ತಾನೇ ತೋಡಿದ ಹಳ್ಳಕ್ಕೆ ಬಿದ್ದ ಈಶ್ವರಪ್ಪ
ಕೊನೆಗೂ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪನವರು ಪಟ್ಟು ಸಡಿಲಿಸಿದ್ದಾರೆ. ಹೈಕಮಾಂಡ್ ಕೆಂಗಣ್ಣು, ವಿರೋಧ ಪಕ್ಷಗಳ ಒತ್ತಡ, ಗುತ್ತಿಗೆದಾರರ ಬೆದರಿಕೆಗೆ ತಲೆಬಾಗಬೇಕಾದ ಅನಿವಾರ್ಯ ಸ್ಥಿತಿ ಈಶ್ವರಪ್ಪ ಅವರಿಗೆ ಎದುರಾಗಿದೆ. ಗುತ್ತಿಗೆದಾರ ಸಂತೋಷ್‌ಪಾಟೀಲ್ ಆತ್ಮಹತ್ಯೆಗೆ ಸಂಬಂಧಿಸಿ ಯಾವ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂದ ಈಶ್ವರಪ್ಪ, ಹಾಗೆ ಹೇಳಿಕೆ ನೀಡಿದ ಮರು ದಿನವೇ ರಾಜೀನಾಮೆ ನೀಡಿದ್ದಾರೆ. ಯಡಿಯೂರಪ್ಪರ ಆನಂತರದಲ್ಲಿ ಬಿಜೆಪಿಯ ಇನ್ನೊಬ್ಬ ಹಿರಿಯ ನಾಯಕ ಈ ಮೂಲಕ ರಾಜಕೀಯದಿಂದ ಮರೆಗೆ ಸರಿಯುವ ಹಂತಕ್ಕೆ ಬಂದು ನಿಂತಿದ್ದಾರೆ. ಈ ರಾಜೀನಾಮೆ ಈಶ್ವರಪ್ಪರ ರಾಜಕೀಯ ಬದುಕನ್ನು ಶಾಶ್ವತವಾಗಿ ಬಲಿತೆಗೆದುಕೊಂಡರೆ ಅದರಲ್ಲಿ ಅಚ್ಚರಿಯೇನೂ ಇಲ್ಲ. ‘‘ನಮ್ಮಲ್ಲಿ ಪಕ್ಷಕ್ಕಿಂತ ಸಂಘ ಸ್ಟ್ರಾಂಗು.. ಇಂತಹ ಸಂದಿಗ್ಧ ಸಂದರ್ಭಗಳಲ್ಲಿ ಸಂಘ ಪರಿವಾರದ ಮಾತೇ ಫೈನಲ್. ಅದು ಕಾದು ನೋಡೋಣ’’ ಎಂಬ ಹೆಸರು ಹೇಳಲಿಚ್ಛಿಸದ ಹಿರಿಯ ನಾಯಕರ ಮಾತು ನಿಜವಾಗಿದೆ. ಸಂಘಪರಿವಾರದ ನಿರ್ಧಾರಕ್ಕೆ ಈಶ್ವರಪ್ಪ ತಲೆಬಾಗಿದ್ದಾರೆ. ಇಲ್ಲದೇ ಇದ್ದಲ್ಲಿ, ಪಕ್ಷದ ಕಾರ್ಯಕರ್ತನೊಬ್ಬ ಆತ್ಮಹತ್ಯೆಗೆ ಶರಣಾಗಿ, ಸಚಿವ ಈಶ್ವರಪ್ಪನವರೇ ನನ್ನ ಸಾವಿಗೆ ಕಾರಣ ಎಂದು ಡೆತ್ ನೋಟ್‌ನಲ್ಲಿ ಬರೆದಿಟ್ಟಿದ್ದರೂ, ಎಫ್‌ಐಆರ್‌ನಲ್ಲಿ ಸಚಿವರೇ ಮೊದಲ ಆರೋಪಿಯಾಗಿದ್ದರೂ, ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ರಾಜಕೀಯ ಸತ್ಸಂಪ್ರದಾಯಕ್ಕೆ ಬಿಜೆಪಿ ತಿಲಾಂಜಲಿ ಇಟ್ಟಿತೇ ಎಂಬ ಪ್ರಶ್ನೆ ಎದುರಾಗುತ್ತಿತ್ತು. 74 ವರ್ಷಗಳ ಹಿರಿಯ ನಾಯಕ ಈಶ್ವರಪ್ಪನವರು ಇಲ್ಲಿಯವರೆಗೆ ಉಪಮುಖ್ಯಮಂತ್ರಿ, ಇಂಧನ, ಗ್ರಾಮೀಣಾಭಿವೃದ್ಧಿ, ಜಲಸಂಪನ್ಮೂಲ, ಕಂದಾಯದಂತಹ ಭಾರೀ ಖಾತೆಗಳನ್ನು ಹೊಂದಿದ್ದು ಸಂಘ ಪರಿವಾರದ ಆಶೀರ್ವಾದದಿಂದಲೇ. ಪಕ್ಷದ ಅಧ್ಯಕ್ಷ ಸ್ಥಾನ, ವಿಧಾನ ಪರಿಷತ್‌ನಲ್ಲಿ ವಿರೋಧ ಪಕ್ಷದ ನಾಯಕ, ಕೇಂದ್ರ ಸಿಲ್ಕ್ ಬೋರ್ಡ್ ಚೇರ್ಮನ್‌ನಂತಹ ಹತ್ತು ಹಲವು ಸ್ಥಾನಗಳನ್ನು ಅಲಂಕರಿಸಿದ್ದೂ ಸಂಘ ಪರಿವಾರಕ್ಕೆ ನಿಷ್ಠೆ ನಿಯತ್ತು ತೋರಿದ್ದರಿಂದಲೇ ಎನ್ನುವ ಈಶ್ವರಪ್ಪನವರ ಆಪ್ತರು, ‘‘ಪಕ್ಷದಲ್ಲಿ ಅವರ ಬೆನ್ನಿಗೆ ನಿಂತು ರಕ್ಷಣೆ ನೀಡುವವರು ಯಾರೂ ಇಲ್ಲ’’ ಎಂದು ಮಾರ್ಮಿಕವಾದ ಸತ್ಯ ಹೊರಹಾಕುತ್ತಾರೆ. ಇವತ್ತು ಸಚಿವ ಕೆ.ಎಸ್. ಈಶ್ವರಪ್ಪನವರು ಬಿಜೆಪಿಯಲ್ಲಿ ನಂಬರ್ 2 ಸ್ಥಾನದಲ್ಲಿದ್ದಾರೆ. ಆದರೆ ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಾಗ, ಹಿರಿತನ, ಅನುಭವ ಮತ್ತು ಪಕ್ಷ ಸಂಘಟನೆಯ ದೃಷ್ಟಿಯಿಂದ ಮುಖ್ಯಮಂತ್ರಿ ಸ್ಥಾನಕ್ಕೇರಬೇಕಾದವರು ಕೆ.ಎಸ್.ಈಶ್ವರಪ್ಪನವರು. ಆದರೆ ಈಶ್ವರಪ್ಪನವರು ಮುಖ್ಯಮಂತ್ರಿಯಾಗಲಿಲ್ಲ. ನಾನು ಸೀನಿಯರ್ ಮೋಸ್ಟ್ ಲೀಡರ್ ಎಂದು ಕೂಡ ಕ್ಲೈಮ್ ಮಾಡಲಿಲ್ಲ. ಕಾರಣ ಸ್ಪಷ್ಟ. ಮುಖ್ಯಮಂತ್ರಿ ಸ್ಥಾನದಿಂದ ಇಳಿದ ಯಡಿಯೂರಪ್ಪನವರು ಮತ್ತು ಈಶ್ವರಪ್ಪನವರು ಒಂದೇ ಜಿಲ್ಲೆಯವರಾದರೂ, ಆಸ್ತಿ ಸಂಗ್ರಹಣೆಯಲ್ಲಿ, ಶಿವಮೊಗ್ಗವನ್ನು ಹರಿದು ಹಂಚಿಕೊಳ್ಳುವಲ್ಲಿ ಪೈಪೋಟಿಗೆ ಬಿದ್ದು, ಎದುರಾ ಬದುರಾ ನಿಂತಿದ್ದಾರೆ. ಅವರು ಹಣವನ್ನು ಚೆಕ್ ಮೂಲಕ ಪಡೆದು ಜೈಲಿಗೆ ಹೋಗಿಬಂದರೆ, ಇವರು ಮನೆಯಲ್ಲಿ ನೋಟು ಎಣಿಸುವ ಮೆಷಿನ್ ಇಟ್ಟುಕೊಂಡು ನಾಡಿನ ಜನರ ಮುಂದೆ ಬಟಾ ಬಯಲಾಗಿದ್ದಾರೆ ಎನ್ನುವುದು ರಾಜ್ಯದ ಜನತೆಗೆ ಗೊತ್ತಿರುವ ಸತ್ಯ.
ಇವತ್ತು ಇಷ್ಟೆಲ್ಲ ಬೆಳೆದಿರುವ ಈಶ್ವರಪ್ಪನವರು, ಮೂಲತಃ ಶ್ರೀಮಂತ ಕುಟುಂಬದಿಂದ ಬಂದವರೆ? ಎಂದರೆ, ಅಪ್ಪಅಡಿಕೆ ಮಂಡಿಯಲ್ಲಿ ದಿನಗೂಲಿ ನೌಕರರಾಗಿದ್ದರು ಎನ್ನುವ ಕಟುಸತ್ಯ ಹೊರಬೀಳುತ್ತದೆ. ಮತ್ತೆ ಈ ಮಟ್ಟಕ್ಕೆ ಏರಿದ್ದು ಹೇಗೆ ಎಂದರೆ? ಬೆರಳು ಸಂಘ ಪರಿವಾರದತ್ತ ತೋರುತ್ತದೆ. ಈಶ್ವರಪ್ಪನವರು ಅಡಿಕೆ ಮಂಡಿಯಲ್ಲಿ ದಿನಗೂಲಿ ಮಾಡುತ್ತಿದ್ದ ಅಪ್ಪನಂತಾಗದೆ ಓದಿ ಒಳ್ಳೆಯ ಕೆಲಸಕ್ಕೆ ಸೇರಬೇಕೆಂದಿದ್ದುದು ನಿಜ. ಆದರೆ ಸಹಪಾಠಿ ರವೀಂದ್ರರ ಸಹವಾಸದಿಂದ ಆರೆಸ್ಸೆಸ್ ಸಂಪರ್ಕಕ್ಕೆ ಬಂದರು. ನಂತರ ನರಸಿಂಹ ಮೂರ್ತಿ ಅಯ್ಯಂಗಾರ್‌ರ ಸ್ನೇಹದಿಂದಾಗಿ ವಿಶ್ವ ಹಿಂದೂ ಪರಿಷತ್ ಪರವಾದರು. ಆನಂತರ ಎಬಿವಿಪಿ, ಜನಸಂಘದಲ್ಲಿ ಗುರುತಿಸಿಕೊಂಡರು. 1975-77ರ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಇಂದಿರಾ ಗಾಂಧಿ ವಿರುದ್ಧ ರಸ್ತೆಗಿಳಿದು ಬಳ್ಳಾರಿ ಜೈಲು ಸೇರಿದರು. ಇಲ್ಲಿಂದ ಈಶ್ವರಪ್ಪನವರು ಸಾರ್ವಜನಿಕ ಬದುಕಿಗೆ ತೆರೆದುಕೊಂಡರು. ಸಂಘ ಪರಿವಾರದವರ ನಂಬಿಕಸ್ಥ ಬಂಟನಾದರು. ಈಶ್ವರಪ್ಪಕುರುಬರು, ಶೂದ್ರ ಸಮುದಾಯಕ್ಕೆ ಸೇರಿದವರು ಎನ್ನುವುದು ಸಂಘ ಪರಿವಾರಕ್ಕೆ, ಬೇಕಾದಾಗ ಬೇಕಾದಂತೆ ಬಳಸಬಹುದಾದ ಗುರಾಣಿಯಂತಾದರು.
ಒಬ್ಬ ಶೂದ್ರನನ್ನು ಸಂಘ ಪರಿವಾರ ಒಪ್ಪಿಒಳಬಿಟ್ಟುಕೊಳ್ಳುವುದನ್ನೇ ಮಹಾನ್ ಮನ್ನಣೆ ಎಂದರಿತ ಈಶ್ವರಪ್ಪಸಂಘದ ಕಟ್ಟಾಳುವಾದರು. ನಿಷ್ಠೆ-ನಿಯತ್ತಿನ ಕಾರ್ಯಕರ್ತನಾದರು. ಸಂಘದ ಕೃಪಾಶೀರ್ವಾದಕ್ಕೆ ಒಳಗಾದ ಈಶ್ವರಪ್ಪಮೊದಲಿಗೆ, 1982ರಲ್ಲಿ ಶಿವಮೊಗ್ಗ ನಗರ ಬಿಜೆಪಿ ಅಧ್ಯಕ್ಷರಾದರು. 1989ರಲ್ಲಿ ಶಿವಮೊಗ್ಗ ವಿಧಾನಸಭೆ ಚುನಾವಣೆಯಲ್ಲಿ ಬಹಳ ಬಿರುಸಿನಿಂದ ಓಡಾಡಿ, ಬಿಜೆಪಿ ಅಭ್ಯರ್ಥಿ ಆನಂದರಾವ್‌ರನ್ನು ಗೆಲ್ಲಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದರು. 1989ರಲ್ಲಿ ಮೊದಲ ಬಾರಿಗೆ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ, ಕಾಂಗ್ರೆಸ್‌ನ ಅಂದಿನ ಸಚಿವ ಕೆ.ಎಚ್.ಶ್ರೀನಿವಾಸರನ್ನು 1,304 ಮತಗಳ ಅಂತರದಿಂದ ಸೋಲಿಸಿ, ಜಯಂಟ್ ಕಿಲ್ಲರ್ ಪಟ್ಟ ಪಡೆದರು. ಆ ಮೂಲಕ ಸಂಘ ಪರಿವಾರದ ಪಡಸಾಲೆಯಲ್ಲಿ ಪರ್ಮನೆಂಟ್ ಸ್ಥಾನ ಪಡೆದರು. 1993ರಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷರಾದರು. 1995ರಲ್ಲಿ ಮತ್ತೊಂದು ಅವಧಿಗೂ ಮುಂದುವರಿದರು. ಪಕ್ಷದ ಅಧ್ಯಕ್ಷ ಸ್ಥಾನ ಮತ್ತು ಶಾಸಕ ಸ್ಥಾನ ಅಲಂಕರಿಸಿದರೂ ಈಶ್ವರಪ್ಪನವರು ಹಣ ಮತ್ತು ಅಧಿಕಾರದಿಂದ ದೂರವೇ ಇದ್ದರು. ಯಾವಾಗ 2004 ಜೆಡಿಎಸ್, ಬಿಜೆಪಿಯೊಂದಿಗೆ ಕೈ ಜೋಡಿಸಿ ಸರಕಾರ ರಚಿಸಿತೋ, ಅಲ್ಲಿಂದ ಈಶ್ವರಪ್ಪನವರ ಅದೃಷ್ಟ ಖುಲಾಯಿಸಿತು.
ಮೊದಲ ಬಾರಿಗೇ ಜಲಸಂಪನ್ಮೂಲದಂತಹ ಭಾರೀ ಖಾತೆಯ ಮಂತ್ರಿಯಾದ ಈಶ್ವರಪ್ಪನವರು ದಿನದಿಂದ ದಿನಕ್ಕೆ ಬೆಳೆಯುತ್ತಲೇ ಹೋದರು. 2008ರಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾದಾಗ, ಕುರುಬರ ಕೋಟಾ, ಸಂಘ ಪರಿವಾರದ ಸಪೋರ್ಟ್ ಮತ್ತು ಹಿರಿತನದ ಆಧಾರದ ಮೇಲೆ ಕಂದಾಯ ಖಾತೆ ದಕ್ಕಿತು. ಈತನ್ಮಧ್ಯೆ ಶಿವಮೊಗ್ಗ ಮೂಲದ ಇಬ್ಬರು ನಾಯಕರಲ್ಲಿ ಒಬ್ಬರಾದ ಯಡಿಯೂರಪ್ಪನವರು ಅಧಿಕಾರದಿಂದ ಕೆಳಗಿಳಿದು ಬಿಜೆಪಿ ತೊರೆದು ಕೆಜೆಪಿ ಕಟ್ಟಿದಾಗ, ಬಿಜೆಪಿಯಲ್ಲಿ ಈಶ್ವರಪ್ಪಗಟ್ಟಿಗೊಳ್ಳಲು ಅವಕಾಶ ತಾನಾಗಿಯೇ ಸೃಷ್ಟಿಯಾಯಿತು. ಮತ್ತೊಮ್ಮೆ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನ, ಉಪಮುಖ್ಯಮಂತ್ರಿ ಸ್ಥಾನ ಹಾಗೂ ಇಂಧನ ಖಾತೆಗಳು ಕೈವಶವಾದವು. ಬಿಎಸ್‌ವೈಗೆ ಸಮ-ಸಮ ನಿಲ್ಲುವ ಸ್ಥಿತಿ ನಿರ್ಮಾಣವಾಯಿತು. ಇಬ್ಬರ ನಡುವಿನ ಆಸ್ತಿ ಗಳಿಕೆ ಮುಗಿಲು ಮುಟ್ಟಿತು. ಹಾಗೆಯೇ ಒಳಗೊಳಗಿನ ದ್ವೇಷಾಸೂಯೆಗಳಿಗೂ ಕಾರಣವಾಯಿತು. 2013ರಲ್ಲಿ ಮತ್ತೊಮ್ಮೆ ಈಶ್ವರಪ್ಪನವರು ಗೆದ್ದು ಶಾಸಕರಾದರು. ಆದರೆ ಈಶ್ವರಪ್ಪನವರ ಹರಕುಬಾಯಿಯ ಫಲವಾಗಿ, ಕ್ರಿಮಿನಲ್ ಕೇಸ್ ದಾಖಲಾಗಿ ಶಾಸಕ ಸ್ಥಾನ ಕಳೆದುಕೊಳ್ಳುವಂತಾಯಿತು. ಈ ಸಂದರ್ಭದಲ್ಲಿ ಈಶ್ವರಪ್ಪರನ್ನು ಪಕ್ಷ ಅಥವಾ ಸಂಘ ಪರಿವಾರ ಕೈ ಬಿಟ್ಟಿದ್ದರೆ, ಅವರ ರಾಜಕೀಯ ಜೀವನ ಅಲ್ಲಿಗೇ ಅಂತ್ಯವಾಗುತ್ತಿತ್ತು. ಆದರೆ ಸಂಘ ಪರಿವಾರದ ಕೃಪಾಶೀರ್ವಾದದಿಂದ 2014ರಲ್ಲಿ ವಿಧಾನ ಪರಿಷತ್ತಿಗೆ ಆಯ್ಕೆಯಾದರು. ಅಷ್ಟೇ ಅಲ್ಲದೆ, ಮೇಲ್ಮನೆಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನವನ್ನೂ ಅಲಂಕರಿಸಿದರು.
ಅಂದರೆ ಧರ್ಮ, ಸಂಸ್ಕೃತಿಯ ಸೋಗು ಹಾಕುವ ಬಿಜೆಪಿಯಲ್ಲಿ ಅದಕ್ಕೆ ತದ್ವಿರುದ್ಧವಾಗಿ ಮಾತನಾಡುವ, ಬೆಂಕಿ ಹಚ್ಚುವ, ಶಾಂತಿ ಸಹಬಾಳ್ವೆಗೆ ಭಂಗ ತರುವ ಹರಕು ಬಾಯಿಗೂ ಆದ್ಯತೆ ಇದೆ ಎನ್ನುವುದಕ್ಕೆ- ಈಶ್ವರಪ್ಪನವರನ್ನು ಮೇಲ್ಮನೆ ಸದಸ್ಯರನ್ನಾಗಿ ಆಯ್ಕೆ ಮಾಡಿದ್ದೇ ಕಾರಣವಾಯಿತು. ಈಶ್ವರಪ್ಪನವರೂ, ಅಂತಹ ಕೊಳಕು ನಾಲಗೆಯನ್ನು ಹರಿಬಿಡುವುದು ಇನ್ನಷ್ಟು ಹೆಚ್ಚಾಯಿತು. ಸಂಘ ಪರಿವಾರಕ್ಕೆ ಬೇಕಾಗಿದ್ದೇ ಅದು! ಅದರಲ್ಲೂ 2018ರಲ್ಲಿ ಅಧಿಕಾರದ ಹತ್ತಿರಕ್ಕೆ ಬಂದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಖರೀದಿಸಿ ಸರಕಾರ ರಚಿಸಿದಾಗ, ಮತ್ತೆ ಈಶ್ವರಪ್ಪನವರು ಗ್ರಾಮೀಣಾಭಿವೃದ್ಧಿಯಂತಹ ತೂಕದ ಖಾತೆಯನ್ನೇ ಪಡೆದರು. ಅದಕ್ಕೆ ಪ್ರತಿಫಲವಾಗಿ ಕರಾವಳಿಯಲ್ಲಿ ಹಿಜಾಬ್ ಪ್ರಕರಣ ಭುಗಿಲೆದ್ದಾಗ, ಈಶ್ವರಪ್ಪನವರು ಹಿಂದೂ ಮಕ್ಕಳಿಗೆ ಕೇಸರಿ ಶಾಲು ಹಂಚಿದರು ಎಂಬ ಆರೋಪಕ್ಕೆ ಗುರಿಯಾದರು. ಶಿವಮೊಗ್ಗದಲ್ಲಿ ಹರ್ಷನ ಕೊಲೆಯಾದಾಗ, ನಿಷೇಧಾಜ್ಞೆ ಇದ್ದರೂ ಉಲ್ಲಂಘಿಸಿ, ಮಂತ್ರಿಯೇ ಮೆರವಣಿಗೆಯಲ್ಲಿ ಪಾಲ್ಗೊಂಡು ಹಿಂದೂ ಯುವಕನ ಕಗ್ಗೊಲೆ ಎಂದು ಗುಂಪಿಗೆ ಗಲಭೆಗೆ ಪ್ರಚೋದನೆ ನೀಡಿ ವಿರೋಧ ಪಕ್ಷಗಳ ಟೀಕೆಗೆ ಗುರಿಯಾದರು. ಆನಂತರ ಕೆಂಪು ಕೋಟೆ ಮೇಲೆ ಕೇಸರಿ ಧ್ವಜ ಹಾರಾಡಲಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿ, ತಮ್ಮ ಸಂಘ ಪರಿವಾರದ ನಿಷ್ಠೆಯನ್ನು ಗಟ್ಟಿಗೊಳಿಸಿಕೊಂಡರು. ಸಚಿವರಾಗಿ ಸಂವಿಧಾನಕ್ಕೆ ವಿರುದ್ಧವಾಗಿ ಹೀಗೆ ಹೇಳಿಯೂ ದಕ್ಕಿಸಿಕೊಳ್ಳಬಹುದೆಂದು ಸಾಬೀತುಪಡಿಸಿದರು. ಮುಂದುವರಿದು, ತಮ್ಮದೇ ಪಕ್ಷದ ಕಾರ್ಯಕರ್ತ ಸಂತೋಷ್ ಪಾಟೀಲ್ ಆತ್ಮಹತ್ಯೆಯಿಂದ ಇಲ್ಲವಾದಾಗ, ಆತ ಯಾರೆಂದು ನನಗೆ ಗೊತ್ತೇ ಇಲ್ಲ ಎಂದು ತಿಪ್ಪೆಸಾರಿಸಲು ವಿಫಲ ಪ್ರಯತ್ನ ನಡೆಸಿದರು.
ಈಶ್ವರಪ್ಪನವರಿಗೆ ನಿಜಕ್ಕೂ ಯೋಗ್ಯತೆ, ಅರ್ಹತೆ, ಅನುಭವ, ಹಿರಿತನ ಎಲ್ಲವೂ ಇದೆ. ಪಕ್ಷ ಕಟ್ಟಿದ ಹಿರಿಮೆಯೂ ಇದೆ. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಾಗ, ಅದನ್ನೇ ಮುಂದೆ ಮಾಡಿ ಮುಖ್ಯಮಂತ್ರಿ ಸ್ಥಾನಕ್ಕೆ ನಾನೂ ಅರ್ಹ ಎಂದು ಗತ್ತಿನಿಂದ ಪಡೆಯಬಹುದಾಗಿತ್ತು. ಆದರೆ ಸಂಘ ಪರಿವಾರದ ಹಿಡಿತದಲ್ಲಿರುವ, ಅವರು ಕೊಟ್ಟಿದ್ದನ್ನೇ ಕಣ್ಣಿಗೆ ಒತ್ತಿಕೊಂಡು ಮಹಾ ಪ್ರಸಾದ ಎಂದು, ಅದರಲ್ಲಿಯೇ ತೃಪ್ತರಾಗಿರುವ ಈಶ್ವರಪ್ಪ, ತಮಗಿಂತ ಕಿರಿಯ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದರೆ, ಅವರ ಸಚಿವ ಸಂಪುಟದಲ್ಲಿ ಮಂತ್ರಿಯಾದರು. ವಿಪರ್ಯಾಸವೆಂದರೆ, ತಾನೇ ತೋಡಿದ ಹಳ್ಳಕ್ಕೆ ಬಿದ್ದರು ಈಶ್ವರಪ್ಪ. ಡಿವೈಎಸ್ಪಿ ಗಣಪತಿ ಆತ್ಮಹತ್ಯೆಯ ಸಂದರ್ಭದಲ್ಲಿ ಜಾರ್ಜ್ ರಾಜೀನಾಮೆಗೆ ಮಾಡಿದ ಒತ್ತಾಯ, ಇದೀಗ, ಗವಾಕ್ಷಿಯಿಂದ ಬಂದು ಈಶ್ವರಪ್ಪ ಕೊರಳಿಗೆ ಸುತ್ತಿಕೊಂಡಿತು. ಹೆಣಗಳನ್ನು ಮುಂದಿಟ್ಟು ರಾಜಕೀಯ ನಡೆಸಲು ಯತ್ನಿಸಿದ ಈಶ್ವರಪ್ಪ ಅವರ ರಾಜಕೀಯ ದುರಂತಕ್ಕೆ ಇನ್ನೊಂದು ಮೃತದೇಹವೇ ಕಾರಣವಾದದ್ದು ವಿಧಿಯ ವಿಕಟ ನಾಟಕ ಎಂದೇ ಕರೆಯಬಹುದು.