ನೀನು ‘ಪಾಂಡೆಮಿಕ್’ ಆದರೆ ನಾನು ‘ಇನ್ಫೋಡೆಮಿಕ್’

Update: 2022-04-20 05:07 GMT

ಒಂದು ಸಾಂಕ್ರಾಮಿಕ ಹರಡುತ್ತಿರುವಾಗ ಅದರ ಜೊತೆಜೊತೆಗೆ ಸುಳ್ಳು ಅಥವಾ ಹಾದಿತಪ್ಪಿಸುವ ಮಾಹಿತಿಗಳು ಸೇರಿದಂತೆ ‘‘ಮಾಹಿತಿ ಮಹಾಪೂರ’’ ಡಿಜಿಟಲ್ ಮತ್ತು ಬೇರೆ ಸಾಂಪ್ರದಾಯಿಕ ಮಾಧ್ಯಮಗಳ ಮೂಲಕ ಹರಡುವುದನ್ನು ‘‘ಇನ್ಫೋಡೆಮಿಕ್’’ ಎಂದು ವಿಶ್ವ ಆರೋಗ್ಯ ಸಂ್ಥೆ (WHO) ವ್ಯಾಖ್ಯಾನಿಸಿದೆ. ‘‘ಈ ರೀತಿಯ ಇನ್ಫೋಡೆಮಿಕ್ ಗೊಂದಲ ಮತ್ತು ಅಪಾಯಕಾರಿ ವರ್ತನೆಗಳಿಗೆ ಕಾರಣವಾಗುತ್ತದೆ. ಅದು ಆರೋಗ್ಯ ವ್ಯವಸ್ಥೆಯ ಮೇಲೆ ಅಪನಂಬಿಕೆ ಹುಟ್ಟಿಸುತ್ತದೆ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ವ್ಯವಸ್ಥೆಯ ಪ್ರತಿಕ್ರಿಯೆಯನ್ನು ಕಡೆಗಣಿಸುತ್ತದೆ. ಜನರಿಗೆ ತಮ್ಮನ್ನು ಮತ್ತು ತಮ್ಮ ಸುತ್ತಮುತ್ತಲಿನವರನ್ನು ರಕ್ಷಿಸಿಕೊಳ್ಳಲು ಏನು ಮಾಡಬೇಕು ಎಂಬುದು ಖಚಿತವಿಲ್ಲದಿರುವಾಗ ಇಂತಹ ‘‘ಇನ್ಫೋಡೆಮಿಕ್’’ ಸಾಂಕ್ರಾಮಿಕಗಳನ್ನು ಇನ್ನೂ ದೀರ್ಘಕಾಲ ಕಾಡುವಂತೆ ಮಾಡುತ್ತದೆ. ಡಿಜಿಟೈಸೇಷನ್ ಯುಗದಲ್ಲಿ - ಸೋಷಿಯಲ್ ಮೀಡಿಯಾ ಮತ್ತು ಇಂಟರ್ನೆಟ್ ಬಳಕೆ ಹೆಚ್ಚುತ್ತಿರುವಾಗ - ಯಾವುದೇ ಮಾಹಿತಿ ಕಾಡ್ಗಿಚ್ಚಿನಂತೆ ಹರಡಬಲ್ಲುದು. ಈ ವೇಗವು ಮಾಹಿತಿ ಕೊರತೆಯನ್ನು ಸರಿದೂಗಿಸುವುದಕ್ಕೆ ಅನುಕೂಲಕರವಾದರೂ ಹಾನಿಕರ ಸುದ್ದಿಗಳನ್ನೂ ಅದೇ ವೇಗದಲ್ಲಿ ತಲುಪಿಸಬಲ್ಲ ಎರಡಲಗಿನ ಕತ್ತಿ.’’ ಎಂದು( WHO) ವಿವರಿಸಿದೆ.

ಕೋವಿಡ್ ಕಾಲದಲ್ಲಿ ಭಾರತ ಅನುಭವಿಸಿದ ಅತಿದೊಡ್ಡ ಕೋವಿಡೇತರ ತಲೆನೋವು ಏನಾದರೂ ಇದ್ದರೆ, ಅದು ಈ ಮಾಧ್ಯಮ ನರೇಟಿವ್‌ಗಳದು. (SARS-CoV-2) ಸೋಂಕಿನ ಆರಂಭಿಕ ದಿನಗಳಲ್ಲಿ ಭಾರತದಲ್ಲಿ ವ್ಯಾಪಕವಾಗಿ ಕಂಡುಬಂದ ಕೋವಿಡ್ ಕುರಿತ ‘‘ಸ್ಟಿಗ್ಮಾ’’ ಅಪನಂಬಿಕೆ, ಗೊಂದಲ, ವದಂತಿಗಳ ಸೂತ್ರದಾರರೇ ಮಾಧ್ಯಮಗಳು (ಡಿಜಿಟಲ್, ಪ್ರಿಂಟ್ ಮತ್ತು ಟೆಲಿವಿಷನ್). ಕೋವಿಡ್ ಸೋಂಕು ಬಂದವರಿಗೆಲ್ಲ ಮಾರಣಾಂತಿಕವೇನೋ ಎಂಬ ಮಟ್ಟದಲ್ಲಿದ್ದ ಈ ‘‘ಮರಣ ಮೃದಂಗ’’ ‘‘ಸ್ಫೋಟ’’ ‘‘ಪ್ರಳಯಾಂತಿಕ’’ ಎಂಬ ಪ್ರಿಫಿಕ್ಸುಗಳು ಮತ್ತು ಸಫಿಕ್ಸುಗಳು ಭಾರತದಲ್ಲಿ ಹಲವಾರು ಜೀವಗಳನ್ನು ಅಕಾರಣ ಬಲಿತೆಗೆದುಕೊಂಡವು ಎಂಬುದು ವಾಸ್ತವ. ಇಂತಹದೊಂದು ಇನ್ಫೋಡೆಮಿಕ್ ಭಾರತದಲ್ಲಿ ಹೇಗೆ ಹರಡಿತು, ಹೇಗೆ ಪರಿಣಾಮ ಬೀರಿತು ಎಂಬುದನ್ನು ವಿವರವಾಗಿ ನೋಡುವ.

ಮಾಧ್ಯಮಗಳು ಎಲ್ಲ ಕಾಲದಲ್ಲೂ ಹೀಗೆಯೇ ಇದ್ದವೇ? ನೈಸರ್ಗಿಕ ವಿಪತ್ತುಗಳು ಎದುರಾದಾಗ ತಮ್ಮದೇ ಆಟದಲ್ಲಿ ತೊಡಗಿದ್ದವೇ ಎಂದು ಪ್ರಶ್ನಿಸಿಕೊಂಡರೆ, ಹಾಗಿರಲಿಲ್ಲ ಮತ್ತು ಹಾಗಿರದಿದ್ದ ಕಾರಣಕ್ಕೆ ಸ್ವತಂತ್ರ ಭಾರತದ ಈ ಹಿಂದಿನ ನೈಸರ್ಗಿಕ ವಿಪತ್ತುಗಳನ್ನು ಭಾರತ ಪರಿಣಾಮಕಾರಿಯಾಗಿ ನಿಭಾಯಿಸಿತ್ತು ಎಂಬುದಕ್ಕೆ ಆಧಾರಗಳು ಸಿಗುತ್ತವೆ. ಹಿಂದೆ ಬರಗಾಲಗಳು ಬಂದಾಗ ದೇಶದ ಮಾಧ್ಯಮಗಳು ಬಹಳ ಎಚ್ಚರಿಕೆಯಿಂದ ಆ ಬಗ್ಗೆ ಮುಂದಾಗಿ ವರದಿ ಮಾಡಿವೆ ಮತ್ತು ಮಾಧ್ಯಮಗಳ ವರದಿಗಳು ಉಂಟುಮಾಡಿದ ಸಾರ್ವಜನಿಕ ಒತ್ತಡಗಳು ಸರಕಾರಗಳ ಕಣ್ಣು ತೆರೆಸಿವೆ. ಅದರ ಫಲವಾಗಿ, ತೀರಾ ಬಡತನದಲ್ಲಿದ್ದರೂ ಭಾರತ ಯಾವುದೇ ಬರಗಾಲದಲ್ಲಿ ದಯನೀಯ ಸ್ಥಿತಿಗೆ ತಲುಪಲಿಲ್ಲ. ಇದಕ್ಕೆ ಬಲವಾದ ಸಾಕ್ಷ ಎಂದರೆ, ಸುದ್ದಿಪತ್ರಿಕೆಗಳ ಪ್ರಸಾರ ಹೆಚ್ಚಿದ್ದ ರಾಜ್ಯಗಳಲ್ಲಿ ಆಹಾರದ ಉತ್ಪಾದನೆ ಕಡಿಮೆಯಾಗುತ್ತಿರುವುದು, ಬರ-ನೆರೆಗೆ ಬೆಳೆಹಾನಿಯ ಸುದ್ದಿಗಳಿಗೆ ರಾಜ್ಯ ಸರಕಾರಗಳು ಹೆಚ್ಚು ಪ್ರತಿಸ್ಪಂದಿಯಾಗಿದ್ದವು. ಅಂದರೆ, ಮಾಧ್ಯಮಗಳು ಗಂಭೀರವಾದ ಸಾರ್ವಜನಿಕ ಕಳವಳಗಳಿಗೆ ಕಾಳಜಿಯಿಂದ ಸ್ಪಂದಿಸಿ, ಸರಕಾರಗಳ ಗಮನ ಸೆಳೆದ ಬಲವಾದ ಹಿನ್ನೆಲೆ ನಮ್ಮ ದೇಶದಲ್ಲಿದೆ. ಸಾಮಾಜಿಕವಾಗಿ ಇಂತಹದೊಂದು ಜವಾಬ್ದಾರಿಯುತವಾದ ಸ್ಥಾನದಲ್ಲಿದ್ದ ಮಾಧ್ಯಮಗಳು ಈಗ ಎಲ್ಲಿಗೆ ತಲುಪಿವೆ ಎಂಬುದನ್ನು ಒಮ್ಮೆ ಹಿಂದಿರುಗಿ ನೋಡಿಕೊಂಡರೆ, ಮಾಧ್ಯಮ ಲೋಕದ ನೈತಿಕ ಪತನದ ಆಳ ತಿಳಿಯುತ್ತದೆ. ಕೋವಿಡ್ ಕಾಲ ಅಂತಹದೊಂದು ಮಾಪನಕ್ಕೆ ಅವಕಾಶ ಕೂಡ ಹೌದು.

ಕೋವಿಡ್ ಕಾಲದ ಸುಳ್ಳು ಸುದ್ದಿಗಳ ಸ್ವರೂಪ

ಭಾರತದಲ್ಲಿ ಕೋವಿಡ್ ಕಾಲದಲ್ಲಿ ಹರಡಿದ ಹತ್ತುಸುಳ್ಳು ಸುದ್ದಿ ಉದಾಹರಣೆಗಳನ್ನು ಒಮ್ಮೆ ಗಮನಿಸಿ.

1. ಕೊರೋನ ಎಂಬುದು ಚೀನಾ ದೇಶ ಆರಂಭಿಸಿರುವ ಜೈವಿಕ ಸಮರ.

2. ಇದು ತಬ್ಲೀಗಿ ವೈರಸ್, ಕೊರೋನ ಜಿಹಾದ್.

3. ಕೋವಿಡ್ ಲಸಿಕೆ ಪಡೆದವರ ಮೈಗೆ ಮ್ಯಾಗ್ನೆಟಿಕ್ ಶಕ್ತಿ ಬರುತ್ತದೆ.

4. ಮೂಗಿಗೆ ಲಿಂಬೆರಸ ಹಿಂಡಿದರೆ ಕೊರೋನ ಮಂಗಮಾಯ!

5. ಮಾಂಸಾಹಾರದಿಂದ ಕೋವಿಡ್ ಸೋಂಕು ಬರುತ್ತದೆ. ಮಾಂಸಾಹಾರ ತ್ಯಜಿಸಿ, ಸಸ್ಯಾಹಾರ ಆರಂಭಿಸಿ.

6. ಮುದ್ರಿತ ಪತ್ರಿಕೆಗಳ ಮೂಲಕ ಕೋವಿಡ್ ಸೋಂಕು ಹರಡುತ್ತದೆ.

7. ಕೊರೋನ ಸೋಂಕಿಗೆ ಹೈಡ್ರಾಕ್ಸಿಕ್ಲೋರೊಕ್ವಿನ್ ಎಂಬ ಪರಿಣಾಮಕಾರಿ ಔಷಧಿಯನ್ನು ಭಾರತವೇ ಸಂಶೋಧಿಸಿದೆ!

8. ಕೊರೋನ ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋದವರು ವಾಪಸ್ ಬರುವುದಿಲ್ಲ

9. ಶಂಖ-ಜಾಗಟೆ-ಘಂಟಾನಾದಗಳ ಅನುರಣನಕ್ಕೆ ಕೊರೋನ ವೈರಸ್ ನಾಶವಾಗುತ್ತದೆ.

10. ನಿರ್ದಿಷ್ಟ ಕಷಾಯಗಳು ಕೋವಿಡ್‌ಗೆ ರಾಮಬಾಣ

ಈ ಉದಾಹರಣೆಗಳು ಕೇವಲ ಪ್ರಾತಿನಿಧಿಕ. ಪ್ರತಿಯೊಬ್ಬರಲ್ಲೂ ಇಂತಹ ಕನಿಷ್ಠ ನೂರು ಸುಳ್ಳುಸುದ್ದಿಗಳು ಅವರ ‘‘ವಾಟ್ಸ್‌ಆ್ಯಪ್’’ ಅಪ್ಲಿಕೇಷನ್‌ನಲ್ಲಿ ‘‘ಫಾರ್ವರ್ಡ್’’ ಬಂದದ್ದು ಸಂಗ್ರಹ ಇರಬಹುದು. ಈ ಎಲ್ಲ ಸುಳ್ಳು ಸುದ್ದಿಗಳಲ್ಲಿ ಒಂದು ಸಾಮಾನ್ಯ ವಿನ್ಯಾಸ ಎಂದರೆ, ಇವು ಎಲ್ಲೋ ಅಕಸ್ಮಾತ್ ಹರಡಿದವಲ್ಲ. ಬದಲಾಗಿ ಒಂದೋ ಪ್ರಿಂಟ್ ಮಾಧ್ಯಮದಲ್ಲಿ ಅಥವಾ ಟೆಲಿವಿಷನ್ ಮಾಧ್ಯಮದಲ್ಲಿ ಪ್ರಸಾರಗೊಂಡು ಅಥವಾ ಉದ್ದೇಶಪೂರ್ವಕವಾಗಿ ಒಳ್ಳೆಯ ಗ್ರಾಫಿಕ್ ವಿನ್ಯಾಸದೊಂದಿಗೆ ಗಮನ ಸೆಳೆಯುವಂತೆ ರಚನೆಗೊಂಡು ವಾಟ್ಸ್‌ಆ್ಯಪ್/ಫೇಸ್‌ಬುಕ್/ಇನ್ಸ್ಟಾಗ್ರಾಂ/ಟ್ವಿಟರ್/ಟೆಲಿಗ್ರಾಂ ಮೂಲಕ ಫಾರ್ವರ್ಡ್ ಬಂದವು ಅಥವಾ ಯುಟ್ಯೂಬ್ ಮೂಲಕ ಯಾರೋ ಉದ್ದೇಶಪೂರ್ವಕ ವೀಡಿಯೊ ಮಾಡಿ ವೈರಲ್ ಆಗಗೊಟ್ಟವು.

 ಈ ಎಲ್ಲ ಉದ್ದೇಶಪೂರ್ವಕ ಹರಡುವಿಕೆಗಳೂ ಸಂಘಟಿತವಾಗಿ ನಡೆಯುವುದರಿಂದ, ಒಮ್ಮೆ ಒಂದು ಸುಳ್ಳುಸುದ್ದಿ ಹರಡಿತೆಂದರೆ, ಅದು ಕಾಳ್ಗಿಚ್ಚಿನಂತೆ ‘‘ವೈರಲ್’’ ಆಗಿಬಿಡುತ್ತದೆ. ಈ ವೈರಲ್ ಆಗುವಿಕೆಗೆ ಸೋಷಿಯಲ್ ಮೀಡಿಯಾಗಳಲ್ಲಿ ರಾಜಕೀಯ ಉದ್ದೇಶಗಳ ಜೊತೆಗೆ ಒಂದು ಆರ್ಥಿಕ ಮಗ್ಗಲೂ ಇರುವುದರಿಂದ (ಅಂದರೆ, ವೈರಲ್ ವೀಡಿಯೊಗಳು, ಕ್ಲಿಕ್‌ಬೈಟ್‌ಗಳು ಹಣ ಸಂಪಾದನೆಗೆ ದಾರಿಯೂ ಆಗಿರುವುದರಿಂದ) ಇದೊಂದು ವ್ಯವಸ್ಥಿತವಾದ ರಾಜಕೀಯ ಪ್ರಚಾರದ, ದಂಧೆಯ ಸ್ವರೂಪದಲ್ಲೇ ನಡೆದಿದೆ ಎಂಬುದು ನಿಜಕ್ಕೂ ಆತಂಕಕಾರಿ.

ಅದಕ್ಕಿಂತ ಅಪಾಯಕಾರಿ ಎಂದರೆ, ಈ ಎಲ್ಲ ಸುಳ್ಳು ಸುದ್ದಿಗಳನ್ನು ಹರಡುವವರು ಸಂಘಟಿತರಾಗಿದ್ದು, ತಮ್ಮ ಅಪರಾಧಗಳಿಗಾಗಿ ಕಿಂಚಿತ್ತೂ ಪಶ್ಚಾತ್ತಾಪ ಇಲ್ಲದವರು ಮತ್ತು ಆ ಅಪರಾಧದ ಸಮರ್ಥನೆಗಾಗಿ ತಮ್ಮ ಟ್ರೋಲ್ ಸೇನೆಯನ್ನು ಛೂ ಬಿಡುವವರು. ಹಲವು ಬಾರಿ ಸ್ವತಃ ಪ್ರಭುತ್ವ, ತನ್ನನ್ನು ಕಾಡಬಲ್ಲ ಸಂಗತಿಗಳಿದ್ದಾಗ ಅದನ್ನು ಮರೆಮಾಚಲು ಇಂತಹ ದಿಕ್ಕುತಪ್ಪಿಸಬಲ್ಲ ಸುಳ್ಳು ಸುದ್ದಿಗಳನ್ನು ಹೀಗೆ ಹಬ್ಬಿಸಿರಬಹುದೆಂಬ ಸಂಶಯ ಮೂಡುವಷ್ಟು ಸಂಘಟಿತವಾದ ಪ್ರಯತ್ನಗಳಿವು.

ಅಧ್ಯಯನಗಳು

ಕೋವಿಡ್ ಕಾಲದಲ್ಲಿ ಸುಳ್ಳು ಸುದ್ದಿಗಳು ಮತ್ತು ವದಂತಿಗಳ ಬಗ್ಗೆ, ಅವುಗಳ ವಿನ್ಯಾಸದ ಬಗ್ಗೆ ಹಲವು ಅಧ್ಯಯನಗಳು ನಡೆದಿವೆ. ಅವುಗಳಲ್ಲಿ ಕೆಲವದರ ಕಾಣ್ಕೆಗಳೇನು ಎಂದು ಕಂಡುಕೊಂಡರೆ ಪರಿಸ್ಥಿತಿ ಸ್ಪಷ್ಟವಾದೀತು.

Prevalence and source analysis of COVID-19 misinformation in 138 countries ಎಂಬ ಅಧ್ಯಯನ ಜನವರಿ 2020 ಮತ್ತು ಮಾರ್ಚ್ 2021ರ ನಡುವೆ ನಡೆದಿತ್ತು. ಅದರಲ್ಲಿ 138 ದೇಶಗಳಲ್ಲಿನ 94 ಫ್ಯಾಕ್ಟ್ ಚೆಕಿಂಗ್ ಸಂಸ್ಥೆಗಳು ನಡೆಸಿದ 9657 ಸುಳ್ಳುಸುದ್ದಿಗಳ ವಿಶ್ಲೇಷಣೆ ನಡೆಸಲಾಗಿತ್ತು. ಈ ಅಧ್ಯಯನದ ಪ್ರಕಾರ, ಅಧ್ಯಯನದ ಅವಧಿಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಅತಿಹೆಚ್ಚು ಸುಳ್ಳುಸುದ್ದಿಗಳು ಪ್ರಕಟಗೊಂಡದ್ದು (ಶೇ. 18.07) ಭಾರತದಲ್ಲಿ. ಆ ಬಳಿಕದ ಸ್ಥಾನಗಳು ಕ್ರಮವಾಗಿ ಅಮೆರಿಕ, ಬ್ರೆಝಿಲ್ ಮತ್ತು ಸ್ಪೇನ್ ದೇಶಗಳದು. ಇದೇ ಅಧ್ಯಯನದ ಪ್ರಕಾರ, ಒಟ್ಟು ಸುಳ್ಳು ಮಾಹಿತಿಗಳಲ್ಲಿ ಸಾಮಾಜಿಕ ಮಾಧ್ಯಮದ ಪಾಲು ಶೇ. 84.94 ಆದರೆ, ಒಟ್ಟು ಇಂಟರ್‌ನೆಟ್ ವ್ಯವಸ್ಥೆಯ ಪಾಲು ಶೇ. 90.5. ಸಾಮಾಜಿಕ ಮಾಧ್ಯಮಗಳೊಳಗೆ ಫೇಸ್‌ಬುಕ್‌ನ ಪಾಲು ಶೇ. 66.87 ಆದರೆ, ವಾಟ್ಸ್‌ಆ್ಯಪ್‌ನ ಪಾಲು ಶೇ. 10.22. (ವಿವರಗಳಿಗೆ ನೋಡಿ:  https://www.medrxiv.org/content/10.1101/2021.05.08.21256879v1.full)

ಈ ಅಧ್ಯಯನದ ಮಿತಿ ಎಂದರೆ, ಅದು ಫ್ಯಾಕ್ಟ್ ಚೆಕ್ ಸಂಸ್ಥೆಗಳ ಗಮನಕ್ಕೆ ಬಂದ ಸಂಗತಿಗಳನ್ನು ಆಧರಿಸಿದ ಅಧ್ಯಯನ. ಭಾರತದಲ್ಲಿ ನೇರವಾಗಿ ಟೆಲಿವಿಷನ್ ಚಾನೆಲ್‌ಗಳು ಮತ್ತು ವಾಟ್ಸ್‌ಆ್ಯಪ್‌ನಂತಹ ವನ್-ಟು-ವನ್ ಸಂವಹನ ಮಾಧ್ಯಮಗಳು, ಪ್ರಿಂಟ್ ಮೀಡಿಯಾಗಳನ್ನು ನೇರವಾಗಿ ಪರಿಗಣಿಸಿ ಈ ಅಧ್ಯಯನ ನಡೆದಿದ್ದರೆ, ಈ ಎಲ್ಲ ಲೆಕ್ಕಾಚಾರಗಳೂ ತಲೆಕೆಳಗಾಗಿರುತ್ತಿದ್ದವು. ಏಕೆಂದರೆ, ಟೆಲಿವಿಷನ್ ಚಾನಲ್‌ಗಳು ಮತ್ತು ವಾಟ್ಸ್‌ಆ್ಯಪ್ ಭಾರತದಲ್ಲಿ ಕೋವಿಡ್ ಸಂಬಂಧಿ ಸುಳ್ಳುಸುದ್ದಿಗಳನ್ನು ಹರಡುವುದರಲ್ಲಿ ಮುಂಚೂಣಿಯಲ್ಲಿದ್ದವು. ಆದರೆ ಈ ಅಧ್ಯಯನ ಒದಗಿಸಿರುವ ಒಂದು ಮಾಹಿತಿ ನಿಖರವಾಗಿದೆ. ಅದೇನೆಂದರೆ, ಕೋವಿಡ್ ಕಾಲದಲ್ಲಿ ಸುಳ್ಳು ಸುದ್ದಿಗಳನ್ನು ಹರಡುವುದರಲ್ಲಿ ಭಾರತ ಮುಂಚೂಣಿಯಲ್ಲಿತ್ತು!

  * * *

Ijms ಪ್ರಕಟಿಸಿದ ಅಧ್ಯಯನವೊಂದು ಕೋವಿಡ್ ಕಾಲದಲ್ಲಿ ಸಮೂಹಮಾಧ್ಯಮಗಳ ಪಾತ್ರದ ಕುರಿತು ಒಳನೋಟಗಳನ್ನು ನೀಡುತ್ತದೆ. 2021ಮೇ ತಿಂಗಳಲ್ಲಿ ಪ್ರಕಟಗೊಂಡ ಈ ಅಧ್ಯಯನವು ಲಾಕ್‌ಡೌನ್ ಕಾಲದಲ್ಲಿ ಜನತೆ ಸುದ್ದಿಗಾಗಿ ಇಂಟರ್‌ನೆಟ್/ಸೋಷಿಯಲ್ ಮೀಡಿಯಾ ಮತ್ತು ಟೆಲಿವಿಷನ್‌ಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದರು ಎನ್ನುತ್ತದೆ. ಅಧ್ಯಯನದ ಅಂಕಿ-ಅಂಶಗಳ ಪ್ರಕಾರ, ವಯಸ್ಕರಲ್ಲಿ (20-60 ಪ್ರಾಯವರ್ಗ) ಕೋವಿಡ್ ಕಾಲದ ಸುದ್ದಿಗಳು ಮಾನಸಿಕವಾಗಿ ಗಂಭೀರವಾದ ಆಘಾತಗಳನ್ನು ಉಂಟುಮಾಡಿವೆ. ಶೇ. 85.55 ಜನರಲ್ಲಿ ಆತಂಕ, ಶೇ. 83.14 ಮಂದಿಯಲ್ಲಿ ಮಾನಸಿಕ ಒತ್ತಡ, ಶೇ. 75.91 ಮಂದಿಯಲ್ಲಿ ಭಯ, ಶೇ. 80.73 ಮಂದಿಯಲ್ಲಿ ಗಾಬರಿ ಸಂಬಂಧಿ ತೊಂದರೆಗಳು ಕೋವಿಡ್ ಕಾಲದಲ್ಲಿ ಕಾಣಿಸಿಕೊಂಡಿವೆ ಎನ್ನುತ್ತಾರೆ, (ವಿವರಗಳಿಗೆ ನೋಡಿ: https://ijmsweb.com/role-of-mass-media-and-its-impact-on-general-public-during-coronavirus-disease-2019-pandemic-in-north-india-an-online-assessment/)

Writer - ರಾಜಾರಾಂ ತಲ್ಲೂರು

contributor

Editor - ರಾಜಾರಾಂ ತಲ್ಲೂರು

contributor

Similar News