ಜವಾಬ್ದಾರಿ ಮರೆತ ಮಾಧ್ಯಮಗಳು

Update: 2022-03-29 07:07 GMT

ತೈಲ ಬೆಲೆ ಏರಿಕೆ ಆದಾಗ ಜನರಿಗೆ ತೊಂದರೆ ಆಗುತ್ತಿದೆ, ಅದರ ಬಗ್ಗೆ ಗಮನ ಹರಿಸುವುದನ್ನು ಬಿಟ್ಟು ಕಾಶ್ಮೀರ ಫೈಲ್ಸು, ಆ ಫೈಲ್ಸು ಈ ಫೈಲ್ಸು ಅನ್ನುತ್ತೀರಲ್ಲ ಎಂದು ಒಂದು ಗಟ್ಟಿಯಾದ ನಿಲುವು ತೆಗೆದುಕೊಳ್ಳುವುದಿರಲಿ, ಕನಿಷ್ಠ ಪಕ್ಷ ಆ ಬಗ್ಗೆ ಒಂದು ಪ್ರಶ್ನೆಯನ್ನೂ ಕೇಳದ ಸ್ಥಿತಿಗೆ ಕೆಲವು ಮಾಧ್ಯಮಗಳು ಬಂದು ಬಿಟ್ಟಿವೆ.

ಇಷ್ಟು ವರ್ಷ ಇಲ್ಲದ ಹಿಜಾಬ್ ಸಮಸ್ಯೆಯನ್ನು ಈಗೇಕೆ ಉಲ್ಬಣಗೊಳಿಸುತ್ತಿದ್ದೀರಿ, ಇದರಿಂದ ಮಕ್ಕಳ ಶಿಕ್ಷಣ ಹಾಳಾಗುತ್ತದೆ, ಶಿಕ್ಷಣ ಪಡೆಯುವ ಸ್ಥಳದ ವಾತಾವರಣ ಕೆಡುತ್ತದೆ ಎಂಬ ತಿಳುವಳಿಕೆಯನ್ನು ಯಾರಾದರೂ ನೀಡಿದರೇ?

ದಿನಕ್ಕಿಷ್ಟು ಎಂಬಂತೆ ದಲಿತರ ಮೇಲೆ ಹಲ್ಲೆ, ದಲಿತ ಹೆಣ್ಣು ಮಕ್ಕಳ ಅತ್ಯಾಚಾರ ಮತ್ತು ದಲಿತರ ಕೊಲೆಗಳು ನಿರಂತರವಾಗಿ ನಡೆಯುತ್ತಿದ್ದು, ಗೊತ್ತಾದ ಪ್ರಕರಣಗಳಲ್ಲಿಯೂ ಅವರಿಗೆ ನ್ಯಾಯ ಸಿಗುವ ಸಾಧ್ಯತೆ ಕಡಿಮೆ ಆಗಿದೆ ಎಂದು ಎನ್‌ಸಿಆರ್‌ಬಿಯ (ರಾಷ್ಟ್ರೀಯ ಅಪರಾಧ ವರದಿ ಸಂಸ್ಥೆ) ವರದಿ ಹೇಳುತ್ತಿದೆ.

ಈ ಬಗ್ಗೆ ಮಾಧ್ಯಮಗಳು ಆ ಸತ್ತವರಿಗೆ ಇಲ್ಲವೇ ಹಲ್ಲೆಗೆ ಒಳಗಾದ ದಲಿತರಿಗೆ ನ್ಯಾಯ ಸಿಗುವ ತನಕ ತಮ್ಮ ವೇದಿಕೆಯನ್ನು ಬಳಸಿಕೊಂಡು ಹೋರಾಟ ನಡೆಸಿದ ಉದಾಹರಣೆ ಇದೆಯೇ?

ಇನ್ನು ಹೊನ್ನಾಳಿಯ ಶಾಸಕ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರವನ್ನೇ ಪಡೆದರೂ ಅದು ಅಸಾಂವಿಧಾನಿಕ ಎಂದು ಗಟ್ಟಿಯಾಗಿ ಹೇಳುವ ಧೈರ್ಯವನ್ನು ತೋರಲಿಲ್ಲ.

ಮೊನ್ನೆ ವಿಧಾನ ಸಭಾ ಸ್ಪೀಕರ್ ಅದ ಕಾಗೇರಿ ಅವರು ತಾನು ಎಂತಹ ಸ್ಥಾನದಲ್ಲಿ ಕೂತಿದ್ದೇನೆ ಎಂಬುದನ್ನು ಮರೆತು, ಸದನದ ಸದಸ್ಯರನ್ನು ಎಚ್ಚರಿಸಬೇಕಾದ ಜವಾಬ್ದಾರಿತನವನ್ನೇ ಮರೆತು ನಾವು ಆರೆಸ್ಸೆಸ್‌ನವರು ಎಂದು ಬಾಲಿಶವಾಗಿ ಮಾತನಾಡುತ್ತಿದ್ದಾಗ ಅದು ಅಸಾಂವಿಧಾನಿಕ ನಡೆ, ಓರ್ವ ಸ್ಪೀಕರ್ ಹಾಗೆ ವರ್ತಿಸಬಾರದು ಎಂದು ಒಬ್ಬರಾದರೂ ತಮ್ಮ ಪ್ರತಿರೋಧವು ರಿಜಿಸ್ಟರ್ ಆಗುವಂತೆ ಹೇಳಿದರೇ?

ಪುಲ್ವಾಮ ಘಟನೆ ನಡೆದು ಎಷ್ಟು ದಿನವಾಯಿತು? ಮಡಿದ ಸೈನಿಕರ ಸಾವಿಗೆ ಕಾರಣ ಹುಡುಕಿ ಎಂದು ಯಾರಾದರೂ ಪಟ್ಟು ಹಿಡಿಯುವ ಧೈರ್ಯ ತೋರಿದರೇ?

ಇನ್ನು ಸಮಾಜವಾದಿ ನಾಡಿನ ಸಮಾಜ ವ್ಯಾಧಿ ಎನ್ನಬಹುದಾದ ಶಾಸನಬದ್ಧ ಜನ ಪ್ರತಿನಿಧಿಯೊಬ್ಬರು ರಾಷ್ಟ್ರಧ್ವಜದ ಬಗ್ಗೆ ಅಗೌರವ ತೋರಿದಾಗ, ಅದು ಅಸಾಂವಿಧಾನಿಕ ನಡೆ ಎಂದು ತಾವೇ ಒಂದು ಹೆಜ್ಜೆ ಮುಂದೆ ಹೋಗಿ ಆತನಿಗೆ ತಿಳಿ ಹೇಳಬೇಕಿದ್ದ ಮಾಧ್ಯಮಗಳು ಸದನದಲ್ಲಿ ರಾಷ್ಟ್ರಧ್ವಜ ಗದ್ದಲ, ಕಾಂಗ್ರೆಸ್ ನಿಂದ ಈಶ್ವರಪ್ಪ ರಾಜೀನಾಮೆಗೆ ಆಗ್ರಹ ಎಂಬ ಮಾಹಿತಿಯನ್ನಷ್ಟೇ ಪ್ರಸಾರ ಮಾಡುತ್ತಿರುವಾಗ ಇವರಿಗೆ ಸಂವಿಧಾನದ ಕುರಿತು ತಿಳುವಳಿಕೆ ಮತ್ತು ಗೌರವ ಇಲ್ಲ ಎಂದುಕೊಳ್ಳಬೇಕೋ ಅಥವಾ ಇದೆ ಎಂದುಕೊಳ್ಳಬೇಕೋ?

ಕೆಲವೊಂದು ಧಾರ್ಮಿಕ ಸಂಘಟನೆಗಳ ವಿಷ ಜಂತುಗಳು ಬೀದಿಯಲ್ಲಿ ನಿಂತು ಬೇರೆ ಧರ್ಮದವರ ಅಂಗಡಿಗಳನ್ನು ತೆರವುಗೊಳಿಸುತ್ತೇವೆ, ಶಸ್ತ್ರ ಹಿಡಿಯಬೇಕು ಎಂದೆಲ್ಲಾ ಮಾತನಾಡುವಾಗ ಅವರು ಅನೈತಿಕ ಪೊಲೀಸ್ ಗಿರಿ ಮಾಡುತ್ತಿದ್ದು, ಸಮಾಜದ ಸಾಮರಸ್ಯ ಕೆಡಿಸುತ್ತಿದ್ದಾರೆ, ಸರಕಾರ ಕೂಡಲೇ ಅಂತಹವರನ್ನು ಬಂಧಿಸಬೇಕು ಎಂಬ ಅರಿವನ್ನು ಮೂಡಿಸಲು ಇವರಿಗೆ ಆಗದೇ ಇದ್ದ ಮೇಲೆ ಸಮಾಜಕ್ಕೆ ಇವರ ಅವಶ್ಯಕತೆ ಏನು?

ಧರ್ಮ ಯಾವುದು, ಬದುಕಿನ ಕ್ರಮ ಯಾವುದು, ಸಂವಿಧಾನ ಏನು ಹೇಳುತ್ತದೆ? ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸುವುದಕ್ಕೆ ಪೂರಕವಾಗಿ ನಾವೇನು ಮಾಡಬೇಕು ಎಂದು ತಿಳಿಸಬೇಕಾದ ಮಾಧ್ಯಮಗಳು ತಮ್ಮ ಜವಾಬ್ದಾರಿಯನ್ನು ಮರೆತು ಇನ್ಯಾವುದೋ ಸಂಗತಿಯಲ್ಲಿ ಮುಳುಗಿರುವುದು ಕಡು ಬೇಸರದ ಸಂಗತಿ.

ಸರಕಾರವು ಶೇ. 40ರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಸ್ವತಃ ಗುತ್ತಿಗೆದಾರರೇ ಹೇಳುತ್ತಿದ್ದರೂ ಆ ಬಗ್ಗೆ ಸೊಲ್ಲೆತ್ತದ ಇವರು ಮುಖ್ಯಮಂತ್ರಿಗಳನ್ನು ಕೇಳಬೇಕಾದ ಬಹಳಷ್ಟು ಪ್ರಶ್ನೆಗಳನ್ನು ವಿಪಕ್ಷೀಯ ನಾಯಕರಿಗೆ ಕೇಳುತ್ತಿದ್ದರೆ ಇವರಿಗೆ ಏನು ಹೇಳೋಣ?

ಸಾಲದು ಎಂಬಂತೆ ನಿರುದ್ಯೋಗಿ ಹುಡುಗರ ತಲೆ ಕೆಡಿಸಿ ಅವರನ್ನು ರೌಡಿ ಶೀಟರ್ ಆಗಿಸಿ ಕೊನೆಗೆ ಹಿಂಸಾ ಮಾರ್ಗದಲ್ಲೇ ಬಲಿಯಾಗುವಂತಹ ಮಾರ್ಗವು ತಪ್ಪು, ಅದು ಧರ್ಮವಲ್ಲ ಮೂರ್ಖತನ ಎಂದು ಹೇಳಿದ ಒಂದೇ ಒಂದು ಮುಖ್ಯ ವಾಹಿನಿಯ ಮಾಧ್ಯಮಗಳನ್ನು ನಾನು ಕಾಣಲಿಲ್ಲ ಎಂಬುದು ಸತ್ಯ.

ನಾನು ಗಮನಿಸಿದಂತೆ ಮಾಧ್ಯಮ ವಲಯದಲ್ಲಿ ಸಂವಿಧಾನದ ಕುರಿತ ತಿಳುವಳಿಕೆ ತೀರಾ ಕಡಿಮೆ ಮಟ್ಟದಲ್ಲಿ ಇದೆ. ಹೀಗಾಗಿಯೇ ಅವರಿಗೆ ಸಮಾಜ, ಸರಕಾರ ಮತ್ತು ರಾಜಕೀಯದಲ್ಲಿ ಯಾವುದು ಸಂವಿಧಾನ ಬಾಹಿರ ನಡೆ ಎಂದು ಗುರುತಿಸಲು ಮತ್ತು ಆ ಬಗ್ಗೆ ಧೈರ್ಯದಿಂದ ದನಿ ಎತ್ತಲು ವಿಶ್ವಾಸ ಸಾಲುತ್ತಿಲ್ಲ ಎಂದು ಅನಿಸುತ್ತಿದೆ.

ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಪ್ರಜಾಪ್ರಭುತ್ವದ ಕಾವಲುಗಾರಿಕೆ ಮಾಡುತ್ತಾರೆ ಎಂದು ನಂಬಿರುವ ಮಾಧ್ಯಮಗಳು ತಮ್ಮ ಕಚೇರಿಯಲ್ಲಿ ತಮ್ಮ ಸಿಬ್ಬಂದಿಗೆ ಸಂವಿಧಾನವನ್ನು ತಪ್ಪದೇ ಬೋಧಿಸಲಿ ಎಂದು ವಿನಂತಿಸಿಕೊಳ್ಳುತ್ತೇನೆ.

ಸಂವಿಧಾನದ ತಿಳುವಳಿಕೆ ಇಲ್ಲದೆ, ಪ್ರಜಾಪ್ರಭುತ್ವದಲ್ಲಿ ಅನಾರೋಗ್ಯ ಹೆಚ್ಚಾಗುತ್ತಿದ್ದರೂ ಆ ಕುರಿತು ದನಿ ಎತ್ತದ, ಸಂವಿಧಾನಾತ್ಮಕವಾದ ವಾತಾವರಣವನ್ನು ಕಾಪಾಡದ ಮಾಧ್ಯಮಗಳು ಇದ್ದರೆಷ್ಟು ಹೋದರೆಷ್ಟು.

ಇನ್ನು ಕೇವಲ ಮಾಧ್ಯಮಗಳಷ್ಟೇ ಅಲ್ಲದೆ, ಶಾಲೆ ಕಾಲೇಜು, ಧಾರ್ಮಿಕ ಸಂಘಟನೆಗಳು, ಸೇವಾ ಸಂಸ್ಥೆಗಳು, ಕಲಾವಿದರ ಸಂಸ್ಥೆಗಳು, ಉದ್ಯಮಿಗಳು ಮತ್ತು ವ್ಯಾಪಾರಸ್ಥರು ಆದಿಯಾಗಿ ಎಲ್ಲರೂ ಕೂಡಾ ಸಂವಿಧಾನದ ಕುರಿತು ಸಮರ್ಪಕವಾದ ತಿಳುವಳಿಕೆಯನ್ನು ಹೊಂದಬೇಕು, ಆಗಷ್ಟೇ ತಪ್ಪುಮಾಹಿತಿಯನ್ನು ಹರಡುತ್ತಾ ಸಮಾಜದ ಹಿತ ಕೆಡಿಸುತ್ತಿರುವ ಸಂಗತಿಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ ಎಂಬುದು ನನ್ನ ನಂಬಿಕೆ.

ಸಂವಿಧಾನದ ತಿಳುವಳಿಕೆ ಇಲ್ಲದ, ಸಂವಿಧಾನದ ಆಶಯಗಳ ಸಾಕಾರಕ್ಕಾಗಿ ತುಡಿಯದ, ಮಾನವೀಯ ಮೌಲ್ಯಗಳಿಗೆ ದೂರವಾಗಿರುವ ನಮ್ಮ ದೇಶ ಪ್ರೇಮವು ಸಮಾಜಕ್ಕೆ ಕೆಟ್ಟದ್ದನ್ನು ಉಂಟು ಮಾಡುವ ದ್ವೇಷ ಪ್ರೇಮವಷ್ಟೇ.

Writer - ಡಾ. ಎಚ್.ಸಿ. ಮಹದೇವಪ್ಪ

contributor

Editor - ಡಾ. ಎಚ್.ಸಿ. ಮಹದೇವಪ್ಪ

contributor

Similar News