ಉಡುಪಿ: ಬಿಜೆಪಿಯಿಂದ ಅಂಬೇಡ್ಕರ್ ಜಯಂತಿ
ಉಡುಪಿ : ಉಡುಪಿ ಜಿಲ್ಲಾ ಬಿಜೆಪಿಯ ಜಿಲ್ಲಾ ಪ್ರಬುದ್ಧರ ಪ್ರಕೋಷ್ಠ ಮತ್ತು ಜಿಲ್ಲಾ ಮೀನುಗಾರರ ಪ್ರಕೋಷ್ಠ ಇದರ ಜಂಟಿ ಆಶ್ರಯದಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಆಚರಣೆ ಹಾಗೂ ಸ್ವಚ್ಛ ಭಾರತ್ ಮಿಷನ್ ಅಂಗವಾಗಿ ನಗರಸಭೆಯ ’ಸ್ವಚ್ಛತಾ ಸೈನಿಕರಿಗೆ ಸನ್ಮಾನ’ ಕಾರ್ಯಕ್ರಮ ಇಂದು ಉಡುಪಿ ನಗರಸಭೆಯ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಅಂಬೇಡ್ಕರ್ ಅವರ ತತ್ವಾದರ್ಶಗಳು ಎಂದೆಂದಿಗೂ ಪ್ರಸ್ತುತ. ಸಾಮಾಜಿಕ ಪ್ರಜಾಪ್ರಭುತ್ವ ಉಳಿದರೆ ಮಾತ್ರ ದೇಶ ಉಳಿಯುತ್ತದೆ. ಅಂಬೇಡ್ಕರ್ ಅವರ ವಿಚಾರಧಾರೆಗೆ ಒತ್ತು ನೀಡಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಅಂಬೇಡ್ಕರ್ ಜೀವನದ ಪ್ರಮುಖ ಸ್ಥಳಗಳನ್ನು ಪಂಚ ತೀರ್ಥ ಯೋಜನೆಯಡಿ ಅಭಿವೃದ್ಧಿ ಪಡಿಸಿದೆ ಎಂದರು.
ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು, ನಗರದಲ್ಲಿ ೧೩೦ಕ್ಕೂ ಅಧಿಕ ಇರುವ ಪೌರ ಕಾರ್ಮಿಕರ ಪ್ರತಿನಿಧಿಗಳಾಗಿ ಹಿರಿಯ ಐದು ಮಂದಿ ಸ್ವಚ್ಛತಾ ಸೇನಾನಿಗಳಾದ ಶಾಂತ, ಲಕ್ಷ್ಮಣ, ತೇಜಪ್ಪ, ಪುಷ್ಪ, ಶಾಮ ಇವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಉಡುಪಿ ನಗರಸಭಾ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಲಕ್ಷ್ಮೀ ಮಂಜುನಾಥ್, ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಪೌರಾಯುಕ್ತ ಉದಯಕುಮಾರ್ ಶೆಟ್ಟಿ, ಬಿಜೆಪಿ ಜಿಲ್ಲಾ ಮುಖಂಡರಾದ ಸತ್ಯಾನಂದ ನಾಯಕ್, ಪಾಂಡುರಂಗ ಲಾಗ್ವಾಂಕರ್, ಜಿಲ್ಲಾ ಮಾಧ್ಯಮ ಪ್ರಕೋಷ್ಠದ ಸಂಚಾಲಕ ಶ್ರೀನಿಧಿ ಹೆಗ್ಡೆ ಹಾಗೂ ಇತರರು ಉಪಸ್ಥಿತರಿದ್ದರು.