ಪ್ರಥಮ ಪಿಯುಸಿ ಪರೀಕ್ಷೆ; ಉಡುಪಿ ಜಿಲ್ಲೆಯಲ್ಲಿ ಒಟ್ಟು 700 ವಿದ್ಯಾರ್ಥಿಗಳು ಗೈರು
ಉಡುಪಿ : ಇಂದು ನಡೆದ ಪ್ರಥಮ ಪಿಯುಸಿ ಅಂತಿಮ ಪರೀಕ್ಷೆಗೆ ಹಿಜಾಬ್ ಹಕ್ಕಿಗಾಗಿ ಹೈಕೋರ್ಟ್ ಮೆಟ್ಟಿಲೇರಿದ್ದ ಉಡುಪಿಯ ಐವರು ವಿದ್ಯಾರ್ಥಿನಿಯರ ಪೈಕಿ ಇಬ್ಬರು ಸೇರಿದಂತೆ ಒಟ್ಟು 48 ಮುಸ್ಲಿಮ್ ವಿದ್ಯಾರ್ಥಿನಿಯರು ಗೈರು ಹಾಜರಾಗಿದ್ದಾರೆ. ಒಟ್ಟಾರೆ 700 ಮಂದಿ ವಿದ್ಯಾರ್ಥಿಗಳು ಇಂದಿನ ಪರೀಕ್ಷೆಗೆ ಗೈರು ಹಾಜರಾಗಿದ್ದಾರೆ.
ಇಂದಿನ ಬ್ಯುಸಿನೆಸ್ ಸ್ಟಡೀಸ್ ಹಾಗೂ ಭೌತಶಾಸ್ತ್ರ ಪರೀಕ್ಷೆಗೆ ನೋಂದಣಿ ಯಾದ ಒಟ್ಟು 14943(ಗಂಡು-7714, ಹೆಣ್ಣು- 7229) ವಿದ್ಯಾರ್ಥಿಗಳ ಪೈಕಿ 14243 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಇದರಲ್ಲಿ ಒಟ್ಟು 700 (ಬಾಲಕರು- 582, ಬಾಲಕಿಯರು- 112) ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದಾರೆ. ಇದರಲ್ಲಿ ಅನುದಾನಿತ ಕಾಲೇಜಿನ 38, ಅನುದಾನ ರಹಿತ ಕಾಲೇಜಿನ 303, ಸರಕಾರಿ ಕಾಲೇಜಿನ 359 ವಿದ್ಯಾರ್ಥಿ ಗಳು ಗೈರುಹಾಜರಾಗಿ ದ್ದಾರೆಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟಣೆ ತಿಳಿಸಿದೆ.
ಪರೀಕ್ಷೆಗೆ ನೋಂದಾಣಿಯಾದ ಒಟ್ಟು 1409 ಮುಸ್ಲಿಮ್ ವಿದ್ಯಾರ್ಥಿಗಳಲ್ಲಿ 1349(ಬಾಲಕರು- 733, ಬಾಲಕಿಯರು- 616) ಮಂದಿ ಪರೀಕ್ಷೆ ಬರೆದಿದ್ದಾರೆ. ಉಳಿದಂತೆ 60(ಬಾಲಕರು-12, ಬಾಲಕಿಯರು- 48) ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದಾರೆ.
ಗೈರು ಹಾಜರಾದ 48 ಮುಸ್ಲಿಮ್ ವಿದ್ಯಾರ್ಥಿನಿಯರ ಪೈಕಿ 20 ಮಂದಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ, ಹಿಜಾಬ್ ಹಾಕಿ ಪರೀಕ್ಷೆ ಬರೆಯಲು ಅವಕಾಶ ಇಲ್ಲದ ಕಾರಣಕ್ಕೆ ವಾಪಾಸ್ಸು ಹೋಗಿದ್ದರೆ, 28 ಮಂದಿ ಪರೀಕ್ಷಾ ಕೇಂದ್ರಗಳಿಗೆ ಆಗಮಿಸದೆ ಮನೆಯಲ್ಲಿ ಉಳಿದುಕೊಂಡಿದ್ದರು ಎಂದು ಇಲಾಖೆಯ ಉಪನಿರ್ದೇಶಕ ಮಾರುತಿ ಪತ್ರಿಕೆಗೆ ತಿಳಿಸಿದ್ದಾರೆ.
ಹೈಕೋರ್ಟ್ ಮೆಟ್ಟಿಲೇರಿದ್ದ ಉಡುಪಿಯ ಸರಕಾರಿ ಪದವಿ ಪೂರ್ವ ಮಹಿಳಾ ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿನಿಯರಾದ ವಿಜ್ಞಾನ ವಿಭಾಗದ ಮುಸ್ಕಾನ್ ಝೈನಾಬ್ ಮತ್ತು ವಾಣಿಜ್ಯ ವಿಭಾಗದ ಸಫಾ ಇಂದಿನ ಪರೀಕ್ಷೆಗೆ ಗೈರು ಹಾಜರಾಗಿದ್ದಾರೆ. ಹೈಕೋರ್ಟ್ ಮೆಟ್ಟಿಲೇರಿದ ಒಟ್ಟು ಆರು ಮಂದಿಯ ಪೈಕಿ ಉಳಿದ ನಾಲ್ವರು ದ್ವಿತೀಯ ಪಿಯು ವಿದ್ಯಾರ್ಥಿನಿಯರಾಗಿದ್ದಾರೆ.