ಕಪ್ಪು ಪಟ್ಟಿಗೆ ಸೇರಿರುವ ಸಂಸ್ಥೆಗೆ ಸಾರಿಗೆ ಇಲಾಖೆಯ ಭಾರೀ ಟೆಂಡರ್?

Update: 2022-04-08 02:36 GMT

ಬೆಂಗಳೂರು, ಎ.8: ಕಪ್ಪು ಪಟ್ಟಿ ಮತ್ತು ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಗುರುತರ ಆರೋಪಕ್ಕೆ ಗುರಿಯಾಗಿರುವ ಮಣಿಪಾಲ್ ಟೆಕ್ನಾಲಜೀಸ್ ಪ್ರೈವೆಟ್ ಲಿಮಿಟೆಡ್‌ಗೆ ಸಾರಿಗೆ ಇಲಾಖೆಯ ಬಹಳ ದೊಡ್ಡ ಟೆಂಡರ್‌ನಲ್ಲಿ ಬಿಡ್ ಮಾಡಲು ಅವಕಾಶ ಕಲ್ಪಿಸಿಕೊಟ್ಟಿರುವುದು ಮಾತ್ರವಲ್ಲದೆ ಎಲ್ 1 ಆಗಿ ಹೊರಹೊಮ್ಮಲು ಸಾರಿಗೆ ಇಲಾಖೆಯ ಟೆಂಡರ್ ಸಕ್ಷಮ ಪ್ರಾಧಿಕಾರ ಮತ್ತು ತಾಂತ್ರಿಕ ಮೌಲ್ಯಮಾಪನ ಸಮಿತಿ ಅಧಿಕಾರಿಗಳು ನೆರವು ನೀಡಿರುವ ಪ್ರಕರಣವು ಇದೀಗ ಬಹಿರಂಗವಾಗಿದೆ.

ಅಲ್ಲದೆ ಟೆಂಡರ್‌ನಲ್ಲಿ ಬಿಡ್ ಮಾಡಿದ್ದ ಮಣಿಪಾಲ್ ಟೆಕ್ನಾಲಜೀಸ್ ಪ್ರೈ ಲಿ. ಸಂಸ್ಥೆಯು ತನ್ನ ಮೇಲಿನ ಗುರುತರ ಆರೋಪಗಳನ್ನು ಘೋಷಣಾ ಪತ್ರದಲ್ಲಿ ಬಹಿರಂಗೊಳಿಸದೇ ಮುಚ್ಚಿಟ್ಟಿರುವ ಆರೋಪಕ್ಕೆ ಗುರಿಯಾಗಿದ್ದರೂ, ಟೆಂಡರ್ ಸಕ್ಷಮ ಪ್ರಾಧಿಕಾರದ ಅಧಿಕಾರಿಗಳು ಇದನ್ನು ಗಮನಿಸದೆಯೇ ಬಿಡ್ ಮಾಡಲು ಅವಕಾಶ ಮಾಡಿಕೊಟ್ಟಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

ಇದಷ್ಟೇ ಅಲ್ಲ, ಕಪ್ಪು ಪಟ್ಟಿ ಮತ್ತು ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಆರೋಪದ ನಂತರ ಟೆಂಡರ್‌ನ್ನು ರದ್ದುಗೊಳಿಸಲಾಗಿತ್ತಾದರೂ ಸಾರಿಗೆ ಇಲಾಖೆಯು ಹೊಸದಾಗಿ ಕರೆದಿದ್ದ ಟೆಂಡರ್‌ನಲ್ಲಿಯೂ ಇದೇ ಮಣಿಪಾಲ್ ಸಂಸ್ಥೆಯು ತನ್ನದೇ ಅಂಗ ಸಂಸ್ಥೆಯಾಗಿರುವ ಎಂಸಿಟಿ ಕಾರ್ಡ್ಸ್ ಆ್ಯಂಡ್ ಟೆಕ್ನಾಲಜೀಸ್ ಮೂಲಕ ಬಿಡ್ ಮಾಡಿತ್ತು ಎಂದು ವಿಚಾರ ಇದೀಗ ಮುನ್ನೆಲೆಗೆ ಬಂದಿದೆ.

ಮರು ಟೆಂಡರ್‌ನಲ್ಲಿಯೂ ಎಲ್ 1 ಆಗಿ ಹೊರಹೊಮ್ಮಿರುವ ಎಂಸಿಟಿ ಕಾರ್ಡ್ಸ್ ಆ್ಯಂಡ್ ಟೆಕ್ನಾಲಜಿಸ್ ಕಂಪೆನಿಗೆ ಕಾರ್ಯಾದೇಶ ನೀಡಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಸಾರಿಗೆ ಇಲಾಖೆಯು ಅಡ್ವೋಕೇಟ್ ಜನರಲ್ ಅವರ ಮೊರೆ ಹೋಗಿದೆ ಎನ್ನಲಾಗಿದೆ.

'the-file.in'ಈ ಸಂಬಂಧ ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಅವರು ಕೇಳಿದ್ದ ಪ್ರಶ್ನೆಗೆ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು ವಿವರವಾಗಿ ಉತ್ತರವನ್ನು ಒದಗಿಸಿದ್ದಾರಲ್ಲದೇ ಮಣಿಪಾಲ್ ಟೆಕ್ನಾಲಜೀಸ್ ಪ್ರೈ ಲಿಮಿಟೆಡ್‌ನ ಟೆಂಡರ್‌ನಲ್ಲಿ ಬಿಡ್ ಮಾಡಲು ಅವಕಾಶ ಕಲ್ಪಿಸಿರುವ ಸಾರಿಗೆ ಇಲಾಖೆ ಅಧಿಕಾರಿಗಳ ವಿರುದ್ಧ ಒಂದೇ ಒಂದು ಕ್ರಮ ಜರುಗಿಸಿಲ್ಲ ಎಂಬುದನ್ನೂ ಉತ್ತರದಲ್ಲಿ ಬಹಿರಂಗಪಡಿಸಿದ್ದಾರೆ. ಇದರ ಪ್ರತಿಯು ಗೆ ಲಭ್ಯವಾಗಿದೆ.

ವಾಯುಮಾಲಿನ್ಯ ತಪಾಸಣೆ ಕೇಂದ್ರಗಳನ್ನು ನೆಟ್ ವರ್ಕಿಂಗ್ ಜಾಲದಲ್ಲಿ ಅಳವಡಿಸುವ ಸಲುವಾಗಿ 2019ರ ಮಾರ್ಚ್ 6ರಂದು ಇ-ಪ್ರೊಕ್ಯೂರ್ಮೆಂಟ್ ಪೋರ್ಟಲ್‌ನಲ್ಲಿ ಟೆಂಡರ್ ಕರೆಯಲಾಗಿತ್ತು. ಟೆಂಡರ್‌ನಲ್ಲಿ ಭಾಗವಹಿಸಿದ ಬಿಡ್‌ದಾರರನ್ನು ತಾಂತ್ರಿಕವಾಗಿ ಮತ್ತು ಆರ್ಥಿಕವಾಗಿ ಪರಿಶೀಲನೆ ನಡೆಸಿ ಎಲ್ 1 ಮತ್ತು ಎಲ್ 2 ಬಿಡ್ದಾರರನ್ನು ಅಂತಿಮಗೊಳಿಸಲಾಗಿತ್ತು.

ಎಲ್ 1 ಬಿಡ್ದಾರರಾದ ಮೆ.ಮಣಿಪಾಲ್ ಟೆಕ್ನಾಲಜೀಸ್ ಸಂಸ್ಥೆ ಈ ಹಿಂದೆ ಮಹಾರಾಷ್ಟ್ರ ರಾಜ್ಯದಲ್ಲಿ ಟೆಂಡರ್ ಪ್ರಕ್ರಿಯೆಗೆ ಸಂಬಂಧಪಟ್ಟಂತೆ ಕಪ್ಪು ಪಟ್ಟಿಗೆ ಸೇರ್ಪಡೆಯಾಗಿದ್ದ ವಿಷಯವನ್ನು ಟೆಂಡರ್ ಘೋಷಣಾ ಪತ್ರದಲ್ಲಿ ಬಹಿರಂಗಪಡಿಸಿಲ್ಲವಾದ್ದರಿಂದ 2021ರ ಫೆ.19ರಂದು ಈ ಟೆಂಡರ್‌ನ್ನು ರದ್ದುಗೊಳಿಸಲಾಗಿತ್ತು ಎಂಬುದು ಸಚಿವ ಶ್ರೀರಾಮುಲು ಅವರು ನೀಡಿರುವ ಉತ್ತರದಿಂದ ಗೊತ್ತಾಗಿದೆ.

ಈ ಹಿಂದೆ ಬೃಹತ್ ಬೆಂಗಳೂರು ಮಹಾನಗರಸಾರಿಗೆ ಸಂಸ್ಥೆಗೆ ಸಂಬಂಧಿಸಿದ ಟೆಂಡರ್ ಪ್ರಸ್ತಾವನೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಮುಖ್ಯ ಕಾನೂನು ಅಧಿಕಾರಿ ಅಭಿಪ್ರಾಯ ಪಡೆದು ಎಂಸಿಟಿ ಕಾರ್ಡ್ಸ್ ಮತ್ತು ಟೆಕ್ನಾಲಜಿ ಲಿಮಿಟೆಡ್‌ನ್ನು ಟೆಂಡರ್ ಪ್ರಕ್ರಿಯೆಯಲ್ಲಿ ಮುಂದುವರಿಸಲಾಗಿದೆ.

ವಾಯುಮಾಲಿನ್ಯ ತಪಾಸಣೆ ಕೇಂದ್ರಗಳನ್ನು ನೆಟ್ ವರ್ಕಿಂಗ್ ಜಾಲದಲ್ಲಿ ಅಳವಡಿಸುವ ಸಲುವಾಗಿ 2021ರ ಅಕ್ಟೋಬರ್ 25ರಂದು ಪುನಃ ಟೆಂಡರ್ ಕರೆಯಲಾಗಿತ್ತು. ಈ ಟೆಂಡರ್‌ಗೆ ಸಂಬಂಧಿಸಿದಂತೆ ತಾಂತ್ರಿಕ ಮೌಲ್ಯಮಾಪನ ಸಮಿತಿಯು ಕೈಗೊಂಡ ನಿರ್ಣಯದಂತೆ ಟೆಂಡರ್‌ಗೆ ಅರ್ಜಿ ಸಲ್ಲಿಸಿದ ಇಬ್ಬರು ಬಿಡ್‌ದಾರರಾದ ಎಂಸಿಟಿ ಕಾರ್ಡ್ಸ್ ಆ್ಯಂಡ್ ಟೆಕ್ನಾಲಜಿ ಪ್ರೈ ಲಿ. ಮತ್ತು ಎವಿಎಲ್ ಇಂಡಿಯಾ ಪ್ರೈ. ಲಿಮಿಟೆಡ್ ಅವರು ತಾಂತ್ರಿಕವಾಗಿ ಅರ್ಹತೆ ಪಡೆದಿದ್ದರು. 2021ರ ನವೆಂಬರ್ 19ರಂದು ತಾಂತ್ರಿಕ ಮೌಲ್ಯಮಾಪನದಲ್ಲಿ ಅರ್ಹತೆ ಪಡೆದ ಇಬ್ಬರು ಬಿಡ್‌ದಾರರು ಪರಿಕಲ್ಪನೆಯ ಪುರಾವೆ ಸಂಬಂಧ ವಾಯು ಮಾಲಿನ್ಯ ತಪಾಸಣೆ ಕೇಂದ್ರದಲ್ಲಿ ಸಮಿತಿಯ ಮುಂದೆ ಪ್ರದರ್ಶಿಸಿದ್ದರು. 2021ರ ಡಿಸೆಂಬರ್ 1ರಂದು ತಾಂತ್ರಿಕ ಮೌಲ್ಯಮಾಪನ ಮತ್ತು ಅರ್ಹ ಬಿಡ್‌ದಾರದಿಂದ ಪರಿಕಲ್ಪನೆ ಪುರಾವೆಯಲ್ಲಿ ಅರ್ಹತೆ ಪಡೆದ ಬಿಡ್‌ದಾರರು ಸಲ್ಲಿಸಿದ್ದ ಹಣಕಾಸಿನ ಪ್ರಸ್ತಾಪವನ್ನು ಅಂತಿಮಗೊಳಿಸುವ ಸಂಬಂಧ ಸಭೆ ನಡೆಸಿ ಅಂಕಗಳನ್ನು ಲೆಕ್ಕಾಚಾರ ಮಾಡಿತ್ತು.

ಇದಾದ ನಂತರ ಎಂಸಿಟಿ ಕಾರ್ಡ್ ಆ್ಯಂಡ್ ಟೆಕ್ನಾಲಜಿ ಪ್ರೈ.ಲಿ.ಮಣಿಪಾಲ್ ಇವರು ಅತಿ ಕಡಿಮೆ ದರ ನಮೂದು ಮಾಡಿರುವುದರಿಂದ ಎಲ್ 1 ಬಿಡ್‌ದಾರರು ಎಂದು ಸಮಿತಿಯು ತೀರ್ಮಾನಿಸಿತ್ತು ಎಂಬುದು ಉತ್ತರದಿಂದ ತಿಳಿದು ಬಂದಿದೆ.

‘ಈ ಟೆಂಡರ್‌ನಲ್ಲಿ ಭಾಗವಹಿಸಿದ್ದ ಎಂಸಿಟಿ ಕಾರ್ಡ್ಸ್ ಆ್ಯಂಡ್ ಟೆಕ್ನಾಲಜಿ ಪ್ರೈ ಲಿಮಿಟೆಡ್ ಸಂಸ್ಥೆಯು ಮಣಿಪಾಲ್ ಟೆಕ್ನಾಲಜೀಸ್ ಪ್ರೈ ಲಿಮಿಟೆಡ್ ಇದರ ಅಂಗ ಸಂಸ್ಥೆಯಾಗಿರುವುದು ಕಂಡು ಬರುತ್ತದೆ. 2021ರ ಡಿಸೆಂಬರ್ 2ರಂದು ವಿಧಾನಪರಿಷತ್ತಿನ ಅರ್ಜಿ ಸಮಿತಿ ಸಭೆಯಲ್ಲಿ ಎಂಸಿಟಿ ಕಾರ್ಡ್ಸ್ ಆ್ಯಂಡ್ ಟೆಕ್ನಾಲಜೀಸ್ ಪ್ರೈ ಲಿ. ಅವರು ಮಣಿಪಾಲ್ ಟೆಕ್ನಾಲಜೀಸ್ ಪ್ರೈ ಲಿ.ನ ಅಂಗ ಸಂಸ್ಥೆಯಾಗಿರುವ ಕಾರಣ ಇವರಿಗೆ ಕಾರ್ಯಾದೇಶ ನೀಡುವ ಬಗ್ಗೆ ಕಾನೂನು ಇಲಾಖೆಯ ಹಾಗೂ ಅಡ್ವೋಕೇಟ್ ಜನರಲ್ ಅವರ ಅಭಿಪ್ರಾಯ ಪಡೆದು ಮುಂದುವರಿಯಲು ಸೂಚಿಸಲಾಗಿದೆ ಎಂದು ಶ್ರೀರಾಮುಲು ಅವರು ಉತ್ತರ ನೀಡಿದ್ದಾರೆ.

ಮಣಿಪಾಲ್ ಟೆಕ್ನಾಲಜೀಸ್ ಮತ್ತು ಎಂಸಿಟಿ ಕಾರ್ಡ್ಸ್ ಆ್ಯಂಡ್ ಟೆಕ್ನಾಲಜಿ ಕಂಪೆನಿ ವಿರುದ್ಧ ಎವಿಎಲ್ ಇಂಡಿಯಾ ಪ್ರೈ ಲಿಮಿಟೆಡ್ 2021ರ ಡಿಸೆಂಬರ್ 8ರಂದು ಸರಕಾರಕ್ಕೆ ದೂರು ಸಲ್ಲಿಸಿತ್ತು. ‘2019ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದಲ್ಲಿ ವಾಯು ಮಾಲಿನ್ಯ ತಪಾಸಣೆ ಕೇಂದ್ರಗಳನ್ನು ನೆಟ್ ವರ್ಕಿಂಗ್ ಜಾಲದಲ್ಲಿ ಅಳವಡಿಸುವ ಸಂಬಂಧ ಕರೆಯಲಾದ ಟೆಂಡರ್‌ನಲ್ಲಿ ಎಲ್ 1 ಬಿಡ್‌ದಾರರಾಗಿ ಆಯ್ಕೆಯಾದ ಮಣಿಪಾಲ್ ಟೆಕ್ನಾಲಜೀಸ್ ಸಂಸ್ಥೆಯು ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿರುವುದನ್ನು ಮರೆಮಾಚಿರುವುದರಿಂದ ಅನರ್ಹಗೊಂಡಿರುತ್ತಾರೆ ಮತ್ತು ಎಂಸಿಟಿ ಕಾರ್ಡ್ಸ್ ಆ್ಯಂಡ್ ಟೆಕ್ನಾಲಜಿ ಪ್ರೈ ಲಿ. ಸಂಸ್ಥೆಯಲ್ಲಿ ಶೇ. 80ರಷ್ಟು ಷೇರನ್ನು ಹೊಂದಿರುತ್ತಾರೆ ಹಾಗೂ ಅದರ ಅಂಗ ಸಂಸ್ಥೆಯಾಗಿದೆ’ ಎಂದು ಗಮನಕ್ಕೆ ತಂದಿತ್ತು.

ಎಂಸಿಟಿ ಕಾರ್ಡ್ಸ್ ಆ್ಯಂಡ್ ಟೆಕ್ನಾಲಜಿ ಪ್ರೈ. ಲಿಮಿಟೆಡ್ ಸಂಸ್ಥೆಯು ವಾಯುಮಾಲಿನ್ಯ ತಪಾಸಣೆ ಕೇಂದ್ರಗಳನ್ನು ನೆಟ್‌ವರ್ಕಿಂಗ್ ಜಾಲದಲ್ಲಿ ಅಳವಡಿಸುವ ಸಂಬಂಧ ಯಾವುದೇ ಯೋಜನೆಯಲ್ಲಿ ಅನುಭವ ಹೊಂದಿರುವುದಿಲ್ಲ ಎಂದು ತಿಳಿಸಿದ್ದಾರೆ. ಪ್ರಸ್ತುತ ಟೆಂಡರ್‌ನಲ್ಲಿ ಭಾಗವಹಿಸಿರುವ ಎಂಸಿಟಿ ಕಾರ್ಡ್ಸ್ ಆ್ಯಂಡ್ ಟೆಕ್ನಾಲಜಿ ಪ್ರೈ ಲಿಮಿಟೆಡ್‌ನ್ನು ಪರಿಗಣಿಸಬಾರದು ಎಂದು ಮನವಿ ಮಾಡಿದ್ದರು ಎಂಬುದು ಶ್ರೀರಾಮುಲು ಅವರು ನೀಡಿರುವ ಉತ್ತರದಿಂದ ಗೊತ್ತಾಗಿದೆ.

Writer - ಜಿ.ಮಹಾಂತೇಶ್

contributor

Editor - ಜಿ.ಮಹಾಂತೇಶ್

contributor

Similar News