ಈ ಪ್ರಶ್ನೆಗಳಿಗೆಲ್ಲ ವ್ಯಾರಂಟಿ, ಗ್ಯಾರಂಟಿ ಏನಾದರೂ ಇದೆಯಾ?
ಪತ್ರಕರ್ತ ಎಂಜಲು ಕಾಸಿಗೆ ಅಂದು ವಾರದ ರಜೆ. ಮನೆಗೆ ತರಕಾರಿ ಖರೀದಿ ಮಾಡಬೇಕು ಎಂದು ವಿಧಾನಸೌಧದ ಹಿಂಭಾಗ ದಲ್ಲಿರುವ ಮಾರ್ಕೆಟ್‌ಗೆ ಹೊರಟವನಿಗೆ ಅದೇನು ಮಾಯೆ ಕವಿಯಿತೋ, ದಾರಿ ತಪ್ಪಿ ಗೊತ್ತು ಪರಿಚಯವಿಲ್ಲದ ಓಣಿಯಲ್ಲಿ ಅಲೆದಾಡ ತೊಡಗಿದ. ಕೊನೆಗೂ ಒಂದೆಡೆ ಅದ್ಯಾವುದೋ ಭಾರೀ ದೊಡ್ಡ ಮಾರ್ಕೆಟ್ ಅವನಿಗೆ ಕಾಣಿಸಿತು. ಯಾವ ಮಾರ್ಕೆಟ್ ಆದರೇನು ಕೊನೆಗೂ ಸಿಕ್ಕಿತಲ್ಲ....ಎಂದು ಕಾಸಿ ಚೀಲ ಹಿಡಿದು ಅತ್ತ ದಾವಿಸಿದ. ಯಾರೋ ಅದೇನೋ ರಾಶಿ ಹಾಕಿ 'ನಲವತ್ತು ಪರ್ಸೆಂಟ್...ನಲ್ವತ್ತು ಪರಸ್ಸೆಂಟ್....'' ಎಂದು ಕರೆಯುತ್ತಿದ್ದರು. ನೋಡಿದರೆ ಮಾಜಿ ಸಚಿವ ಈಸೂರಪ್ಪ. ''ಇದೇನು ಸಾರ್... ಸಂತೆಯಲ್ಲಿ ವ್ಯಾಪಾರ ಆರಂಭಿಸಿದ್ದೀರಿ?'' ಕಾಸಿ ಕೇಳಿದ.
ಈ. ಸೂರಪ್ಪ ತಲೆಯೆತ್ತಿ ಕಣ್ಣು ಗುಡ್ಡೆಗಳನ್ನ ಹೊರ ಹಾಕಿ... ''ಇಲ್ಲಿ ನಿಮಗೇನ್ರಿ ಕೆಲಸ....ಇಲ್ಲಿ ಟೊಮೆಟೋ,ನೀರುಳ್ಳಿ ಮಾರಾಟ ಮಾಡುವುದಿಲ್ಲ. ನಿಮ್ಮ ಪತ್ರಿಕೆಯವರ ಪರ್ಸೆಂಟೇಜ್‌ನ್ನು ನಾವೇ ತಲುಪಿಸ್ತೀವಿ. ಅದನ್ನು ಹುಡುಕಿಕೊಂಡು ಇಲ್ಲಿವರೆಗೆ ಯಾಕೆ ಬಂದ್ರಿ?'' ಕೇಳಿದರು. ಕಾಸಿಗೆ ಅರ್ಥವಾಗಲಿಲ್ಲ. ''ಸಾರ್....ಇಲ್ಲಿ ನೀವೇನು ಮಾರಾಟ ಮಾಡ್ತಾ ಇದ್ದೀರಿ?'' ಕೇಳಿದ.
''ಮತ್ತೇನ್ರೀ...ಅದೇ ರಸ್ತೆ, ಕೆರೆ...ನೀರಾವರಿ, ಅಣೆಕಟ್ಟು ಎಲ್ಲವನ್ನು ಮಾರಾಟ ಮಾಡ್ತಾ ಇದ್ದೇವೆ....40 ಕಮಿಷನ್‌ಗೆ ಇಲ್ಲಿ ವಿವಿಧ ಕಾಮಗಾರಿಗಳನ್ನು ಮಾರಾಟ ಮಾಡ್ತೇವೆ....ಅಧಿಕಾರ ಹೋದರೆ ಏನಾಯಿತು, ಪಸೆರ್ಂಟೇಜ್ ವ್ಯಾಪಾರಕ್ಕೆ ಏನೂ ತೊಂದರೆಯಾಗಿಲ್ಲ'' ಈ. ಸೂರಪ್ಪನವರು ಹೇಳಿದರು.
ಕಾಸಿಗೆ ಒಮ್ಮೆಲೆ ಜ್ಞಾನೋದಯವಾಯಿತು. ತಾನು ದಾರಿ ತಪ್ಪಿ ಬೇರೆಯೇ ಮಾರ್ಕೆಟ್‌ಗೆ ಬಂದು ತಲುಪಿದ್ದೇನೆ ಎನ್ನುವುದು ಗೊತ್ತಾಯಿತು. ಇದೇನಿದ್ದರೂ ಪರ್ಸಂಟೇಜ್ ಮಾರ್ಕೆಟ್. ಹೇಗೂ ಬಂದು ಆಗಿದೆ. ಇಲ್ಲಿ ಏನೇನು ಮಾರಾಟಕ್ಕಿವೆೆ ಎನ್ನುವುದನ್ನು ನೋಡಿಕೊಂಡು ಹೋಗುವ ಎಂದು ತೀರ್ಮಾನಿಸಿದ. ದೂರದಲ್ಲಿ ಎ. ಸತ್ತ ನಾರ ಹಣಪ್ಪವನವರು ''ಪಿಎಸ್‌ಐ ಪಿಎಸ್‌ಐ....ಒಳ್ಳೆ ಫ್ಱೆಶ್ ಆಗಿರುವ ಪ್ರಶ್ನೆ ಪತ್ರಿಕೆಗಳು....ಒಂದು ಅಂಕದ ಪ್ರಶ್ನೆಗೆ ಒಂದು ಲಕ್ಷ....ಎರಡು ಅಂಕದ ಪ್ರಶ್ನೆಗೆ....'' ಎಂದು ಕೂಗಿ ಕರೆಯುತ್ತಿದ್ದರು. ''ಸಾರ್...ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದು ಬೆಳಕಿಗೆ ಬಂದು ಫಲಿತಾಂಶ ರದ್ದಾದರೆ....ನಾವು ಕೊಟ್ಟ ಹಣವನ್ನು ವಾಪಸ್ ಕೊಡ್ತೀರಾ....'' ಕಾಸಿ ಕೇಳಿದ.
''ಹಾಗೆಲ್ಲ ಕೊಡೋಕಾಗಲ್ಲ. ಆದರೆ ಹಾಗಾದಲ್ಲಿ ಮರಳಿ ಪರೀಕ್ಷೆ ಕೂರುವವರಿಗೆ ಎರಡು ಪ್ರಶ್ನೆಗಳನ್ನು ನಾವು ಉಚಿತವಾಗಿ ಹಂಚುತ್ತೇವೆ. ಇಲ್ಲಿ ಒಟ್ಟು ಐದು ಪ್ರಶ್ನೆಗಳನ್ನು ಕೊಂಡುಕೊಂಡವರಿಗೆ ಒಂದು ಅಂಕದ ಒಂದು ಪ್ರಶ್ನೆಯನ್ನು ಉಚಿತವಾಗಿ ನೀಡಲಾಗುವುದು...''
''ಸಾರ್ ಈ ಪ್ರಶ್ನೆಗಳಿಗೆಲ್ಲ ವ್ಯಾರಂಟಿ, ಗ್ಯಾರಂಟಿ ಏನಾದರೂ ಇದೆಯಾ?'' ಕಾಸಿ ಕೇಳಿದ.
''ನಮ್ಮ ಸರಕಾರ ಅಸ್ತಿತ್ವದಲ್ಲಿ ಇರುವವರೆಗೆ ವ್ಯಾರಂಟಿ ಇದೆ. ಗ್ಯಾರಂಟಿ ಕೊಡೋಕಾಗಲ್ಲ'' ಅವರು ಉತ್ತರಿಸಿದರು.
ಮುಂದೆ ಹೋದಂತೆ ಕೆಪಿಎಸ್ಸಿ ಅಂಕಗಳ ಮಾರಾಟ ನಡೆಯುತ್ತಿತ್ತು. ''ನೀವು ಪ್ರಶ್ನೆಗೆ ಉತ್ತರ ಬರೆಯುವ ಅಗತ್ಯವೇ ಇಲ್ಲ. ಸರಿ ಉತ್ತರ ಬರೆದವರ ಉತ್ತರ ಪತ್ರಿಕೆಗೆ ನಾವು ನಿಮ್ಮ ಹೆಸರುಗಳನ್ನು ಅಂಟಿಸುತ್ತೇವೆ. ಹೀಗೆ ಅಂಟಿಸುವ ಗೋಂದಿಗೆ ನೀವು ಹಣಕೊಟ್ಟರೆ ಸಾಕು....'' ಗಿರ ಸಚಿವರು ಗಿರಾಕಿಗಳಿಗೆ ವಿವರಿಸುತ್ತಿದ್ದರು.
''ಮನೆಯಿಂದ ನಾವೇ ಗೋಂದು ತಂದು ಕೊಟ್ಟರೆ ಕಡಿಮೆ ಉಂಟಾ ಸಾರ್?'' ಕಾಸಿ ಕೇಳಿದ.
ಗಿರ ಸಚಿವರು ಒಮ್ಮೆಲೆ ಉಗ್ರರಾದರು ''ಆ ಗೋಂದನ್ನು ಪತ್ರಕರ್ತರ ಬಾಯಿ ಮುಚ್ಚಿಸುವುದಕ್ಕೆ ಬಳಸಲಾಗುವುದು. ಇಲ್ಲಿ ನಾವು ನಮ್ಮದೇ ಗೋಂದುಗಳನ್ನು ಬಳಸುತ್ತೇವೆ. ಒಂದು ಉತ್ತರ ಪತ್ರಿಕೆಯ ಗೋಂದಿಗೆ ಏನಿದ್ದರೂ 75 ಲಕ್ಷ ರೂಪಾಯಿಯವರೆಗೆ ಬರುತ್ತದೆ....'' ಈ ಗೋಂದಿನ ಸಹವಾಸವೇ ಬೇಡ ಎಂದು ಕಾ ಸಿ ಮುಂದಕ್ಕೋಡಿದ. ಅಲ್ಲಿ ನೋಡಿದರೆ ಶಿಕ್ಷಣ ಸಚಿವರು ಉಪನ್ಯಾಸಕರ ಹರಾಜು ಕೂಗುತ್ತಿದ್ದರು. ಮತ್ತೊಂದು ಕಡೆ ಅಗ್ಗದಲ್ಲಿ 'ಲಸಿಕೆ ಸರ್ಟಿಫಿಕೇಟ್' ಮಾರಾಟವಾಗುತ್ತಿತ್ತು. ''ಇದೇನು ಸಾರ್...ಗಲ್ಲಿ ಗಲ್ಲಿಯಲ್ಲಿ ಲಸಿಕೆ ಕೊಡಿ ಆಂದೋಲನ ನಡೆಯುತ್ತಿರುವಾಗ ನೀವಿಲ್ಲಿ ಲಸಿಕೆ ಮಾರಾಟ ಸರ್ಟಿಫಿಕೇಟ್ ಹರಾಜು ಹಾಕುತ್ತಿದ್ದೀರಲ್ಲ?'' ಕಾಸಿ ಅಚ್ಚರಿಯಿಂದ ಪ್ರಶ್ನಿಸಿದ.
''ಇಲ್ಲಿ ಲಸಿಕೆ ಹಾಕದೆಯೇ ಉಚಿತವಾಗಿ ಲಸಿಕೆ ಸರ್ಟಿಫಿಕೇಟ್ ಹಂಚಲಾಗುತ್ತದೆ. ಬೇಕಾದರೆ ಉಚಿತ ಕೊರೋನ ನೆಗೆಟಿವ್ ಸರ್ಟಿಫಿಕೇಟ್‌ಗಳು ಸಿಗುತ್ತವೆ. ನಿಮಗೆ ಯಾವುದು ಬೇಕು ಅದು.... ಲಸಿಕೆ ಕೊಡಬೇಕಾಗಿಯೂ ಇಲ್ಲ, ಕೊರೋನ ಪರೀಕ್ಷೆ ಮಾಡ ಬೇಕಾಗಿಯೂ ಇಲ್ಲ....'' ನೋಡಿದರೆ ಅದಾವುದೋ ರಾಜ್ಯದ ಆರೋಗ್ಯ ಸಚಿವರ ಮೂತಿಯಂತೆ ಕಂಡಿತು. ಇರಲಿಕ್ಕಿಲ್ಲ ಎಂದು ಕಾಸಿ ಮುಂದೆ ಸಾಗಿದ.
ದೂರದಲ್ಲಿ ಸಾಲು ಸಾಲು ಕುರ್ಚಿಗಳನ್ನಿಟ್ಟು ಯಾರೋ ಮಾರಾಟ ಮಾಡುತ್ತಿದ್ದರು . ಸಣ್ಣ ಕುರ್ಚಿ, ದೊಡ್ಡ ಕುರ್ಚಿ....ಮತ್ತೊಂದು ದೊ...ಡ್ಡ.... ಕುರ್ಚಿ!
''ಸಾರ್ ಇದೇನು ಸಾರ್...ಪೀಠೋಪಕರಣ....'' ಕಾಸಿ ವಿಸ್ಮಿತನಾಗಿ ವಿಚಾರಿಸಿದ.
ಹರಾಜು ಕೂಗುತ್ತಿದ್ದ ಬೋಳು ತಲೆಯ ಒಡೆಯರು ವಿವರಿಸಿದರು ''ಸಣ್ಣ ಕುರ್ಚಿಗಳೆಲ್ಲ ನಿಗಮ, ಮಂಡಳಿ, ಪ್ರಾಧಿಕಾರ ಕುರ್ಚಿ. ಕೋಟಿಯ ಲೆಕ್ಕದಲ್ಲಿ ಮಾರಾಟವಾಗುತ್ತದೆ. ಮಧ್ಯಮ ಕುರ್ಚಿಗಳು ಸಹಾಯ ಸಚಿವ ಸ್ಥಾನದ್ದು. 50 ಕೋಟಿ...ನೂರು ಕೋಟಿ. ಸಂಪುಟ ಸಚಿವರದ್ದು 200 ಕೋಟಿ ಮೇಲಿನದ್ದು....ಆ ದೊಡ್ಡ ಕುರ್ಚಿ ಇದೆಯಲ್ಲ, ಅದು ಸಿ.ಎಂ. ಕುರ್ಚಿ. 25,000 ಕೋಟಿ ರೂಪಾಯಿ. ಬೇಕಾ ಆ ಕುರ್ಚಿ....''
ಕಾಸಿಯ ಎದೆ ಧಸಕ್ಕೆಂದಿತು. ಮನೆಯಲ್ಲಿ ಕೂರುವುದಕ್ಕೆ ಸರಿಯಾದ ಕಬ್ಬಿಣದ ಕುರ್ಚಿಯೇ ಇಲ್ಲ. ಇನ್ನು ಈ 25,000 ಕೋಟಿ ರೂಪಾಯಿ ಕುರ್ಚಿಯನ್ನು ಕೊಳ್ಳುವುದೆಲ್ಲಿ ಬಂತು?
''ಸಾರ್...ಇವೆಲ್ಲವೂ ಫಿಕ್ಸೆಡ್ ದರವೆ?'' ಕಾಸಿ ಚೌಕಾಶಿಗಿಳಿದ.
''ಹಾಗೇನಿಲ್ಲ...ಕೆಲವೊಮ್ಮೆ ಹೇಳಿದ ದರಕ್ಕಿಂತ ಜಾಸ್ತಿಗೂ ಹೋಗುವುದಿದೆ. ಹಾಗೆಯೇ ಕೆಲವರು ಕೆಲವು ವಿಶೇಷ ಸೀಡಿಗಳನ್ನು ಕೊಟ್ಟು ಕೆಲವು ಕುರ್ಚಿಗಳನ್ನು ಕೊಂಡುಕೊಳ್ಳುವುದು ಇದೆ. 25,000 ಕೋಟಿ ರೂಪಾಯಿ ಕುರ್ಚಿ ಇದೆಯಲ್ಲ, ಅದರ ಬೆಲೆ ಕೆಲವೊಮ್ಮೆ ಜಾತಿಯ ಆಧಾರದಲ್ಲಿ ಏರುಪೇರು ಆಗಬಹುದು...''
ಕಾಸಿಗೆ ಈ ಬೋಳುತಲೆಯನ್ನು ಎಲ್ಲೋ ನೋಡಿದ ಹಾಗಾಯಿತು. ''ಸಾರ್ ನಿಮ್ಮನ್ನು ಎಲ್ಲೋ ನೋಡಿದ ಹಾಗಿದೆಯಲ್ಲ....'' ಕಾಸಿ ಕೇಳಿದ.
''ನಾನು ಮಾಸ್ಕ್ ಹಾಕಿಕೊಂಡಿದ್ದೇನೆ. ನನ್ನನ್ನು ನೀವು ನೋಡುವುದು ಎಲ್ಲಿ?'' ಬೋಳು ತಲೆಯವರು ಮರು ಪ್ರಶ್ನಿಸಿದರು.
''ಅಲ್ಲ ಸಾರ್...ನಿಮ್ಮ ಬೋಳುತಲೆಯನ್ನು ಎಲ್ಲೋ ನೋಡಿದ್ದೇನೆ....'' ಕಾಸಿ ಉತ್ತರಿಸಿದ. ಅವರು ತಕ್ಷಣ ತನ್ನ ಮುಖದ ಮಾಸ್ಕ್ ತೆಗೆದು ಬೋಳುತಲೆ ಮುಚ್ಚಿಕೊಂಡರು. ಮುಖದ ಗಡ್ಡ ನೋಡಿದ್ದೇ ''ಓಹ್ ಇದು ಗುಜರಾತ್ ಮಾದರಿ'' ಎನ್ನುತ್ತಾ ಕಾಸಿ ಅಲ್ಲಿಂದ ಓಡ ತೊಡಗಿದ.