ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನಾರಂಭಿಸಲು ಸಾಧ್ಯವಿಲ್ಲ: ಸಚಿವ ಮುರುಗೇಶ್ ನಿರಾಣಿ

Update: 2022-04-04 15:17 GMT

ಉಡುಪಿ : ಬ್ರಹ್ಮಾವರ ಸಕ್ಕರೆ ಕಾರ್ಖಾನೆಗಾಗಿ ಕಬ್ಬು ಬೆಳೆಸುತ್ತಿದ್ದ ಭೂಮಿ ಯನ್ನು ಪರಿವರ್ತನೆ ಮಾಡಿ ಅಡಿಕೆ ಬೆಳೆಸಲಾಗುತ್ತಿದೆ. ಉಳಿದ ಭಾಗಕ್ಕೆ ಹೋಲಿಕೆ ಮಾಡಿದರೆ ಇಲ್ಲಿ ಬೆಳೆದ ಕಬ್ಬಿನಲ್ಲಿ ಸಕ್ಕರೆ ಬರುವುದು ಕಡಿಮೆ. ಆದುದರಿಂದ ಈಗಾಗಲೇ ಮುಚ್ಚಿರುವ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯನ್ನು ಮತ್ತೆ ಸಕ್ಕರೆ ಕಾರ್ಖಾನೆಯಾಗಿ ಪುನಾರಂಭಿಸಲು ಸಾಧ್ಯವೇ ಇಲ್ಲ ಎಂದು ರಾಜ್ಯ ಬೃಹತ್ ಹಾಗೂ ಮಾಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.

ಇಂದ್ರಾಳಿಯಲ್ಲಿರುವ ಉಡುಪಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಚೇರಿಯಲ್ಲಿ ಸೋಮವಾರ ನಡೆದ ಕೈಗಾರಿಕೋದ್ಯಮಿ ಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.

ಕರಾವಳಿಯಲ್ಲಿ ಬೆಳೆದ ಒಂದು ಟನ್ ಕಬ್ಬಿನಲ್ಲಿ ೯೦-೯೨ಕೆ.ಜಿ. ಸಕ್ಕರೆ ಬಂದರೆ, ಉತ್ತರ ಕರ್ನಾಟಕದಲ್ಲಿ ೧೨೦-೧೨೫ಕೆ.ಜಿ., ಮೈಸೂರು ಭಾಗದಲ್ಲಿ ೯೫-೧೦೦ ಕೆ.ಜಿ., ಮದ್ಯ ಕರ್ನಾಟಕದಲ್ಲಿ ೧೦೦-೧೧೫ಕೆ.ಜಿ. ತೆಗೆಯಬಹುದಾಗಿದೆ. ಇದಕ್ಕೆ ಆಯಾ ಪ್ರದೇಶದ ಹಾವಮಾನ, ಮಣ್ಣಿನ ಗುಣ ಕಾರಣವಾಗಿದೆ. ಕಬ್ಬಿಗಿಂತ ಅಡಿಕೆಯಲ್ಲಿ ಹೆಚ್ಚಿನ ಲಾಭ ಇರುವುದರಿಂದ ಇಲ್ಲಿನ ಜನ ಇನ್ನು ಅಡಿಕೆಯಿಂದ ಕಬ್ಬಿಗೆ ಪರಿವರ್ತನೆ ಆಗುವುದಿಲ್ಲ. ಆದುದರಿಂದ ಸಕ್ಕರೆ ಕಾರ್ಖಾನೆ ಆರಂಭ ಕಷ್ಟ ಸಾಧ್ಯವಾಗಿದೆ ಎಂದರು.

‘ಉದ್ಯಮಿ ಆಗು ಉದ್ಯೋಗ ನೀಡು’ ಕಾರ್ಯಕ್ರಮವನ್ನು ಮತ್ತೆ ಮುಂದುವರೆಸಲಾಗುವುದು. ಪ್ರತಿ ಜಿಲ್ಲೆಯಲ್ಲೂ ಇದನ್ನು ನಡೆಸಲಾಗುವುದು. ಪ್ರತಿ ಕಾರ್ಯಕ್ರಮದಲ್ಲಿ ಕನಿಷ್ಠ ೧೦ಸಾವಿರ ಪದವೀಧರರು ಭಾಗವಹಿಸಲಿರುವರು. ಮಾಲಿನ್ಯ ನಿಯಂತ್ರಣ ಮಂಡಳಿಯವರ ಹೆಚ್ಚಿಸಿರುವ ದರವನ್ನು ತಕ್ಷಣ ಇಳಿಸುವಂತೆ ಸೂಚನೆ ನೀಡಲಾಗಿದೆ. ಕೈಗಾರಿಕೆ ಕ್ಷೇತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರಕ್ಕಾಗಿ ಕೈಗಾರಿಕಾ ಅದಾಲತ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದು, ಇದರಲ್ಲಿ ಸಲ್ಲಿಕೆ ಯಾದ ಅಹವಾಲುಗಳಲ್ಲಿ ಶೇ.೮೦-೯೦ರಷ್ಟು ಇತ್ಯರ್ಥ ಪಡಿಸಲಾಗಿದೆ ಎಂದರು.

ಬೆಂಗಳೂರಿನಲ್ಲಿ ಮೇ ತಿಂಗಳಲ್ಲಿ ನಡೆಯುವ ಕೈಗಾರಿಕಾ ಅದಾಲತ್ ಮತ್ತು ನವೆಂಬರ್‌ನಲ್ಲಿ ನಡೆಯುವ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯ ಉದ್ದಿಮೆದಾರರು ಭಾಗವಹಿಸಿ ಪ್ರಯೋಜನ ಪಡೆಯಬೇಕು. ಕೈಗಾರಿಕೆಗಳ ಅಭಿವೃದ್ಧಿಗೆ ಸರಕಾರದಿಂದ ನೀಡುವ ಸಾಲ ಮತ್ತು ಸಬ್ಸಿಡಿ ಸೌಲಭ್ಯ ಗಳನ್ನು ಯಶಸ್ವಿಯಾಗಿ ಬಳಸಿಕೊಳ್ಳಬೇಕು ಎಂದರು.

ಶಾಸಕ ರಘುಪತಿ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ್ ಕಲ್ಮಾಡಿ, ಪವರ್ ಅಧ್ಯಕ್ಷೆ ಪೂನಾಂ ಶೆಟ್ಟಿ, ಡಾ.ವಿಜಯೇಂದ್ರ ವಸಂತ್, ಪ್ರಶಾಂತ್ ಬಾಳಿಗಾ ಮೊದಲಾದವರು ಉಪಸ್ಥಿತರಿದ್ದರು.

ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ರತ್ನಾಕರ್ ಇಂದ್ರಾಳಿ ಕಾರ್ಯಕ್ರಮ ನಿರೂಪಿಸಿದರು.

ಬಳ್ಕುಂಜೆಯಲ್ಲಿ 1000 ಎಕರೆ ಭೂಮಿ ಗುರುತು

ಕೈಗಾರಿಕಾ ವಲಯ ಸ್ಥಾಪನೆಗಾಗಿ ಉಡುಪಿ ಜಿಲ್ಲೆಯ ಬಳ್ಕುಂಜೆಯಲ್ಲಿ ಒಂದು ಸಾವಿರ ಎಕರೆ ಜಾಗವನ್ನು ಗುರುತಿಸಲಾಗಿದೆ. ಅದರಲ್ಲಿ ೧೪೫ ಎಕರೆ ಸರಕಾರ ಜಾಗ ಇದೆ. ಮುಂದಿನ ೩-೪ ತಿಂಗಳಲ್ಲಿ ಇಲ್ಲಿನ ಎಲ್ಲ ಜಾಗವನ್ನು ಕೈಗಾರಿಕೆಗೆ ಸಿದ್ಧಪಡಿಸಿಕೊಡಲಾಗುವುದು. ಅದೇ ರೀತಿ ಕೋಟ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ೨೫೦ ಎಕರೆ ಜಾಗವನ್ನು ಗುರುತಿಸಲಾಗಿದೆಂದು ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.

ಶಿರಾಡಿ ಘಾಟ್‌ನ್ನು ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿಪಡಿಸಿ, ಟನಲ್ ನಿರ್ಮಿಸಲು ನಿರ್ಧರಿಸಲಾಗಿದೆ. ಇದರಿಂದ ಬೆಂಗಳೂರು- ಮಂಗಳೂರು ೩೦-೪೦ಕಿ.ಮೀ. ಹತ್ತಿರವಾಗಲಿದೆ. ಗಂಗೊಳ್ಳಿ ಸಮೀಪ ಬಂದರು ನಿರ್ಮಿಸುವ ಕುರಿತ ಪ್ರಸ್ತಾವನೆಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗುವುದು.  ಬೆಂಗಳೂರು -ಮಂಗಳೂರು ಇಂಡಸ್ಟ್ರೀಯಲ್ ಕಾರಿಡಾರ್ ಮಾಡಲಾಗುವುದು. ಅದಕ್ಕೆ ಕೇಂದ್ರ ಸರಕಾರ ಒಂದು ಸಾವಿರ ಕೋಟಿ ಅನುದಾನ ನೀಡಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News