ಉಡುಪಿ ಜಿಲ್ಲೆ : ಎಸೆಸೆಲ್ಸಿ ಪರೀಕ್ಷೆಗೆ 58 ಕೇಂದ್ರ, 14,022 ವಿದ್ಯಾರ್ಥಿಗಳು
ಉಡುಪಿ : ಕೋವಿಡ್‌ನ ಭೀತಿ ಹಾಗೂ ಮುನ್ನೆಚ್ಚರಿಕೆ ಕ್ರಮಗಳಿಂದ ಮುಕ್ತವಾಗಿ ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಗಳು ಮಾ.28 ಸೋಮವಾರದಿಂದ ಎಪ್ರಿಲ್ 11ರವರೆಗೆ ಉಡುಪಿ ಜಿಲ್ಲೆಯ ಒಟ್ಟು 58 ಕೇಂದ್ರಗಳಲ್ಲಿ ನಡೆಯಲಿವೆ.
ಪರೀಕ್ಷೆಯನ್ನು ಶಾಂತಿಯುತ ಹಾಗೂ ಸುಸೂತ್ರವಾಗಿ ನಡೆಸುವುದಕ್ಕಾಗಿ ಎಲ್ಲಾ ಪೂರ್ವಸಿದ್ಧತೆಗಳನ್ನು ಮಾಡಲಾಗಿದೆ.
ಜಿಲ್ಲೆಯ 266 ಶಾಲೆಗಳಿಂದ ಒಟ್ಟು 14,022 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವರು. ಇವರಲ್ಲಿ 7229 ಮಂದಿ ಬಾಲಕರು ಹಾಗೂ 6793 ಮಂದಿ ಬಾಲಕಿಯರು. ಕಳೆದ ಬಾರಿ ಅನುತ್ತೀರ್ಣರಾದ 52 ಮಂದಿ ಮತ್ತೆ ಪರೀಕ್ಷೆ (ರಿಪೀಟರ್ಸ್) ಬರೆದರೆ, 298 ಮಂದಿ ಖಾಸಗಿ ವಿದ್ಯಾರ್ಥಿಗಳು ಸಹ ಈ ಬಾರಿ ಪರೀಕ್ಷೆ ಬರೆಯುವವರಲ್ಲಿ ಸೇರಿದ್ದಾರೆ.
ಜಿಲ್ಲೆಯ ಐದು ವಲಯಗಳಲ್ಲಿ ಉಡುಪಿ ದಕ್ಷಿಣ ವಲಯದಲ್ಲಿ ಅತ್ಯಧಿಕ 16 ಕೇಂದ್ರಗಳಿದ್ದು, ಇಲ್ಲಿ ೩೬೫೭ ಮಂದಿ ಹೊಸದಾಗಿ ಪರೀಕ್ಷೆ ಬರೆದರೆ ೩೧ ಮಂದಿ ರಿಪೀಟರ್ಸ್ ಸೇರಿ ಒಟ್ಟು ೩೬೮೮ ಮಂದಿ ಪರೀಕ್ಷೆ ಬರೆಯಲಿದ್ದಾರೆ.
ಉಡುಪಿ ಉತ್ತರ ವಲಯದಲ್ಲಿ ೧೩ ಪರೀಕ್ಷಾ ಕೇಂದ್ರಗಳಲ್ಲಿ ೨೭೪೬+೪ ಸೇರಿ ೨೭೫೦ ಮಂದಿ, ಕಾರ್ಕಳ ವಲಯದ ೧೧ ಪರೀಕ್ಷಾ ಕೇಂದ್ರಗಳಲ್ಲಿ ೨೬೦೨+೨ ಸೇರಿ ೨೬೦೪ ಮಂದಿ, ಕುಂದಾಪುರ ವಲಯದ ೯ ಕೇಂದ್ರಗಳಲ್ಲಿ ೨೭೪೯+೧೩ ಸೇರಿ ೨೭೬೨ ಮಂದಿ ಹಾಗೂ ಬೈಂದೂರು ವಲಯದ ೯ ಪರೀಕ್ಷಾ ಕೇಂದ್ರಗಳಲ್ಲಿ ೨೨೧೬+೨ ಸೇರಿ ೨೨೧೮ ಮಂದಿ ಈ ಬಾರಿ ಪರೀಕ್ಷೆ ಬರೆಯುವರು.
ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯನ್ನು ನಡೆಸಲು ಜಿಲ್ಲೆಯಲ್ಲಿ ಒಟ್ಟು ೯೫೭ ಮಂದಿಯನ್ನು ನೇಮಿಸಲಾಗಿದ್ದು, ಮುಖ್ಯ ಅಧೀಕ್ಷಕರು, ಉಪ ಮುಖ್ಯ ಅಧೀಕ್ಷಕರು, ಪ್ರಶ್ನೆಪತ್ರಿಕೆ ಪಾಲಕರು ಮತ್ತು ಕೊಠಡಿ ಮೇಲ್ವಿಚಾರಕರಿಗೆ ಸೂಕ್ತ ತರಬೇತಿಯನ್ನು ನೀಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ.
ಪ್ರಶ್ನೆ ಪತ್ರಿಕೆಗಳನ್ನು ಪರೀಕ್ಷಾ ಕೇಂದ್ರಗಳಿಗೆ ಸಾಗಿಸಲು ಮತ್ತು ಉತ್ತರ ಪತ್ರಿಕೆಗಳನ್ನು ಪಡೆಯಲು ಒಟ್ಟು ೪೬ ಮಾರ್ಗಾಧಿಕಾರಿಗಳ ತಂಡಗಳನ್ನು ರಚಿಸಲಾಗಿದೆ. ಪರೀಕ್ಷೆಯಲ್ಲಿ ಅವ್ಯವಹಾರವನ್ನು ತಡೆಯಲು ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ಸಂಚಾರಿ ವಿಚಕ್ಷಣಾ ದಳವನ್ನು ನೇಮಿಸಲಾಗಿದೆ. ಪ್ರತಿಯೊಂದು ಪರೀಕ್ಷಾ ಕೇಂದ್ರದಲ್ಲೂ ಸ್ಥಾನಿಕ ಜಾಗೃತ ದಳವನ್ನು, ಪೊಲೀಸ್ ಪಹರೆಯನ್ನು, ತುರ್ತು ಚಿಕಿತ್ಸಾ ಘಟಕವನ್ನೂ ಸ್ಥಾಪಿಸಲಾಗಿದೆ.
ಸಮವಸ್ತ್ರ ಕಡ್ಡಾಯ
ರಾಜ್ಯ ಸರಕಾರ ಮಾ.25ರಂದು ಹೊರಡಿಸಿದ ಸುತ್ತೋಲೆಯಂತೆ ರಾಜ್ಯದ ಎಲ್ಲಾ ಸರಕಾರಿ ಶಾಲೆಗಳಲ್ಲಿ ಸರಕಾರ ನಿಗದಿಪಡಿಸಿರುವ ಶಾಲಾ ಸಮವಸ್ತ್ರವನ್ನು ಹಾಗೂ ಖಾಸಗಿ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ಆಯಾ ಆಡಳಿತ ಮಂಡಳಿಗಳು ನಿರ್ಧರಿಸಿರುವ ಸಮವಸ್ತ್ರವನ್ನು ಧರಿಸಿ ವಿದ್ಯಾರ್ಥಿಗಳು ಎಸೆಸೆಲ್ಸಿ ಮುಖ್ಯ ಪರೀಕ್ಷೆಗೆ ಪ್ರವೇಶ ಪತ್ರದೊಂದಿಗೆ (ಹಾಲ್ ಟಿಕೇಟ್) ಪರೀಕ್ಷಾ ಕೇಂದ್ರಗಳಿಗೆ ಹಾಜರಾಗಲು ಅನುಮತಿಯನ್ನು ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ತಿಳಿಸಿದ್ದಾರೆ.
ಪ್ರತಿಯೊಂದು ಪರೀಕ್ಷಾ ಕೇಂದ್ರದ ಸುತ್ತಮುತ್ತ ೨೦೦ ಮೀ.ವ್ಯಾಪ್ತಿಯಲ್ಲಿ ಪರೀಕ್ಷೆ ನಡೆಯುವ ದಿನಗಳಂದು ಸಿಆರ್‌ಪಿಸಿ ಸೆಕ್ಷನ್ ೧೪೪ರಂತೆ ಪ್ರತಿಬಂಧಕಾಜ್ಞೆ ಯನ್ನು ವಿಧಿಸಲಾಗಿದೆ. ಕೋವಿಡ್-೧೯ರ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರವನ್ನು ಪ್ರತಿನಿತ್ಯ ಸ್ಯಾನಿಟೈಜ್ ಮಾಡಲಾಗುವುದು.