ಯೆಮನ್ ವಶದಲ್ಲಿದ್ದ ಏಳು ಮಂದಿ ಭಾರತೀಯರ ಬಿಡುಗಡೆಗೆ ಒಮನ್ ನೆರವು
ಮಸ್ಕತ್ : ಯೆಮನ್ ವಶದಲ್ಲಿದ್ದ ಏಳು ಮಂದಿ ಭಾರತೀಯರ ಬಿಡುಗಡೆಗಾಗಿ ದೇಶದ ದೊರೆ ಸುಲ್ತಾನ್ ಹೈತಮ್ ಬಿನ್ ತಾರಿಕ್ ಅವರ ಮಧ್ಯಪ್ರದೇಶದ ಬಳಿಕ, ಒಮನ್ ಸರ್ಕಾರ ನೆರವು ನೀಡಿದೆ.
ಏಳು ಮಂದಿ ಭಾರತೀಯರು, ಬ್ರಿಟನ್‍ನ ಮೂವರು, ಇಂಡೋನೇಷ್ಯಾ, ಫಿಲಿಪೀನ್ಸ್, ಮ್ಯಾನ್ಮಾರ್ ಮತ್ತು ಇಥಿಯೋಪಿಯಾದ ತಲಾ ಒಬ್ಬರು ಸೇರಿದಂತೆ ಒಟ್ಟು 14 ಮಂದಿಯನ್ನು ಯೆಮನ್‍ನಲ್ಲಿ ಯಾವುದೇ ವಿಚಾರಣೆ ಇಲ್ಲದೇ ಬಂಧನದಲ್ಲಿ ಇಡಲಾಗಿತ್ತು ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.
ಏಳು ಮಂದಿ ಭಾರತೀಯರನ್ನು ಹೌತಿ ಬಂಡುಕೋರರಿಂದ ವಶಪಡಿಸಿಕೊಳ್ಳಲಾದ ಸರಕು ಸಾಗಾಣಿಕೆ ಹಡಗಿನಿಂದ ಕಳೆದ ಫೆಬ್ರವರಿಯಲ್ಲಿ ಬಂಧಿಸಲಾಗಿತ್ತು.
"ಒಮನ್ ಸುಲ್ತಾನೆಟ್, ಸನಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಜತೆ ಸಮನ್ವಯ ಸಾಧಿಸಿದ ಬಳಿಕ ಅಲ್ಲಿನ ಅಧಿಕಾರಿಗಳು ಸೌದಿ ಅರೇಬಿಯಾ ಜತೆ ಚರ್ಚಿಸಿ, ಅಗತ್ಯ ಪರವಾನಿಗೆ ಸೌಲಭ್ಯ ಕಲ್ಪಿಸಲು ಮನವೊಲಿಸಿದರು" ಎಂದು ಒಮನ್‍ನ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆ ನೀಡಿದೆ.
ರಾಯಲ್ ಏರ್ ಫೋರ್ಸ್ ಆಫ್ ಒಮನ್ ವಿಮಾನದಲ್ಲಿ ಹದಿನಾಲ್ಕು ಮಂದಿಯನ್ನು ಸನಾದಿಂದ ಮಸ್ಕತ್‍ಗೆ ಸ್ಥಳಾಂತರಿಸಲಾಗಿದೆ. ಅವರನ್ನು ಆಯಾ ದೇಶಗಳಿಗೆ ಕಳುಹಿಸಿಕೊಡಲು ಸಿದ್ಧತೆಗಳು ನಡೆದಿವೆ ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ.