ನಯನತಾರಾ ಸೆಹಗಲ್ ಎಂಬ ಭಾರತೀಯ ಪ್ರಜ್ಞೆ

Update: 2022-05-06 19:30 GMT

ನಯನತಾರಾ ಮೇ 10ರಂದು 95ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಇದು ಅವರಿಗೆ 'ಜನ್ಮದಿನದ ಶುಭಾಶಯ'ಗಳನ್ನು ಕೋರುವ ಸಮಯವಲ್ಲ. ಹಾಗಾಗಿ, ಅವರು ಏನಾಗಿದ್ದಾರೆಯೋ ಅದಕ್ಕಾಗಿ ಅವರಿಗೆ ನಾನು ಕೃತಜ್ಞತೆ ಸಲ್ಲಿಸಬಯಸುತ್ತೇನೆ. ಓರ್ವ ಲೇಖಕಿ ಮತ್ತು ನಾಗರಿಕಳಾಗಿ ಅವರು ನಮ್ಮ ಗಣರಾಜ್ಯದ ಅತ್ಯಂತ ಶ್ರೇಷ್ಠ ವೌಲ್ಯಗಳ ಸಾಕಾರಮೂರ್ತಿಯಾಗಿದ್ದಾರೆ. ಅವರು ಗಾಂಧೀಜಿಯ ಬದುಕು ಮತ್ತು ಸಾವಿಗೆ ಸಾಕ್ಷಿಯಾಗಿದ್ದವರು. ಅವರು ಏನು ಮಾಡಿರುವರೋ ಆ ಪೈಕಿ ಹೆಚ್ಚಿನವು ಗಾಂಧೀಜಿಯವರ ಜೀವನದಿಂದ ನೇರವಾಗಿ ಪ್ರಭಾವಿತಗೊಂಡಿವೆ.


1948 ಫೆಬ್ರವರಿ ಒಂದರಂದು, 20 ವರ್ಷದ ಭಾರತೀಯ ಮಹಿಳೆಯೊಬ್ಬರು ತನ್ನ ತಾಯಿಗೆ ಪತ್ರವೊಂದನ್ನು ಬರೆದರು. ಆಗ ಆ ಯುವ ಮಹಿಳೆ ದಿಲ್ಲಿಯಲ್ಲಿದ್ದರು. ಅಮೆರಿಕದ ವೆಲೆಸ್ಲಿ ಕಾಲೇಜಿನಲ್ಲಿ ಪದವಿ ಪಡೆದ ಬಳಿಕ, ಆಗಷ್ಟೇ ಅವರು ದಿಲ್ಲಿಗೆ ಮರಳಿದ್ದರು. ಅವರ ತಾಯಿ ಮಾಸ್ಕೋದಲ್ಲಿದ್ದರು; ಸೋವಿಯತ್ ಯೂನಿಯನ್‌ಗೆ ಭಾರತದ ರಾಯಭಾರಿಯಾಗಿ ಸೇವೆ ಸಲ್ಲಿಸು ತ್ತಿದ್ದರು. ತಂದೆ ನಿಧನರಾಗಿದ್ದರು.

ಜನವರಿ 30ರ ಸಂಜೆ ಗಾಂಧಿ ಹತ್ಯೆಯ ಸುದ್ದಿ ಕೇಳಿದ ತಕ್ಷಣ 20 ವರ್ಷದ ಮಹಿಳೆ 'ಬಿರ್ಲಾ ಹೌಸ್'ಗೆ ಧಾವಿಸಿದ್ದರು. 'ಬಾಪುವಿನ ದೇಹವು ರಕ್ತದಿಂದ ಆವರಿಸಿದ್ದನ್ನು' ಅವರು ಅಲ್ಲಿ ಕಂಡರು. ಆಗಲೂ, 'ಯಾವುದಾದರೂ ಒಂದು ಪವಾಡವು ಅವರನ್ನು ಬದುಕಿಸುತ್ತದೆ' ಎಂಬ ಭರವಸೆಯನ್ನು ನಾವು ಹೊಂದಿದ್ದೆವು ಎಂಬುದಾಗಿ ತಾಯಿಗೆ ಬರೆದ ಪತ್ರದಲ್ಲಿ ಅವರು ಹೇಳಿದ್ದಾರೆ. ''ಗಾಂಧೀಜಿಯ ವಿಷಯದಲ್ಲಿ, ಪವಾಡಗಳನ್ನು ನಂಬಬಹುದಾಗಿತ್ತು'' ಎಂಬುದಾಗಿ ಹತ್ಯೆ ನಡೆದ ಎರಡು ದಿನಗಳ ಬಳಿಕ ಬರೆದ ಪತ್ರದಲ್ಲಿ ಅವರು ಹೇಳಿದ್ದಾರೆ.

''ಬಾಪುವಿಗೆ ಗುಂಡು ಹೊಡೆಯಲಾಗಿದೆ ಎಂಬ ವಿಷಾದದ ಭಾವನೆಯೇ ಮನಸ್ಸನ್ನು ಇಡೀ ದಿನ ಆವರಿಸಿತ್ತು. ಏನೇ ಮಾಡಿದರೂ ಅದನ್ನು ಮನಸ್ಸಿನಿಂದ ತೆಗೆದುಬಿಡಲು ಸಾಧ್ಯವಾಗುತ್ತಿರಲಿಲ್ಲ. ಹಂತಕನನ್ನು ಹಿಡಿಯಲಾಗಿತ್ತು. ಆದರೆ, ಹತ್ಯೆಯಲ್ಲಿ ಇತರರೂ ಶಾಮೀಲಾಗಿರಬೇಕು. ದೇಶವನ್ನು ಆವರಿಸಿಕೊಂಡಿರುವ ಈ ಹುಚ್ಚು ಯಾವುದು? ಈಗ ಬಾಪು ಹೋದ ಮೇಲೆ, ಅದನ್ನು (ಆ ಹುಚ್ಚನ್ನು) ತಡೆಯಲಾಗುತ್ತದೆ ಎನ್ನುವ ಖಾತರಿ ಏನು?'' ಎಂಬುದಾಗಿ ಯುವ ಮಹಿಳೆ ತನ್ನ ತಾಯಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

ಪತ್ರವನ್ನು ಬರೆಯುತ್ತಾ ಮುಂದೆ ಸಾಗುತ್ತಿದ್ದಂತೆಯೇ, ಯುವ ಮಹಿಳೆ ವಾಸ್ತವದೊಂದಿಗೆ ಹೊಂದಿಕೊಂಡರು. ಅವರ ದುಃಖ ಮತ್ತು ಸಂಕಟ ನಿರ್ಧಾರವಾಗಿ ಮಾರ್ಪಟ್ಟಿತು. ''ತನ್ನ ಸಾವಿಗೆ ನಾವು ದುಃಖಿಸಬೇಕೆಂದು ಬಾಪು ಬಯಸಿರಲಾರರು'' ಎಂಬುದಾಗಿ ಅವರು ತನ್ನ ತಾಯಿಗೆ ಹೇಳುತ್ತಾರೆ. ''ತನ್ನ ದೇಹದ ಉಪಸ್ಥಿತಿ ಅಥವಾ ಅನುಪಸ್ಥಿತಿಗೆ ಹೆಚ್ಚಿನ ಮಹತ್ವವಿಲ್ಲ ಎಂಬುದಾಗಿ ಅವರು ಭಾವಿಸಿರಬಹುದು. ಹಾಗಾಗಿ, ಅವರ ದೇಹದ ಅನುಪಸ್ಥಿತಿಗಾಗಿ ದುಃಖಿಸುವ ಬದಲು, ಅವರು ಹೇಗೆ ಬದುಕಿದ್ದರು ಮತ್ತು ಏನು ಹೇಳಿದ್ದರು ಎಂಬುದಕ್ಕೆ ನಾವು ಹೆಚ್ಚಿನ ಮಹತ್ವವನ್ನು ನೀಡಬೇಕು. ಅವರು ಇಷ್ಟು ಸಮಯ ನಮ್ಮಿಂದಿಗೆ ಇದ್ದ ಬಳಿಕ, ನಮ್ಮನ್ನು ಒಮ್ಮೆಲೆ ಬಿಟ್ಟು ಹೋಗಲು ಸಾಧ್ಯವಿಲ್ಲ''.

''ಬಹುಶಃ, ದೇಶಾದ್ಯಂತ ಹರಡಿರುವ ಈ ಹುಚ್ಚು ನಮ್ಮನ್ನು ಎಲ್ಲಿಗೆ ಒಯ್ಯುತ್ತಿದೆ ಎನ್ನುವುದನ್ನು ಅರಿತುಕೊಂಡು ನಾವು ಎಚ್ಚೆತ್ತುಕೊಳ್ಳಬೇಕೆಂದು ದೇವರು ಬಯಸಿರಬೇಕು. ಹಿಂದೆ ಮಾಡಿರುವಂತೆ ಇನ್ನು ನಾವು ಸಮಸ್ಯೆಗಳ ಪರಿಹಾರಕ್ಕೆ ಬಾಪುವಿನತ್ತ ನೋಡಲು ಸಾಧ್ಯವಿಲ್ಲ. ಇನ್ನು ನಮ್ಮ ಆತ್ಮಗಳನ್ನು ನಾವೇ ಶೋಧಿಸಬೇಕು, ನಮ್ಮ ಪ್ರಾರ್ಥನೆಗಳನ್ನು ನಾವೇ ಮಾಡಬೇಕು, ನಮ್ಮ ನಿರ್ಧಾರಗಳನ್ನು ನಾವೇ ತೆಗೆದುಕೊಳ್ಳಬೇಕು'' ಎಂಬುದಾಗಿ ಬರೆಯುತ್ತಾ ಅವರು ತನ್ನ ಪತ್ರವನ್ನು ಮುಗಿಸಿದ್ದಾರೆ.

ಆಧುನಿಕ ಭಾರತೀಯ ಸಾಹಿತ್ಯ ಮತ್ತು ಆಧುನಿಕ ಭಾರತೀಯ ಇತಿಹಾಸದ ವಿದ್ಯಾರ್ಥಿಗಳು, ಈ ಪತ್ರವನ್ನು ಬರೆದವರನ್ನು ಮತ್ತು ಅವರು ಅದನ್ನು ಯಾರಿಗೆ ಬರೆದರು ಎನ್ನುವುದನ್ನು ಈಗಾಗಲೇ ಗುರುತಿಸಿರಬಹುದು. ಪತ್ರವನ್ನು ಬರೆದವರು ಪ್ರಸಿದ್ಧ ಕಾದಂಬರಿಗಾರ್ತಿ ನಯನತಾರಾ ಸೆಹಗಲ್ (ಮೊದಲು ನಯನತಾರಾ ಪಂಡಿತ್ ಆಗಿದ್ದರು) ಮತ್ತು ಪತ್ರವನ್ನು ಸ್ವೀಕರಿಸಿದವರು ವಿಜಯಲಕ್ಷ್ಮಿ ಪಂಡಿತ್ (ಜವಾಹರಲಾಲ್ ನೆಹರೂರ ಅತ್ಯಂತ ಕಿರಿಯ ಸಹೋದರಿ).
ಭಾರತೀಯ ರಾಷ್ಟ್ರೀಯವಾದಿಯಾಗಿದ್ದ ವಿಜಯಲಕ್ಷ್ಮಿ ಪಂಡಿತ್ ಬ್ರಿಟಿಷ್‌ಆಡಳಿತದಲ್ಲಿ ಜೈಲಿಗೆ ಹೋಗಿದ್ದರು. ಸ್ವಾತಂತ್ರಾನಂತರ ಅವರು ರಶ್ಯ, ಅಮೆರಿಕ ಮತ್ತು ಬ್ರಿಟನ್‌ಗಳಲ್ಲಿ ಭಾರತದ ರಾಯಭಾರಿಯಾಗಿ ಸೇವೆ ಸಲ್ಲಿಸಿದರು.

ವಿಜಯಲಕ್ಷ್ಮಿ ಪಂಡಿತ್ ಸಾರ್ವಜನಿಕ ಸೇವೆಯಿಂದ ನಿವೃತ್ತಿ ಪಡೆದ ಬಳಿಕ ಡೆಹ್ರಾಡೂನ್‌ನಲ್ಲಿ ವಾಸಿಸಿದರು. ಇದೇ ನಗರದಲ್ಲಿ ನಾನೂ ಬೆಳೆದೆ. ಆದರೆ ನಾನು ಅವರನ್ನು ಅಲ್ಲಿ ಯಾವತ್ತೂ ನೋಡಲಿಲ್ಲ. ಯಾಕೆಂದರೆ ನಮ್ಮ ಸಾಮಾಜಿಕ ಗುಂಪುಗಳು ತೀರಾ ಭಿನ್ನವಾಗಿದ್ದವು. ಅದೂ ಅಲ್ಲದೆ, ನನ್ನ ಹೆತ್ತವರು ಕಣಿವೆಯ ಒಂದು ತುದಿಯಲ್ಲಿ ವಾಸಿಸಿದರೆ, ವಿಜಯಲಕ್ಷ್ಮಿ ಪಂಡಿತ್ ಇನ್ನೊಂದು ತುದಿಯಲ್ಲಿ ವಾಸಿಸುತ್ತಿದ್ದರು.

ಆದರೂ, 1977 ಮಾರ್ಚ್ ತಿಂಗಳ ಮೊದಲ ವಾರ ದಿಲ್ಲಿ ವಿಶ್ವವಿದ್ಯಾನಿಲಯ ದಲ್ಲಿ ನಡೆದ ರಾಜಕೀಯ ಸಭೆಯೊಂದರಲ್ಲಿ ಅವರು ಮಾತನಾಡುವುದನ್ನು ನಾನು ಕೇಳಿದೆ. ಆಗ ನಾನು ದಿಲ್ಲಿ ವಿಶ್ವವಿದ್ಯಾನಿಲಯದಲ್ಲಿ ಕಲಿಯುತ್ತಿದ್ದೆ. ತುರ್ತು ಪರಿಸ್ಥಿತಿಯನ್ನು ಆಗಷ್ಟೇ ತೆರವುಗೊಳಿಸಲಾಗಿತ್ತು. ಹೊಸದಾಗಿ ಸ್ಥಾಪನೆಯಾದ ಜನತಾ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸಲು ವಿಜಯಲಕ್ಷ್ಮಿ ಪಂಡಿತ್ ಅಲ್ಲಿಗೆ ಬಂದಿದ್ದರು. ಆ ಮೂಲಕ ಅವರು ಕುಟುಂಬ ನಿಷ್ಠೆಯನ್ನು ಮೀರಿ ಸಂವಿಧಾನದ ಪರವಾಗಿ ನಿಂತಿದ್ದರು. ಆಗ ಅವರ ಸೋದರ ಸೊಸೆ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದರು.

ನನ್ನ ಹೆತ್ತವರು 1984ರಲ್ಲಿ ಡೆಹ್ರಾಡೂನ್ ತೊರೆದರು. ಎಂಟು ವರ್ಷಗಳ ಬಳಿಕ ನಾನು ಅಲ್ಲಿಗೆ ಖಾಸಗಿ ಭೇಟಿ ನೀಡಿದೆ. ಭಾರತದ ಪೆಟ್ರೊಕೆಮಿಕಲ್ ಉದ್ದಿಮೆ ನಿರ್ಮಾಣದಲ್ಲಿ ಪ್ರಧಾನ ಪಾತ್ರ ವಹಿಸಿರುವ ತಂತ್ರಜ್ಞಾನಿ ಲವ್‌ರಾಜ್ ಕುಮಾರ್ ಜೊತೆ ದಿಲ್ಲಿಯಿಂದ ಡೆಹ್ರಾಡೂನ್‌ಗೆ ಹೋದೆ. ರೂರ್ಕೀ ಎಂಬ ಪಟ್ಟಣದಲ್ಲಿ ನಾವು ಚಹಾ ಕುಡಿಯಲಿಕ್ಕಾಗಿ ನಿಂತೆವು. 'ಪೊಲಾರಿಸ್' ಎಂಬ ಹೆಸರಿನ ಆ ಹೊಟೇಲ್‌ನಲ್ಲಿ ನಾನು ಎದ್ದು ಕಾಣುವ ಸುಂದರ ಮಹಿಳೆಯೊಬ್ಬರನ್ನು ನೋಡಿದೆ. ಅವರಿಗೆ ಆಗಷ್ಟೇ 60 ವರ್ಷ ದಾಟಿತ್ತು. ಅವರು ನಯನತಾರಾ ಸೆಹಗಲ್ ಆಗಿದ್ದರು. ಲವ್‌ರಾಜ್ ಬಾಂಬೆಯಲ್ಲಿದ್ದಾಗ ಅವರಿಗೆ ನಯನತಾರಾರ ಪರಿಚಯವಿತ್ತು. ಅವರಿಬ್ಬರೂ ಬಾಂಬೆಯಲ್ಲಿ ವಾಸಿಸುತ್ತಿದ್ದರು. ಲವ್‌ರಾಜ್ ನನಗೆ ನಯನತಾರಾರ ಪರಿಚಯ ಮಾಡಿಕೊಟ್ಟರು. ಸ್ವಲ್ಪ ಸಮಯದಿಂದ ನಯನತಾರಾ ಡೆಹ್ರಾಡೂನ್‌ನಲ್ಲೇ ನೆಲೆಸಿದ್ದರು ಹಾಗೂ ಆಗ ದಿಲ್ಲಿಗೆ ಪ್ರಯಾಣಿಸುತ್ತಿದ್ದರು. ದಿಲ್ಲಿಗೆ ಹೋಗುವ ಹಾದಿಯಲ್ಲಿ ನಮ್ಮಂತೆಯೇ ಚಹಾ ಕುಡಿಯುವುದಕ್ಕಾಗಿ ಆ ಹೊಟೇಲ್‌ಗೆ ಬಂದಿದ್ದರು.

ಕಾದಂಬರಿಗಳಲ್ಲದೆ, ನಯನತಾರಾ ಸೆಹಗಲ್ ಇತರ ಕೆಲವು ಮಹತ್ವದ ಕೃತಿಗಳನ್ನೂ ರಚಿಸಿದ್ದಾರೆ. ರಾಷ್ಟ್ರೀಯವಾದಿ ಮೇಲ್ವರ್ಗದ ಮನೆಯೊಂದರಲ್ಲಿ ಬೆಳೆದ ತನ್ನದೇ ಅನುಭವಗಳನ್ನೊಳಗೊಂಡ ಪುಸ್ತಕ 'ಪ್ರಿಸನ್ ಆ್ಯಂಡ್ ಚಾಕೊಲೇಟ್ ಕೇಕ್', ಅವರು ಮತ್ತು ಅವರ ಎರಡನೇ ಗಂಡ ಇ.ಎನ್. ಮಂಗತ್ ರೈ ನಡುವೆ ವಿನಿಮಯಗೊಂಡ ಪತ್ರಗಳನ್ನೊಳಗೊಂಡ ಒಂದು ಹೃದಯಸ್ಪರ್ಶಿ ಪುಸ್ತಕ; ಮತ್ತು ಇಂದಿರಾ ಗಾಂಧಿಯ ರಾಜಕೀಯ ಶೈಲಿ ಕುರಿತ ವಿಶ್ಲೇಷಾತ್ಮಕ ಅಧ್ಯಯನ- ಅವರು ಬರೆದ ಕಾದಂಬರಿಯೇತರ ಪುಸ್ತಕಗಳ ಪೈಕಿ ಕೆಲವು. ಇಂದಿರಾ ಗಾಂಧಿ ಕುರಿತ ಅವರ ಪುಸ್ತಕವು ನನ್ನ ಪುಸ್ತಕಕ್ಕೆ ತುಂಬಾ ಉಪಯುಕ್ತವಾಯಿತು ಎನ್ನುವುದನ್ನು ಇಲ್ಲಿ ಸ್ಮರಿಸಬಯಸುತ್ತೇನೆ.

ಓರ್ವ ಲೇಖಕಿಯಾಗಿ ನಯನತಾರಾ ಸೆಹಗಲ್‌ರನ್ನು ನಾನು ಇಷ್ಟಪಡುತ್ತೇನೆ ಹಾಗೂ ಓರ್ವ ಮಾನವ ಜೀವಿಯಾಗಿ ತಾರಾರನ್ನು ನಾನು ಇಷ್ಟಪಡುತ್ತೇನೆ. ಪೊಲಾರಿಸ್ ಹೊಟೇಲ್‌ನಲ್ಲಿ ನಡೆದ ನಮ್ಮ ಮೊದಲ ಭೇಟಿಯಲ್ಲಿ ನಾವು ಹೆಚ್ಚೇನೂ ಮಾತನಾಡಲಿಲ್ಲ (ಪ್ರಾಯ ಮತ್ತು ಅಂತಸ್ತಿನ ವ್ಯತ್ಯಾಸವು ಹೆಚ್ಚು ಮಾತನಾಡದಂತೆ ನನ್ನನ್ನು ತಡೆಯಿತು). ಆದರೆ, ನಂತರದ ವರ್ಷಗಳಲ್ಲಿ ನಾನು ಅವರನ್ನು ಚೆನ್ನಾಗಿ ತಿಳಿದುಕೊಂಡೆ. ಸಾಹಿತ್ಯ ಸಮ್ಮೇಳನಗಳಲ್ಲಿ ಮತ್ತು ನಾನು ಡೆಹ್ರಾಡೂನ್‌ಗೆ ಭೇಟಿ ನೀಡಿದಾಗಲೆಲ್ಲ ಅವರನ್ನು ಭೇಟಿಯಾದೆ, ಪ್ರಚಲಿತ ವಿದ್ಯಮಾನಗಳು ಮತ್ತು ಇತರ ವಿಷಯಗಳ ಬಗ್ಗೆ ನಾವು ಪತ್ರಗಳನ್ನು ವಿನಿಮಯ ಮಾಡಿಕೊಂಡೆವು ಹಾಗೂ ಆಗಾಗ ಫೋನ್‌ನಲ್ಲಿ ಮಾತನಾಡುತ್ತಿದ್ದೆವು. ಪ್ರತಿ ಭೇಟಿಯೊಂದಿಗೆ ಅವರ ಮೇಲೆ ನನಗಿದ್ದ ಅಕ್ಕರೆ ಮತ್ತು ಗೌರವ ಆಳವಾಯಿತು. ನಯನತಾರಾ ಸೊಬಗು ಮತ್ತು ಧೈರ್ಯದ ಸಂಗಮವಾಗಿದ್ದರು; ಅವರು ಅತ್ಯಂತ ಸ್ವಾಭಿಮಾನಿಯಾಗಿದ್ದರು ಮತ್ತು ತನಗಿಂತ ಕೆಳಸ್ತರದ ಜನರ ಬಗ್ಗೆ ಅಗಾಧ ಅನುಕಂಪ ಹೊಂದಿದ್ದರು. ಈ ವಿಷಯಗಳಲ್ಲಿ ಅವರನ್ನು ಹಿಂದಿಕ್ಕುವವರು ನನಗೆ ಗೊತ್ತಿರುವವರಲ್ಲಿ ಬಹುತೇಕ ಯಾರೂ ಇರಲಿಲ್ಲ.

ನನ್ನ ಮತ್ತು ನಯನತಾರಾ ಸೆಹಗಲ್ ನಡುವಿನ ಗೆಳೆತನದಲ್ಲಿ ಅವರಿಂದ ನಾನು ಪಡೆದುಕೊಂಡದ್ದು ಅಗಾಧ; ಅದಕ್ಕೆ ಪ್ರತಿಯಾಗಿ ನಾನು ಕೊಟ್ಟದ್ದು ಅತ್ಯಲ್ಪ. ಅವರ ತಂದೆ ರಂಜಿತ್ ಸೀತಾರಾಮ್ ಪಂಡಿತ್‌ಗೆ ಸಂಬಂಧಿಸಿದ ಪತ್ರಾಗಾರ (ಆರ್ಕೈವ್)ಗಳಲ್ಲಿ ನಾನು ಕಂಡುಕೊಂಡ ಕೆಲವೊಂದು ತುಣುಕುಗಳನ್ನು ಮಾತ್ರ ನಾನು ಅವರಿಗೆ ಕೊಟ್ಟಿದ್ದೇನೆ ಅನಿಸುತ್ತದೆ. ದೇಶಭಕ್ತ ಮತ್ತು ವಿದ್ವಾಂಸರಾಗಿದ್ದ ರಂಜಿತ್ ತನ್ನ ಮಗಳಿಗೆ ಕೇವಲ 16 ವರ್ಷವಾಗಿದ್ದಾಗ ನಿಧನ ಹೊಂದಿದರು. ಹೆಚ್ಚಿನ ಕಾಂಗ್ರೆಸಿಗರು ಬಿ.ಆರ್. ಅಂಬೇಡ್ಕರ್‌ಗೆ ವಿರುದ್ಧವಾಗಿದ್ದಾಗ, ಅವರನ್ನು ರಂಜಿತ್ ಪಂಡಿತ್ ಇಷ್ಟಪಟ್ಟಿದ್ದರು ಹಾಗೂ ಅವರನ್ನು ಭೇಟಿಯಾಗಲೂ ಬಯಸಿದ್ದರು ಎನ್ನುವುದನ್ನು ನಾನು ಕಂಡುಕೊಂಡೆ. ಮೀರತ್ ಪಿತೂರಿ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಕಮ್ಯುನಿಸ್ಟರ ಪರವಾಗಿ ನಿಧಿ ಸಂಗ್ರಹ ಮಾಡಲು ನೆರವಾಗುವಂತೆ ಅವರು ತನ್ನ ಮಾವ ಮೋತಿಲಾಲ್ ನೆಹರೂ ಮತ್ತು ಭಾವ ಜವಾಹರಲಾಲ್ ನೆಹರೂರನ್ನು ಒತ್ತಾಯಿಸಿದ್ದರು. ಕೈದಿಗಳ ಪೈಕಿ ಒಬ್ಬರಾಗಿದ್ದ ಮುಝಫ್ಫರ್ ಅಹ್ಮದ್, ಪಂಡಿತ್‌ರನ್ನು 'ಅನುಕಂಪ ಹೊಂದಿರುವ ಉದಾರ ಹೃದಯದ ವ್ಯಕ್ತಿ' ಎಂಬುದಾಗಿ ಬಳಿಕ ಬಣ್ಣಿಸಿದ್ದಾರೆ.

ಈ ಬಣ್ಣನೆಯು ರಂಜಿತ್ ಪಂಡಿತ್‌ರ ಮಗಳಿಗೂ ಚೆನ್ನಾಗಿ ಹೊಂದುತ್ತದೆ. 2015ರಲ್ಲಿ, ಬಲಪಂಥೀಯರು ನಡೆಸುತ್ತಿದ್ದ ದ್ವೇಷಾಪರಾಧ ಕೃತ್ಯಗಳು ತಾರಕಕ್ಕೇರಿದಾಗ, ಅದನ್ನು ಪ್ರತಿಭಟಿಸಿ ನಯನತಾರಾ ತನ್ನ ಸಾಹಿತ್ಯ ಅಕಾಡಮಿ ಪ್ರಶಸ್ತಿಯನ್ನು ಹಿಂದಿರುಗಿಸಿದರು. ''ಭಾರತವು ಹಿಂದೆ ಹೋಗುತ್ತಿದೆ'' ಎಂಬುದಾಗಿ ಅವರು ಹೇಳಿದರು. ''ಸಾಂಸ್ಕೃತಿಕ ವೈವಿಧ್ಯತೆ ಮತ್ತು ಚರ್ಚೆಯೆಂಬ ನಮ್ಮ ಶ್ರೇಷ್ಠ ಕಲ್ಪನೆಯನ್ನು ಅದು ತಿರಸ್ಕರಿಸುತ್ತಿದೆ; ಹಿಂದುತ್ವ ಎಂಬ ಹೊಸ ಸಂಶೋಧನೆಗೆ ಹೊಂದಿಕೊಳ್ಳುವುದಕ್ಕಾಗಿ ಅದು ತನ್ನನ್ನು ತಾನು ಕಿರಿದುಗೊಳಿಸುತ್ತಿದೆ'' ಎಂಬುದಾಗಿ ಅವರು ಅಭಿಪ್ರಾಯಪಟ್ಟರು. ನಮ್ಮ ಪ್ರಧಾನಿ ''ಹೇಗೆ ಮಾತನಾಡಬೇಕೆಂದು ಗೊತ್ತಿರುವ ರಾಜಕಾರಣಿ''ಯಾಗಿದ್ದಾರೆ. ಆದರೆ, ಸಾಹಿತಿಗಳ ಹತ್ಯೆಗಳು ಮತ್ತು ಮುಸ್ಲಿಮರನ್ನು ಹೊಡೆದು ಕೊಲ್ಲುವ ಘಟನೆಗಳ ಬಗ್ಗೆ ಅವರು ವೌನವಾಗಿದ್ದಾರೆ ಎಂದರು. ''ತನ್ನ ಸಿದ್ಧಾಂತವನ್ನು ಬೆಂಬಲಿಸುವ ದುಷ್ಟರನ್ನು ದೂರವಿಡುವ ಧೈರ್ಯವನ್ನು ಅವರು ತೋರಿಸುವುದಿಲ್ಲ ಎಂಬುದಾಗಿ ನಾವು ಭಾವಿಸಬೇಕಾಗಿದೆ'' ಎಂಬುದಾಗಿಯೂ ಅವರು ಅಭಿಪ್ರಾಯಪಟ್ಟರು. (https://www.livemint.com/Politics/zONZfHUAfEn1Ix0JhQAhNP/Nayantara-returns-Sahitya-Akademi-Award-protests-rising-int.html)

ಈ ಪ್ರತಿಭಟನೆಗಾಗಿ ಬಿಜೆಪಿಯ ನಿಂದಕ ಪಡೆಯು ಸೆಹಗಲ್ ಮೇಲೆ ಅನಾಗರಿಕ ಆನ್‌ಲೈನ್ ದಾಳಿ ನಡೆಸಿತು. ಇದರಲ್ಲಿ ಕೆಲವು ಅವಕಾಶವಾದಿ ಪತ್ರಕರ್ತರೂ ಸೇರಿಕೊಂಡರು. ನಯನತಾರಾ ಇಂದಿರಾ ಗಾಂಧಿಯ ಸೋದರ ಸಂಬಂಧಿ ಮತ್ತು ನೆಹರೂರ ಸೋದರ ಸೊಸೆಯಾಗಿರುವುದರಿಂದ ಅವರು ಮಾಡಿರುವ ಟೀಕೆಗಳಿಗೆ ಮಾನ್ಯತೆಯಿಲ್ಲ ಎಂಬುದಾಗಿ ಈ ನಿಂದಕರು ಹೇಳಿಕೊಂಡರು. ಆದರೆ, ವಾಸ್ತವವಾಗಿ, 1970ರ ದಶಕದಲ್ಲಿ ಇಂದಿರಾ ಗಾಂಧಿ ಸರ್ವಾಧಿಕಾರಿಯಾಗಹೊರಟಾಗ ಅವರನ್ನೂ ನಯನತಾರಾ ಟೀಕಿಸಿದ್ದರು ಮತ್ತು ಅದಕ್ಕಾಗಿ ಅವರು ವೈಯಕ್ತಿಕ ಬೆಲೆಯನ್ನೂ ತೆತ್ತರು. ಇಷ್ಟನ್ನು ನಾನಿಲ್ಲಿ ಹೇಳಬಲ್ಲೆ: ಹಿಂದೂ-ಮುಸ್ಲಿಮ್ ಸೌಹಾರ್ದಕ್ಕೆ ನಯನತಾರಾರ ಸೋದರ ಮಾವ (ನೆಹರೂ) ಹೊಂದಿದ್ದ ತಾತ್ವಿಕ ಬದ್ಧತೆಯು ಅವರ (ನಯನತಾರಾರ) ವ್ಯಕ್ತಿತ್ವವನ್ನು ರೂಪಿಸಿತು ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಜೊತೆಗೆ, ಅವರ ಜಾಗತಿಕ ನಿಲುವಿನ ಮೇಲೆ ಅದಕ್ಕಿಂತಲೂ ಹೆಚ್ಚಿನ ಪ್ರಭಾವವನ್ನು ಬೀರಿದ್ದು ಮಹಾತ್ಮಾ ಗಾಂಧಿಯ ಬದುಕು ಮತ್ತು ಪರಂಪರೆ.

ಡೆಹ್ರಾಡೂನ್‌ಗೆ ನಾನು ನೀಡಿದ ಕೊನೆಯ ಭೇಟಿಯ ವೇಳೆ, ನಯನತಾರಾ ಸೆಹಗಲ್‌ರನ್ನು ಅವರ ಮನೆಯಲ್ಲಿ ಭೇಟಿಯಾದೆ. ರಾಜ್‌ಪೂತ್ ರಸ್ತೆಯ ಎತ್ತರದ ಭಾಗದಲ್ಲಿರುವ ಆ ಮನೆಯನ್ನು ಅವರ ತಾಯಿ ಕಟ್ಟಿದ್ದರು. ನಯನತಾರಾ ಕೆಲವು ವರ್ಷಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಈಗ ಅವರು ಕ್ಯಾನ್ಸರನ್ನು ಜಯಿಸಿದ್ದರು ಹಾಗೂ ಕಾದಂಬರಿಗಳನ್ನು ಬರೆಯುವ ಕೆಲಸಕ್ಕೆ ವಾಪಸಾಗಿದ್ದರು. ಅದೇ ವೇಳೆ, ಭಾರತೀಯ ಗಣರಾಜ್ಯಕ್ಕೆ ಹಿಂದುತ್ವದ ದ್ವೇಷಪಡೆಯ ಉತ್ಕರ್ಷವು ಒಡ್ಡಿರುವ ಅಪಾಯಗಳ ಬಗ್ಗೆ ಮಾತನಾಡುವುದನ್ನು ಮುಂದುವರಿಸಿದ್ದರು.

ನನ್ನ ಸ್ನೇಹಿತೆಗೆ ವಿದಾಯ ಕೋರುವ ಕ್ಷಣದಲ್ಲಿ, ಅವರ ಸುರಕ್ಷತೆಯ ಬಗ್ಗೆ ನನಗೆ ಒಮ್ಮೆಲೆ ಹೆದರಿಕೆ ಉಂಟಾಯಿತು. ಅವರಿಗೆ ಈಗ 90 ವರ್ಷ ಕಳೆದಿದೆ. ಅವರು ಕ್ಯಾನ್ಸರ್‌ಗೆ ಒಳಗಾಗಿ ಬದುಕಿ ಬಂದವರು. ಅವರು ನಿರ್ಜನ ರಸ್ತೆಯ ಮನೆಯೊಂದರಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದಾರೆ. ಆ ರಸ್ತೆಯು ರಾತ್ರಿಯಲ್ಲಿ ಕತ್ತಲಿನಿಂದ ಆವರಿಸಲ್ಪಡುತ್ತದೆ. ಹೇಳಿ ಕೇಳಿ, ಇದು ದ್ವೇಷ ಸಾಧಿಸುವ ಠಕ್ಕ ಸರಕಾರ. 'ದಯವಿಟ್ಟು ನಿಮ್ಮ ಬಗ್ಗೆ ಕಾಳಜಿ ವಹಿಸಿ, ತಾರಾ' ನಾನೆಂದೆ. ''ನಿಮ್ಮ ಆರೋಗ್ಯದ ಬಗ್ಗೆ ಗಮನ ಇರಲಿ'' ಎಂದು ಹೇಳಿದೆ. ಅವರು ಶಾಂತವಾಗಿ ಉತ್ತರಿಸಿದರು: ''ನನಗೆ ಕಾಯಿಲೆ ಬೀಳಲು ಸಮಯವಿಲ್ಲ. ಅದೂ ಅಲ್ಲದೆ, ಇದು ಕಾಯಿಲೆ ಬೀಳುವ ಸಮಯವೂ ಅಲ್ಲ''.

ನಯನತಾರಾ ಮೇ 10ರಂದು 95ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಇದು ಅವರಿಗೆ 'ಜನ್ಮದಿನದ ಶುಭಾಶಯ'ಗಳನ್ನು ಕೋರುವ ಸಮಯವಲ್ಲ. ಹಾಗಾಗಿ, ಅವರು ಏನಾಗಿದ್ದಾರೆಯೋ ಅದಕ್ಕಾಗಿ ಅವರಿಗೆ ನಾನು ಕೃತಜ್ಞತೆ ಸಲ್ಲಿಸಬಯಸುತ್ತೇನೆ. ಓರ್ವ ಲೇಖಕಿ ಮತ್ತು ನಾಗರಿಕಳಾಗಿ ಅವರು ನಮ್ಮ ಗಣರಾಜ್ಯದ ಅತ್ಯಂತ ಶ್ರೇಷ್ಠ ವೌಲ್ಯಗಳ ಸಾಕಾರಮೂರ್ತಿಯಾಗಿದ್ದಾರೆ. ಅವರು ಗಾಂಧೀಜಿಯ ಬದುಕು ಮತ್ತು ಸಾವಿಗೆ ಸಾಕ್ಷಿಯಾಗಿದ್ದವರು. ಅವರು ಏನು ಮಾಡಿರುವರೋ ಆ ಪೈಕಿ ಹೆಚ್ಚಿನವು ಗಾಂಧೀಜಿಯವರ ಜೀವನದಿಂದ ನೇರವಾಗಿ ಪ್ರಭಾವಿತಗೊಂಡಿವೆ. ನನಗೆ ಗಾಂಧೀಜಿ ಓರ್ವ ವಿದ್ವಾಂಸನಾಗಿ ಅವರ ಬರಹಗಳು ಮತ್ತು ಪತ್ರಾಗಾರಗಳ ಮೂಲಕ ಮಾತ್ರ ಗೊತ್ತು. ನಾನು ಏನು ಮಾಡುತ್ತೇನೆಯೋ ಮತ್ತು ಏನನ್ನು ಬರೆಯುತ್ತೇನೆಯೋ ಅದರಲ್ಲಿ ನಾನು ಮುಂದುವರಿಯುವಂತೆ ಮಾರ್ಗದರ್ಶನ ಮಾಡುತ್ತಿರುವುದು ನಯನತಾರಾ ಸೆಹಗಲ್‌ರಂಥ ಭಾರತೀಯರೊಂದಿಗೆ ನಾನು ಹೊಂದಿರುವ ಪರಿಚಯ.

Writer - ರಾಮಚಂದ್ರ ಗುಹಾ

contributor

Editor - ರಾಮಚಂದ್ರ ಗುಹಾ

contributor

Similar News

ಸಂವಿಧಾನ -75