ಸಿಬ್ಬಂದಿ ಕೊರತೆಯಿಂದ ಸೊರಗುತ್ತಿದೆ ಸುಳ್ಯ ತಾಲೂಕು ಆಸ್ಪತ್ರೆ

Update: 2022-04-07 04:26 GMT

ಸಿಬ್ಬಂದಿ ಕೊರತೆ ಬಗ್ಗೆ ಮೇಲಧಿಕಾರಿ ಗಮನಕ್ಕೆ ತಂದಿದ್ದೇನೆ. ರೇಡಿಯಾಲಜಿಸ್ಟ್, ಅನುಭವಿ ಲ್ಯಾಬ್ ಟೆಕ್ನಿಶಿಯನ್ಸ್, ಎಕ್ಸ್‌ರೇ ಆಪರೇಟರ್ಸ್, ಫಾರ್ಮಾಸಿಸ್ಟ್‌ಗಳ ಕೊರತೆಯಿಂದ ಜನರಿಗೆ ಸಮರ್ಪಕ ಆರೋಗ್ಯ ಸೇವೆ ನೀಡುವಲ್ಲಿ ತೊಂದರೆಯಾಗುತ್ತಿರುವುದು ನಿಜ.

-ಡಾ.ಕರುಣಾಕರ ಕೆ.ವಿ. ಆಡಳಿತಾಧಿಕಾರಿ, ಸುಳ್ಯ ತಾಲೂಕು ಆಸ್ಪತ್ರೆ

 ಸುಳ್ಯ, ಎ.6: ಸುಳ್ಯ ತಾಲೂಕು ಆಸ್ಪತ್ರೆಯು ಸೂಕ್ತ ಮೂಲಭೂತ ಸೌಲಭ್ಯಗಳ ಕೊರತೆಯ ನಡುವೆ ವ್ಯವಸ್ಥೆಯ ಸದುಪಯೋಗಕ್ಕೆ ಸಾಕಷ್ಟು ಸಿಬ್ಬಂದಿಯೂ ಇಲ್ಲದೆ ಸೊರಗಿದೆ. ಪರಿಣಾಮ ರೋಗಿಗಳು ತಪಾಸಣೆಗೆ ದುಬಾರಿ ಹಣ ತೆತ್ತು ಖಾಸಗಿ ಆಸ್ಪತ್ರೆಗಳಿಗೆ ತೆರಳುವ ಅನಿವಾರ್ಯಕ್ಕೆ ಸಿಲುಕಿದ್ದಾರೆ.

ಅತ್ಯುತ್ತಮ ಲ್ಯಾಬ್, ಎಕ್ಸ್‌ರೇ ಯಂತ್ರಗಳಿದ್ದರೂ ಆಪರೇಟರ್‌ಗಳ ಕೊರತೆಯಿಂದ ಸಣ್ಣಪುಟ್ಟ ಪರೀಕ್ಷೆ ಗಳಿಗೂ ವೈದ್ಯರು ಖಾಸಗಿ ಲ್ಯಾಬ್‌ಗಳಿಗೆ ತೆರಳುವಂತೆ ಸೂಚಿಸುತ್ತಾರೆ.

ಆಸ್ಪತ್ರೆಯಲ್ಲಿ 2 ಹಿರಿಯ ಹಾಗೂ 2 ಕಿರಿಯ ಲ್ಯಾಬ್ ಟೆಕ್ನಿಶಿಯನ್‌ಗಳ ಹುದ್ದೆಗಳು ಖಾಲಿ ಇವೆ. ನಾಲ್ವರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗಿದೆ. ಆದರೆ ಯಂತ್ರದಲ್ಲಿ ಪರೀಕ್ಷೆ ನಡೆಸಲು ತಜ್ಞರಿಲ್ಲದ ಕಾರಣ ಖಾಸಗಿಯಾಗಿ ಪರೀಕ್ಷೆ ಮಾಡಿಸಿಕೊಳ್ಳುವುದು ಅನಿವಾರ್ಯವಾಗಿದೆ.

ಸ್ಕಾನಿಂಗ್ ಯಂತ್ರ ಸೇವೆಗೆ ಸಿದ್ಧವಿದ್ದರೂ ಅನುಭವಿ ರೇಡಿಯಾಲಜಿ ತಜ್ಞರ ನೇಮಕವಾಗಿಲ್ಲ. ಹೀಗಾಗಿ ಯಂತ್ರ ಪ್ರಯೋಜನಕ್ಕೆ ಬರುತ್ತಿಲ್ಲ. ಅಂತರ್‌ರಾಜ್ಯ ಗಡಿಯಲ್ಲಿ ಕೋವಿಡ್ ತಪಾಸಣೆಗಾಗಿ ಲ್ಯಾಬ್ ಟೆಕ್ನೀಶಿಯನ್‌ಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿರುವುದರಿಂದ ಆಸ್ಪತ್ರೆಯಲ್ಲಿ ಅವರು ಸೇವೆಗೆ ಲಭ್ಯರಾಗುತ್ತಿಲ್ಲ.

ಇಬ್ಬರು ಎಕ್ಸ್‌ರೇ ತಂತ್ರಜ್ಞ ಹುದ್ದೆಗಳ ಪೈಕಿ ಒಂದು ಖಾಲಿಯಾಗಿದ್ದು, ಇನ್ನೊಂದು ಹುದ್ದೆಗೆ ಪುತ್ತೂರು ತಾಲೂಕು ಆಸ್ಪತ್ರೆಯಿಂದ ಓರ್ವರನ್ನು ಕರೆಸಿಕೊಳ್ಳಲಾಗುತ್ತದೆ. ವಾರದ ರಜಾದಿನದಲ್ಲಿ ಅಥವಾ ಅವರು ಅನಿವಾರ್ಯವಾಗಿ ರಜೆ ಹಾಕಿದರೆ ರೋಗಿಗಳು ತಪಾಸಣೆಗೆ ಖಾಸಗಿ ಆಸ್ಪತ್ರೆಯತ್ತ ಮುಖ ಮಾಡುವುದು ಅನಿವಾರ್ಯವಾಗುತ್ತದೆ.

  ಆಸ್ಪತ್ರೆಗೆ ಹೆಚ್ಚುವರಿಯಾಗಿ ಇನ್ನೂ 20 ಬೆಡ್‌ಗಳ ಅವಶ್ಯಕತೆ ಇದೆ. ಫಾರ್ಮಸಿಯಲ್ಲಿ ಓರ್ವ ಹಿರಿಯ ಹಾಗೂ ಇಬ್ಬರು ಕಿರಿಯ ಫಾರ್ಮಾಸಿಸ್ಟ್ ಹುದ್ದೆಗಳು ಖಾಲಿಯಾಗಿವೆ. ಸಮಸ್ಯೆ ಬಗೆಹರಿಸಲು ಅರಂತೋಡು ಆರೋಗ್ಯ ಕೇಂದ್ರದಿಂದ ಓರ್ವರನ್ನು ಆಸ್ಪತ್ರೆಗೆ ನಿಯೋಜಿಸಲಾಗಿದ್ದು, ಅವರು ವಾರಕ್ಕೆರಡು ಬಾರಿ ಮಾತ್ರ ಲಭ್ಯರಿರುತ್ತಾರೆ. ಆಸ್ಪತ್ರೆಯ ಡಿ ದರ್ಜೆ ನೌಕರರ ಹುದ್ದೆಯ ಸಂಖ್ಯೆ 30. ಆದರೆ ಸದ್ಯ ಭರ್ತಿ ಯಾಗಿರುವುದು 15 ಮಾತ್ರ. ಶವಾಗಾರದಲ್ಲಿ ಪೋಸ್ಟ್ ಮಾರ್ಟಂ ಮಾಡಲು ಸಿಬ್ಬಂದಿಯೇ ಇಲ್ಲ. ಆ್ಯಂಬುಲೆನ್ಸ್ ಇದ್ದರೂ ಸರಿಯಾದ ರೀತಿಯಲ್ಲಿ ಚಾಲನೆಯಲ್ಲಿಲ್ಲ. ಜನರೇಟರ್ ವ್ಯವಸ್ಥೆ ಇದ್ದರೂ ಅದಿನ್ನೂ ಅಳವಡಿಕೆಯಾಗಿಲ್ಲ. ಇದರಿಂದ ರೋಗಿಗಳಿಗೆ ಡಯಾಲಿಸಿಸ್ ಸಂದರ್ಭ ವಿದ್ಯುತ್ ಕೈಕೊಟ್ಟರೆ ಕಾಯುವಿಕೆ ಅನಿವಾರ್ಯ. ಆಸ್ಪತ್ರೆಗೆ ಹೋಗಲು ಸರಿಯಾದ ರಸ್ತೆ ಸಂಪರ್ಕ ಇಲ್ಲ. ಇದ್ದ ರಸ್ತೆ ಕೂಡ ಡಾಮರು ಎದ್ದುಹೋಗಿ ದುರಸ್ತಿ ಕಾಣದೇ ಹದಗೆಟ್ಟಿದೆ.

ತಾಲೂಕು ಆಸ್ಪತ್ರೆಯಲ್ಲಿ ಖಾಯಂ ಪ್ರಸೂತಿ ತಜ್ಞರಿಲ್ಲದಿರುವುದು ದೊಡ್ಡ ಹಿನ್ನಡೆಯಾಗಿದೆ. ಹೊರಗಿನಿಂದ ಪ್ರಸೂತಿ ತಜ್ಞರನ್ನು ಕರೆಸಿ ರೋಗಿಗಳಿಗೆ ಅನುಕೂಲ ಒದಗಿಸಿಕೊಡುವ ವ್ಯವಸ್ಥೆ ಇದ್ದರೂ ತಾಲೂಕು ಆಸ್ಪತ್ರೆಯಲ್ಲೇ ಖಾಯಂ ವೈದ್ಯರಿದ್ದರೆ ಹೆಚ್ಚು ಅನುಕೂಲ ಎಂಬುದು ಜನರ ಅಭಿಪ್ರಾಯ.

ಆಸ್ಪತ್ರೆಯ ಒಳ ಹೊಕ್ಕು ಮೇಲಿನ ಮಹಡಿಗೆ ಸಾಗುವ ಛಾವಣಿ ಬಿರುಕು ಬಿಟ್ಟಂತಿದ್ದು, ಆ ಬಿರುಕಿನಲ್ಲಿ ನೀರಿಳಿಯುತ್ತಿದೆ. ಮೊದಲೆರಡು ಮಳೆಗೇ ಈ ಬಿರುಕಿನಲ್ಲಿ ನೀರು ಸೋರಿಕೆಯಾಗಿ ಪ್ರವೇಶ ದ್ವಾರದ ತನಕ ನೀರು ಹರಿಯುವುದು ಸಾಮಾನ್ಯವಾಗಿದೆ. ಇದನ್ನು ದುರಸ್ತಿಪಡಿಸದೆ ಹಾಗೆಯೇ ಬಿಟ್ಟರೆ ಮುಂದೆ ಸಮಸ್ಯೆ ಉಲ್ಬಣಗೊಳ್ಳುವುದು ನಿಶ್ಚಿತ. ಈ ತಾಲೂಕು ಆರೋಗ್ಯ ಕೇಂದ್ರದ ಕಟ್ಟಡ ಒಟ್ಟು ಮೂರು ಹಂತದಲ್ಲಿ ಅಭಿವೃದ್ಧಿ ಕಂಡಿದೆ. ಪ್ರಾರಂಭದಲ್ಲಿ ಇದು ಒಟ್ಟು 15 ಹಾಸಿಗೆಗಳ ಆಸ್ಪತ್ರೆಯಾಗಿದ್ದರೆ, 1995ರಲ್ಲಿ 30 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿತು. ಬಳಿಕ 2000 ನೇ ಇಸವಿಯಲ್ಲಿ 50 ಹಾಸಿಗೆಗಳ ಆಸ್ಪತ್ರೆಯಾಗಿ ಪರಿವರ್ತನೆ ಆಯಿತು. ನಂತರ 2016 ರ ಇಸವಿಯಲ್ಲಿ ಒಟ್ಟು ನೂರು ಬೆಡ್‌ಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿತು.

Writer - ಗಿರೀಶ್ ಅಡ್ಪಂಗಾಯ

contributor

Editor - ಗಿರೀಶ್ ಅಡ್ಪಂಗಾಯ

contributor

Similar News