ಸೌದಿ ಅರೇಬಿಯಾ: ಪಾಕಿಸ್ತಾನ ಪ್ರಧಾನಿಯನ್ನು ‘ಕಳ್ಳ’ ಎಂದು ನಿಂದಿಸಿದ ಪಾಕ್ ಯಾತ್ರಿಕರ ಬಂಧನ

Update: 2022-04-30 18:21 GMT
PHOTO PTI

ರಿಯಾದ್, ಎ.30: ಸೌದಿ ಅರೇಬಿಯಾಕ್ಕೆ ಅಧಿಕೃತ ಭೇಟಿ ನೀಡಿರುವ ಪಾಕಿಸ್ತಾನದ ಪ್ರಧಾನಿ ಶಹಬಾರ್ ಶರೀಫ್ ಮತ್ತವರ ನಿಯೋಗವನ್ನು ಉದ್ದೇಶಿಸಿ ʼಚೋರ್‌ʼ (‘ಕಳ್ಳರು’) ಎಂದು ಘೋಷಣೆ ಕೂಗಿ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿ ಪಾಕ್ ಮೂಲದ ಯಾತ್ರಿಗಳನ್ನು ಬಂಧಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಪಾಕಿಸ್ತಾನದ ಪ್ರಧಾನಿಯಾಗಿ ನೇಮಕಗೊಂಡ ಬಳಿಕ ತನ್ನ ಪ್ರಪ್ರಥಮ ವಿದೇಶ ಪ್ರವಾಸ ಕೈಗೊಂಡಿರುವ ಶಹಬಾಝ್ ಜತೆ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ , ಸಚಿವರಾದ ಮರಿಯಮ್ ಔರಂಗಜೇಬ್ ಮತ್ತು ಶಹಝಾನ್ ಬುಗ್ತಿ ಹಾಗೂ ಉನ್ನತ ಅಧಿಕಾರಿಗಳ ನಿಯೋಗವೂ ಸೌದಿ ಅರೆಬಿಯಾಕ್ಕೆ ತೆರಳಿದೆ. ಮದೀನಾಕ್ಕೆ ಗುರುವಾರ ಆಗಮಿಸಿದ ನಿಯೋಗ ಅಲ್ಲಿನ ಪವಿತ್ರ ಮಸೀದಿಗೆ ಪ್ರಾರ್ಥನೆಗೆಂದು ತೆರಳಿದಾಗ ಅಲ್ಲಿದ್ದ ಯಾತ್ರಿಕರ ತಂಡವೊಂದು ‘ಚೋರ್ ಚೋರ್(ಕಳ್ಳರು) ಎಂದು ಕೂಗಿ ಪ್ರತಿಭಟನೆ ನಡೆಸಿದ್ದು ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ‌

ಇನ್ನೊಂದು ವೀಡಿಯೊದಲ್ಲಿ, ಇತರ ಸಚಿವರಾದ ಮರಿಯಮ್ ಔರಂಗಜೇಬ್ ಮತ್ತು ಶಹಝಾನ್ ಬುಗ್ತಿಯನ್ನು ಯಾತ್ರಿಗಳ ತಂಡ ನಿಂದಿಸಿದಾಗ ಅವರನ್ನು ಸೌದಿ ಪೊಲೀಸರು ಅಲ್ಲಿಂದ ಕರೆದೊಯ್ಯುತ್ತಿರುವುದು, ಈ ಸಂದರ್ಭ ಓರ್ವ ವ್ಯಕ್ತಿ ಸಚಿವ ಬುಗ್ತಿಯ ತಲೆಕೂದಲನ್ನು ಹಿಡಿದು ಎಳೆಯುವ ದೃಶ್ಯವಿದೆ.

ಈ ಹಿನ್ನೆಲೆಯಲ್ಲಿ ಪವಿತ್ರ ಮಸೀದಿಯ ಪಾವಿತ್ರ್ಯಕ್ಕೆ ಅಗೌರವ ತೋರಿದ ಮತ್ತು ನಿಯಮ ಉಲ್ಲಂಘಿಸಿದ್ದಕ್ಕಾಗಿ ಯಾತ್ರಿಕರ ತಂಡವನ್ನು ಬಂಧಿಸಲಾಗಿದೆ ಎಂದು ಪಾಕಿಸ್ತಾನದಲ್ಲಿರುವ ಸೌದಿ ರಾಯಭಾರ ಕಚೇರಿಯ ಮಾಧ್ಯಮ ವಿಭಾಗದ ನಿರ್ದೇಶಕರ ಹೇಳಿಕೆಯನ್ನು ಉಲ್ಲೇಖಿಸಿ ಡಾನ್ ದಿನಪತ್ರಿಕೆ ವರದಿ ಮಾಡಿದೆ. ಪಾಕ್ ಪ್ರಧಾನಿಯಾಗಿ ನೇಮಕಗೊಂಡಿರುವ ಶಹಬಾರ್ ಶರೀಫ್ ಮತ್ತವರ ಪುತ್ರ ಹಮ್ಝಾ ಶರೀಫ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಮತ್ತು ಭ್ರಷ್ಟಾಚಾರ ಆರೋಪವಿದೆ. ಆದರೆ ಇಬ್ಬರೂ ಆರೋಪವನ್ನು ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News