ಕುಂದಾಪುರ ರಾ.ಹೆದ್ದಾರಿ ಸಮಸ್ಯೆ ಪರಿಹಾರಕ್ಕೆ ಎ.10 ಅಂತಿಮ ಗಡುವು: ಉಪವಿಭಾಗಾಧಿಕಾರಿ ಕೆ.ರಾಜು ಎಚ್ಚರಿಕೆ

Update: 2022-03-31 16:26 GMT

ಕುಂದಾಪುರ : ಪ್ರತಿ ಬಾರಿ ಸಭೆ ನಡೆಸಿದಾಗಲೂ ಒಂದೊಂದು ದಿನಾಂಕ ಪಡೆಯುತ್ತೀರಿ. ಆದರೆ ಕಾಮಗಾರಿಯಲ್ಲಿ ಯಾವುದೇ ಪ್ರಗತಿ ಕಂಡುಬರುತ್ತಿಲ್ಲ. ಜನರು ತುಂಬಾ ಸಮಸ್ಯೆ ಅನುಭವಿಸುತ್ತಿದ್ದಾರೆ. ಅವರ ಸಮಸ್ಯೆಗೆ ಶೀಘ್ರ ಸ್ಪಂಧಿಸುವ ಕಾರ್ಯ ಮಾಡಬೇಕು. ಎ.10ಕ್ಕೆ ನಿಮಗೆ ಅಂತಿಮ ಗಡುವು ನೀಡುತಿದ್ದೇನೆ ಎಂದು ಕುಂದಾಪುರ ಉಪವಿಭಾಗಾಧಿಕಾರಿ ಕೆ.ರಾಜು  ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

ಗುರುವಾರ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಸಂಬಂಧಪಟ್ಟ ಅಧಿಕಾರಿಗಳು, ಹಾಗೂ ಗುತ್ತಿಗೆದಾರ ಸಂಸ್ಥೆ, ಪುರಸಭೆ ಹಾಗೂ ಪೊಲೀಸ್ ಇಲಾಖೆ ಹಾಗೂ ಹೆದ್ದಾರಿ ಕಾಮಗಾರಿ ಗುತ್ತಿಗೆ ಪಡೆದ ನವಯುಗ ಸಂಸ್ಥೆ ಜೊತೆಗೆ ಕುಂದಾಪುರದ ಮಿನಿ ವಿಧಾನಸೌಧದಲ್ಲಿ ನಡೆದ  ಸಭೆಯಲ್ಲಿ  ಎಸಿ ಅವರು ಸಂಬಂಧಪಟ್ಟವರಿಗೆ ಸ್ಪಷ್ಟವಾದ ಮಾತುಗಳಲ್ಲಿ ತಾಕೀತು ಮಾಡಿದರು.

ಬಾಕಿ ಉಳಿದಿರುವ ಎಲ್ಲಾ ಕಾಮಗಾರಿಗಳನ್ನು ಮುಗಿಸಲು ಎ.10 ಅಂತಿಮ ಗಡುವಾಗಿದೆ. ಅಂದು ನಾನು ಬಂದು ಎಲ್ಲಾ ಪರಿಶೀಲನೆ ನಡೆಸುತ್ತೇನೆ. ಒಪ್ಪಿದ ಕಾಮಗಾರಿ ಮಾಡದಿದ್ದರೆ ಕಾನೂನು ಅನುಸಾರ ಕ್ರಮ ಕೈಗೊಳ್ಳುವುದು ನಿಶ್ಚಿತ ಎಂದು ಕೆ. ರಾಜು ಎಚ್ಚರಿಕೆ ನೀಡಿದರು.

ಕುಂದಾಪುರ ನಗರ ವ್ಯಾಪ್ತಿಯ ನಡುವೆ ಇಲಾಖೆಯ ಅವೈಜ್ಞಾನಿಕ ಕೆಲಸದಿಂದ ಜನರು ಹೈರಾಣಾಗಿದ್ದಾರೆ. ಸಂಬಂಧಪಟ್ಟವರ ಬೇಜವಾಬ್ದಾರಿತನದಿಂದ ಇಲಾಖಾಧಿಕಾರಿಗಳು ನಾಗರಿಕರ ಟೀಕೆಗೆ ಗುರಿಯಾಗಿದ್ದಾರೆ. ಎ.10ರೊಳಗೆ ಬಹುತೇಕ ಎಲ್ಲಾ ಸಮಸ್ಯೆಗಳ ನಿವಾರಣೆ ಮಾಡಬೇಕು. ಎಲ್ಲಾ ಸಮಸ್ಯೆ ಬಗೆ ಹರಿಸಿ ಎಂದು ಕೊನೆಯದಾಗಿ ವಿನಂತಿಸುವೆ. ಸಮಸ್ಯೆ ಬಗೆ ಹರಿಸದಿದ್ದರೆ ಮುಂದಿನ ದಿನದಲ್ಲಿ ಸೂಕ್ತ ಕಾನೂನು ಕ್ರಮಕೈಗೊಳ್ಳುವುದಾಗಿ ಎಚ್ಚರಿಸಿದರು.

ಯಾವೆಲ್ಲಾ ಕಾಮಗಾರಿಗೆ ಗಡುವು..?: ಕುಂದಾಪುರ ನಗರ ಪ್ರವೇಶಕ್ಕೆ ಕುಂದಾಪುರ ಬೊಬ್ಬರ್ಯನ ಕಟ್ಟೆ ಬಳಿ ಎಲ್‌ಐಸಿ ರಸ್ತೆ ಸಮೀಪದ ರಾ. ಹೆದ್ದಾರಿಯಿಂದ ಸರ್ವೀಸ್ ರಸ್ತೆ ಮೂಲಕವಾಗಿ ಅನುಕೂಲ ಕಲ್ಪಿಸಲು ಕ್ರಮಕೈಗೊಂಡು ಎ.11ರಿಂದ ನಗರ ಪ್ರವೇಶಕ್ಕೆ ಪ್ರಾಯೋಗಿಕವಾಗಿ ವ್ಯವಸ್ಥೆ ಮಾಡಬೇಕು.

ಒಂದು ತಿಂಗಳ ಮಟ್ಟಿಗೆ ಈ ಪ್ರಾಯೋಗಿಕ ಸಂಚಾರ ವ್ಯವಸ್ಥೆಯಿರಲಿದ್ದು ಯಾವುದೇ ಅವಘಡ ಸಂಭವಿಸಿದಲ್ಲಿ ಈ ಪ್ರದೇಶ ಬ್ಲಾಕ್‌ಸ್ಪಾಟ್ ಆಗಿ ಗುರುತಿಸಿ ಕೊಳ್ಳಲಿದೆ. ಹೆದ್ದಾರಿಯಲ್ಲಿ ದಾರಿದೀಪವಿಲ್ಲದೆ ಈಗಾಗಲೇ ಹಲವು ಅವಘಡಗಳು ಸಂಭವಿಸಿದ್ದು, ಎ.10ರೊಳಗೆ ದಾರಿದೀಪ ಸಮಸ್ಯೆ ಬಗೆಹರಿಸಿ ಅಪಘಾತ ತಪ್ಪಿಸಬೇಕು.

ಇನ್ನು ನಗರ ಪ್ರವೇಶಿಸುವ ಸೂಕ್ತ ಸ್ಥಳದಲ್ಲಿ ’ಕುಂದಾಪುರ’ ಎಂದು ದೊಡ್ಡ  ನಾಮಫಲಕ ಅಳವಡಿಸಲು ಸೂಚನೆ. ಶಾಸ್ತ್ರೀ ಸರ್ಕಲ್ ಬಳಿ ಸರ್ವೀಸ್ ರಸ್ತೆಗೆ ಡಾಮರೀಕರಣ ಮಾಡಲು ಸೂಚನೆ.  ಎ.5 ರೊಳಗೆ ಶಾಸ್ತ್ರೀ ಸರ್ಕಲ್ ಫ್ಲೈಓವರ್ ಕೆಳಭಾಗದಲ್ಲಿರುವ ಸಂಬಂಧಿತ ಕಾಮಗಾರಿ ನಡೆಸಿದ ಗುಜರಿ ವಸ್ತುಗಳನ್ನು ತೆರವು ಮಾಡಬೇಕು. ಮಳೆಗಾಲ ಆರಂಭವಾಗುತ್ತಿದ್ದು ಹೆದ್ದಾರಿ ಸಮೀಪದ ಚರಂಡಿ ನಿರ್ವಹಣೆ ಹಾಗೂ ಫ್ಲೈಓವರ್‌ನಿಂದ ಮಳೆ ನೀರು ರಸ್ತೆಗೆ ಬೀಳದಂತೆ ಕ್ರಮ ವಹಿಸಲು ಎ.30 ತನಕ ಗಡುವು ನೀಡಲಾಗಿದೆ.

ಎಸಿ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಕುಂದಾಪುರ ತಹಶೀಲ್ದಾರ್ ಕಿರಣ್ ಗೌರಯ್ಯ, ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ರಾಷ್ಟ್ರೀಯ ಹೆದ್ದಾರಿ ಇಂಜಿನಿಯರ್‌ಗಳು ಹಾಗೂ ಸಂಬಂದಿಸಿದವರು ಅಲ್ಲದೇ ನವಯುಗ ಕಂಪೆನಿಯ ಅಧಿಕಾರಿಗಳು ಉಪಸ್ಥಿತಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News