ನೀನು ‘ಪಾಂಡೆಮಿಕ್’ ಆದರೆ ನಾನು ‘ಇನ್ಫೋಡೆಮಿಕ್’

Update: 2022-04-21 05:47 GMT

                                                                  ಭಾಗ-2

ಭಾರತದಲ್ಲಿ ಆರೋಗ್ಯ ಸಂಬಂಧಿ ಮಾಹಿತಿಗಳ ಮಾಧ್ಯಮ ಕವರೇಜ್ ಕುರಿತ ಅಧ್ಯಯನವೊಂದನ್ನು ಜುಲೈ 23, 2021ರಂದು ಆಕ್ಸ್‌ಫರ್ಡ್ ಅಕಡೆಮಿಕ್ ನಡೆಸಿದ್ದು, ಅದರಲ್ಲಿ ಭಾರತದ ಜನರಿಗೆ ಕೋವಿಡ್ ಕುರಿತು ಸಮರ್ಪಕವಾದ ಮಾಹಿತಿ ಒದಗಿಸಿದ್ದು ಕೇವಲ ಶೇ. 18.8 ಲೇಖನಗಳು ಮಾತ್ರ ಎಂದು ಕಂಡುಕೊಳ್ಳಲಾಗಿದೆ. ಸುಮಾರು ಶೇ. 40 ಲೇಖನಗಳು ಚಿಕಿತ್ಸೆಯ ಬಗ್ಗೆ ತಪ್ಪು ಮಾಹಿತಿಯನ್ನು ಹರಡುವಂತಹವಾಗಿದ್ದವು ಎಂಬುದನ್ನೂ ಅಧ್ಯಯನ ಕಂಡುಕೊಂಡಿದೆ. ಈ ಅಧ್ಯಯನವು ಭಾರತದಲ್ಲಿ ಮಾಧ್ಯಮಗಳು ಜನರಿಗೆ ಸೂಕ್ತ ಮಾರ್ಗದರ್ಶನ ನೀಡಬಲ್ಲ ಎಲ್ಲ ಕಾರ್ಯಸಾಧ್ಯ ಮತ್ತು ಪ್ರಸ್ತುತವೆನ್ನಿಸುವ ಮಾಹಿತಿಗಳನ್ನು ನೀಡುವತ್ತ ಗಮನಹರಿಸಬೇಕು. ಜೊತೆಗೆ ಸುಳ್ಳು ಮಾಹಿತಿಗಳನ್ನು ಹರಡುವ ಬದಲು, ರೋಗ ಪ್ರತಿಬಂಧ ಮತ್ತು ಚಿಕಿತ್ಸೆಯ ಕುರಿತಾದ ಸಾಕ್ಷ್ಯಾಧಾರ ಸಹಿತ ಮಾಹಿತಿಗಳಿಗೆ ಭಾರತೀಯ ಮಾಧ್ಯಮಗಳು ಆದ್ಯತೆ ನೀಡಬೇಕು ಎಂದು ಹೇಳಿದೆ.(ವಿವರಗಳಿಗೆ ನೋಡಿ:https://academic.oup.com/heapro/advance-article/doi/10.1093/heapro/daab116/6327060)

                                                      * * *

ಬ್ರೂಕಿಂಗ್ಸ್ ಇನ್‌ಸ್ಟಿಟ್ಯೂಟ್‌ನ ಮುದಿತ್ ಕಪೂರ್ ಮತ್ತು ಶಮಿಕಾ ರವಿ ಅವರು ತಯಾರಿಸುವ ಒಂದು ವರದಿಯು, ಕೋವಿಡ್ ಕುರಿತು ವರದಿಗಾರಿಕೆಯಲ್ಲಿ ಭಾರತ ತೋರಿಸಿದ ಸಡಿಲು ಹೇಗೆ ಕೋವಿಡ್‌ಗೆ ಭಾರತ ತೋರಿಸಿದ ಪ್ರತಿಕ್ರಿಯೆ ವಿಳಂಬವಾಗಲು ತನ್ನ ಕೊಡುಗೆ ನೀಡಿತು ಎಂಬುದನ್ನು ವಿವರಿಸುತ್ತದೆ.

ಸಾಂಕ್ರಾಮಿಕಗಳ ಕಾಲದಲ್ಲಿ ಮಾಧ್ಯಮಗಳ ಮೂಲಕ ಚಿಕಿತ್ಸೇತರ ಹಸ್ತಕ್ಷೇಪಗಳು (Pharama interventions-NPI) ನಡೆಯುವುದು ಮತ್ತು ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ಅಗತ್ಯವಿತ್ತು. ಈ ಆರೋಗ್ಯ ಶಿಕ್ಷಣ ಮಾಧ್ಯಮಗಳ ಮೂಲಕ ಸಮರ್ಪಕವಾಗಿ ಆಗಬೇಕಿತ್ತು ಎಂದು ಈ ವರದಿ ಅಭಿಪ್ರಾಯಪಡುತ್ತದೆ.

20 ಮಾಧ್ಯಮ ಸಂಸ್ಥೆಗಳು ಮಾರ್ಚ್ 01, 2020ರಿಂದ ಎಪ್ರಿಲ್ 30,2021ರ ನಡುವೆ ಮಾಡಿದ್ದ 12.53ಲಕ್ಷ ಸುದ್ದಿ ಸಂಬಂಧಿ ಟ್ವೀಟ್‌ಗಳನ್ನು ಆಧರಿಸಿ ನಡೆಸಲಾಗಿದ್ದ ಈ ಅಧ್ಯಯನದಲ್ಲಿ, ಕೋವಿಡ್ ಕಾಲದಲ್ಲಿ ಯಾವರೀತಿಯ ಸುದ್ದಿಗಳು ಯಾವ ಹಂತದಲ್ಲಿ ಆದ್ಯತೆ ಪಡೆದಿದ್ದವು ಎಂಬುದನ್ನು ವಿಶ್ಲೇಷಿಸಲಾಗಿದೆ.

2020ರ ಎಪ್ರಿಲ್‌ನಿಂದ ಜೂನ್ ನಡುವೆ ಕೋವಿಡ್ ಮತ್ತು ಲಾಕ್‌ಡೌನ್ ಸಂಬಂಧಿ ಸುದ್ದಿಗಳು ಆದ್ಯತೆ ಪಡೆದಿದ್ದವು. ಆದರೆ, ಆ ಬಳಿಕ ಜೂನ್-ಜುಲೈ ಹೊತ್ತಿಗೆ ಚೀನಾ, ಗಡಿ ತಗಾದೆ, ವಾಣಿಜ್ಯ ವಿಚಾರಗಳು ಮುಂಚೂಣಿಗೆ ಬಂದವು. ಅಕ್ಟೋಬರ್‌ನಿಂದ ಡಿಸೆಂಬರ್ ನಡುವೆ ಮತ್ತು 2021ರ ಫೆಬ್ರವರಿಯಿಂದ ಎಪ್ರಿಲ್ ನಡುವೆ ರಾಜ್ಯಗಳ ಚುನಾವಣೆಗಳು ವಿಜೃಂಭಿಸಿದವು. 2020ರ ಅಕ್ಟೋಬರ್‌ನಿಂದ 2021 ಫೆಬ್ರವರಿ ನಡುವೆ ರೈತರ ಚಳವಳಿ ಆದ್ಯತೆ ಪಡೆಯಿತು. ಎರಡನೇ ಅಲೆಯ ಆರಂಭಕ್ಕೆ ಮುನ್ನ ಜನರಲ್ಲಿ ಆ ಬಗ್ಗೆ ಅರಿವು ಮೂಡಿಸುವ ಬದಲು ಐಪಿಎಲ್ ಕ್ರಿಕೆಟ್, ಚುನಾವಣೆಗಳು ಮತ್ತು ರೈತ ಚಳವಳಿಗಳದೇ ಸುದ್ದಿ ಭರಾಟೆ ಇತ್ತು ಎಂದು ಅಧ್ಯಯನ ಬೊಟ್ಟು ಮಾಡುತ್ತದೆ.

ವಿವರಗಳಿಗೆ ನೋಡಿ:https://www.brookings.edu/research/making-waves-in-india-media-and-the-covid-19-pandemic

ಪ್ರಭುತ್ವ ಏನು ಮಾಡಿತು?

ಮಾಧ್ಯಮಗಳ ಜೊತೆ ಪ್ರಭುತ್ವದ ವ್ಯವಹಾರ ಹೇಗಿತ್ತು ಎಂಬುದು ಕೂಡ ಇಲ್ಲಿ ಗಮನಾರ್ಹ. ನೇರವಾಗಿ ಎಂದೂ ಮುಕ್ತ ಪತ್ರಿಕಾಗೋಷ್ಠಿಗಳನ್ನು ಎದುರಿಸಿಲ್ಲ ಎಂಬ ದೂರು ಭಾರತದ ಪ್ರಧಾನಮಂತ್ರಿಯವರ ಮೇಲೆ 2014ರಿಂದಲೂ ಇದೆ. ಕೋವಿಡ್ ಲಾಕ್‌ಡೌನ್ ಪ್ರಕಟಿಸುವ ಕೆಲವೇ ಗಂಟೆಗಳ ಮುನ್ನ ಪ್ರಧಾನಿಯವರು ದೇಶದ ಆಯ್ದ 20ಮಂದಿ ಪತ್ರಿಕಾ ಸಂಪಾದಕರು-ಮಾಲಕರ ಜೊತೆ ವೀಡಿಯೊ ಕಾನ್ಫರೆನ್ಸ್ ನಡೆಸಿ, ಸಂಕಟದ ಸಮಯದಲ್ಲಿ ‘‘ಪಾಸಿಟಿವ್ ಸುದ್ದಿಗಳನ್ನೇ ಪ್ರಕಟಿಸಬೇಕೆಂಬ’’ ಅಜೆಂಡಾವನ್ನು ಮುಂದಿರಿಸುತ್ತಾರೆ. ಆ ಅಜೆಂಡಾವನ್ನು ಮಾಧ್ಯಮಗಳು ಚಾಚೂ ತಪ್ಪದೆ ಪಾಲಿಸಿರುವುದು ಈಗ ಹಿಂದಿರುಗಿ ನೋಡಿದಾಗ ಸ್ಪಷ್ಟವಾಗಿ ಕಾಣಿಸುತ್ತಿದೆ. ಜೊತೆಗೆ, ಆರಂಭದಲ್ಲಿ ತಮ್ಮ ಹಿಡಿತದಲ್ಲಿಲ್ಲದ ಮಾಧ್ಯಮಗಳ ವಿರುದ್ಧ ಪ್ರಭುತ್ವ ಬಹಳ ಆಕ್ರಾಮಕವಾದ ನಿಲುವಿನಲ್ಲೇ ಇತ್ತು. 2020ರ ಎಪ್ರಿಲ್ 01ರಂದು The wire ಮೇಲೆ ಉತ್ತರ ಪ್ರದೇಶ ಸರಕಾರದ FIR, ಆ ಬಳಿಕ scroll.com ಕಾರ್ಯನಿರ್ವಾಹಕ ಸಂಪಾದಕಿ ಸುಪ್ರಿಯಾ ಶರ್ಮ ಮೇಲೆ FIR , ತನ್ನ ಯುಟ್ಯೂಬ್ ಚಾನೆಲ್‌ನಲ್ಲಿ ಕೋವಿಡ್ ಲಾಕ್‌ಡೌನ್‌ನ್ನು ಪ್ರಶ್ನಿಸಿದ್ದಕ್ಕಾಗಿ ವಿನೋದ್ ದುವಾ ಮೇಲೆ FIR,ಅಶ್ವಿನಿ ಸೈನಿ ಎಂಬ ದೈವಿಕ್ ಜಾಗರಣ್ ವರದಿಗಾರ್ತಿಯ ಮೇಲೆ FIR ... ಹೀಗೆ ಒಟ್ಟು ಜೂನ್ 2020ರ ಹೊತ್ತಿಗೆ ದೇಶದಲ್ಲಿ ಮಾರ್ಚ್ 25, 2020 - ಮೇ 31, 2020 ನಡುವೆ ಅಭಿವ್ಯಕ್ತ ಸ್ವಾತಂತ್ರ್ಯವನ್ನು ವ್ಯಕ್ತಪಡಿಸಿದ್ದಕ್ಕಾಗಿ 55 ಮಂದಿ ಪತ್ರಕರ್ತರು ಬಂಧನ - FIR, ಸಮನ್ಸ್, ಶೋಕಾಸ್ ನೊಟೀಸ್‌ಗಳಿಗೆ ತುತ್ತಾಗಬೇಕಾಯಿತು ಎಂದು ದಿಲ್ಲಿಯ ರೈಟ್ಸ್ ಆ್ಯಂಡ್ ರಿಸ್ಕ್ ಅನಾಲಿಸಿಸ್ ಗ್ರೂಪ್ (RRAG) ತನ್ನದೊಂದು ವರದಿಯಲ್ಲಿ ಹೇಳಿದೆ. ಈ ಪಟ್ಟಿಯಲ್ಲಿ ಉತ್ತರ ಪ್ರದೇಶ (11)ದಲ್ಲಿ ಹೆಚ್ಚಿನ ಪ್ರಕರಣಗಳು ನಡೆದಿದ್ದರೆ ಆ ಬಳಿಕ ಜಮ್ಮು ಮತ್ತು ಕಾಶ್ಮೀರ (6), ಹಿಮಾಚಲ ಪ್ರದೇಶ (5), ತಮಿಳುನಾಡು, ಪ.ಬಂಗಾಳ, ಒಡಿಶಾ ಮತ್ತು ಮಹಾರಾಷ್ಟ್ರ (ತಲಾ 4), ಪಂಜಾಬ್, ದಿಲ್ಲಿ, ಮಧ್ಯಪ್ರದೇಶ, ಕೇರಳ (ತಲಾ 2), ಅಸ್ಸಾಂ, ಅರುಣಾಚಲ, ಬಿಹಾರ, ಗುಜರಾತ್, ಚತ್ತೀಸ್ ಗಢ, ನಾಗಾಲ್ಯಾಂಡ್, ಕರ್ನಾಟಕ, ಅಂಡಮಾನ್-ನಿಕೋಬಾರ್, ತೆಲಂಗಾಣ (ತಲಾ1) ಪ್ರಕರಣಗಳಿವೆ.

ಇದೆಲ್ಲಕ್ಕಿಂತ ಮಹತ್ವದ್ದೆಂದರೆ 31 ಮಾರ್ಚ್ 2020ರಂದು ಕೇಂದ್ರ ಗೃಹಕಾರ್ಯದರ್ಶಿಗಳು ಸುಪ್ರೀಂಕೋರ್ಟಿಗೆ ಸಲ್ಲಿಸಿದ ವಸ್ತುಸ್ಥಿತಿ ವರದಿಯಲ್ಲಿ ಈ ಅಭೂತಪೂರ್ವ ಸನ್ನಿವೇಶದ ಹಿನ್ನೆಲೆಯಲ್ಲಿ ಇಲೆಕ್ಟ್ರಾನಿಕ್, ಪ್ರಿಂಟ್ ಅಥವಾ ಸೋಷಿಯಲ್ ಮೀಡಿಯಾದಲ್ಲಿ, ಅದರಲ್ಲೂ ನಿರ್ದಿಷ್ಟವಾಗಿ ವೆಬ್ ಪೋರ್ಟಲ್‌ಗಳಲ್ಲಿ ಉದ್ದೇಶಪೂರ್ವಕ ಅಥವಾ ಉದ್ದೇಶ ರಹಿತ ಸುಳ್ಳು ಅಥವಾ ನಿಖರವಲ್ಲದ ಸುದ್ದಿಗಳು ಪ್ರಕಟವಾದರೆ ಅದು ಜನಸಮುದಾಯದಲ್ಲಿ ಗಾಬರಿ ಉಂಟುಮಾಡಬಹುದು. ಸಾಂಕ್ರಾಮಿಕದ ಸ್ವರೂಪವನ್ನು ಗಮನದಲ್ಲಿರಿಸಿಕೊಂಡು ನೋಡಿದಾಗ ಅಂತಹ ವರದಿಗಳನ್ನಾಧರಿಸಿ ಜನರಲ್ಲಿ ಗಾಬರಿಯ ಪ್ರತಿಕ್ರಿಯೆಗಳು ಕಾಣಿಸಿಕೊಳ್ಳತೊಡಗಿದರೆ, ಅದು ದೇಶಕ್ಕೆ ಅಪಾಯಕಾರಿಯಾಗಿ ಪರಿಣಮಿಸಬಹುದು. ಹಾಗಾಗಿ ನ್ಯಾಯದ ಹಿತದೃಷ್ಟಿಯಿಂದ ಯಾವುದೇ ಇಲೆಕ್ಟ್ರಾನಿಕ್/ಪ್ರಿಂಟ್/ವೆಬ್ ಪೋರ್ಟಲ್ ಅಥವಾ ಸೋಷಿಯಲ್ ಮೀಡಿಯಾಗಳು ಕೇಂದ್ರ ಸರಕಾರ ಏರ್ಪಡಿಸಲಿರುವ ಒಂದು ಪ್ರತ್ಯೇಕ ವ್ಯವಸ್ಥೆಯಿಂದ ಮೊದಲಿಗೆ ವಾಸ್ತವಾಂಶಗಳನ್ನು ಖಚಿತಪಡಿಸಿಕೊಳ್ಳದೆ ಯಾವುದೇ ಸಂಗತಿಯನ್ನು ಪ್ರಕಟಿಸದಂತೆ ಮತ್ತು ಪ್ರಸಾರ ಮಾಡದಂತೆ ಆದೇಶ ನೀಡಬೇಕೆಂದು ಕೋರಿದ್ದರು. ಆದರೆ, ನ್ಯಾಯಾಲಯ ಇದನ್ನು ಸ್ಪಷ್ಟಮಾತುಗಳಲ್ಲಿ ತಿರಸ್ಕರಿಸಿ, ನಾವು ಜಗನ್ಮಾರಿಯ ಬಗ್ಗೆ ಮುಕ್ತ ಚರ್ಚೆಯಲ್ಲಿ ಹಸ್ತಕ್ಷೇಪ ಮಾಡಬಯಸುವುದಿಲ್ಲ. ಆದರೆ ಮಾಧ್ಯಮಗಳು ಜವಾಬ್ದಾರಿಯುತವಾಗಿ ವರ್ತಿಸಬೇಕು ಮತ್ತು ಜನರಲ್ಲಿ ಗಾಬರಿ ಹುಟ್ಟಿಸುವ, ಖಚಿತವಲ್ಲದ ಸುದ್ದಿಗಳನ್ನು ಪ್ರಕಟಿಸಬಾರದು ಮತ್ತು ಸರಕಾರ ಪ್ರತಿದಿನ ಮಾಧ್ಯಮಗಳಿಗೆ ದೈನಂದಿನ ಬುಲೆಟಿನ್ ಒಂದರ ಮೂಲಕ ವಾಸ್ತವಾಂಶಗಳನ್ನು ತಿಳಿಸುವ ಕೆಲಸವನ್ನು 24 ಗಂಟೆಗಳಲ್ಲಿ ಆರಂಭಿಸಬೇಕು ಎಂದು ಸೂಚಿಸಿತು.

(ನೋಡಿ:Write petition (S) (Civil) No5 468/2020).

ಮಾಧ್ಯಮ ಹೇಗೆ ವರ್ತಿಸಿತು

  ಆರೋಗ್ಯ ಸಂಬಂಧಿ ಸಂಕಟವೊಂದು ಎದುರಾದಾಗ ಸಹನೆ ಮತ್ತು ವೈಜ್ಞಾನಿಕ ಮನೋಭಾವ ತೋರಿಸಬೇಕಾಗಿದ್ದ ಮಾಧ್ಯಮಗಳು ನೇರಾನೇರ ಭಾವನೆಗಳನ್ನು ಕೆರಳಿಸುವ ಮತ್ತು ರಾಜಕೀಯ ಒಳಲೇಪಗಳನ್ನು ಹೊಂದಿರುವ ಸುದ್ದಿಗಳನ್ನು ಬಿತ್ತರಿಸ ತೊಡಗಿದವು. ಪ್ರಭುತ್ವ ತನ್ನ ವೈಫಲ್ಯಗಳನ್ನು ಮುಚ್ಚಿ ಹಾಕಲು ಬಯಸಿದಾಗಲೆಲ್ಲ ಬಗ್ಗಿ ಎಂದರೆ ತೆವಳಿ ತೋರಿಸಿದವು. ಪ್ರತೀ ಬಾರಿ ಒಂದು ವೈಫಲ್ಯದ ಗುಡ್ಡಕ್ಕೆ ಇನ್ನೊಂದು ಯಾವುದೋ ಹೊಸ ಗುಡ್ಡವನ್ನು ಅಡ್ಡಿ ಮಾಡುತ್ತಾ ಬಂದು ಎರಡು ವರ್ಷಗಳಲ್ಲಿ ಒಟ್ಟು ಪರಿಸ್ಥಿತಿ ಅಯೋಮಯ ಆಗಲು ಕಾರಣವಾದವು. ಎರಡು ವರ್ಷಗಳ ಬಳಿಕ ಇಂದೂ ಕೂಡ ಕೋವಿಡ್ ಬಗ್ಗೆ ಸಾರ್ವಜನಿಕ ಸ್ಟಿಗ್ಮಾ ಉಳಿದಿರುವುದಕ್ಕೆ ಮುಖ್ಯ ಕಾರಣ ಮಾಧ್ಯಮಗಳು. ಈ ಹಿಂದೆ ಪ್ಲೇಗ್, ಏಡ್ಸ್‌ನಂತಹ ಸಾಂಕ್ರಾಮಿಕಗಳು ಬಂದಾಗ ಮಾಧ್ಯಮಗಳ ಜವಾಬ್ದಾರಿಯುತ ವರ್ತನೆಯ ಜೊತೆ ಇಂದಿನದನ್ನು ಹೋಲಿಸಿ ನೋಡಿದರೆ ವ್ಯತ್ಯಾಸ ಗಮನ ಸೆಳೆಯುವಷ್ಟಿರುವುದು ಕಾಣಿಸುತ್ತದೆ. ಪ್ರಭುತ್ವ ಲಾಕ್‌ಡೌನ್ ಪ್ರಕಟಿಸಿದಾಗ ಅದನ್ನು ವಿವರಿಸುವ ಅಥವಾ ಅದರಲ್ಲಿರುವ ಕೊರತೆಗಳ ಕುರಿತು ಕಾರ್ಯಾಂಗದ ಗಮನ ಸೆಳೆಯುವ ಬದಲು ತಾಳ-ಜಾಗಟೆ ಬಡಿಯುವ, ಶಂಖ ಊದುವ ಚಟುವಟಿಕೆಗಳು ಆದ್ಯತೆಯಾದವು. ವಲಸೆ ಕಾರ್ಮಿಕರು ರಸ್ತೆಗಿಳಿದು ನಡೆಯತೊಡಗಿದಾಗ ರಸ್ತೆಗಳಲ್ಲಿ ಅಮಾಯಕರಿಗೆ ಪೊಲೀಸರ ಲಾಠಿ ಏಟುಗಳನ್ನು ವೈಭವೀಕರಿಸಲಾಯಿತು. ಜನ ಸಂಚಾರದ ಅಪಾಯಗಳ ಕುರಿತು ಅರಿವು ಮೂಡಿಸುವ ಬದಲು ಜಿಲ್ಲೆಗಳ ನಡುವೆ, ರಾಜ್ಯಗಳ ನಡುವೆ, ಊರುಗಳ ನಡುವೆ ಬೇಲಿ ಹಾಕಿಸಲು ಹೊರಟವು, ಆಸ್ಪತ್ರೆಗಳಲ್ಲಿ ಅವ್ಯವಸ್ಥೆಗಳ ಸೀಮಿತ ಸೌಲಭ್ಯಗಳ ಅಪಾಯದ ಬಗ್ಗೆ ಗಮನ ಸೆಳೆಯುವ ಬದಲು ಜನರಲ್ಲಿ ಅಕಾರಣ ಭೀತಿ ಹುಟ್ಟಿಸಿದವು - ಕೋವಿಡ್ ಮರಣ ಮೃದಂಗ, ತಾಂಡವ ಎಂದೆಲ್ಲ ವೈಭವೀಕರಿಸಿದವು.

ಸರಕಾರ ತನ್ನ ಸಾಧನೆಗಳ ಪ್ರಚಾರದ ಅನುಕೂಲಕ್ಕೆ ತಕ್ಕಂತೆ ಕೋವಿಡ್ ಸಾಂಕ್ರಾಮಿಕದ ಹರಡುವಿಕೆಯ ಮಾನದಂಡಗಳ ಗೋಲ್ ಪೋಸ್ಟ್ ಬದಲಾಯಿಸಿದಂತೆಲ್ಲ ಅದನ್ನು ಒಂದು ಮಾತೂ ಪ್ರಶ್ನಿಸದೆ, ಪಾಸಿಟಿವ್ ಸುದ್ದಿ ಪ್ರಸಾರದ ಹೆಸರಲ್ಲಿ ಸರಕಾರದ ಹಾದಿಯನ್ನು ಅನುಸರಿಸಿದವು. ಉದಾಹರಣೆಗೆ ಮೊದಲಿಗೆ ಸೋಂಕಿತರ ಸಂಖ್ಯೆ ದೈನಂದಿನ ಲೆಕ್ಕಾಚಾರ ಇದ್ದದ್ದು ಬಳಿಕ ಕೇವಲ ಸಕ್ರಿಯ ಸೋಂಕಿತರ ಸಂಖ್ಯೆ ಮತ್ತು ಗುಣಮುಖಗೊಂಡವರ ಸಂಖ್ಯೆ ಎಂದು ಬದಲಾಯಿತು. ಸಾವಿನ ಸಂಖ್ಯೆಯ ಬದಲು ಕೇಸ್ ಫಟಾಲಿಟಿ ರೇಟ್ CFR_  ಮುಂದೆ ಬಂದಿತು. ಸೋಂಕು ತಪಾಸಣೆಯ ಪ್ರಮಾಣವನ್ನು ಸೂಚಿಸುವ ಬದಲು ಪಾಸಿಟವಿಟಿ ದರ ಚಾಲ್ತಿಗೆ ಬಂತು... ಹೀಗೆ ಯಾವ ಅಂಕಿ ಸಂಖ್ಯೆಗಳು ಸರಕಾರದ ವೈಫಲ್ಯಗಳಿಗೆ ‘ಮರ್ಯಾದಾ ವಸ್ತ್ರ’ಗಳಾಗಬಲ್ಲವೊ ಅವುಗಳನ್ನು ಮಾತ್ರ ಮುಂದಿಡುತ್ತಾ ಬರಲಾಯಿತು.

 ಹೀಗೆ ಎಲ್ಲ ಹಂತಗಳಲ್ಲಿ ಪ್ರಭುತ್ವದ ರಕ್ಷಣೆಗೆ ನಿಂತ ಮಾಧ್ಯಮಗಳು ತಾವು ಸ್ವತಃ ಬೆತ್ತಲಾದದ್ದು ಎರಡು ಬಾರಿ. ಮೊದಲು ಲಕ್ಷಾಂತರ ಮಂದಿವಲಸೆ ಕಾರ್ಮಿಕರು ಲಾಕ್‌ಡೌನ್ ಭಯದಿಂದ ಬೀದಿಗಿಳಿದು ನಡೆಯತೊಡಗಿದ್ದರಿಂದ ಸಂಭವಿಸಿದ ಮಾನವೀಯ ದುರಂತದ ಕಾಲದಲ್ಲಿ ಮತ್ತು ಇನ್ನೊಮ್ಮೆ ಎರಡನೇ ಅಲೆಯ ಕಾಲದಲ್ಲಿ ಸರಕಾರ ತಾನು ಕೋವಿಡ್ ವಿರುದ್ಧ ಜಯ ಸಾಧಿಸಿದ್ದೇನೆಂದು ಪ್ರಕಟಿಸಿದ ಬೆನ್ನಲ್ಲೇ ದೇಶದಾದ್ಯಂತ ಆಮ್ಲಜನಕಕ್ಕಾಗಿ ಹಾಹಾಕಾರ ಎದ್ದು ಸ್ಮಶಾನಗಳಲ್ಲಿ ಶವಗಳ ಸರತಿಸಾಲು ಎದ್ದಾಗ . ಈ ಸುದ್ದಿಗಳನ್ನು ಭಾರತೀಯ ಮಾಧ್ಯಮಗಳು ಅಂಡರ್ ಪ್ಲೇ ಮಾಡತೊಡಗಿದ್ದವು. ಆದರೆ, ಭಾರತದಿಂದ ಹೊರಗಿನ ಮಾಧ್ಯಮಗಳಿಗೆ ಇದು ಸುದ್ದಿಯಾಗತೊಡಗಿದಾಗ, ಭಾರತೀಯ ಮಾಧ್ಯಮಗಳು ಎಚ್ಚರಗೊಳ್ಳುವುದು ಅನಿವಾರ್ಯವಾಯಿತು.(ಮೊದಲ ಅಲೆಯ ವೇಳೆಗೆ ಅಮೆರಿಕದಲ್ಲಿ, ಬ್ರೆಝಿಲ್‌ನಲ್ಲಿ, ಚೀನಾದಲ್ಲಿ, ಇಂಗ್ಲೆಂಡ್‌ನಲ್ಲಿ ಸಾಲು ಸಾಲು ಸಾವುಗಳು ವರದಿಯಾಗತೊಡಗಿದಾಗ ತಾವು ಮಾಡಿದ್ದ ರಂಗು ರಂಗಿನ ವರದಿಗಳನ್ನು ಈ ಮಾಧ್ಯಮಗಳು ಮರೆತಿದ್ದವು). ಸರಕಾರದ ನಿಲುವುಗಳನ್ನು ವಿಮರ್ಶಿಸುವ ಹತ್ತು ಜನ ಸೇರಿದರೆ ಸೋಷಲ್ ಡಿಸ್ಟೆನ್ಸಿಂಗ್ ಇಲ್ಲ ಎಂದು ಬೊಬ್ಬಿರಿಯುತ್ತಿದ್ದ ಮಾಧ್ಯಮಗಳಿಗೆ ಚುನಾವಣಾ ಪ್ರಚಾರ ಸಭೆಗಳಲ್ಲಿ ಸಾವಿರಾರು ಜನ ಸೇರಿದ್ದನ್ನು, ಕುಂಭಮೇಳಕ್ಕೆಂದು ಲಕ್ಷಾಂತರ ಜನ ಸೇರಿದ್ದನ್ನು ಅಥವಾ ಆ ಬಳಿಕ ಆಮ್ಲಜನಕ ಕೊರತೆಯಿಂದ ಜನ ಸಾವಿಗೀಡಾದ್ದನ್ನು ವಸ್ತುನಿಷ್ಠವಾಗಿ ವರದಿಮಾಡಬೇಕೆಂದು ಅನ್ನಿಸಲೇ ಇಲ್ಲ. ಪ್ರಭುತ್ವದ ಪರ ಇರುವ ‘‘ಪಾಸಿಟಿವ್ ಸುದ್ದಿಗಳನ್ನು ಮಾತ್ರ ಪ್ರಕಟಿಸುವ’’ ಅಜೆಂಡಾದ ಭಾಗವಾಗಿ ಭಾರತೀಯ ಮಾಧ್ಯಮಗಳು ವಸ್ತುನಿಷ್ಠವಾದ ವರದಿಗಾರಿಕೆಯನ್ನು ಕೋವಿಡ್ ಕಾಲದಲ್ಲಿ ಮರೆತದ್ದು ಭಾರತೀಯ ಮಾಧ್ಯಮ ಇತಿಹಾಸದಲ್ಲಿ ಒಂದು ಶಾಶ್ವತ ಕಪ್ಪುಚುಕ್ಕೆಯಾಗಿ ಉಳಿಯಲಿದೆ.

 ಇನ್ನು ಸಾಮಾಜಿಕ ಮಾಧ್ಯಮಗಳು ಒಂದೆಡೆ ಆ ಮಾಧ್ಯಮಗಳ ಮಾಲಕರ ಹಿತಾಸಕ್ತಿಗಳಿಗೆ ಅನುಗುಣವಾಗಿ ವರ್ತಿಸತೊಡಗಿದರೆ, ಅದರ ಬಳಕೆದಾರರು ಆ ಅಪ್ಲಿಕೇಷನ್ ಅಲ್ಗಾರಿದಂಗಳು ರೂಪಿಸಿದ ಇಕೋಚೇಂಬರ್‌ಗಳಲ್ಲಿ ಮುಳುಗಿಹೋದರು. ಇನ್ನೊಂದೆಡೆ, ವಾಟ್ಸ್‌ಆ್ಯಪ್‌ನಂತಹ ವ್ಯಕ್ತಿ-ವ್ಯಕ್ತಿ ಸಂವಹನ ವ್ಯವಸ್ಥೆಯ ಮೂಲಕ ಸುಳ್ಳು ಸುದ್ದಿಗಳನ್ನು ವ್ಯವಸ್ಥಿತವಾಗಿ, ಧಂಡಿಯಾಗಿ ಹರಿಯಗೊಡಲಾಯಿತು. ಈ ರೀತಿಯ ಕ್ರಿಮಿನಲ್ ಸುದ್ದಿಗಳ ಜಾಡನ್ನು ಅನುಸರಿಸಿ ಅದರ ಸೃಷ್ಟಿಕರ್ತರು ಯಾರೆಂಬುದನ್ನು ಪತ್ತೆ ಮಾಡುವುದು ಸಾಧ್ಯವಿದ್ದರೂ ಅದನ್ನು ಪ್ರಭುತ್ವ ಮಾಡಲಿಲ್ಲ. ರಾಜಕೀಯ ಪಕ್ಷಗಳ ಐಟಿ ಸೆಲ್‌ಗಳು, ಫೇಕ್ ಸುದ್ದಿ ಫ್ಯಾಕ್ಟರಿಗಳು ತಮ್ಮ ಮೂಗಿನ ನೇರಕ್ಕೆ ಸುಳ್ಳು ಸುದ್ದಿಗಳನ್ನು, ಕುತಂತ್ರದ ವ್ಯೆಹಗಳನ್ನು, ಹಾದಿ ತಪ್ಪಿಸುವ ತಂತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಎಗ್ಗಿಲ್ಲದೆ ಹಂಚಿದರು. ಕೋವಿಡ್ ಕುರಿತು ಇಂದು ಏನಾದರೂ ಅಪನಂಬಿಕೆಗಳು ಉಳಿದಿದ್ದರೆ, ಅದಕ್ಕೆಲ್ಲ ಮೂಲ ಸ್ರೋತಗಳೇ ಈ ಕ್ರಿಮಿನಲ್ ವ್ಯವಸ್ಥೆಗಳು.

ಮೀಡಿಯಾದ್ದೇ ಸಮಸ್ಯೆಗಳು

ಕೋವಿಡ್ ಸಂಕಟವನ್ನು ಭೂತಗನ್ನಡಿ ಇರಿಸಿ ತೋರಿಸಿದ ಮಾಧ್ಯಮಗಳು ಸ್ವತಃ ತಾವು ಸುಖವಾಗಿರಲಿಲ್ಲ. ಮಾಧ್ಯಮಗಳ ಮಾಲಕರು ಈ ಸುಸಂದರ್ಭ ವನ್ನು ತಮಗೆ ಬೇಡದವರನ್ನು ಕೆಲಸದಿಂದ ಹೊರಹಾಕಲು ಮತ್ತು ತಮ್ಮ ಅಜೆಂಡಾಗಳಿಗೆ ತಗ್ಗಿ ಬಗ್ಗಿ ಇರುವವರನ್ನು ಮಾತ್ರ ಸುದ್ದಿಕೋಣೆಗಳಲ್ಲಿ ಉಳಿಸಿ ಕೊಳ್ಳಲು ಬಳಸಿಕೊಂಡು ಯಶಸ್ವಿಯಾದರು. ಕೋವಿಡ್ ಅವಧಿಯಲ್ಲಿ ಮಾಧ್ಯಮಗಳಲ್ಲಿ ಅತಿ ಹೆಚ್ಚಿನ ಪ್ರತಿಶತ ಮಿಡ್-ಲೈಫ್ ಪತ್ರಕರ್ತರನ್ನು ನಡುನೀರಿನಲ್ಲಿ ಕೈಬಿಡಲಾಗಿದೆ. ಆದರೆ ಇದರ ಅಂಕಿಅಂಶಗಳು ಖಚಿತವಾಗಿ ಲಭ್ಯವಿಲ್ಲ.

ಈ ಅವಧಿಯಲ್ಲಿ ನಡೆದ ಒಂದು ಕುತೂಹಲಕರ ಬೆಳವಣಿಗೆ ಎಂದರೆ ಮಾಧ್ಯಮಗಳ ನಡುವಿನ ಕಚ್ಚಾಟ. ಒಂದೆಡೆ, ಸಣ್ಣ ಪುಟ್ಟ ಪತ್ರಿಕೆಗಳು ಕೋವಿಡ್ ಲಾಕ್‌ಡೌನ್ ಕಾಲದಲ್ಲಿ ಸಂಪೂರ್ಣ ಮುಚ್ಚಿಹೋದರೆ, ದೊಡ್ಡ ಪತ್ರಿಕೆಗಳೂ ಜಾಹೀರಾತು-ಆರ್ಥಿಕ-ಮಾನವ ಸಂಪನ್ಮೂಲ ಕೊರತೆಗಳ ಕಾರಣದಿಂದಾಗಿ ತಮ್ಮ ಗಾತ್ರ ತಗ್ಗಿಸಿಕೊಳ್ಳಬೇಕಾಯಿತು; ಬಹು ಆವೃತ್ತಿಯ ಪತ್ರಿಕೆಗಳ ಹಲವು ಆವೃತ್ತಿಗಳು ಬಾಗಿಲು ಹಾಕಿಕೊಂಡವು. ಈ ನಡುವೆ ಮುದ್ರಿತ ಪತ್ರಿಕೆಗಳು ಮನೆಮನೆಗೆ ಸರಬರಾಜು ಆಗುವ ವೇಳೆಯಲ್ಲಿ ಕೋವಿಡ್ ಹರಡಬಹುದೆಂಬ ಸುಳ್ಳುಸುದ್ದಿಯೊಂದು ಹರಡಿ, ಅದು ಪ್ರಿಂಟ್ ಮಾಧ್ಯಮಕ್ಕೆ ಘಾತಕ ಹೊಡೆತ ನೀಡಿತು. ಪ್ರಿಂಟ್ ಮಾಧ್ಯಮ 2020ರಲ್ಲಿ ಅನುಭವಿಸಿದ ಒಟ್ಟು ನಷ್ಟ (16,000) ಕೋಟಿ ರೂ. ಮೀರಬಹುದೆಂದು ಇಂಡಿಯನ್ ನ್ಯೂಸ್ ಪೇೀಪರ್ ಸೊಸೈಟಿ ಹೇಳಿದ್ದು, ಸಹಾಯ ಕೋರಿ ಸರಕಾರದ ಎದುರು ಕೈ ಚಾಚಿದೆ. ಅಣಬೆಗಳಂತೆ ಮೂಡಿ ಮುಳುಗುವ ವೆಬ್ ಪತ್ರಿಕೆಗಳು ಕೂಡ ಕೋವಿಡ್ ಕಾಲದಲ್ಲಿ ಸಂಕಟ ಅನುಭವಿಸಬೇಕಾಯಿತು. ಆದರೆ, ಬೇರೆ ಮಾಧ್ಯಮ ಗಳಿಗೆ ಹೋಲಿಸಿದರೆ, ಎಲ್ಲ ಸುಳ್ಳುಸುದ್ದಿಗಳ ಹೊರತಾಗಿಯೂ ವಸ್ತುನಿಷ್ಠ ವರದಿಗಳು ಕಡೆಗೂ ಸಿಕ್ಕಿದ್ದು ವೆಬ್ ಪತ್ರಿಕೆಗಳಲ್ಲೇ. ಒಟ್ಟಿನಲ್ಲಿ, ಸಾಂಪ್ರದಾಯಿಕ ಮಾಧ್ಯಮಗಳೆದುರು ಮುಂದಿನ ದಿನಗಳಲ್ಲಿ ಹೊರಹೊಮ್ಮಲಿರುವ ‘‘ಕನ್ವರ್ಜೆಂಟ್’’ ಮಾಧ್ಯಮಕ್ಕೆ ಕೋವಿಡ್ ಹೊಸದಾರಿ ತೆರೆದು ವೇಗ ನೀಡಿದ್ದನ್ನೂ ಮತ್ತು ಸಾಂಪ್ರದಾಯಿಕ ಮಾಧ್ಯಮಗಳು ವಸ್ತುನಿಷ್ಠ ವೃತ್ತಿಪರರನ್ನು ಹೊರಗಟ್ಟಿ, ಬಗ್ಗಿ ಎಂದರೆ ತೆವಳಬಲ್ಲವರನ್ನು ಉಳಿಸಿಕೊಂಡು ‘‘ಕೇವಲ ಪಾಸಿಟಿವ್ ಸುದ್ದಿಗಳನ್ನು ಮಾತ್ರ’’ ಬಿತ್ತರಿಸುವ ಅಜೆಂಡಾಕ್ಕೆ ತಮ್ಮನ್ನು ಸಮರ್ಪಿಸಿಕೊಂಡುಬಿಟ್ಟದ್ದನ್ನೂ ಕೋವಿಡ್ ಕಾಲದ ಮಹತ್ವದ ಬೆಳವಣಿಗೆಗಳಾಗಿ ದಾಖಲಿಸಬಹುದು.

ಹೆಚ್ಚುವರಿ ಓದಿಗಾಗಿ:

https://www.who.int/health-topics/infodemic#tab=tab_1

Writer - ರಾಜಾರಾಂ ತಲ್ಲೂರು

contributor

Editor - ರಾಜಾರಾಂ ತಲ್ಲೂರು

contributor

Similar News