ವ್ಯವಸ್ಥೆಯ ಗರ್ಭದಲ್ಲೇ ಭ್ರಷ್ಟಾಚಾರದ ಬೇರುಗಳಿವೆ

Update: 2022-04-21 06:08 GMT

ನೂರು ದಿನಗಳಲ್ಲಿ ದೇಶದ ಕಪ್ಪುಹಣವನ್ನೆಲ್ಲಾ ಆಚೆಗೆಳೆಯುತ್ತೇವೆ, ಸ್ವಿಸ್ ಬ್ಯಾಂಕಿನಲ್ಲಿರುವ ಕೋಟ್ಯಂತರ ರೂ. ಅಕ್ರಮ ಹಣವನ್ನು ಹಿಂದಕ್ಕೆ ತಂದು ದೇಶದ ಸಮಸ್ತ ಜನತೆಗೆ ಹರಿದು ಹಂಚಿಬಿಡುತ್ತೇವೆ ಎಂದು ಘೋಷಿಸುತ್ತಲೇ ಅಧಿಕಾರದ ಚುಕ್ಕಾಣಿ ಹಿಡಿದ ನರೇಂದ್ರ ಮೋದಿ ಸರಕಾರಕ್ಕೆ ಈಗ, ಆಡಳಿತ ವ್ಯವಸ್ಥೆಯೊಳಗೆ ಭ್ರಷ್ಟರು ಎಲ್ಲೆಲ್ಲಿ ಬಿಲ ತೋಡಿದ್ದಾರೆ ಎಂದು ಗಮನಿಸಲೂ ಸಾಧ್ಯವಾಗುತ್ತಿಲ್ಲ. ಇದು ಸಾಧ್ಯವಾಗುವುದೂ ಇಲ್ಲ. ಏಕೆಂದರೆ ಈ ದೇಶದ ಸಂಸದೀಯ ಪ್ರಜಾತಂತ್ರ ಮತ್ತು ಚುನಾವಣಾ ರಾಜಕಾರಣವನ್ನು ಪೋಷಿಸುತ್ತಿರುವುದೇ ಈ ಬಿಲಗಳಲ್ಲಿ ಅಡಗಿರುವ ಭ್ರಷ್ಟರ ಸಂತತಿ.

ಸಾಮಾನ್ಯವಾಗಿ ಭ್ರಷ್ಟಾಚಾರದ ವಿಚಾರ ಎದುರಾದಾಗ ನಮ್ಮ ಗಮನ ಹಣಕಾಸಿನ ಕಡೆ ವಾಲುತ್ತದೆ. ಹಣಕಾಸು ವ್ಯವಹಾರಗಳಲ್ಲಿ, ವ್ಯಾಪಾರ ವಹಿವಾಟುಗಳಲ್ಲಿ, ಸಾರ್ವಜನಿಕ ಸೇವಾ ವಲಯದಲ್ಲಿ ಮತ್ತು ಸರಕಾರಿ ಕಚೇರಿಗಳಲ್ಲಿ ಜನಸಾಮಾನ್ಯರು ದಿನನಿತ್ಯ ಎದುರಿಸುವ ಒಂದು ವಿದ್ಯಮಾನವಾಗಿ ಭ್ರಷ್ಟಾಚಾರವನ್ನು ಕಾಣಲು ಯತ್ನಿಸುತ್ತೇವೆ. ಅಣ್ಣಾ ಹಝಾರೆ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಎರಡನೇ ಸ್ವಾತಂತ್ರ್ಯ ಸಂಗ್ರಾಮದ ಮಾದರಿಯಲ್ಲಿ ಸಮಗ್ರ ಕ್ರಾಂತಿಯ ಹಾದಿಯನ್ನು ಅನುಸರಿಸಿದಾಗ ಇಡೀ ದೇಶವೇ ತನ್ನ ನಿದ್ರಾವಸ್ಥೆಯಿಂದ ಜಾಗೃತವಾದಂತೆ ಕಂಡಿತ್ತು. ಆ ವೇಳೆಗೆ 60ಕ್ಕೂ ಹೆಚ್ಚು ವರ್ಷಗಳ ಕಾಲ ನಿತ್ಯಬದುಕಿನ ಭ್ರಷ್ಟತೆಯ ನಡುವೆಯೇ ಜೀವನ ಸವೆಸಿದ್ದ ಭಾರತದ ಮಧ್ಯಮ ವರ್ಗಗಳು ಅಣ್ಣಾ ಹಝಾರೆ ಅವರ ಕೂಗಿನಿಂದ ಎಚ್ಚೆತ್ತು ಭ್ರಷ್ಟಾಚಾರದ ಹೊಸ ಬಿಲಗಳನ್ನು ಹುಡುಕಲಾರಂಭಿಸಿದ್ದವು. ಆಡಳಿತ ವ್ಯವಸ್ಥೆಯೊಳಗಿನ ಉನ್ನತ ಮಟ್ಟದ ಭ್ರಷ್ಟಾಚಾರವನ್ನು ಬೃಹದಾಕಾರದಲ್ಲಿ ತೋರಿಸುವ ಮೂಲಕ ಅಣ್ಣಾ ಹಝಾರೆ ಭಾರತದ ಜನತೆಯ ಮುಂದೆ ‘ಲೋಕಪಾಲ’ ಎಂಬ ಭ್ರಷ್ಟರ ನಿಗ್ರಹಿಸುವ ಸಂಸ್ಥೆಯೊಂದನ್ನು ಇಟ್ಟಿದ್ದರು.

ಈ ಸಮಗ್ರ ಕ್ರಾಂತಿಯ ಫಲಾನುಭವಿಗಳು ಯಾರು? ಹಿಂದಿರುಗಿ ನೋಡಿದಾಗ ಈ ಇಡೀ ಹೋರಾಟದ ಹಾದಿಯಲ್ಲಿ ಸಿಕ್ಕ ತುಣುಕುಗಳನ್ನೆಲ್ಲಾ ಆಯ್ದುಕೊಂಡು ತಮ್ಮದೇ ಆದ ಸಾಮ್ರಾಜ್ಯವನ್ನು ಕಟ್ಟಿಕೊಂಡಿದ್ದು, ಆರು ದಶಕಗಳ ಕಾಲ ಭ್ರಷ್ಟತೆಯ ಭ್ರೂಣವನ್ನು ಪೋಷಿಸುತ್ತಲೇ ಬೆಳೆದುಬಂದಿದ್ದ ಬಂಡವಾಳಶಾಹಿ ಮಾರುಕಟ್ಟೆಯ ಆರಾಧಕರು. ನೂರು ದಿನಗಳಲ್ಲಿ ದೇಶದ ಕಪ್ಪುಹಣವನ್ನೆಲ್ಲಾ ಆಚೆಗೆಳೆಯುತ್ತೇವೆ, ಸ್ವಿಸ್ ಬ್ಯಾಂಕಿನಲ್ಲಿರುವ ಕೋಟ್ಯಂತರ ರೂ. ಅಕ್ರಮ ಹಣವನ್ನು ಹಿಂದಕ್ಕೆ ತಂದು ದೇಶದ ಸಮಸ್ತ ಜನತೆಗೆ ಹರಿದು ಹಂಚಿಬಿಡುತ್ತೇವೆ ಎಂದು ಘೋಷಿಸುತ್ತಲೇ ಅಧಿಕಾರದ ಚುಕ್ಕಾಣಿ ಹಿಡಿದ ನರೇಂದ್ರ ಮೋದಿ ಸರಕಾರಕ್ಕೆ ಈಗ, ಆಡಳಿತ ವ್ಯವಸ್ಥೆಯೊಳಗೆ ಭ್ರಷ್ಟರು ಎಲ್ಲೆಲ್ಲಿ ಬಿಲ ತೋಡಿದ್ದಾರೆ ಎಂದು ಗಮನಿಸಲೂ ಸಾಧ್ಯವಾಗುತ್ತಿಲ್ಲ. ಇದು ಸಾಧ್ಯವಾಗುವುದೂ ಇಲ್ಲ. ಏಕೆಂದರೆ ಈ ದೇಶದ ಸಂಸದೀಯ ಪ್ರಜಾತಂತ್ರ ಮತ್ತು ಚುನಾವಣಾ ರಾಜಕಾರಣವನ್ನು ಪೋಷಿಸುತ್ತಿರುವುದೇ ಈ ಬಿಲಗಳಲ್ಲಿ ಅಡಗಿರುವ ಭ್ರಷ್ಟರ ಸಂತತಿ. ಹಾಗಾಗಿಯೇ ಯಾವುದೇ ರಾಜಕೀಯ ನಾಯಕರ ವಿರುದ್ಧ ಭ್ರಷ್ಟಾಚಾರದ ಆರೋಪ ಎದುರಾದಾಗ, ಪರಸ್ಪರ ದೋಷಾರೋಪದ ಧ್ವನಿಗಳು ಈ ಬಿಲಗಳಿಂದ ಹೊರಬರಲಾರಂಭಿಸುತ್ತವೆ. ತಾವು ನಿಂತ ನೆಲೆಯೇ ಭ್ರಷ್ಟಾಚಾರದ ಪ್ರಧಾನ ಭೂಮಿಕೆಯಾಗಿರುವುದರಿಂದ ಎಲ್ಲ ಪಕ್ಷಗಳ ನಾಯಕರು ತಮ್ಮನ್ನು ಪ್ರಾಮಾಣಿಕರು ಎಂದೇ ಕಲ್ಪಿಸಿಕೊಂಡು ವಿರೋಧಿಗಳಲ್ಲಿ ಖಳರನ್ನು ಹುಡುಕಲು ಯತ್ನಿಸುತ್ತಾರೆ. ಎಂಟು ವರ್ಷಗಳ ಆಡಳಿತ ಪೂರೈಸಿರುವ ನರೇಂದ್ರ ಮೋದಿ ಸರಕಾರ ಯುಪಿಎ ಸರಕಾರವನ್ನು ಮತ್ತು ನೆಹರೂ ಪರಂಪರೆಯನ್ನೇ ಭ್ರಷ್ಟಾಚಾರದ ಕೂಪ ಎಂದು ಆಪಾದಿಸುತ್ತಲೇ ಇದ್ದರೂ, ಈವರೆಗೂ ಯಾವುದೇ ಪ್ರಕರಣದಲ್ಲಿ ಯಾವ ರಾಜಕೀಯ ನಾಯಕರೂ ಶಿಕ್ಷೆಗೊಳಗಾಗಿಲ್ಲ. ಅಥವಾ ನೋಟು ಅಮಾನ್ಯೀಕರಣ ಮಾಡಿದ ಸಂದರ್ಭದಲ್ಲಿ 50ದಿನಗಳಲ್ಲಿ ಕಪ್ಪುಹಣವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡದಿದ್ದಲ್ಲಿ ನನ್ನನ್ನು ಸುಟ್ಟುಬಿಡಿ ಎಂದು ಘೋಷಿಸಿದ್ದ ಪ್ರಧಾನಿ ಮೋದಿ ಇಂದು ಕಪ್ಪುಹಣದ ಬಗ್ಗೆ ಒಂದೇ ಒಂದು ಮಾತನಾಡಲು ಸಾಧ್ಯವಾಗುತ್ತಿಲ್ಲ. ಕಾರಣವೇನೆಂದರೆ, ಕಪ್ಪುಹಣ ಇಲ್ಲದೆ ಹೋದರೆ ಬಂಡವಾಳಶಾಹಿ ಮಾರುಕಟ್ಟೆಯ ಚಲನೆಯೇ ಸ್ಥಗಿತವಾಗಿಬಿಡುತ್ತದೆ. ತಳಮಟ್ಟದಿಂದ ಉನ್ನತ ಹಂತದವರೆಗೆ, ಚರಂಡಿ ಕಾಮಗಾರಿಯಿಂದ ರಫೇಲ್ ಒಪ್ಪಂದದವರೆಗೆ ಗುಪ್ತವಾಹಿನಿಯಂತೆ ಭ್ರಷ್ಟಾಚಾರದ ಅಕ್ರಮ ಸಂಪತ್ತು ಹರಿಯದೆ ಹೋದರೆ, ಸ್ಥಾಪಿತ ವ್ಯವಸ್ಥೆಯ ವಾರಸುದಾರರು ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಾರೆ. ಈ ಸೂಕ್ಷ್ಮವನ್ನು ಅರ್ಥಮಾಡಿಕೊಂಡರೆ ಅಣ್ಣಾ ಹಝಾರೆ ಎಷ್ಟು ಅಮಾಯಕರಂತೆ ವರ್ತಿಸಿದರು ಎನ್ನುವುದನ್ನೂ ಅರ್ಥಮಾಡಿಕೊಳ್ಳಬಹುದು.

ಕರ್ನಾಟಕದ ಸಂದರ್ಭದಲ್ಲೇ ಈಗ ಭ್ರಷ್ಟಾಚಾರ ಯುಗ ಆರಂಭವಾಗಿದೆ. ಒಬ್ಬ ಸಚಿವರ ತಲೆದಂಡವೂ ಆಗಿದೆ. ಈಗ ಮಠೋದ್ಯಮಿಗಳು ತಾವು ಪಡೆದ ಅನುದಾನಕ್ಕೆ ಪ್ರತಿಯಾಗಿ ಆಳುವವರಿಗೆ ಸಲ್ಲಿಸಿದ ಕಪ್ಪಕಾಣಿಕೆಯ ಬಗ್ಗೆ ಬಹಿರಂಗವಾಗಿ ಮಾತನಾಡಲಾರಂಭಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಕರ್ನಾಟಕ ಸರಕಾರ ಈ ಮಠಾಧೀಶರನ್ನು ಸಲಹುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸಿದರೆ ವಾಸ್ತವದ ಅರಿವಾಗುತ್ತದೆ. ಒಬ್ಬ ವ್ಯಕ್ತಿ ಯಾವುದೇ ಪಕ್ಷದಿಂದ ಶಾಸಕನಾಗಲು ಬಯಸಿದರೆ ಕನಿಷ್ಠ ಐದು ಕೋಟಿ ರೂ. ಬಂಡವಾಳ ಹೂಡಬೇಕಾದ ಸನ್ನಿವೇಶದಲ್ಲಿ ನಾವಿದ್ದೇವೆ. ಎಡಪಕ್ಷಗಳನ್ನು ಹೊರತುಪಡಿಸಿ, ಎಲ್ಲ ರಾಜಕೀಯ ಪಕ್ಷಗಳಲ್ಲೂ ಟಿಕೆಟ್ ಪಡೆಯುವ ಪ್ರಕ್ರಿಯೆಯಲ್ಲೇ ಆಂತರಿಕ ಭ್ರಷ್ಟಾಚಾರ ತಾಂಡವವಾಡುತ್ತದೆ. ಜನಬಲವನ್ನೇ ನಂಬಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸುವ ಸುವರ್ಣ ಯುಗ ಎಂದೋ ಸಂದು ಹೋಗಿದೆ. ಈಗ ಹಣಬಲವೇ ಪ್ರಾತಿನಿಧಿತ್ವವನ್ನು ನಿರ್ಧರಿಸುತ್ತದೆ. ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ ಆಯ್ಕೆಯಾದ ಶಾಸಕರ ಪೈಕಿ ಶೇ. 50ರಷ್ಟು ಶಾಸಕರು ಅಪರಾಧದ ಹಿನ್ನೆಲೆಯುಳ್ಳವರಾಗಿದ್ದಾರೆ. ಅತ್ಯುತ್ತಮ ಆಡಳಿತ, ಜನೋಪಯೋಗಿ ಯೋಜನೆಗಳು ಮತ್ತು ಉತ್ತಮ ಕಾನೂನು ಸುವ್ಯವಸ್ಥೆ-ಈ ಕಾರಣಗಳಿಗಾಗಿ ಮರಳಿ ಅಧಿಕಾರಕ್ಕಾಗಿ ಬಂದಿದೆ ಎನ್ನಲಾಗುವ ಯೋಗಿ ಆದಿತ್ಯನಾಥ್ ಸರಕಾರದಲ್ಲಿ ಇತ್ತೀಚೆಗೆ ಪ್ರಮಾಣವಚನ ಸ್ವೀಕರಿಸಿದ ಸಚಿವರ ಪೈಕಿ ಶೇ. 49ರಷ್ಟು, ಅಂದರೆ 22 ಸಚಿವರು ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದು ಎಡಿಆರ್ ಸಂಸ್ಥೆ ವರದಿ ಮಾಡಿದೆ. ಕನಿಷ್ಠ 5 ವರ್ಷಗಳ ಜೈಲು ಶಿಕ್ಷೆಗೊಳಗಾಗುವಂತಹ ಅಪರಾಧಗಳನ್ನು ಗಂಭೀರ ಎಂದು ಪರಿಗಣಿಸಲಾಗುತ್ತದೆ. ಕಾಲ ಕಳೆದಂತೆ ಈ ಪ್ರಕರಣಗಳನ್ನು ಸರಕಾರ ಹಿಂದೆಗೆದುಕೊಳ್ಳುತ್ತದೆ. ಇದೇ ವರದಿಯಲ್ಲಿ ಹೇಳುವಂತೆ 45 ಸಚಿವರ ಪೈಕಿ 39 ಸಚಿವರು ಕೋಟ್ಯಧಿಪತಿಗಳಾಗಿದ್ದು ಸರಾಸರಿ ಆಸ್ತಿ ತಲಾ ಒಂಭತ್ತು ಕೋಟಿ ರೂ.ಗಳಷ್ಟಿದೆ. ಈ ಅಂಕಿ-ಅಂಶಗಳನ್ನು ಸಾಂಕೇತಿಕ ಎಂದು ಪರಿಗಣಿಸಿದಾಗ, ಇಡೀ ದೇಶದಲ್ಲಿ ಆಡಳಿತ ವ್ಯವಸ್ಥೆಯನ್ನು ಆವರಿಸಿರುವ ಹಣಕಾಸು ಬಂಡವಾಳದ ಪ್ರಮಾಣದ ಅರಿವಾಗುವುದು ಸಾಧ್ಯ. ಜನಪ್ರತಿನಿಧಿಯಾಗಲು ಕೋಟ್ಯಂತರ ರೂ. ಬಂಡವಾಳ ಹೂಡುವ ಯಾವುದೇ ಪಕ್ಷದ ಅಭ್ಯರ್ಥಿಗಳು ತಾವು ಹೂಡಿದ ಬಂಡವಾಳವನ್ನು ಲಾಭದ ಸಮೇತ ಹಿಂಪಡೆಯದೆ ಹೋದರೆ ಮುಂಬರುವ ಚುನಾವಣೆಯಲ್ಲಿ ಟಿಕೆಟ್ ಗಳಿಸಲಾಗುವುದಿಲ್ಲ. ಈ ಸರಳ ಪ್ರಮೇಯವನ್ನು ಗಮನಿಸಿದರೆ ಸಾಕು, ನಮ್ಮ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎಂದು ಅರ್ಥವಾಗುತ್ತದೆ. ತಾನು ಯಾವುದೇ ಭ್ರಷ್ಟಾಚಾರದಲ್ಲಿ ತೊಡಗಿಲ್ಲ ಎಂದು ಆಣೆ ಪ್ರಮಾಣ ಮಾಡಿ ಹೇಳುವ, ತನಗಿಂತಲೂ ಮತ್ತೊಬ್ಬ ಇನ್ನೂ ಹೆಚ್ಚು ಭ್ರಷ್ಟ ಎಂದು ನಿರೂಪಿಸಲು ದಾಖಲೆಗಳನ್ನು ನೀಡುವ, ತನ್ನ ವಿರುದ್ಧದ ಆರೋಪಗಳು ಸಾಬೀತಾದರೆ ರಾಜಕೀಯ ಸನ್ಯಾಸ ಸ್ವೀಕರಿಸಲು ಪಣತೊಡುವ ಯಾವುದೇ ರಾಜಕಾರಣಿಯ ಮಾತುಗಳು ಪ್ರಾಮಾಣಿಕವಾಗಿರಲು ಸಾಧ್ಯವೇ ಇಲ್ಲ. ಏಕೆಂದರೆ ಚುನಾವಣೆಗಳಲ್ಲಿ ಇವರು ಹರಿಸುವ ಹಣದ ಹೊಳೆ ಬೆವರಿನ ದುಡಿಮೆಯ ಫಲ ಆಗಿರುವುದಿಲ್ಲ, ಅಕ್ರಮ ಆಸ್ತಿಯ ಒಂದು ಭಾಗವಾಗಿರುತ್ತದೆ. ‘‘ನಾವು ತಿನ್ನುವುದೂ ಇಲ್ಲ, ತಿನ್ನಲು ಬಿಡುವುದೂ ಇಲ್ಲ’’ ಎಂಬ ಘೋಷಣೆಯೊಡನೆ 2014ರಲ್ಲಿ ಅಧಿಕಾರಕ್ಕೆ ಬಂದ ಕೇಂದ್ರ ಬಿಜೆಪಿ ಸರಕಾರ ಪಾರದರ್ಶಕತೆ ಇಲ್ಲದೆ ಆಡಳಿತ ನಡೆಸುತ್ತಿರುವುದೇ ಈ ಅಕ್ರಮ ಆಸ್ತಿಯನ್ನು ರಕ್ಷಿಸುವ ಸಲುವಾಗಿ. ಚುನಾವಣಾ ಬಾಂಡ್‌ಗಳ ರೂಪದಲ್ಲಿ ರಾಜಕೀಯ ಬಂಡವಾಳದ ಕ್ರೋಡೀಕರಣಕ್ಕೆ ಹೊಸ ಕೂಪಗಳನ್ನು ಸೃಷ್ಟಿಸಿರುವುದನ್ನು ಇಲ್ಲಿ ಸೂಕ್ಷ್ಮವಾಗಿ ಗಮನಿಸಬೇಕಿದೆ. ರಾಜಕೀಯ ಪಕ್ಷಗಳಿಗೆ ಹರಿದುಬರುವ ಕಾರ್ಪೊರೇಟ್ ದೇಣಿಗೆಗಳು ಈಗ ರಹಸ್ಯ ವ್ಯವಹಾರವಾಗಿದೆ. ಸಾರ್ವಜನಿಕರ ಹಣದಿಂದಲೇ ರೂಪುಗೊಂಡಿರುವ ಪಿಎಂ ಕೇರ್ ಫಂಡ್ ಎಂಬ ನಿಧಿ ಯಾವುದೇ ಲೆಕ್ಕಪತ್ರಗಳನ್ನು ನೀಡದೆ, ಮಾಹಿತಿ ಹಕ್ಕು ಕಾಯ್ದೆಯಿಂದಲೇ ರಿಯಾಯಿತಿ ಪಡೆದಿದೆ. ಪಾರದರ್ಶಕತೆ ಇಲ್ಲದ ಪ್ರಾಮಾಣಿಕತೆ ಜನರನ್ನು ಭ್ರಮಾಧೀನರನ್ನಾಗಿ ಮಾಡುತ್ತದೆ. ವ್ಯಕ್ತಿನಿಷ್ಠೆಗೆ ಬಲಿಯಾದ ಇಡೀ ಜನಸಮೂಹ ಈ ಭ್ರಮಾಲೋಕದಲ್ಲಿ ವಿಹರಿಸುತ್ತಲೇ ಭ್ರಷ್ಟ ವ್ಯವಸ್ಥೆಯ ಬೇರುಗಳಿಗೆ ನೀರುಣಿಸುತ್ತಾ ಪೋಷಿಸುತ್ತದೆ. ಹಾಗಾಗಿಯೇ ಭ್ರಷ್ಟಾಚಾರದ ಆರೋಪ ಎದುರಿಸುವ ಅಥವಾ ಕ್ರಿಮಿನಲ್ ಅಪರಾಧದ ಆರೋಪ ಎದುರಿಸುವ ಯಾವುದೇ ಶಾಸಕ, ಸಂಸದ ಇಂದು ಉಚ್ಚಾಟನೆಗೊಳಗಾಗುವುದಿಲ್ಲ ಅಥವಾ ಪಕ್ಷದ ಆಂತರಿಕ ಶಿಸ್ತುಕ್ರಮಗಳಿಗೆ ಒಳಗಾಗುವುದಿಲ್ಲ ಅಥವಾ ಯಾವುದೇ ಪಕ್ಷವೂ ಅಪರಾಧಿ ಹಿನ್ನೆಲೆಯುಳ್ಳ, ಭ್ರಷ್ಟಾಚಾರದ ಆರೋಪ ಹೊತ್ತಿರುವ ವ್ಯಕ್ತಿಗಳಿಗೆ ಟಿಕೆಟ್ ನೀಡುವುದಿಲ್ಲ ಎಂದು ಘೋಷಿಸುವುದೂ ಇಲ್ಲ.

 ಏಕೆಂದರೆ ರಾಜಕಾರಣವನ್ನು ಪಾತಕೀಕರಣದಿಂದ ಮುಕ್ತಗೊಳಿಸಬೇಕು ಎಂಬ ಕೂಗು ಈಗ ಮರೆಯಾಗಿಹೋಗಿದೆ. ಭ್ರಷ್ಟಾಚಾರ, ಅಕ್ರಮ ಸಂಪತ್ತು, ಅಕ್ರಮ ಬಂಡವಾಳದ ಕ್ರೋಡೀಕರಣ ಮತ್ತು ಹಣಗಳಿಕೆಯ ಭ್ರಷ್ಟ ಮಾರ್ಗಗಳು ಇವೆಲ್ಲವನ್ನೂ ಪಾತಕೀಕರಣದ ವ್ಯಾಪ್ತಿಗೊಳಪಡಿಸಿ ನೋಡಿದಾಗ, ಪಾತಕ ಲೋಕದ ಸಂಪರ್ಕ ಇಲ್ಲದೆ ರಾಜಕೀಯ ಪಕ್ಷಗಳ ಅಸ್ತಿತ್ವವೇ ಉಳಿಯುವುದಿಲ್ಲ. ಸ್ಥಾಪಿತ ವ್ಯವಸ್ಥೆಯೊಳಗಿನ ಅನ್ಯಾಯಗಳ ವಿರುದ್ಧ ಹೋರಾಡುವವರನ್ನು ಅಪರಾಧಿಗಳೆಂದೋ, ದೇಶದ್ರೋಹಿಗಳೆಂದೋ, ಸಮಾಜಘಾತುಕರೆಂದೋ ಕಾಣುವ ಒಂದು ಸನ್ನಿವೇಶವನ್ನು ಸೃಷ್ಟಿಸಲಾಗಿದೆ. ಹಾಗಾಗಿಯೇ ಯಾವುದೇ ಭ್ರಷ್ಟ ರಾಜಕಾರಣಿ ಅಧಿಕಾರಿ ಶಿಕ್ಷೆಗೊಳಗಾಗದಿದ್ದರೂ, ಸಾರ್ವಜನಿಕ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಅನೇಕಾನೇಕ ಮಾಹಿತಿ ಹಕ್ಕು ಕಾರ್ಯಕರ್ತರು ಕೊಲೆಯಾಗುತ್ತಲೇ ಇದ್ದಾರೆ. ಭ್ರಷ್ಟಾಚಾರ ಎಂದ ಕೂಡಲೇ ಧಿಗ್ಗನೆದ್ದು ಕುಳಿತು ಗಾಂಧಿ ವೇಷಧಾರಿಗಳಾಗುವ ಪ್ರಜ್ಞಾವಂತ, ಸುಶಿಕ್ಷಿತ, ಹಿತವಲಯದ ಮಧ್ಯಮ ವರ್ಗಗಳು ತಾವು ಪೋಷಿಸುತ್ತಲೇ ಇರುವ ಒಂದು ಭ್ರಷ್ಟ ವ್ಯವಸ್ಥೆಯನ್ನಾಗಲೀ, ಭ್ರಷ್ಟ ಸಾಮ್ರಾಜ್ಯದ ವಾರಸುದಾರರನ್ನಾಗಲೀ ಗುರುತಿಸಲು ಮುಂದಾಗುವುದಿಲ್ಲ. ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುವಲ್ಲಿ, ಕೆಲವೊಮ್ಮೆ ಉತ್ಪಾದಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಈ ವರ್ಗದ ಜನತೆ, ಪಕ್ಷ ನಿಷ್ಠೆ, ತತ್ವನಿಷ್ಠೆ ಮತ್ತು ವ್ಯಕ್ತಿ ನಿಷ್ಠೆಯ ಭ್ರಮಾಲೋಕದಲ್ಲಿ ವಿಹರಿಸುತ್ತಲೇ ತಮ್ಮ ನೈತಿಕ ಜವಾಬ್ದಾರಿಯನ್ನೂ ಮರೆತು ತಮ್ಮ ಸುರಕ್ಷಿತ ನೆಲೆಗಳನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುತ್ತದೆ. ಸರಕಾರಿ ಕಚೇರಿಯ ಗುಮಾಸ್ತನಿಂದ ಹಿಡಿದು ಕೇಂದ್ರ ಸಚಿವರವರೆಗೆ ಯಾವುದೇ ವ್ಯಕ್ತಿಯೂ ತನ್ನ ಅಕ್ರಮ ಆದಾಯದ ಮಾರ್ಗಗಳನ್ನು ಬಹಿರಂಗಪಡಿಸುವುದಿಲ್ಲ. ಈ ಗುಂಪಿಗೆ ಈ ಮಠೋದ್ಯಮಿಗಳನ್ನೂ ಸೇರಿಸಬಹುದು. ಇಂತಹ ವ್ಯಕ್ತಿಗಳನ್ನೇ ಪೋಷಿಸುತ್ತಾ ತಮ್ಮ ಸಾಂಸ್ಥಿಕ ಮತ್ತು ಸಂಘಟನಾತ್ಮಕ ಬಲವರ್ಧನೆಯ ಮಾರ್ಗಗಳನ್ನು ಅನುಸರಿಸುವ ರಾಜಕೀಯ ಪಕ್ಷಗಳಿಗೆ ಈ ವ್ಯಕ್ತಿಗಳು, ಸಂಸ್ಥೆಗಳು, ಸಂಘಟನೆಗಳು ಮತ್ತು ಮಠಗಳು ಬಂಡವಾಳದ ಹರಿವಿನ ಗುಪ್ತವಾಹಿನಿಯಾಗಿ ಪರಿಣಮಿಸುತ್ತವೆ. ಆದುದರಿಂದಲೇ ಯಾವುದೇ ರಾಜಕೀಯ ವ್ಯಕ್ತಿಯ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದರೂ, ಪರ ವಿರೋಧದ ಧ್ವನಿಗಳು ಗಟ್ಟಿಯಾಗುತ್ತವೆ. ಭ್ರಷ್ಟರನ್ನು ವಿರೋಧಿಸುವ ಧ್ವನಿಗಳು ಪ್ರಾಮಾಣಿಕವಾಗಿರುವುದಿಲ್ಲ ಎನ್ನುವುದಕ್ಕೆ ರಾಜಕೀಯ ಪಕ್ಷಗಳ ನಡವಳಿಕೆಗಳೇ ಸಾಕ್ಷಿಯಾಗಿ ಕಾಣುತ್ತವೆ. ಉನ್ನತ ಪೊಲೀಸ್ ಹುದ್ದೆಗಳು, ವಿಶ್ವವಿದ್ಯಾಲಯದ ಉಪಕುಲಪತಿ ಮತ್ತು ಕುಲಸಚಿವ ಹುದ್ದೆಗಳು, ಅಧಿಕಾರಶಾಹಿಯ ಉನ್ನತ ಹುದ್ದೆಗಳು ಇವೆಲ್ಲವೂ ನಿಗದಿತ ದರದಲ್ಲಿ ಬಿಕರಿಯಾಗುತ್ತಿರುವ ಸುಡು ವಾಸ್ತವಕ್ಕೆ ಸಾರ್ವಜನಿಕರೇ ಸಾಕ್ಷಿಯಾಗುತ್ತಿದ್ದಾರೆ. ಆದರೆ ಇದರ ವಿರುದ್ಧ ಸಂಘಟಿತ ಧ್ವನಿ ಕೇಳಿಬರುತ್ತಿಲ್ಲ. ಜಾತಿ ಮತಗಳ ಅಸ್ಮಿತೆಯೊಂದಿಗೇ ಅಧಿಕಾರ ಪೀಠಗಳ ಲಾಲಸೆ ಮತ್ತು ಸ್ವಕಾರ್ಯ ಸಾಧನೆಯ ಆಕಾಂಕ್ಷೆಗಳು ಭ್ರಷ್ಟಾಚಾರವನ್ನು ಸಹಿಸಿಕೊಳ್ಳುವಂತೆ ಮಾಡುತ್ತಿದೆ. ಜೊತೆಗೆ ಅತಿಯಾದ ವ್ಯಕ್ತಿ ಆರಾಧನೆ ಮತ್ತು ರಾಜಕೀಯ ಪಕ್ಷ ನಿಷ್ಠೆಯ ಪರಿಣಾಮವಾಗಿ, ತಮ್ಮೆಳಗಿನ ಆಂತರಿಕ ಭ್ರಷ್ಟ ಕೂಪಗಳನ್ನು ಕಂಡೂ ಕಾಣದಂತೆ, ಪ್ರಾಮಾಣಿಕತೆಯ ಮುಖವಾಡ ತೊಟ್ಟು ಸಾರ್ವಜನಿಕ ಬದುಕಿನಲ್ಲಿ ನಡೆಯುವ ಒಂದು ಮನೋಭಾವ ಬಹುತೇಕ ಸಾರ್ವತ್ರಿಕವಾಗಿದೆ. ಭಾರತದ ಆಡಳಿತ ವ್ಯವಸ್ಥೆಯಲ್ಲಿ ಮತ್ತು ರಾಜಕಾರಣದಲ್ಲಿ ಕಾನೂನುಬಾಹಿರವಾಗಿ, ನಿಯಮಗಳನ್ನು ಉಲ್ಲಂಘಿಸಿ ಹೆಚ್ಚಿನ ಹಣವನ್ನು ನೀಡಿ ಕಾರ್ಯಸಾಧಿಸಿಕೊಳ್ಳುವ ಒಂದು ಪರಂಪರೆ ವ್ಯವಸ್ಥಿತವಾಗಿ ಪೋಷಿಸಲ್ಪಟ್ಟಿದೆ. ಈ ಪರಂಪರೆಯನ್ನು ಧಿಕ್ಕರಿಸುವ ಎಲ್ಲ ಅವಕಾಶಗಳನ್ನೂ ಮಾರುಕಟ್ಟೆ ವ್ಯವಸ್ಥೆ ಮಾಧ್ಯಮಗಳ ಮೂಲಕ ಕಸಿದುಕೊಳ್ಳುತ್ತದೆ. ಹೀಗೆ ನಿಯಮ ಉಲ್ಲಂಘಿಸಿ ಭ್ರಷ್ಟ ಮತ್ತು ಅಕ್ರಮ ಆದಾಯಕ್ಕೆ ಪೂರಕವಾಗಿ ನಡೆದುಕೊಳ್ಳುವ ವ್ಯಕ್ತಿಗಳು ಪ್ರಾಮಾಣಿಕವಾಗಿ ತಮ್ಮ ಅಭಿಪ್ರಾಯಗಳನ್ನು ದಾಖಲಿಸಿಬಿಟ್ಟರೆ ಭಾರತದ ಭ್ರಷ್ಟಾಚಾರದ ಕೂಪ ಒಮ್ಮೆಲೆ ಸ್ಫೋಟಿಸಿಬಿಡುತ್ತದೆ. ಮನೆಯಲ್ಲಿ ಮಕ್ಕಳು ಹೇಳಿದ ಕೆಲಸ ಮಾಡದೆ ಹೋದರೆ ಒಂದು ಚಾಕೊಲೇಟ್ ಕೊಟ್ಟು ಕೆಲಸ ಮಾಡಿಸಿಕೊಳ್ಳುವ ಪ್ರಾಥಮಿಕ ಹಂತದಿಂದಲೇ ಭ್ರಷ್ಟಾಚಾರದ ಬೇರುಗಳು ಹರಡಲಾರಂಭಿಸುತ್ತವೆ. ಇದೇ ಪರಂಪರೆಯೇ ಸಂಸತ್ತಿನವರೆಗೂ ವಿಸ್ತರಿಸುತ್ತದೆ. ಬಂಡವಾಳಶಾಹಿ ಮಾರುಕಟ್ಟೆ ವ್ಯವಸ್ಥೆಗೆ ಈ ಅಕ್ರಮ ಆದಾಯದ ಮೂಲಗಳು ಸದಾ ಅಪ್ಯಾಯಮಾನವಾಗಿಯೇ ಕಾಣುತ್ತದೆ. ಹಾಗಾಗಿಯೇ ಬಂಡವಾಳಶಾಹಿಯನ್ನು ಪೋಷಿಸುವ ಸರಕಾರಗಳೂ ಸಹ ಲೋಕಾಯುಕ್ತ, ಲೋಕಪಾಲ ಮುಂತಾದ ಸಂಸ್ಥೆಗಳ ಮೂಲಕ ಜನಸಾಮಾನ್ಯರಲ್ಲಿ ಭ್ರಮೆ ಸೃಷ್ಟಿಸುತ್ತವೆ. ಆದರೆ ಇದು ಭ್ರಷ್ಟಾಚಾರದ ವಿಷವೃಕ್ಷದ ಕಾಂಡಗಳನ್ನು ಮಾತ್ರ ಕತ್ತರಿಸಲು ಸಾಧ್ಯವಾಗುತ್ತದೆ. ಭ್ರಷ್ಟ ವ್ಯವಸ್ಥೆಯ ಬೇರುಗಳು ಇನ್ನೂ ಆಳಕ್ಕಿಳಿಯುತ್ತಲೇ ಹೋಗುತ್ತವೆ. ಈ ಬೇರುಗಳನ್ನು ಕಿತ್ತೊಗೆಯಲು ಮೂಲತಃ ಪ್ರಾಮಾಣಿಕತೆ ಮತ್ತು ನಿಷ್ಠೆ ಇರಬೇಕಾಗುತ್ತದೆ. ಇವೆರಡೂ ಮಾರುಕಟ್ಟೆಯ ಸರಕುಗಳಾಗಿರುವ ಈ ಹೊತ್ತಿನಲ್ಲಿ ಭ್ರಷ್ಟಾಚಾರ ಎನ್ನುವುದು ಒಂದು ಮನರಂಜನೆಯ ವಸ್ತುವಾಗಿ ಮಾತ್ರವೇ ಕಾಣಲು ಸಾಧ್ಯ. ಕರ್ನಾಟಕದ ಇಂದಿನ ರಾಜಕಾರಣದಲ್ಲಿ ಇದು ಸ್ಪಷ್ಟವಾಗುತ್ತಿದೆ.

Writer - ನಾ. ದಿವಾಕರ

contributor

Editor - ನಾ. ದಿವಾಕರ

contributor

Similar News