ಒಂದು ವಾರದಲ್ಲಿ ಹಿಂದಿ ಕಲಿಯಿರಿ!

Update: 2022-04-09 18:31 GMT

‘‘ಹಿಂದಿ ಹಿಂದಿಯೆಂದು
ಹಿಂದಿ ನಂಬಲಿ ಹೋದ, ಹಿಂದಿ ಬಿಟ್ಟಾರ ನಡುನೀರ...
ಹಿಂದಿ ಬಿಟ್ಟಾರ ನಡುನೀರ ನನ್ನವ್ವ

ಕನ್ನಡ ತಾಯಿ ನನ್ನ ಕೈಯ ಬಿಡಬೇಡ’’ ಎಂದು ಚೌಕೀದಾರರ ಭಕ್ತ ಬಸ್ಯನ ಹೆಂಡ್ತಿ ಚೆನ್ನಿ ರಾಗಿ ಬೀಸುತ್ತಿರುವಾಗ ಯಾರೋ ‘ಶು ಶು’ ಎಂದು ಕರೆದಂತಾಯಿತು. ಧಡೂತಿ ದೇಹ, ಗಡ್ಡ....ಯಾವುದೋ ಜೈಲಿನಿಂದ ತಪ್ಪಿಸಿಕೊಂಡು ಬಂದವನಂತಿದ್ದ. ‘‘ಯಾರು ಬೇಕಾಗಿತ್ತು....’’ ಚೆನ್ನಿ ರಾಗಿ ಬೀಸುತ್ತಲೇ ಕೇಳಿದಳು. ‘‘ಸ್ವಲ್ಪ ಹಿಂದಿ ಬೇಕಾಗಿತ್ತು...ಕೊಡ್ತೀರಾ?’’ ಗಡ್ಡದಾರಿ ಕೇಳಿದ. ಇವನನ್ನು ಎಲ್ಲೋ ನೋಡಿದಂಗಿದೆಯಲ್ಲ....ಸೋಂಭೇರಿ ಗಂಡ ಬಸ್ಯನ ವಾಟ್ಸ್‌ಆ್ಯಪ್‌ನಲ್ಲಿರಬೇಕು ಎಂದು ಚೆನ್ನಿ ‘‘ಇಲ್ಲೇನಿದ್ದರೂ ಕನ್ನಡ....’’ ಎಂದು ಬಿಟ್ಟಳು. ಗಡ್ಡಧಾರಿ ಮೆಲ್ಲಗೆ ತನ್ನ ಹೆಗಲಲ್ಲಿದ್ದ ಚೀಲದಿಂದ ‘ಒಂದು ವಾರದಲ್ಲಿ ಹಿಂದಿ ಕಲಿಯಿರಿ’ ಪುಸ್ತಕವನ್ನು ಕೊಟ್ಟು ‘‘ನಮ್ ಸರಕಾರ ನಿಮಗೆ ಒಂದು ವಾರದಲ್ಲಿ ಹಿಂದಿ ಕಲಿಸತ್ತೆ. ಕ್ಲಾಸಿಗೆ ಬರ್ತೀರಾ?’’ ಗಡ್ಡಧಾರಿ ಮನವಿ ಮಾಡಿದ. ‘‘ಯಾರು ನೀನು....ಒಳ್ಳೆ....ರಾತ್ರಿಗಳ್ಳನಂಗಾಡ್ತೀ ಯಲ್ಲ....ಹೆಸರೇನು ನಿಂದು...’’ ಚೆನ್ನಿ ಕೇಳಿದಳು.
‘‘ಹ್ಹಿ ಹ್ಹಿ ನಾನು ದೇಶದ ಗೃಹ ಸಚಿವ..ಅಮಿಕ್ ಸಾ...ನೀವು ರಾಗಿ ಬೀಸೋವಾಗ ಕನ್ನಡದ ಬದಲು ಹಿಂದೀಲಿ ಹಾಡಿದ್ರೆ ದೇಶ ಸುಭದ್ರವಾಗತ್ತೆ....’’ ಅಮಿಕ್ ಸಾ ಪರಿಚಯ ಹೇಳಿಕೊಂಡರು.
 ‘‘ಓ ಚೌಕೀದಾರನ ಕಡೆಯೋಣ....ಬಾ...ಬಾ...ಸಿಲಿಂಡರ್ ಗ್ಯಾಸ್ ರೇಟು ಆಕಾಸಕ್ಕೆ ಏರ್ಕೊಂಡು ಬಿಟ್ಟೈತೆ....ನೀನಿಲ್ಲಿ ಹಿಂಡಿ ಎಸೆಯೋಕೆ ಬಂದಿದ್ದೀಯ? ಅಮ್ಮುಕ್ಕೊಂಡು ಹೋಗು...’’ ಎಂದು ಝಾಡಿಸಿದಳು. ಅಮಿಕ್ ಸಾ ಹಲ್ಲು ಕಿರಿಯುತ್ತಾ ‘‘ದೇಶದಲ್ಲಿ ಎಲ್ಲರೂ ಹಿಂದಿ ಮಾತನಾಡಿದ್ರೆ...ತಾನೆ ಚೌಕೀದಾರರಿಗೆ ನಿಮ್ಮ ಸಮಸ್ಯೆ ಅರ್ಥವಾಗುವುದು. ದೇಶದವರೆಲ್ಲ ಹಿಂದಿ ಕಲಿತು ಹಿಂದಿಯಲ್ಲಿ ನಿಮ್ಮ ಸಮಸ್ಯೆ ಹೇಳಿದರೆ ಎಲ್ಲವೂ ಪರಿಹಾರವಾಗತ್ತೆ....’’ ಎಂದರು.
‘‘ನಂಗೆ ಕನ್ನಡ ಬಿಟ್ರೆ ವಸಿ ಇಂಗ್ಲಿಸ್ ಗೊತ್ತೈತೆ. ಇಂಗ್ಲಿಸ್‌ನಾಗೆ ಹೇಳಿದ್ರೆ ನಡಿಯಾಕಿಲ್ವಾ.,...’’ ಚೆನ್ನಿ ಕೇಳಿದಳು.
‘‘ದೇಶ ಹಿಂದೆ ಉಳಿಯುವುದಕ್ಕೆ ಕಾರಣವೇ ಎಲ್ಲರೂ ಹಿಂದಿ ಮಾತನಾಡದೇ ಇರುವುದು. ಅದಕ್ಕಾಗಿ ದೇಶಾದ್ಯಂತ ‘ಒಂದು ವಾರದಲ್ಲಿ ಹಿಂದಿ ಕಲಿಯಿರಿ’ ರ್ಯಾಪಿಡೆಕ್ಸ್ ಪುಸ್ತಕವನ್ನು ಪುಕ್ಕಟೆಯಾಗಿ ಹಂಚಲಿದ್ದಾರೆ.
ಇಂಗ್ಲಿಸ್ ಪರದೇಸಿ ಬಾಸೆ. ಅದಕ್ಕೆ ನನಗೆ ಮತ್ತು ಚೌಕೀದಾರರಿಗೆ ಇಂಗ್ಲಿಸ್ ಬರೋದಿಲ್ಲ. ಏನಿದ್ರೂ ನೋಡ್ಕೊಂಡೇ ಇಂಗ್ಲಿಷ್‌ನಲ್ಲಿ ಭಾಷಣ ಮಾಡೋದು. ನೋಡು ನಾವೆಲ್ಲ ಅಪ್ಪಟ ಭಾರತೀಯರಾಗಬೇಕಾದ್ರೆ ಹಿಂದಿ ಕಲೀಬೇಕು....ಹಿಂದಿ ಹಾಡ್ತಾ ರಾಗಿ ಬೀಸ್ಬೇಕು...ಚೌಕೀದಾರರಿಗೇ ಇಂಗ್ಲಿಶ್ ಗೊತ್ತಿಲ್ಲ ಅಂದ ಮೇಲೆ ನೀವೆಲ್ಲ ಇಂಗ್ಲಿಷ್ ಮಾತನಾಡುವುದು ಎಷ್ಟು ಸರಿ?’’ ಅಮಿಕ್ ಸಾ ಮನವೊಲಿಸತೊಡಗಿದರು.

‘‘ಹಿಂದಿ ಕಲಿತು ನೀವೆಲ್ಲ ಗುಡ್ಡಾಕಿರೋದು ನಮ್ಗೆಲ್ಲ ಗೊತ್ತು. ಕೇರಳ, ತಮಿಳ್ನಾಡು, ಕರ್ನಾಟಕ, ಆಂಧ್ರ....ಇವರ್ಯಾರಿಗೂ ಹಿಂದಿ ಗೊತ್ತಿಲ್ಲ..ಹೆಂಗೆ ಚಲೋ ಆಗಿ ಬದುಕ್ತಿದ್ದಾರೆ ನೋಡು....ಹಿಂದಿ ಮಾತಾಡೋ ನಿಮ್ಕಡೆ ಜನ ಹೊಟ್ಟೆಗೆ ಹಿಟ್ಟಿಲ್ಲದೆ ಹೆಂಗೆ ಬದ್ಕುತ್ತಿದ್ದಾರೆ ಗೊತ್ತಿಲ್ವಾ ನಮ್ಗೆ....? ನಾವು ನಮ್ಮವ್ವ ಕನ್ನಡಮ್ಮನ ಜೊತೆಗೆ ಸೆಂದಾಗಿದ್ದೀವೆ. ಅಗತ್ಯ ಬಿದ್ರೆ ಇಂಗ್ಲಿಸ್‌ನಲ್ಲಿ ಟುಸ್‌ಪುಸ್ ಅಂತೀವಿ. ಇಡೀ ವಿಸ್ವನೇ ನಮ್ಕಡೆ ನೋಡ್ತಾ ಇದೆ....ಐಟಿ ಬಿಟಿ ಎಲ್ಲ ನಮ್ದೇಯ. ಆಸ್ಪತ್ರೆ, ಎಜುಕೇಶನ್ ಎಲ್ಲದರಲ್ಲೂ ಮುಂದಾಗಿದ್ದೇವೆ....ನೀವು ಬೇಕಾರೆ ಕನ್ನಡ ಕಲೀರಿ....ತಮಿಳು ಕಲೀರಿ....ನಮ್ಜೆತೆ ಮಾತಾಡ್ಬೇಕು ಅಂದ್ರೆ ಇಂಗ್ಲಿಸು ಕಲೀರಿ. ಆ ಚೌಕೀದಾರನಿಗೆ ಇಂಗ್ಲಿಸು ಗೊತ್ತಿಲ್ಲ ಅಂತ ನಾವ್ಯಾಕೆ ಆ ಹಿಂದಿ ಭಾಸೇನ ಕಲೀಬೇಕು?’’ ಚೆನ್ನಿ ಝಾಡಿಸಿದಳು. ‘‘ಹಿಂದಿ ಭಾಷೇಲಿ ಮಾತನಾಡಿದ್ರೆ ನಿಮ್ಮ ಸಮಸ್ಯೆ ಎಲ್ಲಾ ನಿವಾರಿಸ್ತಾರೆ ಚೌಕೀದಾರರು’’ ಅಮಿಕ್ ಸಾ ಆಮಿಶ ಒಡ್ಡಿದರು.


 

‘‘ಏ ಅವನ್ಗೆ ಪೊರಕೆ ಭಾಸೇನೆ ಬೆಸ್ಟ್....ಈಗ ತಂದೆ....’’ ಎನ್ನುತ್ತಾ ಚೆನ್ನಿ ಒಳ ಹೋಗುತ್ತಿದ್ದಂತೆಯೇ ಅಮಿಕ್ ಸಾ ತನ್ನ ಹಿಂದಿ ಅಕ್ಷರ ಮಾಲೆ ಪುಸ್ತಕಗಳ ಜೊತೆ ಕಾಲಿಗೆ ಬುದ್ಧಿ ಹೇಳಿದರು. ಚೆನ್ನಿ ಹೊರಗೆ ಬರುತ್ತಿದ್ದಂತೆಯೇ ದೂರದಲ್ಲಿ ಭಕ್ತ ಬಸ್ಯ ‘‘ಅಮಾರ ನಾಮ್ ಬಸ್ಯ. ಮೈ ಚೌಕೀದಾರ್ ಕಾ ಭಕ್ತ ಹೂಂ...’’ ಎಂದು ಪುಸ್ತಕ ಬಿಡಿಸಿ ಓದುತ್ತಾ ಬರುತ್ತಿರುವುದು ಕಾಣಿಸಿತು. ಚೆನ್ನಿಗೆ ಕೋಪ ನೆತ್ತಿಗೇರಿತು. ‘‘ನಾಲ್ಕಕ್ಸರ ಕನ್ನಡ ಮತ್ತು ಇಂಗ್ಲಿಸ್ ಕಲಿಯುವ ಸಮಯದಲ್ಲಿ ಕಲಿತಿದ್ರೆ ಇಂದು ವಾಟ್ಸ್‌ಆ್ಯಪ್‌ನಲ್ಲಿ ಎರಡು ರೂಪಾಯಿಗೆ ದುಡಿಯುವ ಗತಿಗೇಡು ನಿನ್ಗೆ ಬರುತ್ತಿತ್ತೇನ್ಲ....’’ ಎನ್ನುತ್ತಾ ಪೊರಕೆ ಭಾಷೆಯಲ್ಲಿ ಪತಿಯನ್ನು ಝಾಡಿಸತೊಡಗಿದಳು. ಬಸ್ಯ ‘‘ಬಚಾವೋ...ಬಚಾವೋ...’’ ಎನ್ನುತ್ತಾ ಅಲ್ಲಿಂದ ಪಲಾಯನ ಮಾಡಿದ.

Writer - *ಚೇಳಯ್ಯ, chelayya@gmail.com

contributor

Editor - *ಚೇಳಯ್ಯ, chelayya@gmail.com

contributor

Similar News