ಖಾಸಗಿ ವೈದ್ಯಕೀಯ ಸಂಸ್ಥೆಯ ಕೈಗೆ ಸಿಲುಕಿ ನಲುಗಿದ ‘ವೆನ್ಲಾಕ್’ ಆಸ್ಪತ್ರೆ
ಮಂಗಳೂರು, ಎ.7: ದಿನಂಪ್ರತಿ ಸಾವಿರಕ್ಕೂ ಅಧಿಕ ಹೊರ ಮತ್ತು ಒಳ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಸುಮಾರು 175 ವರ್ಷಗಳ ಇತಿಹಾಸವಿರುವ ವೆನ್ಲಾಕ್ ಆಸ್ಪತ್ರೆಯು ಕಳೆದ 72 ವರ್ಷಗಳಿಂದ ಖಾಸಗಿ ವೈದ್ಯಕೀಯ ಸಂಸ್ಥೆಯೊಂದರ ಕೈಗೆ ಸಿಲುಕಿ ನಲುಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಹಲವು ವರ್ಷಗಳಿಂದ ಕೇಳಿ ಬರುತ್ತಿರುವ ಈ ಆರೋಪದ ಮಧ್ಯೆಯೇ ವೆನ್ಲಾಕ್ ಆಸ್ಪತ್ರೆಯನ್ನೇ ಕೇಂದ್ರವಾಗಿಟ್ಟುಕೊಂಡು ಸರಕಾರಿ ಮೆಡಿಕಲ್ ಕಾಲೇಜು ತೆರೆಯಬೇಕು ಎಂಬ ಸಾರ್ವಜನಿಕರ ಬೇಡಿಕೆಗೆ ಈವರೆಗೆ ಸೂಕ್ತ ಸ್ಪಂದನ ಸಿಕ್ಕಿಲ್ಲ. ಯಾವುದೇ ಪಕ್ಷದ ಸರಕಾರ ಆಡಳಿತಕ್ಕೆ ಬಂದರೂ ಕೂಡ ಈ ಬೇಡಿಕೆಯನ್ನು ಈಡೇರಿಸುವ ಇಚ್ಛಾಶಕ್ತಿ ವ್ಯಕ್ತಪಡಿಸಿಲ್ಲ ಎಂಬ ಮಾತು ವ್ಯಕ್ತವಾಗುತ್ತಿದೆ. ಅದಕ್ಕೆ ಖಾಸಗಿ ಮೆಡಿಕಲ್ ಕಾಲೇಜುಗಳ ಲಾಬಿಯೇ ಕಾರಣ ಎಂದು ಹೇಳಲಾಗುತ್ತಿದೆ.
ವೆನ್ಲಾಕ್ ಆಸ್ಪತ್ರೆಯ ನಿರ್ವಹಣೆಯ ಜವಾಬ್ದಾರಿಯನ್ನು ಸರಕಾರವು 1950ರಲ್ಲೇ ‘ಕೆಎಂಸಿ’ಗೆ ವಹಿಸಿದೆ. ಆದರೆ ದಿನಂಪ್ರತಿ ಚಿಕಿತ್ಸೆಗೆ ಬರುವ ರೋಗಿಗಳ ಸಂಖ್ಯೆಗೆ ಅನುಗುಣವಾಗಿ ಕೆಎಂಸಿಯು ಇಲ್ಲಿಗೆ ನುರಿತ ವೈದ್ಯರನ್ನು ಈವರೆಗೂ ನಿಯುಕ್ತಿಗೊಳಿಸುತ್ತಿಲ್ಲ. ವೈದ್ಯರ ಕೊರತೆಯಿಂದಾಗಿ ರೋಗಿಗಳು ಸಾಕಷ್ಟು ಸಮಸ್ಯೆಯನ್ನು ಎದುರಿಸುವಂತಾಗಿದೆ. ವೈದ್ಯರಲ್ಲದೆ ನರ್ಸಿಂಗ್ ಸಿಬ್ಬಂದಿಯ ಕೊರತೆಯೂ ಇದ್ದು, ಇದು ಕೂಡ ಅನೇಕ ಸಮಸ್ಯೆಗೆ ಕಾರಣವಾಗಿದೆ.
ನುರಿತ ವೈದ್ಯರ ಜೊತೆಗೆ ಹತ್ತಾರು ವೈದ್ಯಕೀಯ ವಿದ್ಯಾರ್ಥಿಗಳು ಬೋಧನೆಯ ಸಲುವಾಗಿ ರೋಗಿಗಳ ಸುತ್ತಮುತ್ತ ಇರುವುದರಿಂದ ರೋಗಿಗಳು ಮುಕ್ತವಾಗಿ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ರೋಗಿಗಳು ಮತ್ತವರ ಆರೈಕೆಗೆ ಬರುವ ಕುಟುಂಬದ ಸದಸ್ಯರು ಆರೋಪಿಸುತ್ತಾರೆ.
ಅತ್ಯಂತ ಕಡಿಮೆ ವೇತನಕ್ಕೆ ಹೊರಗುತ್ತಿಗೆ ಆಧಾರದ ಮೇಲೆ ದುಡಿಯುವ ಬಹುತೇಕ ವೈದ್ಯರು ಉತ್ತರ ಭಾರತೀಯರಾಗಿದ್ದಾರೆ. ಇವರಿಗೆ ಸ್ಥಳೀಯ ರೋಗಿಗಳ ಜೊತೆ ಸಂವಹನ ನಡೆಸಲು ಭಾಷಾ ಸಮಸ್ಯೆಯೂ ಎದುರಾಗಿದೆ. ಇದರ ನೇರ ಪರಿಣಾಮ ಬಡ ರೋಗಿಗಳ ಮೇಲಾಗುತ್ತಿರುವುದು ವಿಪರ್ಯಾಸ.
ವೈದ್ಯರ ಕೊರತೆ ಒಂದೆಡೆಯಾದರೆ ಔಷಧದ ಕೊರೆತಯೂ ಇಲ್ಲಿದೆ. ಅಂದರೆ ಆಧುನಿಕ ಚಿಕಿತ್ಸೆಗೆ ಸಂಬಂಧಿಸಿದಂತೆ ಉತ್ತಮ ಗುಣಮಟ್ಟದ ಔಷಧಗಳು ಸಕಾಲದಲ್ಲಿ ಇಲ್ಲಿ ಸಿಗುತ್ತಿಲ್ಲ. ಹಾಗಾಗಿ ಉಚಿತ ಚಿಕಿತ್ಸೆಗಾಗಿ ಬೇರೆ ಬೇರೆ ಕಡೆಯಿಂದ ಬರುವ ರೋಗಿಗಳ ಕುಟುಂಬಸ್ಥರು ಹೊರಗಡೆಯಿಂದ ಔಷಧಗಳನ್ನು ಖರೀದಿಸುವ ಅನಿವಾರ್ಯತೆಗೆ ಸಿಲುಕಿದ್ದಾರೆ ಎಂದು ತಿಳಿದು ಬಂದಿದೆ.
ಇತ್ತೀಚಿನ ವರ್ಷಗಳಲ್ಲಂತೂ ವೆನ್ಲಾಕ್ ಆಸ್ಪತ್ರೆಯ ಆವರಣದಲ್ಲಿ ಹೊಸ ಹೊಸ ಕಟ್ಟಡಗಳು ನಿರ್ಮಾಣವಾಗುತ್ತಿದೆ. ಗುಣಮಟ್ಟದ ಪೀಠೋಪಕರಣ, ಬೆಡ್ ಇತ್ಯಾದಿಗಳನ್ನು ಜೋಡಿಸಲಾಗುತ್ತದೆ.
ವೆನ್ಲಾಕ್ ಆಸ್ಪತ್ರೆಯು ಈಗ ಜಿಲ್ಲಾಮಟ್ಟದ ಆಸ್ಪತ್ರೆಯಾಗಿ ಉಳಿದಿಲ್ಲ. ಇಲ್ಲೀಗ ಸುಮಾರು 8 ಜಿಲ್ಲೆಗಳ ರೋಗಿಗಳು ಚಿಕಿತ್ಸೆ-ಸೇವೆಗಾಗಿ ಬರುವ ಕಾರಣ ಪ್ರಾದೇಶಿಕ ಆಸ್ಪತ್ರೆಯಾಗಿ ಗುರುತಿಸಲ್ಪಟ್ಟಿದೆ. ನುರಿತ ವೈದ್ಯರ ಮತ್ತು ವಿವಿಧ ದರ್ಜೆಯ ಸಿಬ್ಬಂದಿ ವರ್ಗಗಳ ಕೊರತೆ ಹಾಗೂ ಉತ್ತಮ ಗುಣಮಟ್ಟದ ಔಷಧಗಳ ಪೂರೈಕೆಯಾಗದಿರುವುದು ಪ್ರಾದೇಶಿಕ ಆಸ್ಪತ್ರೆಯಾಗಿ ಗುರುತಿಸಲ್ಪಟ್ಟಿರುವ ವೆನ್ಲಾಕ್ ಆಸ್ಪತ್ರೆಯ ಹಿರಿಮೆಗೆ ಕಪ್ಪು ಚುಕ್ಕೆ ಎಂಬಂತಾಗಿದೆ.
ಸುಸಜ್ಜಿತ ಕಟ್ಟಡ, ಪೀಠೋಪಕರಣ, ವೈದ್ಯಕೀಯ ಸಲಕರಣಗಳ ಮಧ್ಯೆಯೂ ಇಲ್ಲಿ ಸಾಕಷ್ಟು ಐಸಿಯು ಸೆಂಟರ್ ಮತ್ತು ಬರ್ನಿಂಗ್ ಸೆಂಟರ್ ಇಲ್ಲ ಎಂಬ ಕೂಗಿದೆ. ದಿನಕ್ಕೆ ಸಾವಿರಕ್ಕೂ ಅಧಿಕ ರೋಗಿಗಳು ಆಗಮಿಸುವಾಗ ಹೆಚ್ಚುವರಿ ಐಸಿಯು ಕೇಂದ್ರಗಳನ್ನು ತೆರೆಯಬೇಕು ಎಂಬ ಬೇಡಿಕೆಗೆ ಇನ್ನೂ ಸೂಕ್ತ ಮನ್ನಣೆ ಸಿಕ್ಕಿಲ್ಲ.
ವೆನ್ಲಾಕ್ ಆಸ್ಪತ್ರೆಗೆ 175 ವರ್ಷಗಳ ಇತಿಹಾಸವಿದೆ. ಅಂದರೆ 1848ರಲ್ಲಿ ಈ ಆಸ್ಪತ್ರೆಯನ್ನು ನಿರ್ಮಿಸಲಾಯಿತು. ಈಗಿರುವ ಲೇಡಿಗೋಷನ್ ಆಸ್ಪತ್ರೆಯ ಸ್ಥಳದಲ್ಲಿ ಖಾಸಗಿ ಬಾಡಿಗೆ ಕಟ್ಟಡದಲ್ಲಿ ಈ ಆಸ್ಪತ್ರೆಯನ್ನು ತೆರೆಯಲಾಯಿತು.1851ರಲ್ಲಿ ಇದನ್ನು ಈಗ ಇರುವ ವೆನ್ಲಾಕ್ ಆಸ್ಪತ್ರೆಯ ಜಾಗಕ್ಕೆ ಸ್ಥಳಾಂತರಿಸಲಾಯಿತು. ಇಲ್ಲಿ ಸ್ವಂತ ಕಟ್ಟಡದಲ್ಲಿ ಆಸ್ಪತ್ರೆಯನ್ನು ನಿರ್ಮಿಸಲಾಯಿತು. 1871ರಲ್ಲಿ ಇದನ್ನು ಮಂಗಳೂರು ನಗರಸಭೆಯ ಉಸ್ತುವಾರಿಗೆ ವಹಿಸಿಕೊಡಲಾಯಿತು. 1919ರಲ್ಲಿ ಎಲ್ಲಾ ಜಿಲ್ಲಾ ಆಸ್ಪತ್ರೆಗಳನ್ನು ಮದ್ರಾಸ್ ಪ್ರೆಸಿಡೆನ್ಸಿಯು ತನ್ನ ವಶಕ್ಕೆ ಪಡೆದುಕೊಂಡಿತು. ಆ ವೇಳೆ ಮದ್ರಾಸ್ ಗವರ್ನರ್ ಆಗಿ ಲಾರ್ಡ್ ವೆನ್ಲಾಕ್ ಕಾರ್ಯನಿರ್ವಹಿಸುತ್ತಿದ್ದರು. ಕೇವಲ ಅದೊಂದೇ ಕಾರಣಕ್ಕೆ ಮಂಗಳೂರಿನ ಸರಕಾರಿ ಜಿಲ್ಲಾ ಆಸ್ಪತ್ರೆಗೆ ವೆನ್ಲಾಕ್ ಆಸ್ಪತ್ರೆ ಎಂದು ಹೆಸರಿಸಲಾಯಿತು. 1950ರಲ್ಲಿ ವೆನ್ಲಾಕ್ ಆಸ್ಪತ್ರೆಯ ಸೌಲಭ್ಯವನ್ನು ಡಾ.ಟಿಎಂಎ ಪೈ ಅವರು ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ತೆಕ್ಕೆಗೆ ವಹಿಸಿಕೊಳ್ಳುವಲ್ಲಿ ಯಶಸ್ವಿಯಾದರು. 1927ರಲ್ಲಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಿಂದ ಮಹಿಳೆಯರ ಮತ್ತು ಮಕ್ಕಳ ವಿಭಾಗವನ್ನು ಪ್ರತ್ಯೇಕಿಸಲಾಯಿತು. ಆಗಿನ ಮದ್ರಾಸ್ ಗವರ್ನರ್ ಆಗಿದ್ದ ವೈಕೌಂಟ್ ಗೋಶನ್ ತನ್ನ ಪತ್ನಿಯೊಂದಿಗೆ ಮಹಿಳೆಯರ ಮತ್ತು ಮಕ್ಕಳ ವಿಭಾಗದ ಆಸ್ಪತ್ರೆಗೆ ಭೇಟಿ ನೀಡಿದ ನೆನಪಿಗಾಗಿ ಲೇಡಿಗೋಶನ್ ಆಸ್ಪತ್ರೆ ಎಂದು ನಾಮಕರಣ ಮಾಡಲಾಯಿತು.
ವೆನ್ಲಾಕ್ ಆಸ್ಪತ್ರೆಗೆ ಒಟ್ಟು 619 ಹುದ್ದೆಗಳು ಮಂಜೂರಾಗಿತ್ತು. ಆ ಪೈಕಿ 244 ಹುದ್ದೆಗಳು ಭರ್ತಿಯಾಗಿವೆ. 375 ಹುದ್ದೆಗಳು ಖಾಲಿ ಬಿದ್ದಿತ್ತು. ಇತ್ತೀಚೆಗಷ್ಟೇ ಹೊರಗುತ್ತಿಗೆ ಆಧಾರದ ಮೇಲೆ ಗ್ರೂಪ್ ಡಿ ನೌಕರರ ನೇಮಕಾತಿಗೆ ಸರಕಾರ ಅನುಮತಿ ನೀಡಿತ್ತು. ಅದರಂತೆ 242 ಡಿ ಗ್ರೂಪ್ ನೌಕರರ ಪೈಕಿ 178 ಹುದ್ದೆಗಳನ್ನು ತುಂಬಲಾಗಿದೆ. ಸದ್ಯ 197 ಹುದ್ದೆಗಳು ಖಾಲಿ ಇವೆ. ಅವುಗಳನ್ನು ತುಂಬಲು ಸರಕಾರಕ್ಕೆ ಮನವಿ ಮಾಡಲಾಗಿದೆ. ವೈದ್ಯರು, ಸಿಬ್ಬಂದಿ ವರ್ಗದ ಕೊರತೆಯ ಮಧ್ಯೆಯೂ ಉತ್ತಮ ಸೇವೆ ನೀಡಲು ಎಲ್ಲರೂ ಶ್ರಮಿಸುತ್ತಿದ್ದೇವೆ.
ಡಾ.ಸದಾಶಿವ ಶಾನುಭೋಗ್
ದ.ಕ. ಜಿಲ್ಲಾ ಶಸ್ತ್ರಚಿಕಿತ್ಸರು/ಅಧೀಕ್ಷಕರು, ವೆನ್ಲಾಕ್ ಆಸ್ಪತ್ರೆ, ಮಂಗಳೂರು
► ದ.ಕ., ಉತ್ತರ ಕನ್ನಡ, ಉಡುಪಿ, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಹಾಗೂ ಕಾಸರಗೋಡು ಜಿಲ್ಲೆಯ ರೋಗಿಗಳು ಇಲ್ಲಿಗೆ ಖಾಯಂ ಆಗಿ ಬರುತ್ತಿದ್ದಾರೆ. ಇನ್ನುಳಿದಂತೆ ತುರ್ತಾಗಿ ಧಾರವಾಡ, ದಾವಣಗೆರೆ, ಬಾಗಲಕೋಟೆ ಮತ್ತಿತರ ಜಿಲ್ಲೆಗಳ ರೋಗಿಗಳೂ ಇಲ್ಲಿಗೆ ಬರುತ್ತಾರೆ. ಪ್ರಾದೇಶಿಕ ಆಸ್ಪತ್ರೆಯಾಗಿ ಗುರುತಿಸಲ್ಪಟ್ಟಿದ್ದರೂ ಕೂಡ ಸರಕಾರದ ಅನುದಾನ ಮಾತ್ರ ಜಿಲ್ಲಾ ಮಟ್ಟದ ಆಸ್ಪತ್ರೆಗಳಿಗೆ ನೀಡುವಷ್ಟೇ ಇಲ್ಲಿಗೂ ಬಿಡುಗಡೆ ಮಾಡಲಾಗುತ್ತದೆ. ಎಲ್ಲವನ್ನೂ ‘ಕೆಎಂಸಿ’ಯವರೇ ನಿಭಾಯಿಸುತ್ತಿರುವ ಕಾರಣ ಸರಕಾರವೂ ವೆನ್ಲಾಕ್‌ಗೆ ವೈದ್ಯರು, ಸಿಬ್ಬಂದಿ ನೇಮಕದ ಬಗ್ಗೆ ಹೆಚ್ಚು ಆಸಕ್ತಿ ವಹಿಸುತ್ತಿಲ್ಲ ಎಂಬ ಆರೋಪವೂ ಇದೆ.
► ವೆನ್ಲಾಕ್ ಆಸ್ಪತ್ರೆಯು ಎರಡೆರಡು ಇಲಾಖೆಯ ಮಧ್ಯೆ ಸಿಲುಕಿ ನಲುಗುತ್ತಿದೆ. ಅಂದರೆ ರಾಜ್ಯ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಅಧೀನದಲ್ಲಿ ವೆನ್ಲಾಕ್ ಆಸ್ಪತ್ರೆ ಬರುತ್ತದೆ. ಆದರೆ ಸಿಬ್ಬಂದಿ ವರ್ಗವು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನಕ್ಕೆ ಬರುತ್ತಾರೆ. ಇದರಿಂದ ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ಆಗಾಗ ಗೊಂದಲ ಸೃಷ್ಟಿಯಾಗುತ್ತಿದೆ. ಹೊಂದಾಣಿಕೆಯ ಕೊರತೆಯೂ ಕಾಣಿಸುತ್ತಿದೆ.
► ಇತರ ಜಿಲ್ಲೆಗೆ ಹೋಲಿಸಿದರೆ ಇಲ್ಲಿ ಭ್ರಷ್ಟಾಚಾರ ಕಡಿಮೆ ಇದೆ. ರೋಗಿಗಳನ್ನು ಕಾಯಿಸುವ ಪ್ರಮೇಯವೂ ಇಲ್ಲ. ದಿನಂಪ್ರತಿ ಬರುವ ಸಾವಿರಕ್ಕೂ ಅಧಿಕ ರೋಗಿಗಳಿಗೆ ವೈದ್ಯರು, ಸಿಬ್ಬಂದಿಯ ಕೊರತೆಯ ಮಧ್ಯೆಯೂ ಕರ್ತವ್ಯನಿರತ ವೈದ್ಯರು ಮತ್ತು ಸಿಬ್ಬಂದಿ ವರ್ಗವು ಉತ್ತಮ ಸೇವೆ ನೀಡುತ್ತಿದ್ದಾರೆ. ಕೋವಿಡ್-19 ಸಂದರ್ಭದಲ್ಲಂತೂ ವೆನ್ಲಾಕ್ ಆಸ್ಪತ್ರೆಯಲ್ಲಿ ನೀಡಲಾದ ಸೇವೆಯ ಬಗ್ಗೆ ಎರಡು ಮಾತಿಲ್ಲ ಎಂದು ಇಲ್ಲಿನ ಮಾಜಿ ವೈದ್ಯರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.