ಕೊಲ್ಲೂರು ದೇವಸ್ಥಾನ ವ್ಯಾಪ್ತಿಯಲ್ಲಿ ಸ್ವಚ್ಛತೆ, ಮೂಲಸೌಕರ್ಯಕ್ಕೆ ಆದ್ಯತೆ ನೀಡಿ: ಡಿಸಿ ಕೂರ್ಮಾರಾವ್
ಉಡುಪಿ : ಕೊಲ್ಲೂರು ದೇವಸ್ಥಾನ ವ್ಯಾಪ್ತಿಯಲ್ಲಿ ಆಸುಪಾಸಿನ ಪ್ರದೇಶವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದರ ಜೊತೆಗೆ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಹೇಳಿದ್ದಾರೆ.
ಸೋಮವಾರ ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನ ಸಮಿತಿಯ ಆಡಳಿತ ಕಚೇರಿ ಸಭಾಂಗಣದಲ್ಲಿ ದೇವಸ್ಥಾನದ ಅಭಿವೃಧ್ದಿ ಕಾರ್ಯಗಳ ಬಗ್ಗೆ ನಡೆದ ವ್ಯವಸ್ಥಾಪನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಮುಕಾಂಬಿಕಾ ದೇವಸ್ಥಾನ ಸೇರಿದಂತೆ ಪರಿಸರ ವ್ಯಾಪ್ತಿಯಲ್ಲಿ, ಎಪ್ರಿಲ್, ಮೇ ಹಾಗೂ ಜೂನ್ ತಿಂಗಳ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು. ಕುಡಿಯುವ ನೀರಿನ ಸಮಸ್ಯೆಗಳ ಪರಿಹಾರಕ್ಕೆ ಪ್ರತ್ಯೇಕ ಸಹಾಯವಾಣಿ ತೆರೆದು, ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕು. ಈಗಾಗಲೇ ಕುಡಿಯುವ ನೀರು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಕೈಗೊಂಡಿರುವ ನೀರು ಸರಬರಾಜು ಘಟಕದ ನಿರ್ವಹಣೆಯನ್ನು ದೇವಸ್ಥಾನ ಹಾಗೂ ಸ್ಥಳಿಯ ಗ್ರಾಪಂಗಳ ಸಹಯೋಗದೊಂದಿಗೆ ಉತ್ತಮ ರೀತಿಯಲ್ಲಿ ಕೈಗೊಳ್ಳುವಂತೆ ಸೂಚಿಸಿದರು.
ಕೊಲ್ಲೂರು ವ್ಯಾಪ್ತಿಯಲ್ಲಿ ಕೈಗೊಂಡಿರುವ ಯುಜಿಡಿ ಕಾಮಗಾರಿಗಳು ಈಗಾಗಲೇ ಪೂರ್ಣ ಪ್ರಮಾಣದಲ್ಲಿ ಮುಗಿದಿದ್ದು, ೩೩೪ ಕಟ್ಟಡಗಳಿಗೆ ಸಂಪರ್ಕ ನೀಡಲಾಗಿದೆ. ಬಾಕಿ ಉಳಿದ ಕಟ್ಟಡಗಳಿಗೂ, ಶೀಘ್ರದಲ್ಲಿ ಯುಜಿಡಿ ಸಂಪರ್ಕ ವನ್ನು ಕಲ್ಪಿಸುವ ಮೂಲಕ ಕೊಲ್ಲೂರು ದೇವಸ್ಥಾನ ವ್ಯಾಪ್ತಿಯ ತ್ಯಾಜ್ಯ ನೀರು, ಸೌಪರ್ಣಿಕ ನದಿಯನ್ನು ಸೇರಿ ಕಲುಷಿತಗೊಳಿಸದಂತೆ ನೋಡಿಕೊಳ್ಳಬೇಕು ಎಂದವರು ಹೇಳಿದರು.
ಕುಡಿಯುವ ನೀರಿನ ಕಾಮಗಾರಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಅಲ್ಲದೇ ಸ್ಥಳೀಯ ರೈತರು ಕೃಷಿ ಚಟುವಟಿಕೆಗಳಿಗೆ ವಿದ್ಯುತ್ ಸಂಪರ್ಕ ಪಡೆದು ಕೊಂಡಿದ್ದಾರೆ. ಆದರೆ ಅವುಗಳ ಚಾಲನೆಗೆ ಅಗತ್ಯರುವ ವಿದ್ಯುತ್ ವೋಲ್ಟೇಜ್‌ನ ಸಮಸ್ಯೆ ಇದೆ. ಅದನ್ನು ಶೀಘ್ರವೇ ಬಗೆಹರಿಸಬೇಕು. ಈಗಾಗಲೇ ಹೊಸ ಸಬ್ ಸ್ಟೇಶನ್ ನಿರ್ಮಾಣಕ್ಕೆ ಜಾಗವನ್ನೂ ಸಹ ನೀಡಲಾಗಿದೆ. ಈ ಕಾಮಗಾರಿಗೆ ಅರಣ್ಯ ಇಲಾಖೆಯಿಂದ ಅಗತ್ಯಅನುಮತಿ ಪಡೆದು ಶೀಘ್ರದಲ್ಲಿ ಆರಂಭಿಸಬೇಕು ಎಂದು ಕೂರ್ಮಾರಾವ್ ತಿಳಿಸಿದರು.
ಪ್ಲಾಸ್ಟಿಕ್ ಮುಕ್ತಗೊಳಿಸಿ:ಕೊಲ್ಲೂರನ್ನು ಪ್ಲಾಸ್ಟಿಕ್ ಮುಕ್ತಗೊಳಿಸಬೇಕು. ಇದಕ್ಕಾಗಿ ದೇವಸ್ಥಾನ ವತಿಯಿಂದ ಮಹಿಳಾ ಮಂಡಳಿಗಳಿಗೆ ಅಗತ್ಯ ತರಬೇತಿ ನೀಡಿ, ಬಟ್ಟೆಯ ಬ್ಯಾಗ್‌ಗಳನ್ನು ತಯಾರಿಸಿ, ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಕೊಲ್ಲೂರು ದೇವಸ್ಥಾನದ ವತಿಯಿಂದ ಗೋಶಾಲೆ ನಿರ್ಮಾಣಕ್ಕೆ ಅಗತ್ಯ ವಿರುವ ಭೂಮಿಯನ್ನು ಗುರುತಿಸ ಲಾಗಿದೆ. ಅದನ್ನು ಶೀಘ್ರದಲ್ಲಿಯೇ ವ್ಯವಸ್ಥಾಪನಾ ಸಮಿತಿಗೆ ನೀಡಲಾಗುವುದು. ಅರಣ್ಯ ಇಲಾಖೆ ವತಿಯಿಂದ ಟ್ರೀಪಾರ್ಕ್,ದೇವಸ್ಥಾನ ವತಿಯಿಂದ ಉದ್ಯಾನವನ, ಮ್ಯೂಸಿಯಂ ನಿರ್ಮಾಣಕ್ಕೆ ಮುಂದಾಗಬೇಕು ಎಂದು ದೇವಾಲಯದ ಸಿಇಓಗೆ ಸೂಚನೆ ನೀಡಿದರು.
ಕೊಲ್ಲೂರು ದೇವಾಲಯದ ವತಿಯಿಂದ ನಡೆಸುತ್ತಿರುವ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ದೆಹಲಿ ಮಾದರಿಯನ್ನು ಅನುಸರಿಸುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ದೆಹಲಿಗೆ ತೆರಳಿ ಈ ಬಗ್ಗೆ ಅಧ್ಯಯನ ಮಾಡಿ ಬರುವಂತೆ ತಿಳಿಸಿದರು.
ಜಿಲ್ಲಾ ಪಂಚಾಯತ್ ಸಿಇಓ ಡಾ.ನವೀನ್ ಭಟ್ ಮಾತನಾಡಿ, ಕೊಲ್ಲೂರು ಗ್ರಾಪಂ ವ್ಯಾಪ್ತಿಯಲ್ಲಿ ಸಂಗ್ರಹವಾ ಗುವ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ಪಂಚಾಯತ್ ವತಿಯಿಂದ ತ್ಯಾಜ್ಯದಿಂದ ಬಯೋಗ್ಯಾಸ್ ಘಟಕ ಸ್ಥಾಪನೆಗೆ ಮುಂದಾಗಬೇಕು. ಇಲ್ಲಿ ಉತ್ಪಾದಿಸುವ ಗ್ಯಾಸ್‌ನ್ನು ಸ್ಥಳೀಯ ಹಾಸ್ಟೆಲ್ ಗಳಿಗೆ ನೀಡಬೇಕು ಎಂದರು.
ಸಭೆಯಲ್ಲಿ ಕೊಲ್ಲೂರು ಗ್ರಾಪಂ ಅಧ್ಯಕ್ಷ ಸಂತೋಷ್ ಭಟ್, ಸ್ಥಳೀಯ ಸಮಸ್ಯೆ ಗಳ ಬಗ್ಗೆ ಸಮಿತಿಯ ಗಮನ ಸೆಳೆದರು. ಕುಂದಾಪುರ ಉಪ ವಿಭಾಗಾಧಿಕಾರಿ ಕೆ.ರಾಜು, ಬೈಂದೂರು ತಹಶೀಲ್ದಾರ್ ಶೋಭಾಲಕ್ಷ್ಮಿ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಪದಾಧಿಕಾರಿಗಳು, ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.