ಕೋವಿಡ್ ಸಂದರ್ಭದಲ್ಲಿ ರೆಡ್‌ಕ್ರಾಸ್ ಸೇವೆ ಶ್ಲಾಘನೀಯ: ಜಿಲ್ಲಾಧಿಕಾರಿ ಕೂರ್ಮಾರಾವ್

Update: 2022-04-18 14:47 GMT

ಉಡುಪಿ : ಕೋವಿಡ್ ಸಂದರ್ಭದಲ್ಲಿ ರೆಡ್‌ಕ್ರಾಸ್ ಸಂಸ್ಥೆ ನಡೆಸಿದ ಪ್ರತಿಯೊಂದು ಕಾರ್ಯವೂ ಶ್ಲಾಘನೀಯ ವಾಗಿದ್ದು, ಲಾಕ್‌ಡೌನ್ ಸಂದರ್ಭ ದಲ್ಲಿಯೂ ಶ್ರಮ ವಹಿಸಿ, ಸಾಮಾಜಿಕ ಕೆಲಸಗಳನ್ನು ಮಾಡಿದ ಹೆಗ್ಗಳಿಕೆ ರೆಡ್‌ಕ್ರಾಸ್ ಸಂಸ್ಥೆಯದ್ದಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮರಾವ್ ಎಂ ಹೇಳಿದ್ದಾರೆ. 

ನಗರದ ಅಜ್ಜರಕಾಡು ರೆಡ್‌ಕ್ರಾಸ್ ಭವನದಲ್ಲಿ ಸೋಮವಾರ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ರಾಜ್ಯ ಶಾಖೆ ಬೆಂಗಳೂರು ಮತ್ತು ಉಡುಪಿ ಜಿಲ್ಲಾ ಶಾಖೆಗಳ  ಆಶ್ರಯದಲ್ಲಿ ನಡೆದ ಪರಿಪೋಷಣಂ ಯೋಜನೆಯಡಿ ಅಂತರ್ಗತ ಪ್ರೌಢಶಾಲೆ ಗಳ ಜೂನಿಯರ್ ರೆಡ್‌ಕ್ರಾಸ್ ಕೌನ್ಸಿಲರ್‌ಗಳಿಗೆ ಎರಡು ದಿನಗಳ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ರೆಡ್‌ಕ್ರಾಸ್ ಸಂಸ್ಥೆ ತನ್ನದೇ ಆದ ಸೇವಾ ಮನೋಭಾವವನ್ನು ಹೊಂದಿದ್ದು, ಎಲ್ಲರಲ್ಲಿಯೂ ಉತ್ಸಾಹ ತುಂಬುವ ಕೆಲಸವನ್ನು ಮಾಡುತ್ತಾ ಬಂದಿದೆ. ಕೊರೋನಾ ಕಾಲದ ಪ್ರತಿ ಹಂತದಲ್ಲಿಯೂ ರೆಡ್‌ಕ್ರಾಸ್‌ನ ಕೊಡುಗೆ ಅಪಾರ ವಾಗಿದೆ. ಉಚಿತವಾಗಿ ಮಾಸ್ಕ್‌ನ್ನು ಸಾರ್ವಜನಿಕರಿಗೆ ತಲುಪಿಸುವುದು ಸೇರಿದಂತೆ ಆಹಾರ ಪದಾರ್ಥಗಳ ವಿತರಣೆಯ ಕಾರ್ಯವನ್ನು ಕೂಡ ಹಮ್ಮಿಕೊಂಡಿದೆ. ಅಷ್ಟೇ ಅಲ್ಲದೇ ಕೊರೋನಾದಿಂದ ನೊಂದ ಬಡ ಕುಟುಂಬ ಗಳನ್ನು ಗುರುತಿಸಿ, ಅವರಿಗೆ ದಿನಸಿ ಕಿಟ್ ಕೂಡ ವಿತರಿಸಿದ್ದಾರೆ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ಮಾತನಾಡಿ, ಸೇವಾ ಹಾಗೂ ಧ್ಯೇಯ ಮನೋಭಾವವನ್ನು ನಾವು ಕಿರಿಯ ವಯಸ್ಸಿನಲ್ಲಿಯೇ ಅಳವಡಿಸಿಕೊಂಡು ಬಂದಲ್ಲಿ ಮುಂದೆ ಅದನ್ನು ಕಾರ್ಯ ರೂಪಕ್ಕೆ ತರಬಹುದು. ರೆಡ್‌ಕ್ರಾಸ್ ಸಂಸ್ಥೆ ಎಂದರೆ ಕೇವಲ ನಿಸ್ವಾರ್ಥ ಸೇವಾ ಮನೋಭಾವ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಅಶೋಕ್ ಕಾಮತ್, ಶಿಕ್ಷಕ ಮತ್ತು ಸಾಮಾಜಿಕ ಪರಿವರ್ತನೆ ಬಗ್ಗೆ  ತಮ್ಮ ದಿಕ್ಸೂಚಿ ಭಾಷಣದಲ್ಲಿ ತಿಳಿಸಿ, ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವದ ಮೌಲ್ಯಯುತ ಕಲಿಕೆ ಅತ್ಯಂತ ಅಗತ್ಯವಾಗಿದ್ದು, ರೆಡ್‌ಕ್ರಾಸ್ ಸಂಸ್ಥೆಯಿಂದ ನಡೆಸುವ ಪ್ರತಿಯೊಂದು ಚಟುವಟಿಕೆ ಮಕ್ಕಳಲ್ಲಿ ಪ್ರೌಢಾವಸ್ಥೆ ಯಲ್ಲಿಯೇ ಗುರಿ, ಧ್ಯೇಯ ಮತ್ತು ಸೇವೆಗಳ ಬಗ್ಗೆ ತಿಳಿಸುತ್ತದೆ ಎಂದು ಹೇಳಿದರು.

ಶಾಲೆಯಲ್ಲಿ ಮಕ್ಕಳನ್ನು ಪ್ರೋತ್ಸಾಹಿಸಿ, ಅವರನ್ನು ಸಂಘಟಿಸಿ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ನಾಯಕತ್ವದ ಗುಣ ಹೊಂದಿದ ಮುಖ್ಯೋಪಾಧ್ಯಾಯರಿಂದ ಮಾತ್ರ ಒಳ್ಳೆಯ ವಿದ್ಯಾರ್ಥಿ ಗುಂಪನ್ನು ಸಂಘಟಿಸಲು ಸಾಧ್ಯ ಎಂದರು.

ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಘಟಕದ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಸ್ತುತ  ಜೂನಿಯರ್ ರೆಡ್‌ಕ್ರಾಸ್‌ನಲ್ಲಿ ೪೨ ಲಕ್ಷ ಮಕ್ಕಳು ಭಾಗವಹಿಸಿದ್ದಾರೆ. ಹೀಗಾಗಿ ನಮ್ಮಲ್ಲಿ ಕೂಡ ವಿದ್ಯಾರ್ಥಿ ದೆಸೆಯಲ್ಲಿ ಮಕ್ಕಳಿಗೆ ಸಂಸ್ಥೆಯ ಬಗ್ಗೆ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕುಂದಾಪುರ ಶಾಖೆಯ ರೆಡ್‌ಕ್ರಾಸ್ ಸಂಸ್ಥೆಯ ಸಭಾಪತಿ ಜಯಕರ ಎಸ್  ಶೆಟ್ಟಿ, ಜೂನಿಯರ್ ರೆಡ್‌ಕ್ರಾಸ್ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್.ಎನ್ ರಾಜು, ಉಪಸಭಾಪತಿ ಡಾ. ಅಶೋಕ್‌ಕುಮಾರ್ ವೈ.ಜಿ, ಖಜಾಂಜಿ ರಮಾದೇವಿ, ಕಾರ್ಯದರ್ಶಿ ರತ್ನಾಕರ ಬಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲೆಯ ಜೂನಿಯರ್ ರೆಡ್‌ಕ್ರಾಸ್ ಡೈರೆಕ್ಟರ್ ಪದ್ಮಕಿಣಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News