ಸರಕಾರ ಭಾವನಾತ್ಮಕವಾಗಿ ಕೆರಳಿಸಿ ಜನ ಯೋಚನೆ ದಿಕ್ಕು ತಪ್ಪಿಸುತ್ತಿದೆ: ಮಂಜುನಾಥ್ ಭಂಡಾರಿ
ಉಡುಪಿ, ಎ.9: ತೈಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಮುಚ್ಚಿ ಹಾಕಲು ಬಿಜೆಪಿ ಸರಕಾರವು ಜನರನ್ನು ಭಾವನಾತ್ಮಕವಾಗಿ ಕೆರಳಿಸಿ ಅವರ ಯೋಚನೆಯ ದಿಕ್ಕನ್ನೇ ತಪ್ಪಿಸುತ್ತಿದೆ. ಈ ಲಜ್ಜೆಗೆಟ್ಟ ಸರಕಾರ ಅನಗತ್ಯ ವಿಚಾರವನ್ನು ಮುನ್ನಲೆಗೆ ತಂದು ನೈಜ ವಿಚಾರವನ್ನು ಮರೆಯುವಂತೆ ಮಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಆರೋಪಿಸಿದ್ದಾರೆ.
ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳ ಬೆಲೆ ಏರಿಕೆ ವಿರುದ್ಧ ಶನಿವಾರ ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ಹಮ್ಮಿಕೊಳ್ಳಲಾದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲಗಳ ಬೆಲೆ ಏರಿಕೆ ಆಗಿಲ್ಲ. 2011ರಲ್ಲಿ ಬ್ಯಾರೆಲ್‌ಗೆ 108 ರೂ. ಇದ್ದರೆ ಈಗ ಅದು 110 ರೂ. ಆಗಿದೆ. ಅಂದರೆ ಪೆಟ್ರೋಲ್ ಬೆಲೆ ಏರಿಕೆಗೆ ಸರಕಾರ ವಿಧಿಸಿರುವ ತೆರಿಗೆಯೇ ಕಾರಣ ಹೊರತು ಕಚ್ಚಾತೈಲ ಬೆಲೆ ಏರಿಕೆ ಅಲ್ಲ. ಈ ತೈಲ ಬೆಲೆ ಏರಿಕೆಯಿಂದ ಇತರ ಅಗತ್ಯ ವಸ್ತುಗಳ ಬೆಲೆಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದರು.
ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಕಾಲೇಜು ಆವರಣದಲ್ಲಿ ಪರಿಹರಿಸುವಂತಹ ಹಿಜಾಬ್ ಪ್ರಕರಣವನ್ನು ದೊಡ್ಡದಾಗಿ ಮಾಡಲಾಗಿದೆ. ಇದಕ್ಕೆ ರಾಜ್ಯ ಸರಕಾರವೇ ಕುಮ್ಮಕ್ಕು ನೀಡಿದೆ. ಈ ಮೂಲಕ ಈ ಪ್ರಕರಣವನ್ನೇ ದೊಡ್ಡದು ಮಾಡಲಾಗಿದೆ. ಸಂವಿಧಾನದಡಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರಕಾರ ಪ್ರಜಾಪ್ರಭುತ್ವವನ್ನೇ ಭಸ್ಮ ಮಾಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಶಾಸಕ ಗೋಪಾಲ ಪೂಜಾರಿ ಮಾತನಾಡಿ, ಚುನಾವಣೆ ಹತ್ತಿರ ಬರುತ್ತಿದ್ದಂತೆ ಬಿಜೆಪಿ ತಮ್ಮ ಹಾಳೆಯ ಚಾಲಿ ಆರಂಭಿಸಿ, ವಿವಾದಗಳನ್ನು ಸೃಷ್ಠಿಸಿ ಲಾಭ ಪಡೆಯುವ ಹುನ್ನಾರ ಮಾಡುತ್ತಿದೆ. ಬಿಜೆಪಿಯ ಈ ಕುತಂತ್ರ ರಾಜ ಕಾರಣಕ್ಕೆ ತೀಲಾಂಜಲಿ ಇಡುವ ಕಾರ್ಯವನ್ನು ಕಾಂಗ್ರೆಸ್ ಮಾಡಲಿದೆ. ಕಳೆದ ಚುನಾವಣೆ ಸಂದರ್ಭದಲ್ಲಿ ಪರಮೇಶ್ ಮೇಸ್ತ, ಅಕ್ಷತಾ ದೇವಾಡಿಗ ಹಾಗೂ ರತ್ನ ಕೊಠಾರಿಯಾ ಸಾವಿನ ಬಗ್ಗೆ ಸುಳ್ಳು ಹೇಳಿ ಬಿಜೆಪಿ ರಾಜಕೀಯ ಲಾಭ ಪಡೆದುಕೊಂಡಿತು ಎಂದು ದೂರಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮುಖಂಡರಾದ ಅಮೃತ್ ಶೆಣೈ, ವರೋನಿಕಾ ಕರ್ನೆಲಿಯೋ, ಗೀತಾ ವಾಗ್ಳೆ, ರಮೇಶ್ ಕಾಂಚನ್, ದೀಪಕ್ ಕೋಟ್ಯಾನ್, ರಾಜು ಪೂಜಾರಿ, ಇಸ್ಮಾಯೀಲ್ ಆತ್ರಾಡಿ, ಶಬ್ಬೀರ್ ಉಡುಪಿ, ನಾಸಿರ್, ನವೀನ್ ಡಿಸೋಜ, ಮಂಜುನಾಥ್ ಪೂಜಾರಿ, ಸದಾಶಿವ ದೇವಾಡಿಗ, ಮದನ್ ಕುಮಾರ್, ಹರಿಪ್ರಸಾದ್ ಶೆಟ್ಟಿ, ಪ್ರದೀಪ್ ಶೆಟ್ಟಿ, ಸಂತೋಷ್ ಕುಲಾಲ್, ಪ್ರಶಾಂತ್ ಜತ್ತನ್ನ, ಹರೀಶ್ ಕಿಣಿ ಮೊದಲಾದವರು ಭಾಗವಹಿಸಿದ್ದರು. ಇದಕ್ಕೂ ಮುನ್ನ ಬ್ರಹ್ಮಗಿರಿ ಕಾಂಗ್ರೆಸ್ ಭವನದಿಂದ ಅಜ್ಜರಕಾಡಿನವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.
‘ಶೋಭಾರನ್ನು ಮಂಪರು ಪರೀಕ್ಷೆ ಒಳಪಡಿಸಿ’
ಇಷ್ಟು ದಿನ ಕ್ಷೇತ್ರಕ್ಕೆ ಬಾರದೆ ಅಡಗಿ ಕುಳಿತಿದ್ದ ಸಂಸದೆ ಶೋಭಾ ಕರಂದ್ಲಾಜೆ ಈ ಬಾರಿ ಶಿವಮೊಗ್ಗ ವಿವಾದ ಇಟ್ಟುಕೊಂಡು ಕ್ಷೇತ್ರಕ್ಕೆ ಬಂದಿದ್ದಾರೆ. ಮುಂದಿನ ಚುನಾವಣೆಗೆ ಸ್ಪರ್ಧಿಸುವುದಾದರೆ ಕ್ಷೇತ್ರದ ಮತದಾರರು ಕರಂದ್ಲಾಜೆಯ ಮಂಪರು ಪರೀಕ್ಷೆ ವರದಿಯನ್ನು ತೆಗೆದುಕೊಳ್ಳಬೇಕು. ಇವರು ಮಾನಸಿಕ ಸ್ಥಿಮಿತ ಕಳೆದುಕೊಂಡಂತೆ ಮಾತನಾಡುತ್ತಿದ್ದಾರೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಟೀಕಿಸಿದರು.
ಸರಕಾರದ ತಪ್ಪುಗಳ ಬಗ್ಗೆ ಮಾತನಾಡದಂತೆ ವಿರೋಧ ಪಕ್ಷ ನಾಯಕರ ಬಾಯಿ ಮುಚ್ಚಿಸುವ ಕಾರ್ಯವನ್ನು ಇವರೆಲ್ಲ ಮಾಡುತ್ತಿದ್ದಾರೆ. ಬಿಜೆಪಿಯವರು ಭಾವನಾತ್ಮಕ ವಿಚಾರವನ್ನು ಕೇವಲ ಚುನಾವಣೆಗಳಿಗಾಗಿಯೇ ವಿವಾದವನ್ನಾಗಿ ಮಾಡುತ್ತಿದ್ದಾರೆ ಎಂದು ಅವರು ದೂರಿದರು.
ಉಡುಪಿ ಜಿಲ್ಲೆಯಲ್ಲಿ ಇವರ ಪಕ್ಷದವರು ಇವರದ್ದೆ ಪಕ್ಷದವರನ್ನು ಮಾಡಿರುವ ಹಲವು ಕೊಲೆಗಳ ಬಗ್ಗೆ ಶೋಭಾ ಕರಂದ್ಲಾಜೆ ಚಕಾರ ಎತ್ತುತ್ತಿಲ್ಲ. ಯಾವುದೇ ರೀತಿ ಪರಿಹಾರ ನೀಡಿಲ್ಲ. ಅದನ್ನು ಮುಚ್ಚಿ ಹಾಕಲು ಪ್ರಯತ್ನ ಮಾಡುತ್ತಿದ್ದಾರೆ. ಬಿಜೆಪಿ ಸರಕಾರ ಯಡಮೊಗೆ ಉದಯ ಗಾಣಿಗ ಕುಟುಂಬಕ್ಕೂ 25 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದರು.