ಪ್ರಮೋದ್ ಕಾಂಗ್ರೆಸ್ ಬಿಡಲು ನೈಜ ಕಾರಣ ಬಹಿರಂಗಪಡಿಸಲಿ: ಗೋಪಾಲ ಪೂಜಾರಿ

Update: 2022-05-13 13:59 GMT

ಕುಂದಾಪುರ‌ : ಮಾಜಿ ಸಚಿವ ಪ್ರಮೋದ್ ಮಧ್ವರಾಜ್‌ಗೆ ಕಾಂಗ್ರೆಸ್ ಎಲ್ಲಾ ಅವಕಾಶ ನೀಡಿದ್ದು, ಅದನ್ನು ಬಳಸಿಕೊಂಡಿದ್ದರೂ ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷ ಸೇರಿದ ನೈಜ ಕಾರಣವನ್ನು ಜನರ ಮುಂದಿಡಬೇಕು ಎಂದು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದ್ದಾರೆ.

ಕುಂದಾಪುರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಸೋತ ಬಳಿಕ ಪ್ರಮೋದ್ ಮಧ್ವರಾಜ್ ಅವರು ಯಾವುದೇ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ. ಜಿಲ್ಲಾಧ್ಯಕ್ಷರ ವಿರುದ್ಧ ಹಾಗೂ ಸಣ್ಣಪುಟ್ಟ ಸಬೂಬು ಹೇಳುವ ಬದಲು ಪಕ್ಷ ಬಿಟ್ಟ ಹಿನ್ನೆಲೆ ಏನು ಎನ್ನುವುದು ಜನರಿಗೆ ತಿಳಿಸಬೇಕು. ಅವರಿಗೆ ಐಟಿ ಸಮಸ್ಯೆ, ಉದ್ಯೋಗ ಸಮಸ್ಯೆ ಅಥವಾ ಯಾವುದೇ ಒತ್ತಡವಿತ್ತೇ ಎಂದು ಸಾರ್ವಜನಿಕರೆದುರು ಬಹಿರಂಗಪಡಿಸಲಿ ಎಂದು ಆಗ್ರಹಿಸಿದರು.

ಡೆಂಗ್ ಪೀಡಿತರ ಭೇಟಿ: ಕುಂದಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಗುರುವಾರ ಭೇಟಿ ನೀಡಿದ ಮಾಜಿ ಶಾಸಕ ಗೋಪಾಲ ಪೂಜಾರಿ ಡೆಂಗ್ ಪೀಡಿತರ ಯೋಗಕ್ಷೇಮ ವಿಚಾರಿಸಿದರು.

ಬಳಿಕ ಮಾತನಾಡಿದ ಅವರು, ಜನಪ್ರತಿನಿಧಿಯಾದವರು ಗುದ್ದಲಿ ಪೂಜೆ ಯಾವತ್ತೂ ಮಾಡಬಹುದು. ಗುದ್ದಲಿ ಪೂಜೆ ಮಾಡಿದರೆ ಮುಳುಗಿ ಹೋಗುವುದು ಏನು ಇಲ್ಲ. ಮುದೂರು ಗ್ರಾಮದಲ್ಲಿ ಡೆಂಗ್ ಆವರಿಸಿದ್ದು, ಸ್ಥಳಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ, ಧೈರ್ಯ ಹೇಳುವುದು ಗುದ್ದಲಿ ಪೂಜೆಗಿಂತ ಆದ್ಯತೆಯ ಕೆಲಸ. ಜನಪ್ರತಿನಿಧಿಗಳು ಜನರ ಆರೋಗ್ಯ ಸಮಸ್ಯೆಗೆ ಸ್ಪಂದಿಸದೆ ಇರುವುದು ಸರಿಯಲ್ಲ ಎಂದು ಆರೋಪಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಅಂಗಾರ ಡೆಂಗ್ ಪೀಡಿತ ಪ್ರದೇಶಕ್ಕೆ ಹಾಗೂ ಆಸ್ಪತ್ರೆ ಯಲ್ಲಿ ದಾಖಲಾದ ಡೆಂಗ್ ಭಾದಿತರ ಆರೋಗ್ಯ ವಿಚಾರಿಸಬೇಕಿತ್ತು. ಸ್ಥಳೀಯ ಜನಪ್ರತಿನಿಧಿಗಳು ಸಚಿವರಿಗೆ ಸಮಸ್ಯೆ ಗಂಭೀರತೆಯ ಮನದಟ್ಟು ಮಾಡಲು ವಿಫಲವಾಗಿರುವುದರಿಂದ ಉಸ್ತುವಾರಿ ಸಚಿವರು ಭೇಟಿ ನೀಡಿಲ್ಲ, ತಕ್ಷಣ ಜಿಲ್ಲಾ ಉಸ್ತುವಾರಿ ಸಚಿವರು ಈ ಪ್ರದೇಶಕ್ಕೆ ಭೇಟಿ ನೀಡಬೇಕು ಎಂದು ಅವರು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News