ಪಟೇಲರು ಆರೆಸ್ಸೆಸ್ ನಿಷೇಧಿಸಿದ ಆ ದಿನಗಳು...

Update: 2022-04-23 05:51 GMT

ಈಗ ರಾಷ್ಟ್ರೀಯ ಸ್ವಯಂಸೇವಕ ಸಂಘ ಸೇರಿದಂತೆ ಸಂಘಪರಿವಾರ ಹಾಗೂ ಅದರ ಸಹವರ್ತಿಗಳು ಸರ್ದಾರ್ ಪಟೇಲ್ ಅವರ ಹಿರಿಮೆಯನ್ನು ಕೊಂಡಾಡುವಲ್ಲಿ ವ್ಯತ್ಯಸ್ತರಾಗಿದ್ದಾರೆ. ಈ ‘ಉಕ್ಕಿನ ಮನುಷ್ಯ’ ಕೋಮುವಾದಿ ರಾಜಕೀಯದ ಪ್ರಬಲ ವಿರೋಧಿಯಾಗಿದ್ದರು ಹಾಗೂ ಮಹಾತ್ಮಗಾಂಧೀಜಿಯವರ ಹತ್ಯೆಯ ಬಳಿಕ ತನ್ನನ್ನು ನಿಷೇಧಿಸಿದ್ದರು ಎಂಬುದನ್ನು ಆರೆಸ್ಸೆಸ್ ಮರೆತಿರುವ ಹಾಗೆ ಕಾಣುತ್ತದೆ. ವಾಸ್ತವವಾಗಿ ಆಗ ದೇಶದ ಗೃಹ ಸಚಿವರಾಗಿದ್ದ ಪಟೇಲ್ ಅವರು 1948ರಲ್ಲಿ ಆರೆಸ್ಸೆಸ್ ನಾಯಕರಿಗೆ ಪತ್ರ ಬರೆದು ಆರೆಸ್ಸೆಸ್‌ನ್ನು ನಿಷೇಧಿಸುವ ತನ್ನ ನಿರ್ಧಾರವನ್ನು ವಿವರಿಸಿದ್ದರು.

04...ಫೆಬ್ರವರಿ 1948

ಆ ದಿನದಂದು ಸರ್ದಾರ್ ಪಟೇಲ್ ಅವರು ಆರೆಸ್ಸೆಸ್ ನಿಷೇಧಿಸುವ ಹಾಗೂ ದ್ವೇಷ ಹಾಗೂ ಹಿಂಸಾಚಾರದ ಶಕ್ತಿಗಳನ್ನು ಮೂಲೋತ್ಪಾಟನೆ ಮಾಡುವ ಕುರಿತಂತೆ ಆದೇಶವೊಂದನ್ನು ಜಾರಿಗೊಳಿಸಿದ್ದರು. ಈಗ ರಾಷ್ಟ್ರೀಯ ಸ್ವಯಂಸೇವಕ ಸಂಘ ಸೇರಿದಂತೆ ಸಂಘಪರಿವಾರ ಹಾಗೂ ಅದರ ಸಹವರ್ತಿಗಳು ಸರ್ದಾರ್ ಪಟೇಲ್ ಅವರ ಹಿರಿಮೆಯನ್ನು ಕೊಂಡಾಡುವಲ್ಲಿ ವ್ಯತ್ಯಸ್ತರಾಗಿದ್ದಾರೆ. ಈ ‘ಉಕ್ಕಿನ ಮನುಷ್ಯ’ ಕೋಮುವಾದಿ ರಾಜಕೀಯದ ಪ್ರಬಲ ವಿರೋಧಿಯಾಗಿದ್ದರು ಹಾಗೂ ಮಹಾತ್ಮಾಗಾಂಧೀಜಿಯವರ ಹತ್ಯೆಯ ಬಳಿಕ ತನ್ನನ್ನು ನಿಷೇಧಿಸಿದ್ದರು ಎಂಬುದನ್ನು ಆರೆಸ್ಸೆಸ್ ಮರೆತಿರುವ ಹಾಗೆ ಕಾಣುತ್ತದೆ. ವಾಸ್ತವವಾಗಿ ಆಗ ದೇಶದ ಗೃಹ ಸಚಿವರಾಗಿದ್ದ ಪಟೇಲ್ ಅವರು 1948ರಲ್ಲಿ ಆರೆಸ್ಸೆಸ್ ನಾಯಕರಿಗೆ ಪತ್ರ ಬರೆದು ಆರೆಸ್ಸೆಸ್‌ನ್ನು ನಿಷೇಧಿಸುವ ತನ್ನ ನಿರ್ಧಾರವನ್ನು ವಿವರಿಸಿದ್ದರು.

ದೇಶದ ಸ್ವಾತಂತ್ರವನ್ನು ದುರ್ಬಲಗೊಳಿಸುವ ಹಾಗೂ ದ್ವೇಷ ಹಾಗೂ ಹಿಂಸಾಚಾರದ ಶಕ್ತಿಗಳನ್ನು ಮೂಲೋತ್ಪಾಟನೆ ಮಾಡಲು 1948ರ ಫೆಬ್ರವರಿ 4ರಂದು ಜಾರಿಗೊಳಿಸಲಾದ ಆದೇಶದಲ್ಲಿ ತಾನು ಆರೆಸ್ಸೆಸ್‌ನ್ನು ನಿಷೇಧಿಸುವುದಾಗಿ ಕೇಂದ್ರ ಸರಕಾರ ತಿಳಿಸಿತ್ತು.

ಕೇಂದ್ರ ಗೃಹ ಸಚಿವಾಲಯದ ಪತ್ರಾಗಾರದಲ್ಲಿ ಲಭ್ಯವಿರುವ ಈ ಆದೇಶದ ಪೂರ್ಣ ಪಾಠ ಇಲ್ಲಿದೆ. ‘1948ರ ಫೆಬ್ರವರಿ 2ರಂದು ಪ್ರಕಟಿಸಲಾದ ನಿರ್ಣಯದಲ್ಲಿ ದೇಶದ ಸ್ವಾತಂತ್ರಕ್ಕೆ ಅಪಾಯವೊಡ್ಡಲು ಹಾಗೂ ದೇಶದ ಹೆಸರಿಗೆ ಕಳಂಕ ತರುತ್ತಿರುವಂತಹ ನಮ್ಮ ದೇಶದಲ್ಲಿ ಸಕ್ರಿಯವಾಗಿರುವ ದ್ವೇಷ ಹಾಗೂ ಹಿಂಸಾಚಾರದ ಶಕ್ತಿಗಳನ್ನು ಮೂಲೋತ್ಪಾಟನೆ ಮಾಡುವ ನಿಟ್ಟಿನಲ್ಲಿ ಭಾರತ ಸರಕಾರವು ತನ್ನ ದೃಢನಿರ್ಧಾರವನ್ನು ಘೋಷಿಸಿದೆ. ತನ್ನ ನೀತಿಯ ಅನುಸರಣೆಯಾಗಿ ಭಾರತ ಸರಕಾರವು ಮುಖ್ಯ ಆಯುಕ್ತರ ಪ್ರಾಂತಗಳಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಕಾನೂನುಬಾಹಿರವೆಂದು ಘೋಷಿಸಲು ನಿರ್ಧರಿಸಿದೆ. ರಾಜ್ಯಪಾಲರ ಪ್ರಾಂತಗಳಲ್ಲಿಯೂ ಇದೇ ರೀತಿಯ ಕ್ರಮವನ್ನು ಕೈಗೊಳ್ಳಲಾಗುವುದು’ ಎಂದು ಅದು ತಿಳಿಸಿತ್ತು.

    ‘ಎಲ್ಲಾ ಪ್ರಜಾಪ್ರಭುತ್ವವಾದಿ ರಾಷ್ಟ್ರಗಳ ಹಾಗೆ ಭಾರತ ಸರಕಾರ ಹಾಗೂ ಪ್ರಾಂತೀಯ ಸರಕಾರಗಳು ಯಾವಾಗಲೂ ಎಲ್ಲಾ ಪಕ್ಷಗಳು ಹಾಗೂ ಸಂಘಟನೆಗಳಿಗೆ ಅವುಗಳ ನೀತಿ ಹಾಗೂ ಉದ್ದೇಶಗಳು ವಿಭಿನ್ನವಾಗಿದ್ದರೂ ಮತ್ತು ತಮಗೆ ವಿರುದ್ಧವಾಗಿದ್ದರೂ, ಅವು ಕಾನೂನು ಹಾಗೂ ಔಚಿತ್ಯದ ಮಿತಿಯೊಳಗಿದ್ದಲ್ಲಿ ಅಪ್ಪಟವಾದ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಚಟುವಟಿಕೆಗಳನ್ನು ನಡೆಸುವುದಕ್ಕೆ ಅವಕಾಶ ನೀಡುತ್ತದೆ. ಹಿಂದೂಗಳ ದೈಹಿಕ, ಬೌದ್ಧಿಕ ಹಾಗೂ ನೈತಿಕ ಕ್ಷೇಮವನ್ನು ಸುಧಾರಣೆಗೊಳಿಸುವುದು, ಹಿಂದೂಗಳಲ್ಲಿ ಭ್ರಾತೃತ್ವದ ಭಾವನೆಗಳು, ಪ್ರೀತಿ ಹಾಗೂ ಸೇವೆಯನ್ನು ಉದ್ದೀಪನಗೊಳಿಸುವುದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಘೋಷಿತ ಉದ್ದೇಶ ಹಾಗೂ ಗುರಿಗಳಾಗಿವೆ. ಸರಕಾರವು ಕೂಡಾ ಸಮಾಜದ ಎಲ್ಲಾ ವರ್ಗಗಳ ಬೌದ್ಧ್ದಿಕ ಕ್ಷೇಮವನ್ನು ಸುಧಾರಣೆಗೊಳಿಸುವಲ್ಲಿ ಆಸಕ್ತವಾಗಿದೆ ಹಾಗೂ ಈ ಉದ್ದೇಶಗಳನ್ನು ಕಾರ್ಯಗತಗೊಳಿಸುವುದಕ್ಕಾಗಿಯೇ ಅದರಲ್ಲೂ ವಿಶೇಷವಾಗಿ ದೇಶದ ಯುವಜನತೆಗೆ ಭೌತಿಕ ತರಬೇತಿ ಹಾಗೂ ಮಿಲಿಟರಿ ವಿಷಯಗಳಲ್ಲಿ ಶಿಕ್ಷಣವನ್ನು ಒದಗಿಸಲು ಸರಕಾರವು ಯೋಜನೆಗಳನ್ನು ಹೊಂದಿದೆ. ಆದರೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರ ವರ್ತನೆಯು ಅವರು ಪ್ರತಿಪಾದಿಸುತ್ತಿರುವ ಆದರ್ಶಗಳಿಗೆ ಬದ್ಧತೆಯನ್ನು ಹೊಂದಿಲ್ಲವೆಂಬುದನ್ನು ಗಮನಿಸಿದೆ’.

ಅನಪೇಕ್ಷಣೀಯವಾದ ಮತ್ತು ಅಪಾಯಕಾರಿ ಚಟುವಟಿಕೆಗಳನ್ನು ಸಂಘದ ಸದಸ್ಯರು ನಡೆಸುತ್ತಿದ್ದಾರೆ. ದೇಶದ ವಿವಿಧ ಭಾಗಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರು ದೊಂಬಿ, ಡಕಾಯಿತಿ ಹಾಗೂ ಕೊಲೆ ಸೇರಿದಂತೆ ಹಿಂಸಾಚಾರದ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ. ಭಯೋತ್ಪಾದಕ ವಿಧಾನಗಳಲ್ಲಿ ತೊಡಗುವಂತೆ, ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವಂತೆ ಜನರನ್ನು ಪ್ರಚೋದಿಸುವಂತಹ ಕರಪತ್ರಗಳನ್ನು ಅವರು ವಿತರಿಸುತ್ತಿರುವುದು ಕಂಡುಬಂದಿದೆ. ರಹಸ್ಯ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಸಂಘವನ್ನು ತನ್ನ ಸಾಂಸ್ಥಿಕ ಸಾಮರ್ಥ್ಯದಲ್ಲಿ ನಿಭಾಯಿಸಲು ಈ ಚಟುವಟಿಕೆಗಳು ಎಷ್ಟರ ಮಟ್ಟಿಗೆ ಕಾರಣವಾಗುತ್ತಿವೆ ಎಂಬುದನ್ನು ಸರಕಾರವು ಕಾಲಕಾಲಕ್ಕೆ ಪರಿಗಣಿಸುತ್ತಲೇ ಬಂದಿದೆ. ಈ ಮೊದಲು, ಅಂದರೆ ನವೆಂಬರ್ ತಿಂಗಳ ಅಂತ್ಯದಲ್ಲಿ ದಿಲ್ಲಿಯಲ್ಲಿ ನಡೆದ ಪ್ರಾಂತಗಳ ಗೃಹ ಸಚಿವರು ಹಾಗೂ ಪ್ರಧಾನರ ಸಮಾವೇಶದಲ್ಲಿ (ಸಂಘದ) ಈ ನಡವಳಿಕೆಯನ್ನು ಸರಕಾರವು ವಿವರಿಸಿತ್ತು.

ಸಂಘದ ಆಕ್ಷೇಪಕಾರಿಯಾದ ಹಾಗೂ ಅಪಾಯಕಾರಿಯಾದ ಚಟುವಟಿಕೆಗಳು ಅಬಾಧಿತವಾಗಿ ಮುಂದುವರಿದಿದೆ. ಸಂಘದ ಚಟುವಟಿಕೆಗಳಿಂದ ಪ್ರೇರಿತವಾದ ಹಾಗೂ ಪ್ರಾಯೋಜಿತವಾದ ಹಿಂಸಾಚಾರ ಹಲವಾರು ಮಂದಿಯನ್ನು ಬಲಿತೆಗೆದುಕೊಂಡಿದೆ. ಗಾಂಧೀಜಿಯವರೇ ಇದಕ್ಕೆ ಬಲಿಯಾದ ಹೊಸ ಹಾಗೂ ಅಮೂಲ್ಯವಾದ ಜೀವವಾಗಿದೆ.

ಇಂತಹ ಸನ್ನಿವೇಶಗಳಲ್ಲಿ ಭಯಾನಕ ರೂಪದೊಂದಿಗೆ ಮರುಪ್ರತ್ಯಕ್ಷವಾಗಿರುವ ಹಿಂಸಾಚಾರವನ್ನು ಹತ್ತಿಕ್ಕಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವುದು ಸರಕಾರದ ಬದ್ಧ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಸಂಘವೊಂದು ಕಾನೂನು ಬಾಹಿರ ಸಂಘಟನೆಯೆಂದು ಘೋಷಿಸಲು ಅದು ನಿರ್ಧರಿಸಿದೆ. ಈ ಕ್ರಮವನ್ನು ಕೈಗೊಳ್ಳುವುದಕ್ಕೆ ದೇಶದ ಕ್ಷೇಮವನ್ನು ಹೃದಯದಲ್ಲಿ ತುಂಬಿಕೊಂಡಿರುವ ಎಲ್ಲಾ ಕಾನೂನು ನಿಷ್ಠ ಪೌರರ ಬೆಂಬಲವಿದೆಯೆಂಬುದರಲ್ಲಿ ಸರಕಾರಕ್ಕೆ ಯಾವುದೇ ಸಂದೇಹವಿಲ್ಲ.

ಗಾಂಧೀಜಿಯವರ ಹತ್ಯೆಗೆ ಮೊದಲು ಸರ್ದಾರ್ ಪಟೇಲ್ ಅವರಿಗೆ ಆರೆಸ್ಸೆಸ್ ಬಗ್ಗೆ ಮೃದುಧೋರಣೆ ಇದ್ದಿರಬಹುದು. ಈ ಘೋರ ಕೃತ್ಯ ನಡೆದ ಬಳಿಕ ಅವರು ಆರೆಸ್ಸೆಸ್‌ನ ಚಟುವಟಿಕೆಗಳ ಬಗ್ಗೆ ಕಠಿಣವಾದ ಶಬ್ದಗಳಲ್ಲಿ ಬರೆದಿದ್ದರು. 1948ರ ಜುಲೈ 18ರಂದು ಆಗಿನ ಹಿಂದೂ ಮಹಾಸಭಾದ ನಾಯಕ ಶ್ಯಾಮಪ್ರಸಾದ್ ಮುಖರ್ಜಿ ಅವರಿಗೆ ಪತ್ರ ಬರೆದು, ನಿಷೇಧದ ಬಳಿಕವೂ ಆರೆಸ್ಸೆಸ್ ತನ್ನ ಚಟುವಟಿಕೆಗಳನ್ನು ಮುಂದುವರಿಸಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ‘‘ಹಿಂದೂ ಮಹಾಸಭಾದ ತೀವ್ರವಾದಿ ಬಣವೊಂದು (ಗಾಂಧೀಜಿಯವರ ಹತ್ಯೆ) ಸಂಚಿನಲ್ಲಿ ಭಾಗಿಯಾಗಿತ್ತೆಂಬುದಕ್ಕೆ ನನ್ನ ಮನಸ್ಸಿನಲ್ಲಿ ಯಾವುದೇ ಸಂದೇಹವಿಲ್ಲ. ಆರೆಸ್ಸೆಸ್‌ನ ಚಟುವಟಿಕೆಗಳು ಸರಕಾರ ಹಾಗೂ ರಾಜ್ಯದ ಅಸ್ತಿತ್ವಕ್ಕೆ ಸ್ಪಷ್ಟವಾದ ಬೆದರಿಕೆಯಾಗಿದೆ. ನಿಷೇಧದ ಹೊರತಾಗಿಯೂ ಈ ಚಟುವಟಿಕೆಗಳು ನಿಂತಿಲ್ಲವೆಂಬುದನ್ನು ನಮ್ಮ ವರದಿಗಳು ತೋರಿಸಿಕೊಟ್ಟಿವೆ. ಆರೆಸ್ಸೆಸ್ ವಲಯಗಳು ಹೆಚ್ಚು ಹೆಚ್ಚು ಅವಿಧೇಯತೆಯನ್ನು ಪ್ರದರ್ಶಿಸುತ್ತಿವೆ ಹಾಗೂ ತಮ್ಮ ವಿಧ್ವಂಸಕ ಚಟುವಟಿಕೆಗಳನ್ನು ಅಧಿಕಗೊಳಿಸಿದೆ’’ ಎಂದರು.

1948ರ ಸೆಪ್ಟೆಂಬರ್‌ನಲ್ಲಿ ಪಟೇಲ್ ಅವರು ಗೋಳ್ವಾಲ್ಕರ್ ಅವರಿಗೆ ಪತ್ರ ಬರೆದು ಆರೆಸ್ಸೆಸ್‌ನ್ನು ನಿಷೇಧಿಸುವ ತನ್ನ ನಿರ್ಧಾರವನ್ನು ಹೀಗೆ ವಿವರಿಸಿದ್ದರು.

  ‘‘ಹಿಂದೂಗಳನ್ನು ಸಂಘಟಿಸುವುದು ಹಾಗೂ ಅವರಿಗೆ ನೆರವಾಗುವುದು ಒಂದು ವಿಷಯ. ಆದರೆ ಅಮಾಯಕ ಹಾಗೂ ಅಸಹಾಯಕ ಪುರುಷರು, ಮಹಿಳೆಯರು ಹಾಗೂ ಮಕ್ಕಳ ಯಾತನೆಗಾಗಿ ಸೇಡುತೀರಿಸಲು ಹೋಗುವುದು ಬೇರೆಯೇ ವಿಚಾರ. ಕಾಂಗ್ರೆಸ್‌ಗೆ ಅವರ (ಆರೆಸ್ಸೆಸ್) ವಿರೋಧವು ಎಷ್ಟು ವಿಷಕಾರಿಯಾಗಿದೆಯೆಂದರೆ ವ್ಯಕ್ತಿತ್ವಗಳಿಗೆ ಅಗೌರವವನ್ನು ಪ್ರದರ್ಶಿಸುತ್ತಿದೆ, ಶಿಷ್ಟಾಚಾರಗಳನ್ನು ಕಡೆಗಣಿಸುತ್ತಿದೆ. ಇವೆಲ್ಲವೂ ಜನರ ನಡುವೆ ಒಂದು ರೀತಿಯ ಅಶಾಂತಿಯನ್ನು ಸೃಷ್ಟಿಸಿದೆ. ಅವರ ಎಲ್ಲಾ ಭಾಷಣಗಳು ಕೋಮುವಿಷದಿಂದ ತುಂಬಿದೆ. ಹಿಂದೂಗಳಲ್ಲಿ ಉತ್ಸಾಹ ತುಂಬಲು ಹಾಗೂ ಅವರ ರಕ್ಷಣೆಗಾಗಿ ಸಂಘಟಿಸುವುದಕ್ಕೆ ಇಂತಹ ವಿಷವನ್ನು ಹರಡುವ ಅಗತ್ಯವಿಲ್ಲ. ಈ ವಿಷದ ಪರಿಣಾಮವಾಗಿ ದೇಶವು ಗಾಂಧೀಜಿಯವರ ಅಮೂಲ್ಯವಾದ ಜೀವವನ್ನೇ ತ್ಯಾಗಮಾಡಬೇಕಾಗಿ ಬಂದಿತು. ಆರೆಸ್ಸೆಸ್ ಬಗ್ಗೆ ಸರಕಾರದಲ್ಲಾಗಲಿ ಅಥವಾ ಜನರಲ್ಲಾಗಲಿ ಲವಲೇಶ ಅನುಕಂಪ ಕೂಡಾ ಈಗ ಉಳಿದಿಲ್ಲ ಮತ್ತು ಆರೆಸ್ಸೆಸ್ ಬಗ್ಗೆ ವಿರೋಧ ಹೆಚ್ಚುತ್ತಿದೆ, ಗಾಂಧೀಜಿಯವರ ಸಾವಿನ ಬಳಿಕ ಆರೆಸ್ಸೆಸ್ ಮಂದಿ ಸಂಭ್ರಮಿಸಿ, ಸಿಹಿಗಳನ್ನು ವಿತರಿಸಿದಾಗ ಈ ವಿರೋಧವು ಇನ್ನಷ್ಟು ತೀವ್ರತೆಯನ್ನು ಪಡೆದುಕೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ಆರೆಸ್ಸೆಸ್ ವಿರುದ್ಧ ಕ್ರಮವನ್ನು ಕೈಗೊಳ್ಳುವುದು ಸರಕಾರಕ್ಕೆ ಅನಿವಾರ್ಯವಾಗಿತ್ತು. ಇದೀಗ ಆರು ತಿಂಗಳುಗಳೇ ಕಳೆದುಹೋಗಿವೆ. ಈ ಅವಧಿಯಲ್ಲಿ ಸಂಪೂರ್ಣವಾದ ಹಾಗೂ ಸಮರ್ಪಕವಾದ ಪರಿಗಣನೆಯೊಂದಿಗೆ ಆರೆಸ್ಸೆಸ್ ಮಂದಿ ಸರಿದಾರಿಗೆ ಬರಬಹುದೆಂದು ನಾವು ಆಶಿಸಿದ್ದೆವು. ಆದರೆ ನನಗೆ ಬಂದಿರುವ ವರದಿಗಳ ಪ್ರಕಾರ, ತಮ್ಮ ಅದೇ ಹಳೆಯ ಚಟುವಟಿಕೆಗಳಿಗೆ ಜೀವ ತುಂಬುವ ಪ್ರಯತ್ನಗಳನ್ನು ಅವರು ನಡೆಸುತ್ತಿದ್ದಾರೆಂಬುದು ನಿಚ್ಚಳವಾಗಿದೆ.

 ಆರೆಸ್ಸೆಸ್ ವರಿಷ್ಠ ಎಂ. ಎಸ್. ಗೋಳ್ವಾಲ್ಕರ್‌ರ ಮನವಿಯಂತೆ ಅವರನ್ನು ಪಟೇಲ್ 1948ರ ನವೆಂಬರ್‌ನಲ್ಲಿ ಭೇಟಿಯಾಗಿದ್ದರು. 1948ರ ನವೆಂಬರ್ 14ರಂದು ಹೊರಡಿಸಲಾದ ಸರಕಾರಿ ಸಂವಹನಪತ್ರವೊಂದರ ಪ್ರಕಾರ ಅವರಿಬ್ಬರೂ ಎರಡು ಸಲ ಭೇಟಿಯಾಗಿದ್ದರು. ಮೊದಲ ಭೇಟಿಯ ಸಂದರ್ಭ ಗೋಳ್ವಾಲ್ಕರ್ ಅವರು ತನ್ನ ಬೆಂಬಲಿಗರೊಂದಿಗೆ ಮಾತನಾಡಲು ಹಾಗೂ ಅವರನ್ನು ಸರಿಯಾದ ದಾರಿಗೆ ಬರುವಂತೆ ಅವರ ಮೇಲೆ ಪ್ರಭಾವ ಬೀರಲು ತನಗೆ ಕಾಲಾವಕಾಶ ಬೇಕೆಂದು ಕೇಳಿದ್ದರು. ಪಟೇಲ್ ಜೊತೆಗಿನ ಎರಡನೇ ಭೇಟಿ ಸಂದರ್ಭ ಗೋಳ್ವಾಲ್ಕರ್ ಅವರು ಆರೆಸ್ಸೆಸ್ ಮೇಲಿನ ನಿಷೇಧವನ್ನು ತೆಗೆದುಹಾಕುವವರೆಗೆ ತಾನು ಯಾವುದೇ ಬದಲಾವಣೆಗೆ ಬದ್ಧನಾಗಿರಲಾರೆ ಎಂದು ಹೇಳಿದ್ದರು. ಆನಂತರ ಕೇಂದ್ರ ಸರಕಾರವು ಪ್ರಾಂತೀಯ ಸರಕಾರಗಳಿಗೆ ನೀಡಿದ ಸಂವಹನ ಪತ್ರದಲ್ಲಿ, ‘‘ಆರೆಸ್ಸೆಸ್ ಜೊತೆ ನಂಟು ಹೊಂದಿರುವ ಜನರು ವಿವಿಧ ರೂಪಗಳಲ್ಲಿ ಹಾಗೂ ವಿಧಾನಗಳಲ್ಲಿ ನಡೆಸುತ್ತಿರುವ ಚಟುವಟಿಕೆಗಳು ರಾಷ್ಟ್ರವಿರೋಧಿಯಾಗಿವೆ ಹಾಗೂ ಆಗಾಗ್ಗೆ ವಿಧ್ವಂಸಕ ಹಾಗೂ ಹಿಂಸಾತ್ಮಕವಾಗಿವೆ. ಈ ಹಿಂದೆ ವಿನಾಶಕಾರಿ ಪರಿಣಾಮಗಳನ್ನು ಸೃಷ್ಟಿಯಾದಂತಹ ವಾತಾವರಣವನ್ನೇ ಪುನರುಜ್ಜೀವನಗೊಳಿಸಲು ಆರೆಸ್ಸೆಸ್ ನಿರಂತರವಾಗಿ ಪ್ರಯತ್ನಿಸುತ್ತಿದೆ. ಈ ಕಾರಣಗಳಿಂದಾಗಿ ಪ್ರಾಂತೀಯ ಸರಕಾರಗಳು ಆರೆಸ್ಸೆಸ್ ಮೇಲಿನ ನಿಷೇಧವನ್ನು ಹಿಂದೆಗೆದುಕೊಳ್ಳುವುದಕ್ಕೆ ವಿರೋಧ ವ್ಯಕ್ತಪಡಿಸಿವೆ ಹಾಗೂ ಪ್ರಾಂತೀಯ ಸರಕಾರಗಳ ಈ ಅಭಿಪ್ರಾಯಕ್ಕೆ ಭಾರತ ಸರಕಾರ ಸಹಮತ ವ್ಯಕ್ತಪಡಿಸಿದೆ.’’ ಎನ್ನುತ್ತದೆ.

ಗೋಳ್ವಾಲ್ಕರ್ ಅವರಿಗೆ ಈ ನಿರ್ಧಾರವನ್ನು ತಿಳಿಸಿದ ಬಳಿಕ ಅವರು ಪಟೇಲ್ ಹಾಗೂ ಜವಾಹರಲಾಲ್ ನೆಹರೂ ಜೊತೆ ಇನ್ನಷ್ಟು ಮಾತುಕತೆಯನ್ನು ನಡೆಸಲು ಬಯಸಿದ್ದರು. ಆದರೆ ಅವರನ್ನು ಭೇಟಿಯಾಗಲು ಪಟೇಲ್ ನಿರಾಕರಿಸಿದ್ದರು.

ಆನಂತರ ಆರೆಸ್ಸೆಸ್ ವರಿಷ್ಠ ಪ್ರಧಾನಿ ಹಾಗೂ ಗೃಹ ಸಚಿವರಿಗೆ ಹೀಗೊಂದು ಪತ್ರ ಬರೆದರು. ‘‘ಭಾರತವು ಜಾತ್ಯತೀತ ದೇಶವೆಂಬ ಪರಿಕಲ್ಪನೆಯನ್ನು ಆರೆಸ್ಸೆಸ್ ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತದೆ ಹಾಗೂ ದೇಶದ ರಾಷ್ಟ್ರಧ್ವಜವನ್ನು ಕೂಡಾ ಅದು ಸ್ವೀಕರಿಸುತ್ತದೆ ಹಾಗೂ ಫೆಬ್ರವರಿಯಲ್ಲಿ ವಿಧಿಸಲಾದ ನಿಷೇಧವನ್ನು ಈಗ ತೆಗೆದುಹಾಕಬೇಕೆಂದು ನಾವು ಕೋರುತ್ತೇವೆ’’ ಎಂದವರು ಪತ್ರದಲ್ಲಿ ತಿಳಿಸಿದ್ದರು.

 ಗೋಳ್ವಾಲ್ಕರ್ ಅವರ ಅನುಯಾಯಿಗಳ ಮಾತು ಹಾಗೂ ಕೃತಿಯಲ್ಲಿ ಅಸಮಂಜಸತೆಯಿದ್ದು, ಈಗಾಗಲೇ ವಿವರಿಸಿರುವಂತೆ ನಿಷೇಧವನ್ನು ಹಿಂತೆಗೆಯಲು ಪ್ರಾಂತೀಯ ಸರಕಾರಗಳಿಗೆ ಸಲಹೆ ನೀಡಲು ಸಾಧ್ಯವಿಲ್ಲವೆಂಬುದನ್ನು ಭಾರತ ಸರಕಾರ ಕಂಡುಕೊಂಡಿದೆ ಎಂದು ಕೇಂದ್ರ ಸರಕಾರದ ಸಂವಹನಪತ್ರವು ತಿಳಿಸಿದೆ.

ತರುವಾಯ 1949ರ ಜುಲೈ 11ರಂದು ಆರೆಸ್ಸೆಸ್ ಮೇಲಿನ ನಿಷೇಧವನ್ನು ಹಿಂದೆಗೆದುಕೊಳ್ಳಲಾಯಿತು. ನಿಷೇಧವನ್ನು ಹಿಂದೆಗೆದುಕೊಳ್ಳುವುದಕ್ಕಾಗಿ ಕೇಂದ್ರ ಸರಕಾರ ಒಡ್ಡಿದ್ದ ಕೆಲವು ಶರತ್ತುಗಳಿಗೆ ಗೋಳ್ವಾಲ್ಕರ್ ಸಮ್ಮತಿಸಿದ್ದರು. ಸಂವಿಧಾನ ಹಾಗೂ ರಾಷ್ಟ್ರಧ್ವಜಕ್ಕೆ ನಿಷ್ಠನಾಗಿರುವುದಾಗಿ ಆರೆಸ್ಸೆಸ್ ಹಾಗೂ ಅದರ ನಾಯಕ ಭರವಸೆ ನೀಡಿದ್ದಾರೆೆಂದು ಭಾರತ ಸರಕಾರ ತಿಳಿಸಿತ್ತು.

ಭಾರತದ ಸಂವಿಧಾನಕ್ಕೆ ಹಾಗೂ ರಾಷ್ಟ್ರಧ್ವಜಕ್ಕೆ ನಿಷ್ಠೆಯನ್ನು ಪ್ರದರ್ಶಿಸುವುದಾಗಿ ಆರೆಸ್ಸೆಸ್ ನಾಯಕ ವಾಗ್ದಾನ ನೀಡಿದ್ದರು. ಹಿಂಸಾಚಾರ ಹಾಗೂ ಗುಪ್ತವಾದ ಕಾರ್ಯವಿಧಾನಗಳಲ್ಲಿ ನಂಬಿಕೆಯಿಟ್ಟವರಿಗೆ ಹಾಗೂ ನಿರತರಾಗಿರುವವರಿಗೆ ಸಂಘದಲ್ಲಿ ಯಾವುದೇ ಸ್ಥಾನವಿಲ್ಲವೆಂಬುದಾಗಿಯೂ ಸ್ಪಷ್ಟಪಡಿಸಿದ್ದರು.

  ಆರೆಸ್ಸೆಸ್ ನಾಯಕ ನೀಡಿದ ಸ್ಪಷ್ಟೀಕರಣದ ಹಿನ್ನೆಲೆಯಲ್ಲಿ ಆರೆಸ್ಸೆಸ್ ಒಂದು ಪ್ರಜಾತಾಂತ್ರಿಕ ಹಾಗೂ ಸಾಂಸ್ಕೃತಿಕ ಸಂಘಟನೆಯಾಗಿ ಭಾರತೀಯ ಸಂವಿಧಾನ ನಿಷ್ಠೆಯನ್ನು ಪ್ರದರ್ಶಿಸಬೇಕು ಹಾಗೂ ರಾಷ್ಟಧ್ವಜವನ್ನು ಮಾನ್ಯಮಾಡಬೇಕು ಮತ್ತು ರಹಸ್ಯ ಚಟುವಟಿಕೆಗಳನ್ನು ಹಾಗೂ ಹಿಂಸಾಚಾರವನ್ನು ತ್ಯಜಿಸಬೇಕು ಎಂಬ ತೀರ್ಮಾನಕ್ಕೆ ಭಾರತ ಸರಕಾರ ಬಂದಿದೆ. ಸಂವಿಧಾನದಡಿ ಈ ತತ್ವಗಳನ್ನು ಅನುಸರಿಸಿದಲ್ಲಿ ಹಾಗೂ ಸರಿಯಾದ ಉದ್ದೇಶದೊಂದಿಗೆ ಕಾರ್ಯನಿರ್ವಹಿಸಿದಲ್ಲಿ ಅಂತಹ ಚಟುವಟಿಕೆಗೆ ಯಾವುದೇ ಆಕ್ಷೇಪವನ್ನು ವ್ಯಕ್ತಪಡಿಸಲು ಕಾರಣವಿರದೆಂದು ಭಾರತ ಸರಕಾರದ ತನ್ನ ಸಂದೇಶ ಪತ್ರದಲ್ಲಿ ತಿಳಿಸಿತ್ತು.

Writer - ಕೃಪೆ:thewire.in

contributor

Editor - ಕೃಪೆ:thewire.in

contributor

Similar News