ಶಾಲು ಧರಿಸಿದ ಮಹಿಳೆಗೆ ಪ್ರವೇಶ ನಿರಾಕರಿಸಿದ ಆರೋಪ: ಭಾರತೀಯ ರೆಸ್ಟೋರೆಂಟ್ ಅನ್ನು ಮುಚ್ಚಿದ ಬಹರೈನ್ ಅಧಿಕಾರಿಗಳು
ಮನಾಮ: ಶಾಲು ಧರಿಸಿದ ಮಹಿಳೆಗೆ ಪ್ರವೇಶವನ್ನು ನಿರಾಕರಿಸಿದ ಆರೋಪದ ಮೇಲೆ ಬಹರೈನ್ ನ ಅಧಿಕಾರಿಗಳು ಭಾರತೀಯ ರೆಸ್ಟೋರೆಂಟ್ ಅನ್ನು ಮುಚ್ಚಿದ್ದಾರೆ ಎಂದು ಸುದ್ದಿ ವೆಬ್ಸೈಟ್ GDN Online ವರದಿ ಮಾಡಿದೆ.
ಬಹರೈನ್ ಪ್ರವಾಸೋದ್ಯಮ ಹಾಗೂ ಪ್ರದರ್ಶನ ಪ್ರಾಧಿಕಾರವು(ಬಿಟಿಇಎ) ಈ ಬಗ್ಗೆ ತನಿಖೆಯನ್ನು ಆರಂಭಿಸಿದೆ. ಬಹರೈನ್ ನ ರಾಜಧಾನಿ ಮನಾಮಾದ ಅದ್ಲಿಯಾ ಪ್ರದೇಶದಲ್ಲಿರುವ ಲ್ಯಾಂಟರ್ನ್ಸ್ ರೆಸ್ಟೋರೆಂಟ್ ನಲ್ಲಿ ಈ ಘಟನೆ ನಡೆದಿದೆ.
ದೇಶದ ಕಾನೂನುಗಳನ್ನು ಉಲ್ಲಂಘಿಸುವ ನೀತಿಗಳನ್ನು ರೆಸ್ಟೋರೆಂಟ್ ಗಳು ಜಾರಿಗೊಳಿಸಬಾರದು. ಜನರ ರಾಷ್ಟ್ರೀಯತೆ ಆಧಾರದಲ್ಲಿ ಅವರ ವಿರುದ್ಧ ತಾರತಮ್ಯ ಮಾಡುವ ಯಾವುದೇ ಕೃತ್ಯವನ್ನು ನಾವು ವಿರೋಧಿಸುತ್ತೇವೆ. ಪ್ರವಾಸೋದ್ಯಮ-ಸಂಬಂಧಿತ ಸಂಸ್ಥೆಗಳಿಗೆ ಸಂಬಂಧಿಸಿದ 1986 ರ ಡಿಕ್ರಿ ಕಾನೂನು ಸಂಖ್ಯೆ 15 ರ ಪ್ರಕಾರ ರೆಸ್ಟೋರೆಂಟ್ ಅನ್ನು ಮುಚ್ಚಲಾಗಿದೆ ಎಂದು ಪ್ರಾಧಿಕಾರವು ತಿಳಿಸಿದೆ ಎಂದು ವರದಿಯಾಗಿದೆ.
ಶಾಲು ಧರಿಸಿದ್ದ ಮಹಿಳೆಯನ್ನು ರೆಸ್ಟೋರೆಂಟ್ ನೊಳಗೆ ಪ್ರವೇಶಿಸುವುದನ್ನು ನಿರ್ಬಂಧಿಸಿದ ಮ್ಯಾನೇಜರ್ ನನ್ನು ಅಮಾನತುಗೊಳಿಸಲಾಗಿದೆ ಎಂದು ಲ್ಯಾಂಟರ್ನ್ಸ್ ರೆಸ್ಟೋರೆಂಟ್ ಗುರುವಾರ ತಿಳಿಸಿದೆ.
"ನಾವು ಸುಂದರವಾದ ಬಹರೈನ್ ನಲ್ಲಿ 35 ವರ್ಷಗಳಿಂದ ಎಲ್ಲಾ ದೇಶದವರಿಗೆ ಸೇವೆ ಸಲ್ಲಿಸುತ್ತಿದ್ದೇವೆ. ಲ್ಯಾಂಟರ್ನ್ ರೆಸ್ಟೋರೆಂಟ್ ಗೆ ಎಲ್ಲರಿಗೂ ಸ್ವಾಗತವಿದೆ" ಎಂದು ರೆಸ್ಟೋರೆಂಟ್ ತಿಳಿಸಿದೆ.
"ಸದ್ಭಾವನೆಯ ಸಂಕೇತವಾಗಿ" ಉಚಿತ ಆಹಾರವನ್ನು ಸೇವಿಸಲು ಬಹರೈನ್ ನಾಗರಿಕರಿಗೆ ಮಾ.29ರಂದು ರೆಸ್ಟೋರೆಂಟ್ ಆಹ್ವಾನ ನೀಡಿದೆ.