ʻಹಿಜಾಬ್ ಧರಿಸಿಯೂ ಪರೀಕ್ಷೆ ಬರೆಯಲು ಮುಸ್ಲಿಂ ವಿದ್ಯಾರ್ಥಿನಿಯರಿಗೆ ಅವಕಾಶ ಕಲ್ಪಿಸಿʼ
ಮಂಗಳೂರು : ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲೊಸಾಫಿಕಲ್ ಆರ್ಟ್ಸ್ ಆ್ಯಂಡ್ ಸಾಯನ್ಸಸ್ ಇದರ ನಿರ್ದೇಶಕರಾಗಿರುವ ಪ್ರೊ. ವರದೇಶ್ ಹಿರೇಗಂಗೆ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ಇಂದು ಆರಂಭಗೊಂಡಿರುವ ಎಸೆಸೆಲ್ಸಿ ಪರೀಕ್ಷೆ ವೇಳೆ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿಯೂ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕೆಂದು ಕೋರಿದ್ದಾರೆ.
ʻʻಹಿಜಾಬ್ ಕುರಿತಂತೆ ನಾವು ಸೈದ್ಧಾಂತಿಕ, ಐತಿಹಾಸಿಕ, ಕಾನೂನಾತ್ಮಕ ಮತ್ತು ಧಾರ್ಮಿಕ ವಾದಗಳನ್ನು ಮಂಡಿಸಬಹುದು, ಆದರೆ ಮೂಲಭೂತ ಮಾನವೀಯ ಮೌಲ್ಯಗಳು ಸಮಯ, ಸ್ಥಳ, ಪ್ರಾಂತ್ಯ, ಧರ್ಮ, ಸಂಸ್ಕೃತಿ, ದೇಶ, ವಸ್ತ್ರಸಂಹಿತೆ ಮತ್ತು ನೀತಿ ಸಂಹಿತೆಯ ಪರಿಧಿಯಾಚೆಗೆ ನಿಲ್ಲುತ್ತದೆ ಎಂಬ ವಿಷಯದಲ್ಲಿ ನೀವು ಸಹಮತ ಹೊಂದಿದ್ದೀರಿ ಎಂದು ನಾನು ಭಾವಿಸುತೇನೆ."
ಹುಟ್ಟಿನಿಂದ ಹಿಂದೂ ಆಗಿರುವ ನಾನು, ನಿಮಗೆ, ಕರ್ನಾಟಕ ಹೈಕೋರ್ಟ್ ಹಾಗೂ ಹಿಜಾಬ್ ವಿರೋಧಿಸುವ ಎಲ್ಲಾ ಹಿಂದೂಗಳಿಗೆ ಮನವಿ ಮಾಡುತ್ತಿದ್ದೇನೆ- ನಿಮ್ಮ ಎಲ್ಲಾ ವಾದಗಳನ್ನು ಬದಿಗಿಡಿ ಹಾಗೂ ಹಿಜಾಬ್ ಧರಿಸಿಯೂ ಪರೀಕ್ಷೆ ಬರೆಯಲು ಮುಸ್ಲಿಂ ವಿದ್ಯಾರ್ಥಿನಿಯರಿಗೆ ಅವಕಾಶ ಕಲ್ಪಿಸಿ, ನಾವು ಹಿಜಾಬ್ ಕುರಿತ ಚರ್ಚೆಯನ್ನು ನಂತರ ಮುಂದುವರಿಸಬಹುದು, ಆದರೆ ಪರೀಕ್ಷೆ ಎದುರಿಸುತ್ತಿರುವ ಒಬ್ಬ ವಿದ್ಯಾರ್ಥಿನಿಯು ಸರಕಾರ, ನ್ಯಾಯಾಲಯ, ತಮ್ಮ ಸಹಪಾಠಿಗಳಿಂದ ತಕ್ಷಣದ ಪರಿಹಾರಕ್ಕಾಗಿ ಎದುರು ನೋಡುತ್ತಾರೆʼʼ ಎಂದು ಪ್ರೊ. ವರದೇಶ್ ಹಿರೇಗಂಗೆ ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.
ʻʻಪ್ರಾಯಶಃ ಮುಸ್ಲಿಂ ವಿದ್ಯಾರ್ಥಿನಿಯರು ಎರಡು ಅನಿವಾರ್ಯತೆಗಳ ನಡುವೆ ಇದ್ದಾರೆ. ಇಲ್ಲಿ ಅವರು ಸಂತ್ರಸ್ತರು. ಇದನ್ನು ಪರಿಗಣಿಸಿ ಸರಕಾರ, ನ್ಯಾಯಾಲಯ ಮತ್ತು ಹಿಂದೂ ಧರ್ಮ ಅವರನ್ನು ಈ ಬಿಕ್ಕಟ್ಟಿನಿಂದ ಹೊರತರಬೇಕು. ಮಾಡಲು ಒಂದು ವಿಧವಿದೆ- ಹಿಜಾಬ್ ಧರಿಸಿಯೂ ಅವರಿಗೆ ಅವಕಾಶ ಕಲ್ಪಿಸಬೇಕು, ಪ್ರಾಯಶಃ ಇದು ನೈಜ ಆಡಳಿತ, ನೈಜ ಕಾನೂನು ಹಾಗೂ ನೈಜ ಹಿಂದೂ ಧರ್ಮವಾಗಬಹುದುʼʼ
ನಿಮ್ಮ ತಂದೆ ಎಸ್.ಆರ್ ಬೊಮ್ಮಾಯಿ ಅವರು ಖ್ಯಾತ ಚಿಂತಕ ಎಂ.ಎನ್ ರಾಯ್ ಅವರ ಚಿಂತನೆಗಳ ಅನುಯಾಯಿಯಾಗಿದ್ದರು. ರಾಯ್ ಅವರು "ಮುತ್ಸದ್ದಿ ಆಡಳಿತಗಾರ ಮುಂದಿನ ಪೀಳಿಗೆಯ ಬಗ್ಗೆ ಯೋಚಿಸಿ ಹೆಜ್ಜೆ ಇಡುತ್ತಾನೆ" ಹೇಳಿದ್ದಾರೆ ಎಂದು ಈ ಸಂದರ್ಭದಲ್ಲಿ ಪ್ರೊ. ವರದೇಶ್ ಹಿರೇಗಂಗೆ ಅವರು ಸಿಎಂಗೆ ಪತ್ರದಲ್ಲಿ ನೆನಪಿಸಿದ್ದಾರೆ.