ಧನಿಕರ ಒತ್ತುವರಿಯೂ, ಶ್ರಮಿಕರ ಅತಿಕ್ರಮಣವೂ!

Update: 2022-04-26 05:33 GMT

 ಬುಲ್ಡೋಜರ್ ಸಂಸ್ಕೃತಿಯನ್ನು ಕಾನೂನು ಬದ್ಧವಾಗಿ ಜಾರಿಗೊಳಿಸಲು ಸಜ್ಜಾಗುತ್ತಿರುವ ಆಳುವ ವರ್ಗಗಳ ಉದ್ದೇಶ ಏನೇ ಇರಲಿ, ಸಾಮಾನ್ಯ ನಾಗರಿಕರಾಗಿ, ಸ್ವಾವಲಂಬಿ ಭಾರತದ ಸತ್ ಪ್ರಜೆಗಳಾಗಿ, ಆಧುನಿಕತೆಯ ಫಲಾನುಭವಿಗಳಾಗಿ ತಮ್ಮದೇ ಆದ ನೆಲೆ ಕಂಡುಕೊಂಡಿರುವ ಬೃಹತ್ ಜನಸಮುದಾಯಗಳಿಗೆ ಈ ವಾಸ್ತವ ಸನ್ನಿವೇಶಗಳು ಭಿನ್ನವಾಗಿಯೇ ಕಾಣಬೇಕಲ್ಲವೇ? ಬುಲ್ಡೋಜರ್ ಆಧುನಿಕ ಬಂಡವಾಳಶಾಹಿ ಜಗತ್ತನ್ನು ನಿರ್ಮಿಸುವ ಒಂದು ಯಂತ್ರವಷ್ಟೇ ಅಲ್ಲ, ಸಾಂಪ್ರದಾಯಿಕ ಶ್ರಮಜೀವಿಗಳ ಜಗತ್ತನ್ನು ಪಲ್ಲಟಗೊಳಿಸುವ ಅಸ್ತ್ರವೂ ಹೌದು ಎಂಬ ವಾಸ್ತವವನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ.

ಭೂಅತಿಕ್ರಮಣ ಅಥವಾ ಒತ್ತುವರಿ ಎನ್ನುವ ಪರಿಕಲ್ಪನೆಗೆ ಎರಡು ಆಯಾಮಗಳಿವೆ. ಜನಸಾಮಾನ್ಯರ ದೃಷ್ಟಿಯಲ್ಲಿ ಸಾರ್ವಜನಿಕರಿಗಾಗಿ ಮೀಸಲಾಗಿಟ್ಟ ಸ್ಥಳಗಳನ್ನು ಖಾಸಗಿ ಕಟ್ಟಡಗಳು, ಸ್ಥಾವರಗಳು ಆಕ್ರಮಿಸಿಕೊಳ್ಳುವುದು ಅತಿಕ್ರಮಣ ಎನಿಸುತ್ತದೆ. ಸಾರ್ವಜನಿಕರ ಅನುಕೂಲತೆಗಳಿಗಾಗಿ ಪುರಸಭೆ, ನಗರಸಭೆ ಅಥವಾ ಮಹಾನಗರಪಾಲಿಕೆಗಳು ನಿಗದಿಪಡಿಸುವ ಉದ್ಯಾನ, ಸಾರ್ವಜನಿಕ ಗ್ರಂಥಾಲಯ ಮತ್ತಾವುದೇ ಜನೋಪಯೋಗಿ ಸ್ಥಳಗಳನ್ನು ಖಾಸಗಿ ಸಂಸ್ಥೆಗಳು ಆಕ್ರಮಿಸಿದಾಗ ಸಹಜವಾಗಿಯೇ ಜನತೆಯ ದೃಷ್ಟಿಯಲ್ಲಿ ಅದು ಅತಿಕ್ರಮಣ ಅಥವಾ ಅಕ್ರಮ ಒತ್ತುವರಿ ಎನಿಸುತ್ತದೆ. ಆಡಳಿತ ವ್ಯವಸ್ಥೆಯ ದೃಷ್ಟಿಯಲ್ಲಿ ಅತಿಕ್ರಮಣ ಎನ್ನುವುದು ನಗರಾಭಿವೃದ್ಧಿಯ ನಿಯಮಗಳನ್ನು ಉಲ್ಲಂಘಿಸಿದಾಗ ಸಂಭವಿಸುವ ಪ್ರಕ್ರಿಯೆಯಾಗಿರುತ್ತದೆ. ನಿಗದಿತವಾಗಿ ಮಂಜೂರಾದ ಅಳತೆಯನ್ನೂ ಮೀರಿ ಕಟ್ಟಡಗಳನ್ನು ನಿರ್ಮಿಸಿದಾಗ ಅಥವಾ ಸಾರ್ವಜನಿಕರ ಉಪಯೋಗಕ್ಕಾಗಿ ನಿಗದಿಪಡಿಸಲಾಗಿರುವ ಒಳಚರಂಡಿ, ರಾಜಕಾಲುವೆ, ಪಾದಚಾರಿ ರಸ್ತೆ ಮುಂತಾದ ಜಾಗಗಳನ್ನು ಖಾಸಗಿಯವರು ಆಕ್ರಮಿಸಿಕೊಳ್ಳುವುದು ಅತಿಕ್ರಮಣ ಅಥವಾ ಒತ್ತುವರಿ ಎನಿಸಿಕೊಳ್ಳುತ್ತದೆ. ಈ ಎರಡೂ ರೀತಿಯ ಅತಿಕ್ರಮಣಗಳು ಕಾನೂನು ಪ್ರಕಾರ ಶಿಕ್ಷಾರ್ಹವೇ ಆಗಿರುತ್ತದೆ. ನಗರೀಕರಣ ಪ್ರಕ್ರಿಯೆಯಲ್ಲಿ ಅತಿಕ್ರಮಣದ ವ್ಯಾಖ್ಯಾನವೂ ಸಾಪೇಕ್ಷತೆಯನ್ನು ಪಡೆದುಕೊಳ್ಳುವುದನ್ನು ಇತ್ತೀಚಿನ ದಿನಗಳಲ್ಲಿ ಗಮನಿಸುತ್ತಲೇ ಬಂದಿದ್ದೇವೆ. ಹಣಕಾಸು ಬಂಡವಾಳದ ಹರಿವು ಹೆಚ್ಚಾದಂತೆಲ್ಲಾ ನಾಯಿಕೊಡೆಗಳಂತೆ ಹುಟ್ಟಿಕೊಂಡ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನದ ಉದ್ಯೋಗ ಕ್ಷೇತ್ರಗಳು ಸಣ್ಣ ಪುಟ್ಟ ಪಟ್ಟಣಗಳನ್ನೂ ನಗರಗಳನ್ನಾಗಿ ಪರಿವರ್ತಿಸಿದಂತೆಯೇ, ನಗರ ಎನಿಸಿಕೊಂಡಿದ್ದ ಬೃಹತ್ ಪಟ್ಟಣಗಳನ್ನು ಮಹಾನಗರಗಳಾಗಿ ಪರಿವರ್ತಿಸಿದವು. ಹೆಚ್ಚಾಗುತ್ತಿದ್ದ ಗ್ರಾಮೀಣ ವಲಸೆಯ ಸಮಸ್ಯೆಯನ್ನು ಬಗೆಹರಿಸಲು ಗ್ರಾಮೀಣ ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದರ ಬದಲು, ಆಧುನಿಕ ಬಂಡವಾಳಶಾಹಿ ಮಾರುಕಟ್ಟೆ ಅರ್ಥವ್ಯವಸ್ಥೆಯಲ್ಲಿ, ಗ್ರಾಮೀಣ ಭೂ ಪ್ರದೇಶಗಳನ್ನೇ ಆಕ್ರಮಿಸಿಕೊಂಡು, ನಗರಗಳ ಭೂ ಪ್ರದೇಶಗಳನ್ನು ವಿಸ್ತರಿಸುವ ನೀತಿಯನ್ನು ಅನುಸರಿ ಸಲಾರಂಭಿಸಿದವು. ಇದರ ಪರಿಣಾಮ ಗ್ರಾಮಗಳಲ್ಲಿ ಅಲ್ಪ ಸ್ವಲ್ಪ ಭೂಮಿಯನ್ನೇ ನಂಬಿ ಬದುಕುತ್ತಿದ್ದ ಕೋಟ್ಯಂತರ ಜನರು ತಮ್ಮ ದುಡಿಮೆಯ ಮೂಲವೇ ಆಗಿದ್ದ ಭೂಮಿಯನ್ನು ನಗರೀಕರಣಕ್ಕೆ ಬಲಿ ಕೊಡಬೇಕಾಯಿತು. ತಾವೇ ಪೋಷಿಸಿ ಬೆಳೆಸಿದ ಭೂಮಿಯಲ್ಲಿ ತಲೆಎತ್ತಿದ ನಗರಗಳಲ್ಲಿ, ಸ್ವತಃ ಗ್ರಾಮೀಣ ವಲಸಿಗರು ಕೂಲಿಯಾಳುಗಳಂತೆ ಅಥವಾ ಇತರ ದಿನಗೂಲಿ ನೌಕರರಂತೆ ಶ್ರಮ ವ್ಯಯಿಸಿ ಬದುಕು ಸವೆಸಬೇಕಾಯಿತು.

ತಂಡೋಪತಂಡವಾಗಿ ವಲಸೆ ಬರಲಾರಂಭಿಸಿದ ಈ ಶ್ರಮಿಕ ವರ್ಗಗಳು ತಮ್ಮ ನಿತ್ಯ ದುಡಿಮೆಯನ್ನೇ ಆಶ್ರಯಿಸಿ, ಸ್ಲಂ ಎಂದು ಕರೆಯಲಾಗುವ ಗೃಹ ಸಮೂಹಗಳ ನಡುವೆ ವಾಸಿಸುವುದು ಅನಿವಾರ್ಯವಾಯಿತು. ಕಟ್ಟಡ ಕಾರ್ಮಿಕರು, ರಸ್ತೆ, ರೈಲ್ವೆ, ಮೇಲ್ಸೇತುವೆ, ಸುರಂಗ ಮಾರ್ಗ, ಮೆಟ್ರೊ ಮುಂತಾದ ಸಂಚಾರ ಮಾರ್ಗದ ಕಾಮಗಾರಿಗಳಲ್ಲಿ ದುಡಿಯಬೇಕಾದ ಗ್ರಾಮೀಣ ವಲಸಿಗರು ಈ ಸ್ಲಂಗಳಲ್ಲೇ ತಮ್ಮ ನೆಲೆ ಕಂಡುಕೊಳ್ಳಬೇಕಾಯಿತು. ಗ್ರಾಮೀಣ ದುಡಿಮೆ ಮತ್ತು ಬದುಕನ್ನೇ ಆಶ್ರಯಿಸಿದ್ದ ಅಸಂಖ್ಯಾತ ಜನರ ಮುಂದೆ, ವಿಶೇಷವಾಗಿ ಯುವ ಪೀಳಿಗೆ ಮತ್ತು ಮಹಿಳಾ ಸಮೂಹದ ಮುಂದೆ ಎರಡು ಆಯ್ಕೆಗಳು ಉಳಿದವು. ಗ್ರಾಮೀಣ ಮಟ್ಟದಲ್ಲಿ ಸೃಷ್ಟಿಯಾಗಬಹುದಾದ ಅಲ್ಪಾದಾಯದ ಉದ್ಯೋಗ ಅಥವಾ ನರೇಗಾದಂತಹ ಸರಕಾರಿ ಪ್ರಾಯೋಜಿತ ಉದ್ಯೋಗಾವಕಾಶಗಳನ್ನು ನಂಬಿ ಬದುಕುವುದು ಅಥವಾ ನಗರಗಳಿಗೆ ವಲಸೆ ಹೋಗುವ ಮೂಲಕ ಅಲ್ಲಿನ ಸ್ಲಂ ನಿವಾಸಿಗಳಾಗಿ ನಗರಗಳ ಅಂಚಿನಲ್ಲೋ, ರೈಲು ಮಾರ್ಗಗಳಿದ್ದರೆ ರೈಲ್ವೆ ಹಳಿಗಳ ಅಕ್ಕಪಕ್ಕದಲ್ಲೋ ತಮ್ಮ ನೆಲೆ ಕಂಡುಕೊಳ್ಳಬೇಕಾಯಿತು. ಆಧುನಿಕ ನಾಗರಿಕತೆಯಲ್ಲಿ ಜನರು ನೆಲೆಸುವ ವಸತಿ ಸಮೂಹಗಳನ್ನೂ ವಿಭಿನ್ನ ಪರಿಭಾಷೆಗಳ ಮೂಲಕ ಗುರುತಿಸಲಾಗುತ್ತದೆ. ಸುಶಿಕ್ಷಿತ, ಹಿತವಲಯದ ಮಧ್ಯಮ ವರ್ಗಗಳು ನೆಲೆಸುವ ಪ್ರದೇಶಗಳನ್ನು ಬಡಾವಣೆ ಎಂದು ಹೇಳುತ್ತೇವೆ. ನೂರಾರು ಮನೆಗಳನ್ನು ಒಂದೇ ಕಾಂಪೌಂಡಿನೊಳಗೆ ನಿರ್ಮಿಸುವುದನ್ನು ಎನ್‌ಕ್ಲೇವ್ ಎಂದು ಗುರುತಿಸುತ್ತೇವೆ. (ಮೂಲತಃ ಎನ್‌ಕ್ಲೇವ್ ಎಂದರೆ ಅನ್ಯಾವೃತ ಪ್ರದೇಶ ಅಥವಾ ಅನ್ಯರಿಂದ ಆವೃತವಾಗಿರುವ ಪ್ರದೇಶ ಎಂದರ್ಥ). ಇದನ್ನು ಮಿನಿ ಬಡಾವಣೆ ಎಂದೂ ಕರೆಯಲಾಗುತ್ತದೆ. ಸಮಾನಮನಸ್ಕರಲ್ಲದಿದ್ದರೂ, ಸಮಾನ ಆಸ್ತಿವಂತರು ಸಾಮಾನ್ಯವಾಗಿ ಇಂತಹ ಎನ್‌ಕ್ಲೇವ್‌ಗಳ ನಿವಾಸಿಗಳಾಗಿರುತ್ತಾರೆ. ನಗರ ಪ್ರದೇಶಗಳಲ್ಲಿ ಹೆಚ್ಚಾಗುತ್ತಲೇ ಇರುವ ಜನದಟ್ಟಣೆಯ ನಿರ್ವಹಣೆಗಾಗಿ ರೂಪುಗೊಂಡ ಊರ್ಧ್ವಮುಖ ಬೆಳವಣಿಗೆಯ ಪರಿಕಲ್ಪನೆ ಗಗನಚುಂಬಿ ಕಟ್ಟಡಗಳಿಗೆ, ಅಪಾರ್ಟ್‌ಮೆಂಟ್ ಎಂದು ಹೇಳಲಾಗುವ ವಸತಿ ಸಮುಚ್ಚಯಗಳಿಗೆ ಎಡೆಮಾಡಿಕೊಟ್ಟಿದೆ. ಇದರಲ್ಲೂ ಸಹ ಗೇಟೆಡ್ ಕಮ್ಯುನಿಟಿ ಎಂಬ ಹೊಸ ಪರಿಭಾಷೆಯನ್ನು ಕಾಣುತ್ತಿದ್ದೇವೆ. ಅಂದರೆ ಸಾಮೂಹಿಕವಾಗಿ ನಾಲ್ಕು ಗೋಡೆಗಳ ನಡುವೆ ತಮ್ಮನ್ನೇ ನಿರ್ಬಂಧಕ್ಕೊಳಪಡಿಸಿಕೊಳ್ಳುವ ಮೇಲ್ ಮಧ್ಯಮ ವರ್ಗದ ಸಮುದಾಯಗಳು ಎಂದು ಅರ್ಥೈಸಬಹುದು. ಮುಂಬೈ ನಗರದಲ್ಲಿ ಈ ಊರ್ಧ್ವಮುಖ ಬೆಳವಣಿಗೆ ಮತ್ತು ವಸತಿ ಸಮುಚ್ಚಯಗಳಿಗೆ ಅನುಕೂಲವಾಗಲೆಂದೇ 1970-80ರ ದಶಕದಲ್ಲಿ ನೂರಾರು ಗಿರಣಿಗಳನ್ನು ಮುಚ್ಚಿಸಿ, ಭೂ ಆಸ್ತಿಯನ್ನು ಪರಭಾರೆ ಮಾಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ಗಿರಣಿಗಳನ್ನು ಮುಚ್ಚಲು ಎಡಪಕ್ಷಗಳ ಕಾರ್ಮಿಕ ಸಂಘಟನೆಗಳೇ ಕಾರಣ ಎಂಬ ಒಂದು ನಿರೂಪಣೆಯನ್ನೂ ಈ ಸಂದರ್ಭದಲ್ಲಿ ಹುಟ್ಟುಹಾಕಲಾಯಿತು. ವಾಸ್ತವ ಬೇರೆಯೇ ಇದೆ. ಶಿವಸೇನೆ ಒಂದು ರಾಜಕೀಯ ಪಕ್ಷವಾಗಿ ರೂಪುಗೊಂಡಿದ್ದೇ ಈ ಪ್ರಕ್ರಿಯೆಯ ನಡುವೆ. ಮುಂಬೈನ ಗಿರಣಿಗಳಲ್ಲಿ ಕೆಲಸ ಮಾಡುತ್ತಿದ್ದ ಲಕ್ಷಾಂತರ ಕಾರ್ಮಿಕರು ಬೀದಿಪಾಲಾಗಿ, ಕೂಲಿ ಕಾರ್ಮಿಕರಾಗಿ, ಅವರು ಬೆವರು ಸುರಿಸಿ ಬೆಳೆಸಿದ ಭೂ ಪ್ರದೇಶದಲ್ಲೇ ತಲೆಎತ್ತಿದ ಸಾವಿರಾರು ವಸತಿ ಸಮುಚ್ಚಯಗಳ ನಿರ್ಮಾಣಕ್ಕೆ ಕಲ್ಲು ಮಣ್ಣು ಹೊತ್ತು ತಮ್ಮ ಜೀವನ ಸವೆಸಬೇಕಾಯಿತು. ಈ ವಸತಿ ಸಮುಚ್ಚಯಗಳ ನಡುವೆ ತಮ್ಮ ಹಿತವಲಯದ ಪ್ರಪಂಚವನ್ನು ನಿರ್ಮಿಸಿಕೊಂಡ ಆಧುನಿಕ ಸಮಾಜದ ಬಂಡವಾಳಿಗರು ಮತ್ತು ಸಣ್ಣ ಬಂಡವಾಳಿಗರು, ಉದ್ಯಮಿಗಳು, ವರ್ತಕರು ಹಾಗೂ ಅಧಿಕಾರಿ ವರ್ಗಗಳು. ಎತ್ತಂಗಡಿ ಮಾಡಲ್ಪಟ್ಟ ಶ್ರಮಜೀವಿ ವರ್ಗಗಳು ನೆಲೆಸುವ ಭೂ ಪ್ರದೇಶಗಳನ್ನು ಅಥವಾ ವಸತಿ ಸಮೂಹಗಳನ್ನು ಸ್ಲಂಗಳು ಎಂದು ಗುರುತಿಸಲಾರಂಭಿಸಿದರು. ಅಚ್ಚ ಕನ್ನಡದಲ್ಲಿ ಇದನ್ನು ಕೊಳೆಗೇರಿ, ಕೊಳಚೆ ಪ್ರದೇಶ ಎಂದೇ ಹೇಳಲಾಗುತ್ತದೆ. ಬಡಜನತೆ, ಶ್ರಮಜೀವಿಗಳಿಗೇ ಮೀಸಲಾದ, ವಾಸಿಸಲು ಯೋಗ್ಯವಲ್ಲದ ಮನೆಗಳು ಒಂದಕ್ಕೊಂದು ಒತ್ತರಿಸಿಕೊಂಡಿರುವ ಈ ಪ್ರದೇಶಗಳನ್ನು ಯಾವುದೇ ಸಂದರ್ಭದಲ್ಲೂ ‘‘ ವಸತಿ ಸಮುಚ್ಚಯ ’’ ಅಥವಾ ಬಡಾವಣೆ, ಎನ್‌ಕ್ಲೇವ್ ಎಂದು ಗುರುತಿಸಲಾಗುವುದಿಲ್ಲ. ಸಮಾನ ಆಸ್ತಿವಂತರೇ ಇದ್ದರೂ ಗೇಟೆಡ್ ಕಮ್ಯುನಿಟಿ ಎಂದು ಗುರುತಿಸಲಾಗುವುದಿಲ್ಲ. ಈ ಶ್ರಮಜೀವಿಗಳು ಸಾಮಾನ್ಯವಾಗಿ ನಗರ ಪ್ರದೇಶಗಳ ಅಂಚಿನಲ್ಲಿ ವಾಸಿಸುವುದು ಈ ಆಧುನಿಕ ಸಂದರ್ಭದಲ್ಲೂ ಕಾಣಬಹುದಾದ ದುರಂತ ವಾಸ್ತವ. ಇದಕ್ಕೆ ಶ್ರೇಣೀಕೃತ ಜಾತಿ ವ್ಯವಸ್ಥೆಯ ಶ್ರೇಷ್ಠ-ಕನಿಷ್ಠದ ಪರಿಕಲ್ಪನೆಯೂ ಕಾರಣ ಎಂದು ಹೇಳಬೇಕಿಲ್ಲ. ಕೋಲಾರ ಚಿನ್ನದ ಗಣಿ (ಕೆಜಿಎಫ್) ಪ್ರದೇಶದಲ್ಲಿ ಇಂತಹ 30 ಸಾವಿರ ಪುಟ್ಟ ಗುಡಿಸಲುಗಳಲ್ಲಿ ನೂರು ವರ್ಷಕ್ಕಿಂತಲೂ ಹೆಚ್ಚು ಕಾಲ ಶ್ರಮಜೀವಿಗಳು ಬದುಕು ಸವೆಸಿದ್ದು ಇಂದಿಗೂ ಮುಂದುವರಿದಿದೆ.

ಈ ಶ್ರಮಜೀವಿಗಳ ಒಳಗಿಂದಲೇ ಆರ್ಥಿಕವಾಗಿ ಕೊಂಚ ಮೇಲ್ ಚಲನೆ, ಮುಂಚಲನೆ ಕಂಡುಕೊಳ್ಳುವ ದುಡಿಯುವ ವರ್ಗಗಳು, ಸರಕಾರಿ ಯೋಜಿತ ವಸತಿ ಸೌಕರ್ಯಗಳ ಮೂಲಕ ಅಥವಾ ತಮ್ಮದೇ ಆದ ಅಲ್ಪ ಹಣಕಾಸಿನ ನೆರವಿನೊಂದಿಗೆ ಚಿಕ್ಕ ಪುಟ್ಟ ಬಡಾವಣೆಗಳನ್ನು ನಿರ್ಮಿಸಿಕೊಳ್ಳುವುದನ್ನೂ ಎಲ್ಲ ನಗರಗಳಲ್ಲಿ ಕಾಣಬಹುದು. ಇಲ್ಲಿಯೂ ಸಹ ಮನೆಗಳು ಒಂದಕ್ಕೊಂದು ಒತ್ತರಿಸಿಕೊಂಡೇ ಇರುವುದೇ ಅಲ್ಲದೆ, ಮೂಲ ಸೌಕರ್ಯಗಳ ಕೊರತೆಯ ನಡುವೆಯೇ, ಆಧುನಿಕ ಸೌಕರ್ಯಗಳಿಲ್ಲದೆ ಜೀವನ ಸವೆಸುವುದನ್ನೂ ಗಮನಿಸಬಹುದು. ಜಾತಿ ಎನ್ನುವುದೇ ಒಂದು ವರ್ಗವಾಗಿರುವ ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆಯ ಸಮಾಜ ಇಂತಹ ಎನ್‌ಕ್ಲೇವ್‌ಗಳನ್ನು

ುಥಾಸ್ಥಿತಿಯಲ್ಲಿ ಕಾಪಾಡಿಕೊಂಡೇ ದೇಶವನ್ನು ಆರ್ಥಿಕ ಅಭಿವೃದ್ಧಿಯ ಪಥದಲ್ಲಿ ಮುಂದಕ್ಕೊಯ್ಯಲು ಸದಾ ಪ್ರಯತ್ನಿಸುತ್ತಿರುತ್ತದೆ. ಈ ಶ್ರಮಜೀವಿಗಳು ತಮ್ಮ ಬದುಕಿನ ಹಾದಿಯಲ್ಲಿ ದಿನಗೂಲಿ ನೌಕರಿಯೊಂದಿಗೇ ಸಣ್ಣ ಪುಟ್ಟ ವ್ಯಾಪಾರದಲ್ಲಿ ತೊಡಗುವ ಮೂಲಕ ಜೀವನೋಪಾಯದ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ಬೀದಿಬದಿ ವ್ಯಾಪಾರಿಗಳು, ತಳ್ಳುಗಾಡಿ ವ್ಯಾಪಾರಿಗಳು, ಜಾತ್ರೆ ಸಂತೆಗಳಲ್ಲಿ ತಾತ್ಕಾಲಿಕ ಅಂಗಡಿಗಳನ್ನು ಹಾಕಿಕೊಂಡು ವ್ಯಾಪಾರ ಮಾಡುವವರು, ಮನೆಮನೆಗೆ ತೆರಳಿ ತಮ್ಮ ಸರಕುಗಳನ್ನು ಮಾರುವವರು, ಈ ಶ್ರಮಜೀವಿ ವರ್ಗಗಳು ಇಂತಹ ವಸತಿ ಸಮೂಹಗಳಲ್ಲಿ ವಾಸಿಸುತ್ತಾರೆ. ನವ ಉದಾರವಾದ ಪೋಷಿಸುತ್ತಿರುವ ಆಧುನಿಕತೆ ಮತ್ತು ಬಂಡವಾಳ ಪ್ರಣೀತ ಅಭಿವೃದ್ಧಿ ಮಾರ್ಗದ ಇಕ್ಕೆಲಗಳಲ್ಲೂ ಕಾಣಬಹುದಾದ ಈ ಎರಡೂ ಶ್ರಮಿಕ ವರ್ಗಗಳು ಆಕ್ರಮಿಸುವ ಭೂ ಪ್ರದೇಶಗಳು, ವಲಯಗಳು, ಆಳುವವರ ದೃಷ್ಟಿಯಲ್ಲಿ ಅನೇಕ ಬಾರಿ ಅತಿಕ್ರಮಣವಾಗಿಯೇ ಕಾಣುತ್ತದೆ. ಯಾವುದೇ ನೀಲನಕ್ಷೆ, ಭೂನಕ್ಷೆ, ಮಂಜೂರಾತಿ, ಪರವಾನಿಗೆ ಇಲ್ಲದೆ ತಮ್ಮ ಗುಡಿಸಲುಗಳನ್ನು ಕಟ್ಟಿಕೊಳ್ಳುವ ಈ ಶ್ರಮಜೀವಿಗಳು ಆಧುನಿಕ ಬಂಡವಾಳಶಾಹಿ ಸಮಾಜದಲ್ಲಿ ಅನ್ಯಗ್ರಹ ಜೀವಿಗಳಂತೆಯೇ ಕಾಣತೊಡಗುತ್ತಾರೆ. ನಗರಗಳು ಬೆಳೆಯುತ್ತಿರುವಂತೆಲ್ಲಾ ಹೊರವಲಯದಲ್ಲಿ ವರ್ತುಲ ರಸ್ತೆಗಳು ನಿರ್ಮಾಣವಾಗ ತೊಡಗುತ್ತವೆ. ಆ ಸಂದರ್ಭದಲ್ಲಿ ತಲೆಎತ್ತುವ ಊರ್ಧ್ವಮುಖಿ ವಸತಿ ಸಮುಚ್ಚಯಗಳ ಮತ್ತು ಗಗನ ಚುಂಬಿ ಕಟ್ಟಡಗಳ ನಿವಾಸಿಗಳಿಗೆ, ಈ ಶ್ರಮಿಕರ ವಸತಿ ಸಮೂಹಗಳು ಸ್ಲಂಗಳಂತೆ ಕಾಣಲಾರಂಭಿಸುತ್ತವೆ. ಮುಂಬೈನಂತಹ ನಗರಗಳಲ್ಲಿ ಇಂತಹ ಹಲವಾರು ಬಡಾವಣೆಗಳು ಮತ್ತಷ್ಟು ದೂರಕ್ಕೆ ರವಾನಿಸಲ್ಪಟ್ಟಿರುವುದೂ ಇದೆ. ಭೂಮಿ ಅಥವಾ ನಿವೇಶನದ ಹಕ್ಕುಗಳಿಲ್ಲದೆ, ಸರಕಾರ ನೀಡುವ ವಸತಿ ಸೌಕರ್ಯ ಯೋಜನೆಗಳಡಿ ತಮ್ಮ ನೆಲೆ ಕಂಡುಕೊಳ್ಳುವ ಶ್ರಮಜೀವಿ ವರ್ಗಗಳು ಶಾಶ್ವತವಾಗಿ ಪರಾವಲಂಬಿಗಳಾಗಿಯೇ ಉಳಿಯುವಂತೆ ಬಂಡವಾಳಶಾಹಿ ಅರ್ಥ ವ್ಯವಸ್ಥೆ ಎಚ್ಚರಿಕೆ ವಹಿಸುತ್ತದೆ. ನಗರೀಕರಣ ಪ್ರಕ್ರಿಯೆ ಪೂರ್ಣಗೊಂಡು, ಆಧುನಿಕತೆ ಮೇಳೈಸಿದ ಕೂಡಲೇ ಈ ಸ್ಲಂ ನಿವಾಸಿಗಳು ಪರಕೀಯರಾಗಿಬಿಡುತ್ತಾರೆ. ಹಾಗಾಗಿಯೇ ರೈಲ್ವೆ ಇಲಾಖೆಯೂ ಸಹ ರೈಲು ಮಾರ್ಗಗಳ ಇಕ್ಕೆಲಗಳಲ್ಲಿ ವರ್ಷಗಳಿಂದ ನೆಲೆಸಿರುವ ಲಕ್ಷಾಂತರ ಶ್ರಮಜೀವಿಗಳನ್ನು ಒಕ್ಕಲೆಬ್ಬಿಸಲು ಸುಪ್ರೀಂಕೋರ್ಟ್ ಮೊರೆ ಹೋಗಿದ್ದನ್ನು ಇಲ್ಲಿ ಸ್ಮರಿಸಬಹುದು. ಸಂಸತ್ತಿನಲ್ಲಿ ರೈಲ್ವೆ ಸಚಿವ ಪಿಯೂಷ್ ಗೋಯಲ್ ನೀಡಿರುವ ಅಧಿಕೃತ ಮಾಹಿತಿಯ ಅನುಸಾರ, ದೇಶಾದ್ಯಂತ ರೈಲ್ವೆ ಇಲಾಖೆಯ 17 ವಲಯಗಳಲ್ಲಿ 814 ಹೆಕ್ಟೇರ್ ಭೂ ಪ್ರದೇಶ ಅತಿಕ್ರಮಣಕ್ಕೊಳಗಾಗಿದೆ. ಮೆಟ್ರೋಗಳಲ್ಲಿ ಮತ್ತು ಬೃಹತ್ ನಗರಗಳಲ್ಲಿ ರೈಲು ಮಾರ್ಗಗಳು ಸಂಪರ್ಕ ಕಲ್ಪಿಸುವ ಮಾರ್ಗದಲ್ಲೇ ಅತಿ ಹೆಚ್ಚಿನ ಅತಿಕ್ರಮಣವಾಗಿರುವುದಾಗಿ ಸಚಿವರು ಹೇಳಿದ್ದಾರೆ. ಹಿಮಾಚಲಪ್ರದೇಶ, ಪಂಜಾಬ್, ಹರಿಯಾಣ, ಜಮ್ಮು-ಕಾಶ್ಮೀರ, ಉತ್ತರಪ್ರದೇಶ, ಉತ್ತರಾಖಂಡ, ಚಂಡಿಗಡ ಮತ್ತು ದೆಹಲಿಯನ್ನೊಳಗೊಂಡ ಉತ್ತರ ರೈಲ್ವೆ ವಲಯದಲ್ಲಿ 175 ಹೆಕ್ಟೇರ್, ವಾಯವ್ಯ ರೈಲ್ವೆವಲಯದ 141 ಎಕರೆ ಭೂಮಿ ಅತಿಕ್ರಮಣಕ್ಕೊಳಗಾಗಿರುವುದಾಗಿ ರೈಲ್ವೆ ಸಚಿವಾಲಯ ವರದಿ ಸಲ್ಲಿಸಿದೆ. ಈ ಅವಸ್ಥೆಯನ್ನು ಕಂಡೇ ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯವೂ ಮಧ್ಯಪ್ರವೇಶಿಸಿದ್ದು, ರೈಲ್ವೆ ಇಲಾಖೆಯ ಭೂಮಿಯ ಒತ್ತುವರಿಯನ್ನು ಸಂಪೂರ್ಣವಾಗಿ ಮುಕ್ತಗೊಳಿಸುವಂತೆ ಆದೇಶ ನೀಡಿದೆ. ಈ ಸಂದರ್ಭದಲ್ಲಿ ನ್ಯಾಯಾಲಯವು, ‘‘ ಭಾರತದ ಎಲ್ಲ ಪ್ರಮುಖ ನಗರಗಳೂ ಸ್ಲಂಗಳಾಗಿವೆ ’’ ಎಂದು ಹೇಳಿರುವುದು ಸೂಕ್ಷ್ಮವಾಗಿ ಗಮನಿಸಬೇಕಾದ ಅಂಶ. ಸೂರತ್ ಮತ್ತು ಜಲಗಾಂವ್ ನಡುವೆ ಕಳೆದ 60 ವರ್ಷಗಳಿಂದ ರೈಲ್ವೆ ಇಲಾಖೆಗೆ ಸೇರಿದ್ದೆನ್ನಲಾದ ಭೂಪ್ರದೇಶದಲ್ಲಿ ಬದುಕು ಕಟ್ಟಿಕೊಂಡಿರುವ ಸಾವಿರಾರು ಶ್ರಮಜೀವಿಗಳ ವಸತಿ ಹಕ್ಕುಗಳ ರಕ್ಷಣೆಗಾಗಿ ಸಲ್ಲಿಸಲಾದ ಅರ್ಜಿಯೊಂದರ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ಈ ತೀರ್ಪು ನೀಡಿತ್ತು. ಈ ಜನರಿಗೆ ಯಾವುದೇ ಪುನರ್ವಸತಿ ಅಥವಾ ಪರಿಹಾರವನ್ನೂ ನೀಡದೆ ಒಕ್ಕಲೆಬ್ಬಿಸಲಾಗುತ್ತಿದೆ ಎಂದು ವಕೀಲರಾದ ಕಾಲಿನ್ ಗೊನ್ಸಾಲ್ವಿಸ್ ಆರೋಪಿಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ಉಚ್ಚಾಟಿತವಾದ ಪ್ರತಿಯೊಂದು ಗುಡಿಸಲಿಗೂ ತಲಾ ಎರಡು ಸಾವಿರ ರೂ. ಪರಿಹಾರ ನೀಡುವಂತೆಯೂ ಕೋರ್ಟ್ ಆದೇಶಿಸಿತ್ತು. ಆಧುನಿಕ, ಸುಶಿಕ್ಷಿತ, ಹಿತವಲಯದ, ಮಧ್ಯಮ ವರ್ಗದ ಜನಸಮುದಾಯಗಳು ಪರಿಭಾವಿಸುವ ಆಧುನಿಕತೆ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ, ಇಲ್ಲಿ ಬಳಸಲಾಗುವ ಪರಿಭಾಷೆಯೂ ಆಳುವವರ ಭಾಷೆಯನ್ನೇ ಅನುಕರಿಸುವುದು ಸಹಜ ಪ್ರಕ್ರಿಯೆಯಾಗಿಯೇ ಕಾಣುತ್ತದೆ. ಹಾಗಾಗಿಯೇ ಜಾಗತೀಕರಣ ಮತ್ತು ನವ ಉದಾರವಾದದ ಫಲಾನುಭವಿಗಳಿಗೆ, ಅರ್ಥಾತ್ ಹಿತವಲಯದ ಮಧ್ಯಮವರ್ಗಗಳಿಗೆ, ತಮಗೆ ಸೇರಿರುವ 12 ಸಾವಿರ ಅಥವಾ 6 ಸಾವಿರ ಚದರಡಿ ನಿವೇಶನದ ಹಕ್ಕು ಪರಮೋಚ್ಚ ಹಕ್ಕು ಎನಿಸಿದರೂ, ಭೂಮಿಯೇ ಇಲ್ಲದೆ ಶಾಶ್ವತವಾಗಿ ಪರಾವಲಂಬಿಗಳಾಗಿಯೇ ಬದುಕುವ, ಸದಾ ಉಚ್ಚಾಟನೆ ಅಥವಾ ಎತ್ತಂಗಡಿಯ ಭೀತಿಯಲ್ಲೇ ಬದುಕುವವರ ಬವಣೆ ಗೋಚರಿಸುವುದೂ ಇಲ್ಲ. ಎಷ್ಟೋ ಸಂದರ್ಭಗಳಲ್ಲಿ ತಮ್ಮ ನಡುವೆ ಈ ಶ್ರಮಜೀವಿಗಳ ಇರುವಿಕೆಯೇ ಅಪಥ್ಯವಾಗಿಬಿಡುತ್ತದೆ. ಭಾರತದ ಸಂದರ್ಭದಲ್ಲಿ ಇಲ್ಲಿಯೂ ಜಾತಿ ಶ್ರೇಣೀಕರಣವೇ ಪ್ರಧಾನ ಪಾತ್ರ ವಹಿಸುವುದನ್ನು ಅಲ್ಲಗಳೆಯಲಾಗುವುದಿಲ್ಲ. ಬುಲ್ಡೋಜರ್ ಸಂಸ್ಕೃತಿಯನ್ನು ಕಾನೂನು ಬದ್ಧವಾಗಿ ಜಾರಿಗೊಳಿಸಲು ಸಜ್ಜಾಗುತ್ತಿರುವ ಆಳುವ ವರ್ಗಗಳ ಉದ್ದೇಶ ಏನೇ ಇರಲಿ, ಸಾಮಾನ್ಯ ನಾಗರಿಕರಾಗಿ, ಸ್ವಾವಲಂಬಿ ಭಾರತದ ಸತ್ ಪ್ರಜೆಗಳಾಗಿ, ಆಧುನಿಕತೆಯ ಫಲಾನುಭವಿಗಳಾಗಿ ತಮ್ಮದೇ ಆದ ನೆಲೆ ಕಂಡುಕೊಂಡಿರುವ ಬೃಹತ್ ಜನಸಮುದಾಯಗಳಿಗೆ ಈ ವಾಸ್ತವ ಸನ್ನಿವೇಶಗಳು ಭಿನ್ನವಾಗಿಯೇ ಕಾಣಬೇಕಲ್ಲವೇ? ಬುಲ್ಡೋಜರ್ ಆಧುನಿಕ ಬಂಡವಾಳಶಾಹಿ ಜಗತ್ತನ್ನು ನಿರ್ಮಿಸುವ ಒಂದು ಯಂತ್ರವಷ್ಟೇ ಅಲ್ಲ, ಸಾಂಪ್ರದಾಯಿಕ ಶ್ರಮಜೀವಿಗಳ ಜಗತ್ತನ್ನು ಪಲ್ಲಟ ಗೊಳಿಸುವ ಅಸ್ತ್ರವೂ ಹೌದು ಎಂಬ ವಾಸ್ತವವನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ.

Writer - ನಾ ದಿವಾಕರ

contributor

Editor - ನಾ ದಿವಾಕರ

contributor

Similar News