ಸಂತ್ರಸ್ತ ಕುಟುಂಬಸ್ಥರ ಭೇಟಿಗೆ ಮಾಜಿ ಸಚಿವ ಸೊರಕೆಗೆ ಅವಕಾಶ ನಿರಾಕರಣೆ
ಉಡುಪಿ, ಎ.13: ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಂತೋಷ್ ಪಾಟೀಲ್ ಕುಟುಂಬಸ್ಥರನ್ನು ಭೇಟಿಯಾಗಲು ಉಡುಪಿ ಶಾಂಭವಿ ಲಾಡ್ಜಿಗೆ ಆಗಮಿಸಿದ ಮಾಜಿ ಸಚಿವ ವಿನಯಕುಮಾರ್ ಸೊರಕೆ ಅವರಿಗೆ ತನಿಖೆಯ ಹಿನ್ನೆಲೆಯಲ್ಲಿ ಪೋಲಿಸರು ಅವಕಾಶ ನಿರಾಕರಿಸಿದ್ದಾರೆ.
ಲಾಡ್ಜ್ ಆವರಣಕ್ಕೆ ಬಂದ ವಿನಯಕುಮಾರ್ ಸೊರಕೆ ಅವರನ್ನು ಪೊಲೀಸರು, ಒಳಗೆ ಪಂಚನಾಮೆ ಪ್ರಗತಿಯಲ್ಲಿರುವುದರಿಂದ ಅವಕಾಶ ನಿರಾಕರಿಸಿದರು. ಪಂಚನಾಮೆ ಮುಗಿದ ಬಳಿಕ ಭೇಟಿಗೆ ಅವಕಾಶ ನೀಡುವುದಾಗಿ ಪೊಲೀಸರು ತಿಳಿಸಿದರು
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸೊರಕೆ, ಸಂತ್ರಸ್ತ ಸಂತೋಷ್ ಪಾಟೀಲ್ ಕುಟುಂಬದವರ ಭೇಟಿಗೆ ಬಂದಿದ್ದೇನೆ. ಆದರೆ ಅದು ಸಾಧ್ಯವಾಗಿಲ್ಲ ಎಂದು ಹೇಳಿದರು.
ಇದೊಂದು ದೊಡ್ಡ ದುರಂತ. ರೈತರು ಆತ್ಮಹತ್ಯೆ ಮಾಡಿಕೊಳ್ಳುವುದು ನೋಡಿದ್ದೇವೆ. ಆದರೆ ನಲ್ವತ್ತು ಪರ್ಸೆಂಟ್ ಕಮಿಷನ್ ಗಾಗಿ ಆತ್ಮಹತ್ಯೆ ದೇಶದಲ್ಲೇ ಪ್ರಥಮ. ಸರಕಾರ, ಸಚಿವ ಕೆ.ಎಸ್. ಈಶ್ವರಪ್ಪ ಈ ಮೂಲಕ ಪ್ರಸಿದ್ಧಿ ಪಡೆದಂತಾಗಿದೆ. ಈ ಹಿಂದೆ ಈಶ್ವರಪ್ಪ ನೋಟು ಲೆಕ್ಕ ಮಾಡುವ ಮಿಷನ್ ಬಳಸಿ ಪ್ರಸಿದ್ಧರಾಗಿದ್ದರು ಎಂದರು.
ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಕೇವಲ ಸಂತೋಷ್ ಪಾಟೀಲ್ ಗ ಮಾತ್ರ ಅಲ್ಲ. ಅನೇಕರು ಆದೇಶ ಇಲ್ಲದೆ ಗುತ್ತಿಗೆ ಕೆಲಸ ಮಾಡಿದ್ದಾರೆ. ಅವರೆಲ್ಲರೂ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ತಲುಪಿದ್ದಾರೆ. ಸಂತೋಷ್ ಪಾಟೀಲ್ ಗೆ ದಿಲ್ಲಿಗೆ ಹೋದರೂ ನ್ಯಾಯ ಸಿಗಲಿಲ್ಲ. ಪ್ರಧಾನಿ, ಗೃಹಸಚಿವರನ್ನು ಭೇಟಿಗೆ ಪ್ರಯತ್ನ ಮಾಡಿದ್ದರು ಎಂದು ಸೊರಕೆ ತಿಳಿಸಿದರು
ಈ ಹಿಂದೆ ಪ್ರಧಾನಿ ಸಿದ್ದರಾಮಯ್ಯನವರದ್ದು ಪರ್ಸಂಟೇಜ್ ಸರ್ಕಾರ ಎಂದು ಟೀಕಿಸಿದ್ದರು. ಈಗ ಕರ್ನಾಟಕದಲ್ಲಿ ಏನಾಗ್ತಿದೆ? ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಭರವಸೆ ನೀಡಿದ ಪಕ್ಷ ಬಿಜೆಪಿ. ಆದರೆ ಭ್ರಷ್ಟಾಚಾರದ ಕಾರಣಕ್ಕೆ ಜನರು ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ ಎಂದವರು ಹೇಳಿದರು.
ಇನ್ನೆಷ್ಟು ಆತ್ಮಹತ್ಯೆಗಳಾಗಬೇಕು? ಇನ್ನೂ ಯಾವ ದಾಖಲೆ ಬೇಕು? ತಕ್ಷಣ ಈಶ್ವರಪ್ಪರನ್ನು ಬಂಧಿಸಬೇಕು. ಆದರೆ ಮುಖ್ಯಮಂತ್ರಿಯವರಯ ಈಶ್ವರಪ್ಪರಿಗೆ ಹದರಬೇಡ ಎನ್ನುತ್ತಿದ್ದಾರೆ. ತಡ ಮಾಡದೆ ಈಶ್ವರಪ್ಪ ತಕ್ಷಣ ರಾಜೀನಾಮೆ ಕೊಡಬೇಕು. ಇಲ್ಲದಿದ್ದರೆ ಪ್ರಕರಣವನ್ನು ತಿರುಚುವ ಸಾಧ್ಯತೆ ಇದೆ ಎಂದು ಅವರು ಆರೋಪಿಸಿದರು.