಹೊಂದಿದ್ದ ರಾಜಕೀಯ ಪಕ್ಷಗಳ ಮುಸ್ಲಿಮ್ ಪ್ರತಿನಿಧಿಗಳೇ ಆಗಿದ್ದಾರೆ. ಈ ಮಧ್ಯೆ ಆಗ ಭಾರತದ ಗೃಹಮಂತ್ರಿಯಾಗಿದ್ದ ಮುಫ್ತಿ ಮುಹಮ್ಮದ್ ಸಯೀದ್ ಅವರ ಮಗಳನ್ನು ಅಪಹರಣ ಮಾಡಿದ ಮಿಲಿಟೆಂಟ್‌ಗಳು ಬದಲಿಗೆ ಕೇಂದ್ರ ಸರಕಾರದ ವಶದಲ್ಲಿದ್ದ ತಮ್ಮ ಸಹಚರರನ್ನು ಬಿಡುಗಡೆ ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ. ಇದು ಕಾಶ್ಮೀರಕ್ಕೆ ಸ್ವಾತಂತ್ರ್ಯ ಸದ್ಯದಲ್ಲೇ ಸಿಗಲಿದೆ ಎಂಬ ಉತ್ಪ್ರೇಕ್ಷಿತ ಪ್ರಚಾರಕ್ಕೂ ಕಾರಣವಾಗುತ್ತದೆ. ಇದೇ ಸಂದರ್ಭದಲ್ಲಿ ಪಾಕಿಸ್ತಾನ ತನ್ನ ಬೆಂಬಲಿಗ ಮಿಲಿಟೆಂಟ್ ಸಂಘಟನೆಗಳಿಗೂ ಪರೋಕ್ಷ ಕುಮ್ಮಕ್ಕು ಕೊಡಲು ಪ್ರಾರಂಭಿಸಿರುತ್ತದೆ. ಹೀಗಾಗಿ ಈ ಮಧ್ಯೆ ಸೆಕ್ಯುಲರ್ ಸ್ವರೂಪ ಹೊಂದಿದ್ದ ಕಾಶ್ಮೀರಿ ಮಿಲಿಟೆಂಟ್‌ಗಳ ಶಿಬಿರದಿಂದ ಪಾಕಿಸ್ತಾನ ಪರವಾದ ಮತ್ತು ಹಿಂದೂ ವಿರೋಧಿ ಘೋಷಣೆಗಳು ಅಲ್ಲಲ್ಲಿ ನಿಧಾನವಾಗಿ ಕೇಳಿಬರಲು ಪ್ರಾರಂಭವಾಗಿರುತ್ತದೆ. ಇದರ ಜೊತೆಗೆ ದಿಲ್ಲಿ ಪ್ರತಿನಿಧಿಗಳಾಗಿದ್ದ ಮತ್ತು ಸರಕಾರಿ ಅಧಿಕಾರಿಗಳಾಗಿದ್ದವರನ್ನು ಕೊಲ್ಲುವ ಭಾಗವಾಗಿ ಜೆಕೆಎಲ್‌ಎಫ್ ಅಧ್ಯಕ್ಷನಿಗೆ ಮರಣದಂಡನೆ ವಿಧಿಸಿದ್ದ ನೀಲಕಾಂತ ಗಂಜೂ ಎಂಬ ನಿವೃತ್ತ ನ್ಯಾಯಾಧೀಶ, ಟೀಕಾಲಾಲ್ ಟಪ್ಲೂ ಎಂಬ ಬಿಜೆಪಿ ಉಪಾಧ್ಯಕ್ಷ, ವಕೀಲ ಪ್ರೇಮ್‌ನಾಥ್ ಭಟ್ ಹಾಗೂ ಕೊಲ್ಲಲ್ಪಟ್ಟ ವಾಯುಪಡೆಯ ಅಧಿಕಾರಿಗಳಲ್ಲಿ ಹಿಂದೂಗಳೂ ಇದ್ದದ್ದು ಕಾಶ್ಮೀರಿ ಪಂಡಿತ ವಲಯದಲ್ಲಿ ಸಹಜ ಆತಂಕವನ್ನು ಹುಟ್ಟುಹಾಕಿತ್ತು. ಕೆಲವು ಕಡೆ ಅಲ್ಲಲ್ಲಿ ಪಂಡಿತರ ಮನೆಯ ಮೇಲೆ ದಾಳಿ ನಡೆದದ್ದು ಹೌದಾದರೂ ಒಟ್ಟಾರೆಯಾಗಿ ಇಡೀ ಪಂಡಿತ ಸಮುದಾಯದ ಮೇಲೆ ಕಾಶ್ಮೀರಿ ಮುಸ್ಲಿಮರ ಅಥವಾ ಮಿಲಿಟೆಂಟ್‌ಗಳ ದಾಳಿ 'ಕಾಶ್ಮೀರ್ ಫೈಲ್ಸ್' ಸಿನೆಮಾದಲ್ಲಿ ತೋರಿಸಿರುವಂತೆ ಜಿನೋಸೈಡ್ ನಡೆದಿರಲಿಲ್ಲ.
ಈ ಘಟನೆಗಳನ್ನು ಕೂಡಾ ಪುನರಾವರ್ತನೆಯಾಗದಂತೆ ಸರಕಾರ ತಡೆಯಬಹುದಿತ್ತು ಹಾಗೂ ಪಂಡಿತರಿಗೆ ರಕ್ಷಣೆ ಕೊಟ್ಟು ಉಳಿಸಿಕೊಳ್ಳ ಬಹುದಿತ್ತು. ಆದರೆ ಸರಕಾರದ ಉದ್ದೇಶವೇ ಅದಾಗಿರಲಿಲ್ಲ. ಸರಕಾರ ಕಾಶ್ಮೀರದ ಸಮಸ್ಯೆಯನ್ನು ಹಿಂದೂ-ಮುಸ್ಲಿಮ್ ಮಾಡಿ ಕೋಮುವಾದೀಕರಿಸಲು ತೀರ್ಮಾನಿಸಿತ್ತು. ಕಾಶ್ಮೀರಿ ಸಮಸ್ಯೆಯ ಕೋಮುವಾದೀಕರಣದ ರೂವಾರಿ ರಾಜ್ಯಪಾಲ ಜಗಮೋಹನ್ ಆಗಿದ್ದರು. ವಿಚಿತ್ರವೆಂದರೆ ಆ ಪಾತ್ರವೇ ಸಿನೆಮಾದಲ್ಲಿ ಮಾಯವಾಗಿದೆ. ಜಗಮೋಹನ್ ಎಂಬ ಹಿಂದೂ ರಾಜ್ಯಪಾಲ ಮತ್ತು ಕಾಶ್ಮೀರಿ ಸಮಸ್ಯೆಯ ಕೋಮುವಾದೀಕರಣ
1989ರ ಡಿಸೆಂಬರ್ ನಂತರ ದಿಲ್ಲಿಯಲ್ಲಿ ಬಿಜೆಪಿ ಬೆಂಬಲಿತ ವಿ.ಪಿ. ಸಿಂಗ್ ಸರಕಾರವಿತ್ತು. ಅಲ್ಲದೆ 1984-89ರ ನಡುವೆ ಇಡೀ ಕಾಶ್ಮೀರದ ರಾಜಕಾರಣದಲ್ಲಿ ತಂತ್ರ-ಕುತಂತ್ರಗಳ ಮೂಲಕ ದಿಲ್ಲಿ ಸರ್ವಾಧಿಕಾರವು ನಡೆಯುವಂತೆ ಮಾಡಿದ್ದು ಇದೇ ಜಗಮೋಹನ್ ಎಂಬ ರಾಜ್ಯಪಾಲ. ಈತ ತುರ್ತುಪರಿಸ್ಥಿತಿಯ ಕಾಲದಲ್ಲಿ ಸಂಜಯ್ ಗಾಂಧಿಯ ಅತಿರೇಕಗಳಿಗೆ ಸಾಥ್ ಕೊಟ್ಟು ಪದ್ಮಭೂಷಣ ಪ್ರಶಸ್ತಿ ಪಡೆದು ಆನಂತರ ಬಿಜೆಪಿ ಕ್ಯಾಂಪಿಗೆ ಬದಲಾಗಿದ್ದ ಗುಪ್ತ ಹಿಂದುತ್ವವಾದಿ. ಹೆಚ್ಚುತ್ತಿದ್ದ ಮಿಲಿಟೆಂಟ್‌ಗಳನ್ನು ಸದೆಬಡಿಯಲು ವಿ.ಪಿ. ಸಿಂಗ್ ಸರಕಾರ ಬಿಜೆಪಿಯ ಆಗ್ರಹಕ್ಕೆ ಒಪ್ಪಿಜಗಮೋಹನ್ ಅವರನ್ನು 1990ರ ಜನವರಿ 19ರಂದು ಮತ್ತೊಮ್ಮೆ ರಾಜ್ಯಪಾಲರನ್ನಾಗಿ ಕಳಿಸುತ್ತದೆ. ಆ ರಾತ್ರಿಯಿಂದಲೇ ಆತಂಕಗೊಂಡಿದ್ದ ಕಾಶ್ಮೀರಿ ಪಂಡಿತರು ಕಾಶ್ಮೀರ ಕಣಿವೆ ಬಿಟ್ಟು ಹೊರಡಲು ಪ್ರಾರಂಭಿಸುತ್ತಾರೆ.
ಈ ವಲಸೆ ಜಗಮೋಹನ್ ರಾಜ್ಯಪಾಲರಾಗಿ ಬಂದ 1990ರ ಜನವರಿ 19ರಿಂದ ಪ್ರಾರಂಭಗೊಂಡು 1990ರ ಮೇ ತಿಂಗಳಲ್ಲಿ ಅವರನ್ನು ಹಿಂದಕ್ಕೆ ಕರೆಸಿಕೊಳ್ಳುವವರೆಗೆ ಸರಕಾರದ ಸಕಲ ಬೆಂಬಲದೊಂದಿಗೆ ನಡೆಯುತ್ತದೆ. ಈ ಅವಧಿಯಲ್ಲಿ ಅನಂತನಾಗ್ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಆನಂತರ ಭಾರತದ ಪ್ರಥಮ ಆರ್‌ಟಿಐ ಕಮಿಷನರ್ ಆದ ಹಿರಿಯ ಹಾಗೂ ನಿಸ್ಪೃಹ ಅಧಿಕಾರಿ ವಜಾಹತ್ ಹಬೀಬುಲ್ಲಾ ಬರೆದಿರುವಂತೆ ರಾಜ್ಯಪಾಲರು ಮನಸ್ಸು ಮಾಡಿದ್ದರೆ, ಸ್ವಪ್ರೇರಿತವಾಗಿ ಕಣಿವೆ ಬಿಟ್ಟು ಹೋಗಲು ಪಂಡಿತರನ್ನು ಪ್ರಚೋದಿಸದೆ ಅವರಿಗೆ ರಕ್ಷಣೆ ಹಾಗೂ ಭರವಸೆಯನ್ನು ಕೊಟ್ಟಿದ್ದರೆ ಖಂಡಿತಾ ಆ ಪ್ರಮಾಣದ ವಲಸೆಯಾಗುತ್ತಿರಲಿಲ್ಲ. ಹಲವಾರು ವರದಿಗಳ ಪ್ರಕಾರ ರಾಜ್ಯಪಾಲ ಜಗ್‌ಮೋಹನ್ ಅವರು ಸರಕಾರವು ಮಿಲಿಟೆಂಟ್‌ಗಳ ಹಾಗೂ ಮುಸ್ಲಿಮರ ವಿರುದ್ಧ ದೊಡ್ಡ ದಾಳಿಯನ್ನು ಮಾಡಿ ಮಿಲಿಟೆನ್ಸಿನ್ನು ಸಮಾಪ್ತಗೊಳಿಸಲಿದೆ. ಅಲ್ಲಿಯವರೆಗೆ ಕೆಲವು ತಿಂಗಳುಗಳ ಕಾಲ ಪಂಡಿತರು ಹೊರಗಿದ್ದರೆ ಸಾಕು..ಆಮೇಲೆ ಅವರೆಲ್ಲರನ್ನು ವಾಪಸ್ ಕರೆತರಲಾಗುವುದೆಂದು ಭರವಸೆ ಕೊಟ್ಟು ತುರ್ತಾಗಿ ಹೊರಹೋಗುವಂತೆ ಪ್ರಚೋದಿಸಿದ್ದರು. ಅದು ಸುಳ್ಳೇನೂ ಅಗಿರಲಿಲ್ಲ. ಏಕೆಂದರೆ ಪಂಡಿತರು ಕಣಿವೆ ಬಿಟ್ಟು ಹೊರಟ ಮರುದಿನವೇ 1990ರ ಜನವರಿ 21ರಂದು ಕಾಶ್ಮೀರದ ಶ್ರೀನಗರದ ಗವ್ ಕದಾಲ್ ಸೇತುವೆಯ ಬಳಿ ಅಮಾಯಕ ಮುಸ್ಲಿಮ್‌ಯುವಕನೊಬ್ಬನನ್ನು ಮಿಲಿಟರಿಯು ವಿನಾಕಾರಣ ಕೊಂದಿದ್ದನ್ನು ವಿರೋಧಿಸಿ ಅತ್ಯಂತ ಅಹಿಂಸಾತ್ಮಕ ಪ್ರದರ್ಶನ ಮಾಡುತ್ತಿದ್ದ ಮುಸ್ಲಿಮರ ಮೆರವಣಿಗೆಯ ಮೇಲೆ ಭಾರತ ಸೇನೆಯು ಗುಂಡುಹಾರಿಸಿ 54 ಜನರನ್ನು ಕೊಂದುಹಾಕಿತು. ಅಲ್ಲಿಂದ ಪ್ರಾರಂಭಗೊಂಡ ಕಾಶ್ಮೀರಿ ಮುಸ್ಲಿಮರ ನರಮೇಧ ಹಾಗೂ ಕಾಂಗ್ರೆಸ್-ಬಿಜೆಪಿ ಪಕ್ಷಗಳ ನೇತೃತ್ವದ ಭಾರತ ಸರಕಾರದ ಕಾಶ್ಮೀರಿ ನರಮೇಧ ಈಗಲೂ ಮುಂದುವರಿಯುತ್ತಲೇ ಇದೆ. ಒಂದು ಅಂದಾಜಿನ ಪ್ರಕಾರ ಕಳೆದ 20 ವರ್ಷಗಳಲ್ಲಿ ಲಕ್ಷಕ್ಕೂ ಹೆಚ್ಚು ಕಾಶ್ಮೀರಿ ಮುಸ್ಲಿಮ್ ಯುವಜನತೆ ಹತರಾಗಿದ್ದಾರೆ ಅಥವಾ ಕಣ್ಮರೆಯಾಗಿದ್ದಾರೆ. ನೂರಾರು ಹಳ್ಳಿಗಳ ಮಹಿಳೆಯರು ಸಾಮೂಹಿಕ ಬಲಾತ್ಕಾರಕ್ಕೆ ಗುರಿಯಾಗಿದ್ದಾರೆ. ಲಕ್ಷಾಂತರ ಕಾಶ್ಮೀರಿ ಯುವಕರಿಗೆ ಭಾರತದ ಸೈನಿಕರು ಊಹಿಸಲಸಾಧ್ಯವಾದ ಚಿತ್ರಹಿಂಸೆ ಕೊಟ್ಟಿದ್ದಾರೆ.
ಇವು ಭಾರತದ ಬಗ್ಗೆ ಅಪಾರವಾದ ಅಸಮಾಧಾನವನ್ನು ಹುಟ್ಟುಹಾಕಿದೆ. ಅದನ್ನು ಪಾಕಿಸ್ತಾನವು ಬಳಸಿಕೊಳ್ಳುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ಕಾಶ್ಮೀರಿಯತ್ ಮೇಲೆ ಕೋಮುವಾದಿ ದಾಳಿ ಮಾಡುತ್ತಿದೆ. ಕಾಶ್ಮೀರಿಯತ್ ಮತ್ತು ಕಾಶ್ಮೀರಿ ಸಮಾಜವನ್ನು ಹಿಂದೂ-ಮುಸ್ಲಿಮ್ ಎಂದು ಒಡೆದಿದೆ. ಹಾಗೆ ಕಾಶ್ಮೀರಿಗಳ ಚಳವಳಿಯನ್ನು ಹಿಂದು-ಮುಸ್ಲಿಮ್ ಎಂದು ಕೋಮುವಾದೀಕರಿಸಿದೆ. ಮೊದಲಿಗೆ ಜಗ್‌ಮೋಹನ್ ಪಂಡಿತರನ್ನು ಭೌತಿಕವಾಗಿ ಕಣಿವೆಯಿಂದ ಹೊರಗೆಳೆದು ಕಾಶ್ಮೀರವನ್ನು ಕೇವಲ ಮುಸ್ಲಿಮ್ ಆಗಿಸಿದರೆ, 90ರ ದಶಕದಲ್ಲಿ ಎನ್‌ಡಿಎ ಸರಕಾರ ಬಂದಾಗ ಜಮ್ಮು ಪ್ರಾಂತದಲ್ಲಿ ಮಿಲಿಟೆಂಟ್‌ಗಳ ದಾಳಿಯಿಂದ ಗ್ರಾಮವನ್ನು ರಕ್ಷಿಸುವ ಹೆಸರಿನಲ್ಲಿ ಹಿಂದೂಗಳಿಗೆ ಬಂದೂಕುಗಳನ್ನು ಕೊಟ್ಟು ನಂತರ ನಡೆದ ಎಲ್ಲಾ ಮಿಲಿಟೆಂಟ್-ಗ್ರಾಮ ರಕ್ಷಕ ದಳದ ಸಂಘರ್ಷವನ್ನು ಹಿಂದೂಗಳ ಮೇಲಿನ ಮುಸ್ಲಿಮ್ ದಾಳಿ ಎಂದು ಚಿತ್ರಿಸಿತು. 2014ರ ನಂತರ ಮೋದಿ ಬಂದ ಮೇಲಂತೂ ಕಾಶ್ಮೀರಿ ಮುಸ್ಲಿಮರನ್ನು ಹಾಗೂ ಇಡೀ ಭಾರತದ ಮುಸ್ಲಿಮರನ್ನು ದಾನವೀಕರಿಸುವ ಹಾಗೂ ದಾಳಿ ಮಾಡುವ ಸಂಪೂರ್ಣ ಸ್ವಾತಂತ್ರ್ಯವನ್ನು ಮಿಲಿಟರಿಗೆ ನೀಡಲಾಗಿದೆ. ಇದು ಕಾಶ್ಮೀರವನ್ನು ಭಾರತದಿಂದ ಮತ್ತಷ್ಟು ದೂರ ಮಾಡಿದೆ. ಈಗ 'ಕಾಶ್ಮೀರ್ ಫೈಲ್ಸ್' ಸಿನೆಮಾ ಗಾಯದ ಮೇಲೆ ಸುಳ್ಳಿನ ಕತ್ತಿಯನ್ನು ಹಾಕಿ ತಿವಿದಿದೆ. ಭಾರತ ಸೈನ್ಯದಿಂದ ಜಿನೋಸೈಡ್‌ಗೆ ಗುರಿಯಾಗುತ್ತಿರುವವರನ್ನೇ ಜಿನೋಸೈಡ್ ಮಾಡಿದವರು ಎಂದು ದೂಷಿಸುತ್ತಿದೆ.
ಜಿನೋಸೈಡ್-ನರಮೇಧ ಎಂದರೇನು?
ಸಾಮಾನ್ಯವಾಗಿ ಜಗತ್ತಿನ ಇತಿಹಾಸದಲ್ಲಿ ಜಿನೋಸೈಡ್‌ಗಳ ಉದಾಹರಣೆ ನೀಡುವಾಗ ಹಾಗೂ ಆ ಸಿನೆಮಾದಲ್ಲೂ ತೋರಿಸಿರುವಂತೆ ಹಿಟ್ಲರನ್ನು ಉದಾಹರಿಸುತ್ತಾರೆ. ಜರ್ಮನಿಲ್ಲಿ ಹಿಟ್ಲರ್, ತಮ್ಮ ಸೇನೆ, ಗುಪ್ತ ಪೊಲೀಸರನ್ನು ಬಳಸಿಕೊಂಡು 60 ಲಕ್ಷ ಅಲ್ಪಸಂಖ್ಯಾತ ಯೆಹೂದಿಗಳನ್ನು ನರಹತ್ಯೆ ಮಾಡುತ್ತಾನೆ. ಇದಕ್ಕೆ ಬಹುಸಂಖ್ಯಾತ ಜರ್ಮನ್ ಸಮಾಜ ಮೂಕ ಸಮ್ಮತಿ ಕೊಡುತ್ತದೆ. ರುವಾಂಡ ದೇಶದಲ್ಲಿ 1996ರಲ್ಲಿ ಬಹುಸಂಖ್ಯಾತ ಹುಟು ಜನಾಂಗದವರು ಅಲ್ಪಸಂಖ್ಯಾತ 10 ಲಕ್ಷ ಟುಟ್ಸಿ ಜನರನ್ನು ಕೇವಲ ಮೂರೇ ತಿಂಗಳಲ್ಲಿ ಕೊಂದುಹಾಕುತ್ತಾರೆ. ಇದರಲ್ಲಿ ರೇಡಿಯೊ ರುವಾಂಡಾ ಟುಟ್ಸಿಗಳ ವಿರುದ್ಧ ಹುಟುಗಳ ದ್ವೇಷವನ್ನು ಸಂಘಟಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ. ಇಂದು ಭಾರತದಲ್ಲಿ 'ಕಾಶ್ಮೀರ್ ಫೈಲ್ಸ್' ಚಿತ್ರ ಅಥವಾ ಸಂಗಳ ಅಸಂಖ್ಯಾತ ಟಿವಿ, ಯೂಟ್ಯೂಬ್ ಚಾನೆಲ್‌ಗಳು, ವಾಟ್ಸ್‌ಆ್ಯಪ್ ಗ್ರೂಪುಗಳು ಅದಕ್ಕಿಂತ ಹತ್ತಾರು ಪಟ್ಟು ದೊಡ್ದ ದ್ವೇಷೋತ್ಪಾದನೆ ಪಾತ್ರವನ್ನು ವಹಿಸುತ್ತಿವೆ. ಹೀಗೆ ಜಿನೋಸೈಡ್ ಎಂದರೆ ಬಹುಸಂಖ್ಯಾತ ಸಮುದಾಯದ ಹಿತದ ಹೆಸರಿನಲ್ಲಿ ಕೆಲವು ಫ್ಯಾಶಿಸ್ಟ್ ಸಂಘಟನೆಗಳು ಸರಕಾರದ ಪ್ರತ್ಯಕ್ಷ ಅಥವಾ ಪರೋಕ್ಷ ಬೆಂಬಲದೊಂದಿಗೆ ಅಲ್ಪಸಂಖ್ಯಾತ ಸಮುದಾಯವನ್ನು ಕಗ್ಗೊಲೆ ಮಾಡುವುದು ಮತ್ತು ಅದಕ್ಕೆ ಬಹುಸಂಖ್ಯಾತ ಸಮುದಾಯ ಸಮ್ಮತಿಸುವುದು ಅಥವಾ ಸಕ್ರಿಯವಾಗಿ ಪಾಲ್ಗೊಳ್ಳುವುದು.. ಇದನ್ನು ಜಿನೋಸೈಡ್ -ನರಹತ್ಯೆ ಎನ್ನುತ್ತಾರೆ.
ಭಾರತದ ಅಸಲೀ ಜಿನೋಸೈಡ್ ಫೈಲುಗಳು ಭಾರತದಲ್ಲಿ ಈ ಅರ್ಥದಲ್ಲಿ ಜಿನೋಸೈಡ್ ಎಂದು ಕರೆಯಬಹುದಾದ ಹಲವು ನರಹತ್ಯೆಗಳು ನಡೆದಿವೆ. ಉದಾಹರಣೆಗೆ 1983ರಲ್ಲಿ ಅಸ್ಸಾಮಿನ ನೆಲ್ಲಿ ಎಂಬ ಗ್ರಾಮದಲ್ಲಿ ಬಂಗಾಳಿ ಭಾಷಿಕರಾದ 3,000 ಮುಸ್ಲಿಮರನ್ನು ಸ್ಥಳೀಯ ಹಿಂದೂ ಆದಿವಾಸಿಗಳು ಕೊಂದುಹಾಕಿದರು. 1984ರಲ್ಲಿ ಇಂದಿರಾಗಾಂಧಿಯ ಹತ್ಯೆಯ ನಂತರ 1,500ಕ್ಕೂ ಹೆಚ್ಚು ಸಿಖ್ಖರನ್ನು ಕಾಂಗ್ರೆಸ್-ಆರೆಸ್ಸೆಸ್ ಮತ್ತು ಸರಕಾರಿ ಗೂಂಡಾಗಳು ಕೊಂದುಹಾಕಿದರು. 1992ರಲ್ಲಿ ಬಾಬರಿ ಮಸೀದಿಯನ್ನು ಉರುಳಿಸಿದ ನಂತರ ಮುಂಬೈ ಗಲಭೆಗಳಲ್ಲಿ 1,000ಕ್ಕೂ ಹೆಚ್ಚು, ಪ್ರಧಾನವಾಗಿ ಮುಸ್ಲಿಮರನ್ನು, ಕೊಂದುಹಾಕಲಾಯಿತು. 2002ರಲ್ಲಿ ಗುಜರಾತಿನಲ್ಲಿ ಮುಖ್ಯಮಂತ್ರಿ ಮೋದಿಯವರ ಮೂಕ ನೇತೃತ್ವದಲ್ಲಿ 2,000ಕ್ಕೂ ಹೆಚ್ಚು ಮುಸ್ಲಿಮರನ್ನು ಏಕಪಕ್ಷೀಯವಾಗಿ ನಾಲ್ಕೇ ದಿನಗಳಲ್ಲಿ ಕೊಂದುಹಾಕಲಾಯಿತು. ಜಿನೋಸೈಡ್-ನರಮೇಧ ಎಂದರೆ ಇವು. ಇದೀಗ ಮೋದಿ ಸರಕಾರವೇ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಮೇಲೆ ಬಹಿರಂಗವಾಗಿ ಲಕ್ಷಾಂತರ ಮುಸ್ಲಿಮರ ನರಮೇಧ ನಡೆಸಬೇಕೆಂದು ಕರೆಕೊಡಲಾಗುತ್ತಿದೆ. ಹಾಗೆಯೇ ಇಂದು ಇಡೀ ಕಾಶ್ಮೀರಿ ಸಮಾಜದ ಮೇಲೆ ಹಾಗೂ ಈಶಾನ್ಯ ಹಾಗೂ ಮಧ್ಯ ಭಾರತದ ಸ್ವಾಯತ್ತ ಆದಿವಾಸಿ ಜನಾಂಗಗಳ ಮೇಲೆ ಸೇನೆಯನ್ನೂ ಒಳಗೊಂಡಂತೆ ಭಾರತದ ಪ್ರಭುತ್ವ ನಿರಂತರವಾಗಿ ನಡೆಸುತ್ತಿರುವ ಹಲವು ಬಗೆಯ ದಾಳಿಗಳು ಮತ್ತು ಅದಕ್ಕೆ ಭಾರತದ ಪ್ರಧಾನ ಧಾರೆ ಸಮಾಜದ ಮೂಕ ಸಮ್ಮತಿಗಳಲ್ಲೂ ನರಮೇಧದ ಲಕ್ಷಣಗಳಿವೆ. ಅದೇ ರೀತಿ ಇಡೀ ಸವರ್ಣೀಯ ಸಮಾಜದ ಸಕ್ರಿಯ ಸಮ್ಮತಿ ಮತ್ತು ಪಾಲುದಾರಿಕೆಯೊಂದಿಗೆ ಬ್ರಾಹ್ಮಣೀಯ ಭೂಮಾಲಕ ಶಕ್ತಿಗಳು ಈ ದೇಶದಲ್ಲಿ 1967ರಲ್ಲಿ ತಮಿಳುನಾಡಿನ ಕೀಳ್ವೇನ್ಮಣಿಯಿಂದ ಹಿಡಿದು, ಬೆಲ್ಚಿ, ಪಿಪ್ರಾ, ಕರಂಚೇಡು, ಚುಂಡೋರು, ಲಕ್ಷ್ಮಣ್‌ಪುರ್ ಬಾತೆ, ಕಂಬಾಲಪಲ್ಲಿ..ಇನ್ನಿತರ ಸಾಲು ಸಾಲು ದಲಿತರ ನರಮೇಧಗಳೂ ಭಾರತೀಯ ನರಮೇಧದ ಸ್ವರೂಪಗಳೇ.
ಕಾಶ್ಮೀರಿ ಪಂಡಿತರ ಮೇಲೆ ಜಿನೋಸೈಡ್ ನಡೆದಿತ್ತೇ?
ಕಾಶ್ಮೀರದಲ್ಲಿ ಮುಸ್ಲಿಮರು ಬಹುಸಂಖ್ಯಾತರು. ಪಂಡಿತರು ಅಲ್ಪಸಂಖ್ಯಾತರಲ್ಲಿ ಅಲ್ಪಸಂಖ್ಯಾತರು. ಜಿನೋಸೈಡ್ ನಡೆದಿದ್ದ ಪಕ್ಷದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪಂಡಿತರು ಸತ್ತು ಬಹುಸಂಖ್ಯಾತ ಮುಸ್ಲಿಮರು ಕಡಿಮೆ ಸಂಖ್ಯೆಯಲ್ಲಿ ಸತ್ತಿರಬೇಕಿತ್ತಲ್ಲವೇ? ಮತ್ತು ಪಂಡಿತರ ಮೇಲೆ ಮಾಡಿದ ನರಮೇಧಕ್ಕೆ ಸರಕಾರದ ಬೆಂಬಲವಿದ್ದಿರಬೇಕಲ್ಲವೇ? ಮೊದಲನೆಯದಾಗಿ ಆ ಅವಧಿಯಲ್ಲಿ ಇದ್ದದ್ದು ರಾಜ್ಯಪಾಲ ಜಗಮೋಹನ್ ಹಾಗೂ ಬಿಜೆಪಿ ಬೆಂಬಲಿತ ವಿ.ಪಿ. ಸಿಂಗ್ ಸರಕಾರ. ಎರಡನೆಯದಾಗಿ ಸ್ವತಂತ್ರ ಅಧ್ಯಯನಗಳು ಹಾಗೂ ತೀರಾ ಇತ್ತೀಚೆಗೆ ಸರಕಾರವೇ ನೀಡಿರುವ ಆರ್‌ಟಿಐ ಉತ್ತರಗಳೂ ಸ್ಪಷ್ಟಪಡಿಸುವಂತೆ 1990ರ ಜನವರಿ 19ರ ನಂತರ 2021ರ ವರೆಗಿನ 32 ವರ್ಷದ ಅವಧಿಯಲ್ಲಿ ಮಿಲಿಟೆಂಟ್‌ಗಳಿಂದ ಸತ್ತ ಪಂಡಿತರ ಸಂಖ್ಯೆ 89. ಆದರೆ ಮುಸ್ಲಿಮರ ಸಂಖ್ಯೆ 1,635..ಅಂದರೆ ಈ ಅವಧಿಯಲ್ಲಿ ಮಿಲಿಟೆಂಟ್‌ಗಳ ಕೈಯಲ್ಲಿ ಹತರಾದ ಮುಸ್ಲಿಮರ ಸಂಖ್ಯೆ ಪಂಡಿತರಿಗಿಂತ 20 ಪಟ್ಟು ಜಾಸ್ತಿ. ಅಂದರೆ ನರಮೇಧ ಮಾಡಲು ಬಂದವರೇ ನರಮೇಧ ಆದವರಿಗಿಂತ 20 ಪಟ್ಟು ಸತ್ತರೆ ಯಾರ ನರಮೇಧವಾಗಿದೆಯೆಂದರ್ಥ? ಮತ್ತು ಅದಕ್ಕೆ ಮುಸ್ಲಿಮ್ ಸಮುದಾಯ ಬೆಂಬಲ ಕೊಡದಿದ್ದರಿಂದಲೇ ಸಾಮಾನ್ಯ ಮುಸ್ಲಿಮರು ಬಲಿಯಾಗಿದ್ದಾರಲ್ಲವೇ? ಹೀಗಾಗಿ ಮಿಲಿಟೆಂಟ್‌ಗಳಾಗಲೀ, ಕಾಶ್ಮೀರದ ಇಡೀ ಮುಸ್ಲಿಮ್ ಸಮುದಾಯವಾಗಲೀ ಪಂಡಿತರ ಮೇಲೆ ಜಿನೋಸೈಡ್-ನರಹತ್ಯಾ ದಾಳಿ ಮಾಡಿದರು ಎಂಬುದು ಉತ್ಪ್ರೇಕ್ಷೆ ಮಾತ್ರವಲ್ಲ ದುರುದ್ದೇಶಪೂರಿತ ಕೋಮುವಾದಿ ಪ್ರಚಾರವಾಗಿದೆ. ಇಂದಿನ ಕಾಶ್ಮೀರದ ಬಾಲಕರು-ಯುವಕರು ಪಟಾಕಿ ಸದ್ದಿನ ಬದಲಿಗೆ ಗುಂಡುಗಳ ಸದ್ದನ್ನು ಕೇಳಿಕೊಂಡು ಬೆಳೆದವರು. ಜಾತ್ರೆ-ಹಬ್ಬಗಳ ಬದಲಿಗೆ ಸಾಮೂಹಿಕ ಪ್ರದರ್ಶನ, ಶವ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಾ ಬೆಳೆದವರು. ಕರ್ಫ್ಯೂಗಳ ಕಾರಣಕ್ಕೆ ಸಹಜ ಬದುಕನ್ನೂ ಕನಸುಗಳನ್ನು ಕಳೆದುಕೊಂಡವರು. ಹೀಗಾಗಿ ಈ ಯುವಜನಾಂಗದ ಮಟ್ಟಿಗೆ ಭಾರತವೆಂದರೆ ಕೇವಲ ದಮನ, ದ್ರೋಹಗಳ ಒಟ್ಟುಮೊತ್ತವಾಗಿ ಮಾತ್ರ ಕಾಣುತ್ತದೆ. ಅವರ ಮನಸ್ಸಿನಲ್ಲಿ ಕಳೆದ ಏಳು ದಶಕಗಳಿಂದ ಭಾರತ ಪ್ರಭುತ್ವ ಒಂದೇ ಸಮನೆ ಮಾಡುತ್ತಿರುವ ಗಾಯಗಳಿಂದ ಕೀವು ಸೋರುಗಟ್ಟುತ್ತಿದೆ. ಆರ್ಟಿಕಲ್ 370ರ ರದ್ಧತಿ ಅದನ್ನು ಇನ್ನಷ್ಟು ವ್ರಣಗೊಳಿಸಿದೆ.
ಅಸಲಿ ಜಿನೋಸೈಡ್‌ಗೆ ಸಿದ್ಧತೆಯೇ?
'ಕಾಶ್ಮೀರ್ ಫೈಲ್ಸ್' ಎಂಬ ಈ ಸಿನೆಮಾ ಭಾರತೀಯ ಸಮಾಜಕ್ಕೂ ಕಾಶ್ಮೀರಿ ಸಮಾಜಕ್ಕೂ ನಡುವೆ ಶಾಶ್ವತ ಕಂದಕವನ್ನು ಸೃಷ್ಟಿ ಮಾಡುವ ಸಂಘಪರಿವಾರದ ಫ್ಯಾಶಿಸ್ಟ್ ಅಜೆಂಡಾದ ಭಾಗವೇ ಆಗಿದೆ. ಹಾಗೆಯೇ ಈ ಸಿನೆಮಾ ಇಡೀ ಕಾಶ್ಮೀರಿ ಮುಸ್ಲಿಮ್ ಸಮಾಜವನ್ನೇ ದುಷ್ಟರನ್ನಾಗಿ ತೋರಿಸುತ್ತದೆ. ಆ ಮೂಲಕ ಇಡೀ ದೇಶಾದ್ಯಂತ ಸಂಘಪರಿವಾರಿಗಳು ಮುಸ್ಲಿಮರ ಜಿನೋಸೈಡ್‌ಗೆ ನಡೆಸುತ್ತಿರುವ ಸಿದ್ಧತೆಗೆ ಜನರ ಸಮ್ಮತಿಯನ್ನು ಉತ್ಪಾದಿಸುವ ಉದ್ದೇಶವನ್ನೂ ಹೊಂದಿದೆ. ಈ ಸಿನೆಮಾವನ್ನು ದೇಶದ ಪ್ರತಿಯೊಬ್ಬರಿಗೂ ತೋರಿಸಲು ಇಡೀ ಪರಿವಾರ ಹಾಗೂ ಬಿಜೆಪಿ ಸರಕಾರ ನಡೆಸುತ್ತಿರುವ ಯೋಜಿತ ಆಂದೋಲನ ಇದಕ್ಕೆ ಸಾಕ್ಷಿಯಾಗಿದೆ. ಹಾಗೆಯೇ ಕಾಶ್ಮೀರದ ಅಸಲಿಯತ್ತನ್ನು ಹೇಳುವ ಪ್ರತಿಯೊಬ್ಬರೂ, ಪ್ರತಿಯೊಂದು ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳೂ ದೇಶದ್ರೋಹಿಗಳು ಎಂದು ಈ ಚಿತ್ರ ಕರೆಕೊಡುತ್ತದೆ. ಆದ್ದರಿಂದ 'ಕಾಶ್ಮೀರ್ ಫೈಲ್ಸ್' ಒಂದು ಸಿನೆಮಾ ಅಲ್ಲ. ಮೋದಿ ಸರಕಾರ- ಸಂಘಪರಿವಾರದ ಫ್ಯಾಶಿಸ್ಟ್ ನರಮೇಧ ಸಿದ್ಧತೆಯ ಭಾಗವಾಗಿದೆ. ಸತ್ಯವನ್ನು ಹೇಳುವ ಮೂಲಕ, ಹೇಳುತ್ತಲೇ ಇರುವ ಮೂಲಕ ಮಾತ್ರ ಇದನ್ನು ಎದುರಿಸಲು ಸಾಧ್ಯ.