ಹಿಂದಿಯನ್ನು ರಾಷ್ಟ್ರಭಾಷೆ ಎಂದು ಒಪ್ಪಲು ಸಾಧ್ಯವಿಲ್ಲ: ಪ್ರವೀಣ್ ಶೆಟ್ಟಿ

Update: 2022-04-28 15:04 GMT
ಪ್ರವೀಣ್ ಶೆಟ್ಟಿ

ಉಡುಪಿ : ನಟ ಸುದೀಪ್ ಗಟ್ಟಿಯಾದ ನಿಲುವು ಪ್ರಕಟಿಸಿದ್ದಾರೆ. ಇಡೀ ಕನ್ನಡಿಗರು ಅವರ ಬೆಂಬಲಕ್ಕೆ ನಿಂತಿದ್ದೆವೆ. ಅಜಯ್ ದೇವಗನ್ ಮೊದಲು ಆಲೋಚನೆ ಮಾಡಬೇಕು. 22 ಭಾಷೆಗಳಿಗೆ ರಾಷ್ಟ್ರೀಯ ಭಾಷೆಯ ಸ್ಥಾನಮಾನ ಇದೆ. ಅದರಲ್ಲಿ ಹಿಂದಿಯೂ ಕೂಡ ಒಂದು ಅಷ್ಟೇ. ಯಾವುದೇ ಕಾರಣಕ್ಕೆ ಹಿಂದಿಯನ್ನು ರಾಷ್ಟ್ರಭಾಷೆ ಎಂದು ಒಪ್ಪಲು ಸಾಧ್ಯವಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಹೇಳಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕನ್ನಡಕ್ಕೂ ರಾಷ್ಟ್ರೀಯ ಭಾಷೆಯ ಸ್ಥಾನಮಾನ ಇದೆ. ನಮಗೆ ಕನ್ನಡವೇ ರಾಷ್ಟ್ರೀಯ ಭಾಷೆ. ಅಜಯ್ ದೇವಗನ್‌ಗೆ ನಾವು ಎಚ್ಚರಿಕೆ ಕೊಡುತ್ತೇವೆ. ಹಿಂದಿಯಲ್ಲಿ ಡಬ್ ಮಾಡಿ ಬಿಡುತ್ತೀರ ಎಂದು ಅಜಯ್ ದೇವಗನ್ ಕೇಳಿದ್ದಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕದ ಕೊಡುಗೆ ಅಪಾರವಾಗಿದೆ. ಕರ್ನಾಟಕ ಕನ್ನಡಿಗರನ್ನು ಬಿಟ್ಟು ಯಾವತ್ತೂ ಭಾರತ ದೇಶ ಆಗಿಲ್ಲ ಎಂದರು.

ಕನ್ನಡಿಗರನ್ನು ಕೆಣಕಲು ಬಂದರೆ ರಕ್ಷಣಾ ವೇದಿಕೆ ಕೈಕಟ್ಟಿ ಕೊರಲ್ಲ. ಅಜಯ್ ದೇವಗನ್ ವಿರುದ್ಧ ತೀವ್ರ ಹೋರಾಟ ಮಾಡುತ್ತೇವೆ. ಅಜಯ್ ದೇವಗನ್ ಕನ್ನಡಿಗರಲ್ಲಿ ಕ್ಷಮೆ ಕೇಳಬೇಕು. ಅಜಯ್ ದೇವಗನ್ ಸಿನಿಮಾ ಕರ್ನಾಟಕಕ್ಕೆ ಕಾಲಿಡಲು ಬಿಡಲ್ಲ. ಸರಕಾರ ಕನ್ನಡಿಗರ ಪರವಾಗಿ ಗಮನಹರಿಸಬೇಕು. ನಾವೆಲ್ಲ ಕನ್ನಡಿಗರು ಒಗ್ಗಟಾಗಿ ಹಿಂದಿ ಯನ್ನು ವಿರೋಧಿಸುವ ಕೆಲಸ ಮಾಡುತ್ತಿದ್ದೇವೆ. ಹಿಂದಿಯನ್ನು ನಮ್ಮ ಮೇಲೆ ಹೇರಿ ಉದ್ಯೋಗ ಬದುಕು ಕಿತ್ತು ಕೊಳ್ಳುವ ಕೆಲಸ ಮಾಡಬಾರದು ಎಂದು ಅವರು ತಿಳಿಸಿದರು.

ಎಲ್ಲಾ ರಾಜಕೀಯ ಮುಖಂಡರು, ನಟರು ಧ್ವನಿ ಎತ್ತಬೇಕು. ಕನ್ನಡದ ಸಿನಿಮಾಗಳು ರಾಷ್ಟ್ರವನ್ನು ಮೀರಿ ಹೋಗುತ್ತಿದೆ. ಇದನ್ನು ಅರಗಿಸಿಕೊಳ್ಳಲು ಹಿಂದಿವಾಲಗಳಿಗೆ ಆಗುತ್ತಿಲ್ಲ. ಆದುದರಿಂದ ನಮ್ಮ ಮೇಲೆ ದಬ್ಬಾಳಿಕೆ ಮಾಡು ತ್ತಿದ್ದಾರೆ. ಕನ್ನಡಕ್ಕೆ ತೊಂದರೆಯಾದಾಗ, ದಬ್ಬಾಳಿಕೆ ನಡೆದಾಗ ನಮ್ಮ ರಾಜ್ಯ ಸರಕಾರ ನಮ್ಮ ಪರವಾಗಿ ನಿಲ್ಲಬೇಕು ಎಂದು ಅವರು ಒತ್ತಾಯಿಸಿದರು.

ಸರಕಾರ ಕನ್ನಡಿಗರ ಪರವಾಗಿರಬೇಕೆಂಬ ಕಾರಣಕ್ಕೆ ಮತ ಹಾಕಿದ್ದೇವೆ. ಭಾರತ ವನ್ನು ನೋಡಲು ಮೋದಿ ಇದ್ದಾರೆ. ಹೈಕಮಾಂಡ್ ಅನ್ನು ಮೀರಿ ಕರ್ನಾಟಕದ ಪರ ನಿಲುವು ತೆಗೆದುಕೊಳ್ಳಬೇಕು. ಕನ್ನಡ ಮತ್ತು ದೇಶ ಎರಡನ್ನು ನಾವು ಪ್ರೀತಿಸುವ ಜನ. ಕನ್ನಡಿಗರ ಮುಖ್ಯಮಂತ್ರಿ ಕನ್ನಡಿಗರ ಪರವೇ ಇರಬೇಕು. ಕನ್ನಡದ ವಿಷಯ ಬಂದಾಗ ಮೋದಿ, ಅಮಿತ್ ಷಾ ಹೇಳಿದ ಹಾಗೇ ಕೇಳುತ್ತೆನೆಂದರೆ ಆಗುವುದಿಲ್ಲ. ಸರಕಾರ ಯಾವತ್ತು ಕನ್ನಡಿಗರ ಪರ ಇರಬೇಕು ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News