ಈ ಬಾರಿ ಹಜ್ ನೆರವೇರಿಸಲು 10 ಲಕ್ಷ ಮಂದಿಗೆ ಅವಕಾಶ: ಸೌದಿ ಅರೇಬಿಯಾ ಘೋಷಣೆ
ಜಿದ್ದಾ: ಈ ಹಿಂದೆ ಕೋವಿಡ್ ಕಾರಣದಿಂದ ಮುಸ್ಲಿಮರ ಪವಿತ್ರ ಯಾತ್ರ ಹಜ್ ಕರ್ಮ ನಿರ್ವಹಿಸಲು ಕೆಲವೇ ಮಂದಿಗೆ ಅವಕಾಶ ನೀಡಲಾಗಿತ್ತು. ಅದರಲ್ಲೂ ಸೌದಿ ನಾಗರಿಕರಿಗೆ ಮತ್ತು ಸೌದಿಯಲ್ಲಿ ನೆಲೆಸಿರುವವರಿಗೆ ಆದ್ಯತೆ ನೀಡಲಾಗಿತ್ತು. ಇದೀಗ ಈ ನಿರ್ಬಂಧವನ್ನು ಸಡಿಲಿಸಲಾಗಿದ್ದು, ಈ ಬಾರಿ ಸೌದಿ ಅರೇಬಿಯಾದಲ್ಲಿರುವ ಹಾಗೂ ಹೊರಗಿನ ಒಟ್ಟು 10 ಲಕ್ಷ ಮಂದಿಗೆ ಹಜ್ ನಿರ್ವಹಿಸಲು ಅವಕಾಶ ಮಾಡಿ ಕೊಡುವುದಾಗಿ ಸೌದಿ ಅರೇಬಿಯಾ ಘೋಷಿಸಿದೆ.
ಈ ಬಾರಿ ಯಾತ್ರಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಿದ ಸೌದಿ ಅರೇಬಿಯಾ, ಈ ಬಾರಿ ಹಜ್ ಕರ್ಮ ನಿರ್ವಹಿಸಲು ೬೫ ವರ್ಷದ ಕೆಳಗಿನವರಿಗೆ ಹಾಗೂ ಕೋವಿಡ್ ವಿರುದ್ಧ ಸಂಪೂರ್ಣ ಲಸಿಕೆ ಹಾಕಿದವರಿಗೆ ಮಾತ್ರ ಅನುಮತಿಸಲಾಗುವುದು ಎಂದು ಹಜ್ ಉಮ್ರಾ ಸಚಿವಾಲಯವರು ತಿಳಿಸಿದೆ.
ವಿದೇಶದಿಂದ ಪ್ರಯಾಣಿಸುವ ಯಾತ್ರಾರ್ಥಿಗಳು ಸೌದಿ ಅರೇಬಿಯಾಕ್ಕೆ ಹೊರಡುವ 72 ಗಂಟೆಗಳ ಮೊದಲು ನೆಗೆಟಿವ್ ಪಿಸಿಆರ್ ಪರೀಕ್ಷೆಯನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿಕೆ ತಿಳಿಸಿದೆ, ಈ ನಡುವೆ ಕೊರೋನ ವೈರಸ್ ಹರಡುವುದನ್ನು ತಡೆಯಲು ಮಕ್ಕಾದಲ್ಲಿ ಆರೋಗ್ಯ ಮುನ್ನೆಚ್ಚರಿಕೆಗಳು ಜಾರಿಯಲ್ಲಿರುತ್ತವೆ ಎಂದೂ ಸಚಿವಾಲಯ ತಿಳಿಸಿದೆ.