ಒಂದು ಸಮುದಾಯವನ್ನು ಕಟ್ಟದಾಗಿ ತೋರಿಸಲು ನಾನಾ ರೀತಿಯ ಕಸರತ್ತು ನಡೆಯುತ್ತಿದೆ: ಡಾ‌‌. ಝೈನಿ ಕಾಮಿಲ್ ಸಖಾಫಿ

Update: 2022-03-31 17:16 GMT

ಉಡುಪಿ : ಕಾಶ್ಮೀರ ಫೈಲ್ಸ್, ಹಿಜಾಬ್ ಬ್ಯಾನ್, ಹಲಾಲ್ ಸರ್ಟಿಫಿಕೇಟ್ ಹೀಗೆ ಒಂದಲ್ಲ ಒಂದು ವಿಷಯವನ್ನು ಚರ್ಚಾ ವಿಷಯವನ್ನಾಗಿ ಮಾಡಿ ಒಂದು ಸಮುದಾಯವನ್ನು ಕೆಟ್ಟ ಸಮುದಾಯವನ್ನಾಗಿ ಬಿಂಬಿಸಲು ನಾನಾ ರೀತಿಯ ಕಸರತ್ತುಗಳು ನಡೆಯುತ್ತಲಿವೆ ಎಂದು ಡಾ. ಅಬ್ದುರ‌್ರಶೀದ್ ಝೈನಿ ಕಾಮಿಲ್ ಸಖಾಫಿ ಹೇಳಿದ್ದಾರೆ.

ಅವರು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ವತಿಯಿಂದ ಇಂದು ಬ್ರಹ್ಮಾವರದ ಮದರ್ ಪ್ಯಾಲೇಸ್‌ನಲ್ಲಿ ಹಮ್ಮಿಕೊಂಡ ಗಣ್ಯರ ಸಮಾವೇಶ ಮತ್ತು ವಾರ್ತಾ ಸಂಚಯದ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತಿದ್ದರು.

ವಾರ್ತಾ ಸಂಚಯವನ್ನು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಉಪಾಧ್ಯಕ್ಷರಾದ ಹಾಜಿ ಅಬ್ದುಲ್ಲಾ ಪರ್ಕಳ ಬಿಡುಗಡೆ ಗೊಳಿಸಿದರು. ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಮಾಜಿ ಜಿಲ್ಲಾಧ್ಯಕ್ಷರಾದ ಯಾಸೀನ್ ಮಲ್ಪೆ, ಎಂ.ಪಿ. ಮೊಯಿದ್ದಿನಬ್ಬ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮತ್ತು ಮೆಟ್ರಿಕ್ ಪೂರ್ವದಲ್ಲೇ ಕುರ್‌ಆನ್ ಕಂಠಪಾಠ ಮಾಡಿದ ಐವರು  ವಿದ್ಯಾರ್ಥಿ ಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ವಿವಿಧ ತಾಲೂಕುಗಳ ಅಧ್ಯಕ್ಷರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜಿಲ್ಲೆಯ ವಿವಿಧ ಸಂಘಟನೆಗಳಾದ ಜಮೀಯ್ಯತುಲ್ ಫಲಾಹ್, ನಮ್ಮ ನಾಡ ಒಕ್ಕೂಟ, ಜಮೀಯ್ಯತುಲ್ ಅಹ್ಲೇ ಹದೀಸ್, ಅಹ್ಲು ಸುನ್ನತುಲ್ ವಲ್ ಜಮಾಅತ್, ಕರ್ನಾಟಕ ಮುಸ್ಲಿಮ್ ಜಮಾಅತ್, ಜಮಾಅತೆ ಇಸ್ಲಾಮೀ ಹಿಂದ್ ಇತರೆ ಸಂಘಟನೆಯ ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಮೌಲಾ ಸ್ವಾಗತಿಸಿದರು, ಜಿ.ಎಂ. ಶರೀಫ್ ಕಾರ್ಯ ಕ್ರಮ ನಿರೂಪಿಸಿದರು. ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಇಸ್ಮಾಯಿಲ್ ಕಟಪಾಡಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News