ಹಿಂದುತ್ವವು ಹಿಂದೂಗಳಿಗೆ ನೀಡುತ್ತಿರುವುದೇನು?

Update: 2022-04-09 08:30 GMT

‘‘ಹಿಂದೂ ಸಮಾಜವು ಹಿಂದೆ ಭಾರೀ ಸಂಕಷ್ಟ ಅನುಭವಿಸಿದೆ’’ ಎಂಬುದಾಗಿ ಸ್ವಾಮಿ ಹೇಳಿದ್ದಾರೆ. ಇತಿಹಾಸವನ್ನು ಉಲ್ಲೇಖಿಸುವ ಮೂಲಕ ಸ್ವಾಮಿ ಮಾತು ಆರಂಭಿಸಿದ್ದಾರೆ. ಮಧ್ಯ ಕಾಲೀನ ಯುಗದಲ್ಲಿ ಈಗಿನ ಭಾರತದ ಹೆಚ್ಚಿನ ಭಾಗವನ್ನು ಆಳಿದ್ದ ಮುಸ್ಲಿಮ್ ರಾಜರ ಬಗ್ಗೆ ಸ್ವಾಮಿ ಮಾತನಾಡಿದ್ದಾರೆ ಎಂಬುದಾಗಿ ನಾನು ಭಾವಿಸುತ್ತೇನೆ. ಇಂತಹ ಮಾತುಗಳು ಹಿಂದುತ್ವ ವಿಚಾರಧಾರೆಯ ಪ್ರಮುಖ ಭಾಗವಾಗಿದೆ. ಉತ್ತರಪ್ರದೇಶದಲ್ಲಿ ಇತ್ತೀಚಿನ ತಿಂಗಳುಗಳಲ್ಲಿ ಪ್ರಧಾನಿ, ಕೇಂದ್ರ ಗೃಹ ಸಚಿವ ಮತ್ತು ರಾಜ್ಯದ ಮುಖ್ಯಮಂತ್ರಿ ಮಾಡಿರುವ ಭಾಷಣಗಳಲ್ಲಿ ಇದನ್ನು ನಾನು ನೋಡಿದ್ದೇನೆ. ಲಕ್ನೊದಲ್ಲಾಗಲಿ, ಉಡುಪಿಯಲ್ಲಾಗಲಿ 2022ರಲ್ಲಿ ವಾಸಿಸುತ್ತಿರುವ ಶ್ರಮಿಕ ಮುಸ್ಲಿಮರು ಗತ ಕಾಲದ ಈ ಮುಸ್ಲಿಮ್ ದೊರೆಗಳೊಂದಿಗೆ ದೂರಾತಿದೂರದ ಸಂಬಂಧವನ್ನೂ ಹೊಂದಿಲ್ಲ. ಆದರೂ, ಆ ರಾಜರ ಧರ್ಮವನ್ನು ಬಳಸಲಾಗುತ್ತಿದೆ.



1980ರ ದಶಕದಲ್ಲಿ ತನ್ನ ದೇಶದ ಜನಾಂಗೀಯ ಸಂಘರ್ಷದ ಬಗ್ಗೆ ಬರೆಯುತ್ತಾ, ಶ್ರೀಲಂಕಾದ ಮಾನವಶಾಸ್ತ್ರಜ್ಞ ಎಸ್.ಜೆ. ತಂಬಯ್ಯ, ಸಿಂಹಳೀಯರನ್ನು ‘ಅಲ್ಪಸಂಖ್ಯಾತ ಅರಿಮೆಯಿಂದ ಬಳಲುತ್ತಿರುವ ಬಹುಸಂಖ್ಯಾತರು’ ಎಂಬುದಾಗಿ ಬಣ್ಣಿಸಿದ್ದಾರೆ. ದೇಶದಲ್ಲಿ ಸಿಂಹಳೀಯರ ಜನಸಂಖ್ಯೆ 70 ಶೇಕಡಕ್ಕಿಂತಲೂ ಅಧಿಕವಿದೆ, ದೇಶದ ರಾಜಕೀಯವನ್ನು ಅವರೇ ನಿಯಂತ್ರಿಸುತ್ತಿದ್ದಾರೆ, ಅಧಿಕಾರಶಾಹಿ ಮತ್ತು ಸೇನೆಯಲ್ಲಿ ಅವರೇ ಮೇಲುಗೈ ಹೊಂದಿದ್ದಾರೆ, ಅವರ ಧರ್ಮವಾಗಿರುವ ಬೌದ್ಧ ಧರ್ಮವು ದೇಶದ ಅಧಿಕೃತ ಧರ್ಮವಾಗಿದೆ, ಇತರ ಭಾಷೆಗಳಿಗೆ ಹೋಲಿಸಿದರೆ ಅವರ ಭಾಷೆ ಸಿಂಹಳವು ಉನ್ನತ ಅಧಿಕೃತ ಸ್ಥಾನಮಾನವನ್ನು ಹೊಂದಿದೆ. ಆದರೆ, ಇವೆಲ್ಲವುಗಳ ಹೊರತಾಗಿಯೂ, ತಾವು ಸಂತ್ರಸ್ತರು ಎಂಬ ಭಾವನೆ ಸಿಂಹಳೀಯರಲ್ಲಿ ಹಾಸುಹೊಕ್ಕಾಗಿದೆ. ಅಲ್ಪಸಂಖ್ಯಾತ ತಮಿಳರಿಂದ ತಮಗೆ ಬೆದರಿಕೆಯಿದೆ ಎಂಬುದಾಗಿ ಅವರು ಭಾವಿಸಿದ್ದಾರೆ. ತಮಿಳರ ಬಗ್ಗೆ ಸಿಂಹಳೀಯರು ಹೊಂದಿರುವ ಆತಂಕದ ಸ್ವರೂಪ ಹೀಗಿದೆ: ಅವರು (ತಮಿಳರು) ಹೆಚ್ಚು ವಿದ್ಯಾವಂತರು, ಯಾಕೆಂದರೆ ದ್ವೀಪವು ಬ್ರಿಟಿಷರ ಆಡಳಿತದಲ್ಲಿದ್ದಾಗ ಬ್ರಿಟಿಷರು ತಮಿಳರಿಗೆ ಆಪ್ತರಾಗಿದ್ದರು; ಅವರು ತಮ್ಮ ಹಕ್ಕುಗಳಿಗಾಗಿ ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಾರೆ, ಯಾಕೆಂದರೆ ಅವರಿಗೆ ಭಾರತದ ಬೆಂಬಲವಿದೆ (ಭಾರತವು ಶ್ರೀಲಂಕಾಕ್ಕಿಂತ ತುಂಬಾ ದೊಡ್ಡ ಮತ್ತು ಹೆಚ್ಚಿನ ಸೇನಾ ಬಲ ಹೊಂದಿರುವ ದೇಶ); ಮತ್ತು ಅವರ ಆಕ್ರಮಣಶೀಲತೆಯನ್ನು ತಡೆಯದಿದ್ದರೆ ಅವರು ಸಿಂಹಳೀಯರನ್ನು ಅವರ ಏಕೈಕ ತಾಯ್ನೆಲದಲ್ಲೇ ಹಿಂದಿಕ್ಕುತ್ತಾರೆ.

ಇತ್ತೀಚೆಗೆ ಉಡುಪಿಯಲ್ಲಿ ಕೆಲವು ನಾಗರಿಕರು ಮತ್ತು ಪೇಜಾವರ ಮಠದ ಸ್ವಾಮಿಯ ನಡುವೆ ನಡೆದ ಸಭೆಯ ಕುರಿತ ಪತ್ರಿಕಾ ವರದಿಯನ್ನು ಓದಿದಾಗ ನನಗೆ ಶ್ರೀಲಂಕಾದ ಸ್ಥಿತಿಯ ಬಗ್ಗೆ ತಂಬಯ್ಯ ವ್ಯಕ್ತಪಡಿಸಿದ ಅನಿಸಿಕೆಗಳು ನೆನಪಾದವು. ಇತ್ತೀಚಿನ ವರ್ಷಗಳಲ್ಲಿ ಉಡುಪಿ ಪಟ್ಟಣ ಮತ್ತು ಜಿಲ್ಲೆಯು ಉಗ್ರವಾದಿ ಹಿಂದುತ್ವದ ಕರ್ನಾಟಕ ಪ್ರಯೋಗಶಾಲೆಯಾಗಿ ಹೊರಹೊಮ್ಮುತ್ತಿದೆ. ಉಡುಪಿ ಪಟ್ಟಣದಲ್ಲಿ ಬಿಜೆಪಿ ಶಾಸಕರೊಬ್ಬರ ಬೆಂಬಲದೊಂದಿಗೆ ಸ್ಥಳೀಯ ಕಾಲೇಜೊಂದು ಹಿಜಾಬ್‌ಗೆ ನಿಷೇಧ ವಿಧಿಸಿತು. ಆ ನಿಷೇಧ ಮೊದಲು ಇರಲಿಲ್ಲ. ಅದು ಬಳಿಕ ರಾಜ್ಯಾದ್ಯಂತ ಮತ್ತು ದೇಶಾದ್ಯಂತ ವಿವಾದವಾಗಿ ಮಾರ್ಪಟ್ಟಿತು. ವಿವಾದವು ಕೋಮು ಸಾಮರಸ್ಯಕ್ಕೆ ದೊಡ್ಡ ಪೆಟ್ಟು ನೀಡಿತು. ಉಡುಪಿಯ ಕೃಷ್ಣ ದೇವಾಲಯದಲ್ಲಿ ಪೂಜೆ ಸಲ್ಲಿಸುವುದಕ್ಕಾಗಿ ನಿಯುಕ್ತಿಗೊಂಡಿರುವ ಅಷ್ಟ ಮಠಗಳ ಪೈಕಿ ಪೇಜಾವರ ಮಠವೂ ಒಂದಾಗಿದೆ.

ಹಿಜಾಬ್ ನಿಷೇಧವನ್ನು ಜಾರಿಗೊಳಿಸುವಲ್ಲಿ, ಆ ಮೂಲಕ ಹಲವು ಬಾಲಕಿಯರ ಶಿಕ್ಷಣದ ಹಕ್ಕನ್ನು ನಿರಾಕರಿಸುವಲ್ಲಿ ಯಶಸ್ವಿಯಾದ ಉಡುಪಿಯ ಉಗ್ರ ಹಿಂದುತ್ವವಾದಿಗಳು, ಬಳಿಕ ಹಿಂದೂ ದೇವಸ್ಥಾನಗಳ ಜಾತ್ರೆಗಳ ಸಮಯದಲ್ಲಿ ವ್ಯಾಪಾರ ಮಾಡುವ ಮುಸ್ಲಿಮರತ್ತ ಕಣ್ಣು ಹಾಯಿಸಿದರು. ದೇವಸ್ಥಾನಗಳ ಜಾತ್ರೆಗಳ ಸಮಯದಲ್ಲಿ ಮುಸ್ಲಿಮರು ತುಂಬಾ ಹಿಂದಿನಿಂದಲೂ ವ್ಯಾಪಾರ ಮಾಡಿಕೊಂಡು ಬಂದಿದ್ದಾರೆ ಹಾಗೂ ಜಾತಿ-ಮತವೆನ್ನದೆ ಲಕ್ಷಾಂತರ ಗ್ರಾಹಕರು ಅದರ ಪ್ರಯೋಜನವನ್ನು ಪಡೆದಿದ್ದಾರೆ. ಆದರೆ, ಈ ಬಾರಿ ವಿಧೇಯ ಆಡಳಿತದ ಮೂಲಕ ಮುಸ್ಲಿಮ್ ವ್ಯಾಪಾರಿಗಳ ಮೇಲೆ ನಿಷೇಧವನ್ನು ವಿಧಿಸುವಲ್ಲಿ ಉಗ್ರ ಹಿಂದುತ್ವವಾದಿಗಳು ಯಶಸ್ವಿಯಾದರು. ಸರಕಾರದಿಂದಾಗಲಿ, ನ್ಯಾಯಾಲಯಗಳಿಂದಾಗಲಿ ನ್ಯಾಯ ಸಿಗುವುದಿಲ್ಲ ಎನ್ನುವುದನ್ನು ಅರಿತ ಕೆಲವು ಮುಸ್ಲಿಮರನ್ನು ಒಳಗೊಂಡ ಗುಂಪೊಂದು ಹತಾಶೆಯಿಂದ ಪೇಜಾವರ ಮಠದ ಮುಖ್ಯಸ್ಥರನ್ನು ಭೇಟಿ ಮಾಡಿತು. ಮುಸ್ಲಿಮ್ ವ್ಯಾಪಾರಿಗಳ ಮೇಲೆ ಹೇರಲಾಗಿರುವ ನಿಷೇಧವನ್ನು ವಾಪಸ್ ಪಡೆಯಲು ಹಾಗೂ ಆ ಮೂಲಕ ಕೋಮು ಸೌಹಾರ್ದವನ್ನು ಸ್ಥಾಪಿಸಲು ಮಧ್ಯಪ್ರವೇಶಿಸುವಂತೆ ಅದು ಮಠಾಧೀಶರಿಗೆ ಮನವಿ ಮಾಡಿತು. ‘ಹಿಂದೂ ಸಮಾಜವು ಹಿಂದೆ ಭಾರೀ ಸಂಕಷ್ಟ ಅನುಭವಿಸಿದೆ’ ಎಂಬುದಾಗಿ ಸ್ವಾಮಿ ಈ ಸಂದರ್ಭದಲ್ಲಿ ತನ್ನನ್ನು ಭೇಟಿಯಾದವರಿಗೆ ಹೇಳಿದರು. ‘‘ಒಂದು ವರ್ಗ ಅಥವಾ ಗುಂಪು ನಿರಂತರವಾಗಿ ಅನ್ಯಾಯ ಎದುರಿಸಿದಾಗ ಅದರ ಹತಾಶೆಗಳು ಮತ್ತು ಆಕ್ರೋಶ ಸ್ಫೋಟಗೊಳ್ಳುತ್ತವೆ. ಹಿಂದೂ ಸಮಾಜವು ಅನ್ಯಾಯಗಳಿಂದ ರೋಸಿ ಹೋಗಿದೆ’’ ಎಂಬುದಾಗಿ ಸ್ವಾಮಿ ಹೇಳಿದರು ಎಂದು ಪತ್ರಿಕೆ ವರದಿ ಮಾಡಿದೆ. (https://timesofindia.indiatimes.com/city/mangaluru/mangaluru-delegation-meets-pejawar-mutt-seer-to-promote-harmony/articleshow/90553998.cms)

‘‘ಹಿಂದೂ ಸಮಾಜವು ಹಿಂದೆ ಭಾರೀ ಸಂಕಷ್ಟ ಅನುಭವಿಸಿದೆ’’ ಎಂಬುದಾಗಿ ಸ್ವಾಮಿ ಹೇಳಿದ್ದಾರೆ. ಇತಿಹಾಸವನ್ನು ಉಲ್ಲೇಖಿಸುವ ಮೂಲಕ ಸ್ವಾಮಿ ಮಾತು ಆರಂಭಿಸಿದ್ದಾರೆ. ಮಧ್ಯ ಕಾಲೀನ ಯುಗದಲ್ಲಿ ಈಗಿನ ಭಾರತದ ಹೆಚ್ಚಿನ ಭಾಗವನ್ನು ಆಳಿದ್ದ ಮುಸ್ಲಿಮ್ ರಾಜರ ಬಗ್ಗೆ ಸ್ವಾಮಿ ಮಾತನಾಡಿದ್ದಾರೆ ಎಂಬುದಾಗಿ ನಾನು ಭಾವಿಸುತ್ತೇನೆ. ಇಂತಹ ಮಾತುಗಳು ಹಿಂದುತ್ವ ವಿಚಾರಧಾರೆಯ ಪ್ರಮುಖ ಭಾಗವಾಗಿದೆ. ಉತ್ತರಪ್ರದೇಶದಲ್ಲಿ ಇತ್ತೀಚಿನ ತಿಂಗಳುಗಳಲ್ಲಿ ಪ್ರಧಾನಿ, ಕೇಂದ್ರ ಗೃಹ ಸಚಿವ ಮತ್ತು ರಾಜ್ಯದ ಮುಖ್ಯಮಂತ್ರಿ ಮಾಡಿರುವ ಭಾಷಣಗಳಲ್ಲಿ ಇದನ್ನು ನಾನು ನೋಡಿದ್ದೇವೆ. ಲಕ್ನೊದಲ್ಲಾಗಲಿ, ಉಡುಪಿಯಲ್ಲಾಗಲಿ 2022ರಲ್ಲಿ ವಾಸಿಸುತ್ತಿರುವ ಶ್ರಮಿಕ ಮುಸ್ಲಿಮರು ಗತ ಕಾಲದ ಈ ಮುಸ್ಲಿಮ್ ದೊರೆಗಳೊಂದಿಗೆ ದೂರಾತಿದೂರದ ಸಂಬಂಧವನ್ನೂ ಹೊಂದಿಲ್ಲ. ಆದರೂ, ಆ ರಾಜರ ಧರ್ಮವನ್ನು ಬಳಸಲಾಗುತ್ತಿದೆ.

ಶತಮಾನಗಳ ಹಿಂದೆ ಮೊಘಲರು ಅಥವಾ ಟಿಪ್ಪು ಸುಲ್ತಾನ್ ಮಾಡಿರಬಹುದಾದ (ಅಥವಾ ಮಾಡದಿದ್ದಿರಬಹುದಾದ) ಕೃತ್ಯಗಳಿಗೆ ಇಂದಿನ ಮುಸ್ಲಿಮರು ತಪ್ಪಿತಸ್ಥ ಭಾವನೆಯಿಂದ ಬಳಲುವಂತೆ ಮಾಡುವುದು ಕೆಟ್ಟ ಅಭ್ಯಾಸವಾಗಿದೆ.

ಅದೇ ವೇಳೆ, ‘ಹಿಂದೂಗಳು ನಿರಂತರವಾಗಿ ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ’ ಎಂದು ಹೇಳುವ ಮೂಲಕ ಪೇಜಾವರ ಸ್ವಾಮಿ ಇತಿಹಾಸದಿಂದ ವರ್ತಮಾನಕ್ಕೆ ಸರಾಗವಾಗಿ ಬಂದಿರುವುದನ್ನು ಗಮನಿಸಿ. ಹಿಂದೂಗಳು ನಿರಂತರವಾಗಿ ಅನ್ಯಾಯಕ್ಕೆ ಒಳಗಾಗುತ್ತಿದ್ದಾರಾದರೆ, ಯಾರಿಂದ ಮತ್ತು ಹೇಗೆ? ಜನಸಂಖ್ಯೆಯ ಆಧಾರದಲ್ಲಿ ಹೇಳುವುದಾದರೆ, ಶ್ರೀಲಂಕಾದಲ್ಲಿ ಸಿಂಹಳರಿಗಿಂತಲೂ ಹೆಚ್ಚು ಭಾರತದಲ್ಲಿ ಹಿಂದೂಗಳು ಪ್ರಬಲರಾಗಿದ್ದಾರೆ. ರಾಜಕೀಯದಲ್ಲಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ವಲಯದಲ್ಲಿ ಹಿಂದೂಗಳ ಪ್ರಾಬಲ್ಯವು ಬಹುತೇಕ ಸಂಪೂರ್ಣವಾಗಿದೆ. ಕರ್ನಾಟಕದಲ್ಲಿ ಮುಸ್ಲಿಮರು ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಸಂಪೂರ್ಣವಾಗಿ ಅಧಿಕಾರರಹಿತರಾಗಿದ್ದಾರೆ. ಶಾಸಕಾಂಗ, ನಾಗರಿಕ ಸೇವೆಗಳು, ಪೊಲೀಸ್, ನ್ಯಾಯಾಂಗ ಮತ್ತು ಪ್ರಮುಖ ವೃತ್ತಿಗಳಲ್ಲಿ ಅವರ ಪ್ರಾತಿನಿಧ್ಯ ಕಡಿಮೆಯಾಗಿದೆ. ಅವರ ಆರ್ಥಿಕ ಸ್ಥಾನಮಾನ ಅನಿಶ್ಚಿತವಾಗಿದೆ. ಅದಕ್ಕೂ ಹೆಚ್ಚಾಗಿ, ಹಿಂದೂ ಶ್ರೇಷ್ಠತೆ ಸಿದ್ಧಾಂತಕ್ಕೆ ಬದ್ಧವಾದ ಪಕ್ಷವೊಂದು ಕರ್ನಾಟಕ ಮತ್ತು ಕೇಂದ್ರದಲ್ಲಿ ಆಡಳಿತ ನಡೆಸುತ್ತಿದೆ.

ಹೀಗಿದ್ದೂ, ಹಿಂದೂಗಳು ತಾರತಮ್ಯ ಮತ್ತು ಅನ್ಯಾಯದ ಬಲಿಪಶುಗಳಾಗಿದ್ದಾರೆ ಎಂದು ಪೇಜಾವರ ಸ್ವಾಮಿ ಹೇಳುತ್ತಾರೆ. ಪ್ರಾಚೀನ, ಉತ್ತಮ ಸಂಪನ್ಮೂಲಗಳನ್ನು ಹೊಂದಿರುವ, ಉತ್ತಮ ಗೌರವವನ್ನು ಪಡೆಯುವ ಮತ್ತು ಅಗಾಧ ಪ್ರಭಾವ ಹೊಂದಿರುವ ಧಾರ್ಮಿಕ ಕೇಂದ್ರವೊಂದರ ಮುಖ್ಯಸ್ಥರೇ ಈ ರೀತಿಯಲ್ಲಿ ಮಾತನಾಡಿದರೆ, ಅಲ್ಪಸಂಖ್ಯಾತ ಅರಿಮೆ ಹೊಂದಿರುವ ಬಹುಸಂಖ್ಯಾತರ ಸಮ್ಮುಖದಲ್ಲಿ ನಾವಿದ್ದೇವೆ ಎನ್ನುವುದು ಸ್ಪಷ್ಟ.
ಹಿಂದುತ್ವದ ಅಡಿಯಲ್ಲಿ ಹಿಂದೂಗಳು ಅಲ್ಪಸಂಖ್ಯಾತ ಅರಿಮೆ ಹೊಂದಿರುವ ಬಹುಸಂಖ್ಯಾತರಾಗುವ ಅಪಾಯವನ್ನು ಎದುರಿಸುತ್ತಿದ್ದಾರೆ. ಅವರನ್ನು ಚಿತ್ತಭ್ರಾಂತಿ ಮತ್ತು ಹಿಂಸಾಚಾರದ ಭ್ರಮೆ ಕಾಡುತ್ತಿದೆ. ಹೀಗೆಂದು ಅವರು ಭಾವಿಸುತ್ತಾರೆ. ಆದರೆ, ಅವರು ಇದಕ್ಕೆ ವಿರುದ್ಧವಾಗಿ ವರ್ತಿಸುತ್ತಾರೆ. ಅಂದರೆ, ಹಿಂದುತ್ವದ ಅಡಿಯಲ್ಲಿ ಹಿಂದೂಗಳು ಬಹುಸಂಖ್ಯಾತ ಅರಿಮೆ ಹೊಂದಿರುವ ಬಹುಸಂಖ್ಯಾತರಾಗುವ ಬೆದರಿಕೆಯನ್ನು ಒಡ್ಡುತ್ತಾರೆ. ಅವರು ತಮ್ಮ ಸಂಖ್ಯಾಬಲವನ್ನು ಬಳಸಿಕೊಂಡು, ಸರಕಾರ, ಆಡಳಿತ, ಮಾಧ್ಯಮ ಮತ್ತು ನ್ಯಾಯಾಂಗದ ಕೆಲವು ವರ್ಗಗಳನ್ನೂ ತಮ್ಮ ನಿಯಂತ್ರಣದಲ್ಲಿಟ್ಟುಕೊಂಡು ನಿರ್ದಯವಾಗಿ ಹಿಂದೂಗಳಲ್ಲದವರ ಮೇಲೆ ತಮ್ಮ ಇಚ್ಛೆಯನ್ನು ಹೇರುತ್ತಾರೆ. ಈ ಅಗಾಧ ಬಹುಸಂಖ್ಯತ್ವಕ್ಕೆ ಇತ್ತೀಚಿನ ಉದಾಹರಣೆಯೆಂದರೆ, ಹಿಜಾಬ್, ಹಲಾಲ್ ಮಾಂಸ ಮತ್ತು ಅಝಾನ್ ನಿಷೇಧಿಸಲು ಹಿಂದುತ್ವ ಗುಂಪುಗಳು ಪ್ರಯತ್ನಗಳನ್ನು ಮಾಡಿರುವುದು. ಆದರೆ, ಇವಿಷ್ಟೇ ಅಲ್ಲ, ಭಾರತೀಯ ಮುಸ್ಲಿಮರನ್ನು ಅಧೀನರನ್ನಾಗಿಸುವ ಮತ್ತು ಅವಮಾನಕ್ಕೆ ಗುರಿಪಡಿಸುವ ಪ್ರಕ್ರಿಯೆಗಳು ಹಲವಾರು ರೂಪಗಳನ್ನು ತೆಗೆದುಕೊಳ್ಳುತ್ತದೆ.

ಭಾರತೀಯ ಮುಸ್ಲಿಮರ ಮೇಲೆ ಹಿಂದುತ್ವದ ದಾಳಿಗೆ ಎರಡು ಸ್ಪಷ್ಟ ಆಯಾಮಗಳಿವೆ. ಮೊದಲ ಆಯಾಮ ರಾಜಕೀಯ. ದಲಿತ ಮತ್ತು ಇತರ ಹಿಂದುಳಿದ ವರ್ಗ (ಒಬಿಸಿ)ಗಳ ಗಣನೀಯ ವರ್ಗವೊಂದನ್ನು ಹಿಂದುತ್ವದ ತೆಕ್ಕೆಯೊಳಗೆ ತೆಗೆದುಕೊಂಡು ಗೆಲ್ಲುವ ‘ಹಿಂದೂ’ ಮತ ಬ್ಯಾಂಕೊಂದನ್ನು ಸೃಷ್ಟಿಸುವುದು ಮತ್ತು ಅದಕ್ಕೆ ಪ್ರತಿಯಾಗಿ ಅವರಲ್ಲಿ (ದಲಿತರು ಮತ್ತು ಒಬಿಸಿಗಳಲ್ಲಿ) ತಾವು ಸಾಂಸ್ಕೃತಿಕ ಮತ್ತು ಸಾಮಾಜಿಕವಾಗಿ ಮುಸ್ಲಿಮರಿಗಿಂತ ಶ್ರೇಷ್ಠರು ಎಂಬ ಭಾವನೆಯನ್ನು ಹುಟ್ಟಿಸುವುದು. ಹೆಚ್ಚಿನ ರಾಜ್ಯಗಳಲ್ಲಿ, ಸುಮಾರು 80 ಶೇಕಡಾದಷ್ಟು ಮತದಾರರು ಹಿಂದೂಗಳಾಗಿದ್ದಾರೆ. ಹಾಗಾಗಿ, ‘ಹಿಂದೂ-ಮೊದಲು ಮತ್ತು ಮುಸ್ಲಿಮರು-ಹೊರಗೆ’ ಎಂಬ ಸಿದ್ಧಾಂತದ ಆಧಾರದಲ್ಲಿ ಹಿಂದೂಗಳ ಶೇ.60 ಮತವನ್ನು ಪಡೆದರೂ ಅಧಿಕಾರಕ್ಕೆ ಬಿಜೆಪಿಯ ಹಾದಿ ಸಲೀಸು. ಬಿಜೆಪಿಯ ಎದುರು ಒಂದೇ ರಾಜಕೀಯ ಪಕ್ಷ ಸ್ಪರ್ಧಿಸಿದರೆ ಇದು ಅನ್ವಯಿಸುತ್ತದೆ. ಹಲವು ಪಕ್ಷಗಳು ಸಕ್ರಿಯವಾಗಿರುವ ರಾಜ್ಯಗಳಲ್ಲಿ ಶೇ. 50 ಹಿಂದೂ ಮತಗಳನ್ನು ಪಡೆದರೂ ಬಿಜೆಪಿಯ ಗೆಲುವಿಗೆ ಧಾರಾಳ ಸಾಕು.

ಅಲ್ಪಸಂಖ್ಯಾತರ ಮೇಲಿನ ಹಿಂದುತ್ವದ ದಾಳಿಯ ಎರಡನೇ ಆಯಾಮ, ಸೈದ್ಧಾಂತಿಕ. ಹಿಂದೂಗಳು ಮಾತ್ರ ಈ ನೆಲದ ನಿಜವಾದ, ಕ್ರಮಬದ್ಧವಾದ, ವಿಶ್ವಾಸಾರ್ಹ ನಾಗರಿಕರು ಹಾಗೂ ಭಾರತೀಯ ಮುಸ್ಲಿಮರು (ಸ್ವಲ್ಪ ಮಟ್ಟಿಗೆ ಭಾರತೀಯ ಕ್ರೈಸ್ತರು ಕೂಡ) ಕ್ರಮಬದ್ಧವಲ್ಲದ ಮತ್ತು ವಿಶ್ವಾಸಾರ್ಹವಲ್ಲದ ನಾಯಕರು ಎಂಬುದಾಗಿ ಹಿಂದುತ್ವ ಭಾವಿಸುತ್ತದೆ. ಯಾಕೆಂದರೆ, (ಸಾವರ್ಕರ್‌ರ ಕುಖ್ಯಾತ ಸಿದ್ಧಾಂತದ ಪ್ರಕಾರ) ಮುಸ್ಲಿಮರು ಮತ್ತು ಕ್ರೈಸ್ತರ ಪುಣ್ಯಭೂಮಿ (ಪವಿತ್ರ ಪ್ರಾರ್ಥನಾ ಸ್ಥಳ)ಯು ಅವರ ಪಿತೃಭೂಮಿ (ತಾಯ್ನೆಲ)ಯಿಂದ ಹೊರಗಿದೆ. ತಾವು ಈ ನೆಲದ ನೈಜ ಮಾಲಕರು ಎಂಬ ಕಲ್ಪನೆಯು, ಭಾರತೀಯ ಮುಸ್ಲಿಮರನ್ನು ಅವರ ಬಟ್ಟೆ, ಅವರ ಆಹಾರ, ಅವರ ಸಂಪ್ರದಾಯಗಳು, ಅವರ ಆರ್ಥಿಕ ವರಮಾನದ ವಿಧಾನಗಳು ಮುಂತಾದವುಗಳ ವಿಷಯದಲ್ಲಿ ನಿರಂತರವಾಗಿ ಪ್ರಚೋದಿಸುವಂತೆ ಮತ್ತು ತಮಾಷೆ ಮಾಡುವಂತೆ ಹಿಂದುತ್ವ ಕಾರ್ಯಕರ್ತರನ್ನು ಪ್ರಚೋದಿಸುತ್ತದೆ.
 ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ, ಧೀರ ಹಾಗೂ ಖ್ಯಾತ ಕನ್ನಡ ಸಾಹಿತಿ ದೇವನೂರ ಮಹಾದೇವ ಹಿಂದುತ್ವದ ಗೂಂಡಾಗಳು ವಿಧಿಸಿದ ನಿಷೇಧವನ್ನು ಧಿಕ್ಕರಿಸಿ ಹಲಾಲ್ ಮಾಂಸವನ್ನು ಖರೀದಿಸಿದರು. ‘‘ದೇಷ ಎನ್ನುವುದು ಬಲಪಂಥೀಯರಿಗೆ ಶಕ್ತಿ ತುಂಬುವ ಪೇಯವಾಗಿದೆ’’ ಎಂಬುದಾಗಿ ಅವರು ಈ ಸಂದರ್ಭದಲ್ಲಿ ಮಾತನಾಡುತ್ತಾ ಹೇಳಿದರು. (https://twitter.com/KeypadGuerilla/status/1510866239899373568?ref_src=twsrc^tfw).

ಇದು ಅತ್ಯಂತ ಸಮರ್ಥ ವಿವರಣೆಯಾಗಿದೆ. ನನಗೆ ಅನುಮತಿ ಇದ್ದರೆ ಇದಕ್ಕೆ ನಾನೊಂದು ವಿಷಯವನ್ನು ಸೇರಿಸಲು ಬಯಸುತ್ತೇನೆ. ಅಂದರೆ, ಈ ಶಕ್ತಿವರ್ಧಕ ಪೇಯದಲ್ಲಿರುವ ದ್ವೇಷಕ್ಕೆ ಚಿತ್ತಭ್ರಾಂತಿಯನ್ನು ಬೆರೆಸಲಾಗಿದೆ. ಹಿಂದುತ್ವದ ಪ್ರಭಾವಕ್ಕೆ ಒಳಗಾಗಿರುವ ಹಿಂದೂಗಳಲ್ಲಿ ಹೆದರಿಕೆಯು ಅಭದ್ರತೆಯ ಭಾವನೆಯನ್ನು ಹುಟ್ಟಿಸಿದೆ. ಅದೇ ವೇಳೆ, ಅವರು ತಮ್ಮ ಮುಸ್ಲಿಮ್ ಸಹ ನಾಗರಿಕರ ಬಗ್ಗೆ ವಿವೇಚನಾರಹಿತ ದ್ವೇಷವನ್ನೂ ಬೆಳೆಸಿಕೊಂಡಿದ್ದಾರೆ.

ಅಲ್ಪಾವಧಿಯಲ್ಲಿ, ಈ ಸಿದ್ಧಾಂತದ ಪಾಲನೆಯು ಭಾರತೀಯ ಮುಸ್ಲಿಮರ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತದೆ (ಅದು ಈಗಾಗಲೇ ಗಂಭೀರ ಪರಿಣಾಮಗಳನ್ನು ಬೀರುತ್ತಿದೆ). ಆದರೆ, ದೀರ್ಘಾವಧಿಯಲ್ಲಿ, ಅದು ಹಿಂದೂಗಳನ್ನೂ ಕಾಡಲಿದೆ. ಶ್ರೀಲಂಕಾದಲ್ಲಿ ತಮಿಳರಿಗೆ ಸಿಂಹಳೀಯರು ನೀಡುತ್ತಿರುವ ಕಿರುಕುಳ, ಪಾಕಿಸ್ತಾನದಲ್ಲಿ ಹಿಂದೂಗಳು, ಕ್ರೈಸ್ತರು, ಅಹ್ಮದೀಯರು ಮತ್ತು ಶಿಯಾಗಳಿಗೆ ಸುನ್ನಿಗಳು ನೀಡುತ್ತಿರುವ ಕಿರುಕುಳ ಮತ್ತು ಮ್ಯಾನ್ಮಾರ್‌ನಲ್ಲಿ ರೊಹಿಂಗ್ಯಾ ಮುಸ್ಲಿಮರಿಗೆ ಬೌದ್ಧರು ನೀಡುತ್ತಿರುವ ಕಿರುಕುಳ- ಇವುಗಳೆಲ್ಲವೂ ಈ ನಿಟ್ಟಿನಲ್ಲಿ ಎಚ್ಚರಿಕೆಯ ಕರೆಗಂಟೆಗಳಾಗಿವೆ.
ಈ ಮೂರು ದೇಶಗಳು ಧಾರ್ಮಿಕ ಬಹುಸಂಖ್ಯತ್ವ ಸಿದ್ಧಾಂತದ ಕೈದಿಗಳಾಗದೆ ಹೋಗಿದ್ದರೆ ಅವುಗಳು ಇಂದು ಈಗ ಇರುವುದಕ್ಕಿಂತ ಎಷ್ಟೋ ಪಟ್ಟು ಉತ್ತಮ ಸ್ಥಿತಿಯಲ್ಲಿರುತ್ತಿದ್ದವು. ದ್ವೇಷ ಮತ್ತು ಚಿತ್ತಭ್ರಾಂತಿಯ ಮೂಲಕ ಶಾಂತಿಯುತ ಮತ್ತು ಸಮೃದ್ಧ ಸಮಾಜಗಳನ್ನು ನಿರ್ಮಿಸಲು ಅಥವಾ ನಿರ್ವಹಿಸಿಕೊಂಡು ಹೋಗಲು ಸಾಧ್ಯವಿಲ್ಲ.

Writer - ರಾಮಚಂದ್ರ ಗುಹಾ

contributor

Editor - ರಾಮಚಂದ್ರ ಗುಹಾ

contributor

Similar News

ಸಂವಿಧಾನ -75